ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೨

ಡೊಣ್ಣ ಮೆಣಸಿನ ಕಾಯಿಯಲ್ಲಿ ಥ್ರಿಪ್ಸ್ ನುಸಿ ನಿರ್ವಹಣೆ

ಗಜಾನನ ಗುಂಡೆವಾಡಿ
೭೦೬೫೧೫೭೬೯೩
1

ಶಿಮ್ಲಾ ಮೀರ್ಚಿ, ಸಿಹಿ ಮೆಣಸಿನಕಾಯಿ ಅಥವಾ ಬೆಲ್ ಪೆಪ್ಪರ್ ಎಂದು ಕರೆಯಲ್ಪಡುವ ದೊಡ್ಡ ಮೆಣಸಿನಕಾಯಿಯಲ್ಲಿ ಕೀಟಬಾಧೆ ಮತ್ತು ರೋಗ ಬಾಧೆಯಿಂದ ಇಳುವರಿ ಮತ್ತು ಗುಣಮಟ್ಟದ ಮೇಲೆ ಅಪಾರ ಪ್ರಭಾವ ಬೀರುತ್ತದೆ. ಇವುಗಳಲ್ಲಿ ಥ್ರಿಪ್ಸ್ ನುಸಿ ಒಂದು ಪ್ರಮುಖ ಕೀಟವಾಗಿದೆ. ಇದು ತುಂಬಾ ಚಿಕ್ಕದಾಗಿದ್ದು ಕಂದು ಅಥವಾ ಹಳದಿ ಕಂದು ಬಣ್ಣದಿಂದ ಕೂಡಿರುತ್ತದೆ. ಈ ಕೀಟ ಎಲೆ, ರೆಂಬೆ, ಕಾಯಿ ಹೂವು ಮತ್ತು ಹಣ್ಣುಗಳಿಂದ ರಸ ಹೀರಿ ಸಸ್ಯದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಮರಿ ಮತ್ತು ಪ್ರಾಯದ ಕೀಟಗಳು ಸಸ್ಯಗಳ ವಿವಿಧ ಭಾಗಗಳಿಂದ ರಸ ಹೀರುತ್ತವೆ. ಈ ಕೀಟವು ೨೫-೩೦ ದಿನಗಳಲ್ಲಿ ತನ್ನ ಜೀವನ ಚಕ್ರವನ್ನು ಪೂರ್ಣಗೊಳಿಸುತ್ತದೆ. ಕೀಟವು ತನ್ನ ಕೋಶಾವಸ್ಥೆಯನ್ನು ಮಣ್ಣಿನಲ್ಲಿ ಪೂರ್ಣಗೊಳಿಸಿ ಮತ್ತೆ ಪ್ರಾಯದ ಕೀಟವಾಗಿ ಹೊರಹೊಮ್ಮುತ್ತದೆ. ಈ ಕೀಟವು ಮೆಣಸಿನಕಾಯಿಯ ನಂಜಾಣು ರೋಗ ಹರಡುವಲ್ಲಿ ಸಹಾಯ ಮಾಡುತ್ತದೆ.

ಲಕ್ಷಣಗಳು: 1. ಎಲೆಗಳು ಅಂಚಿನಿಂದ ಮೇಲ್ಮುಖವಾಗಿ ಮುದುರಿಕೊಂಡು, ದೋಣಿಯಾಕಾರದ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. 2. ಎಲೆಗಳ ಗಾತ್ರ ಚಿಕ್ಕದಾಗಿ ಕಾಣಿಸುತ್ತದೆ 3. ಹೂ ಮತ್ತು ಹಣ್ಣುಗಳು ಉದುರುತ್ತವೆ 4. ಕೀಟಗಳು ಹಣ್ಣುಗಳಿಂದ ರಸ ಹೀರುವುದರಿಂದ, ಕಾಯಿಯ ಮೇಲೆ ಒರಟು ಮಚ್ಚೆಗಳು ಕಾಣಿಸಿಕೊಳ್ಳುತ್ತವೆ ಹಾಗೂ ಆಕಾರವನ್ನು ಕಳೆದುಕೊಂಡು ಮಾರುಕಟ್ಟೆ ಯಲ್ಲಿ ಕಡಿಮೆ ಬೆಲೆಗೆ ಮಾರಾಟವಾಗುತ್ತವೆ ಕೀಟ ನಿರ್ವಹಣೆ: ೧. ಕೀಟ ನಿರೋಧಕ ಶಕ್ತಿಯನ್ನು ಹೊಂದಿದ ತಳಿಗಳಾದ ಬೆಳೆಯುವುದು, ೨. ಎಡೆಕುಂಟಿ ಹೊಡೆದು ಮಣ್ಣನ್ನು ಹದಗೊಳಿಸುವುದರಿಂದ ಕೀಟಗಳ ಕೋಶಾವಸ್ಥೆಯನ್ನು ನಾಶಪಡಿಸಬಹುದು, ೩. ಬೆಳೆಯ ಸುತ್ತ ೨ ರಿಂದ ೩ ಸಾಲು ಸಜ್ಜೆ, ಮೆಕ್ಕೆಜೋಳ ಅಥವಾ ಜೋಳವನ್ನು ಬಲೆ ಬೆಳೆಯಾಗಿ ಬಿತ್ತುವುದು, ೪. ಪ್ರತಿ ಲೀಟರ್ ನೀರಿಗೆ ೫ ರಿಂದ ೮ ಮಿ.ಲೀ. ಹೊಂಗೆ ಎಣ್ಣೆಯನ್ನು ಸೇರಿಸಿ ಸಿಂಪರಣೆ ಮಾಡುವುದು, ೫.ಶೇಕಡಾ ೪ ರ ಪ್ರಮಾಣದಲ್ಲಿ ಬೇವಿನ ಬೀಜದ ಕರ್ನಲ್ ಎಕ್ಟ್ರ್ಯಾಕ್ಟ್ ಸಿಂಪರಣೆ ಮಾಡುವುದು, ೬.ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು ಅಭಿವೃದ್ಧಿ ಪಡಿಸಿರುವ ಹೊಂಗೆ- ಬೇವಿನ ಸೊಪ್ಪಿನ ಮಿಶ್ರಣವನ್ನು ೭ ಮೀ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡುವುದು, ೭. ನಾಟಿಯಾದ ಮೂರು ವಾರಗಳ ನಂತರ, ೧.೭ ಮಿ. ಲೀ. ಡೈಮಿತೋಯೇಟ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡುವುದು, ೮. ನೀರಿನಲ್ಲಿ ಕರಗುವ ಗಂಧಕ ೨ ಮಿ.ಲೀ./ ಲೀಟರ್ ಅಥವಾ ಕ್ಲೋರೋಪೈರಿಪಾಸ್ ೨ ಮೀ. ಲೀ./ಲೀ. ಅಥವಾ ಇಮಿಡಾಕ್ಲೋಪ್ರಿಡ್ ೦.೫ ಮೀ./ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು, ೯.ಪ್ರತಿ ಎಕರೆಗೆ ೧/೨ ಕ್ವಿಂಟಾಲ್ ಬೇವಿನ ಹಿಂಡಿಯನ್ನು ಹಾಕುವುದರಿಂದ ರಸ ಹೀರುವ ಕೀಟಗಳ ನಿರ್ವಹಣೆ ಮಾಡಬಹುದು

4