ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೨

ನಾ ಕಂಡ ಶ್ರೇಷ್ಠ ಸಾವಯವ ಕೃಷಿಕ ಗಂಗಪ್ಪ ತುಂಬರಮಟ್ಟಿ

ಡಾ.ವಿಜಯಕುಮಾರ ಗಿಡ್ನವರ
೭೪೧೧೬೨೮೪೭೦
1

ಶ್ರೀ ಗಂಗಪ್ಪನವರು ತಮ್ಮ ಸುಮಾರು ಮೂರು ದಶಕಗಳವರೆಗಿನ ಭಾರತ ದೇಶದ ಸೈನ್ಯ ಸೇವೆಯಲ್ಲಿ ಎಂಟು ಪ್ರದೇಶಗಳ ರಕ್ಷಣೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಮಗ ಮಹೇಶ ಹಾಗೂ ರಾಘವೇಂದ್ರರರುಗಳೊಂದಿಗೆ ಸೇರಿ ತಮ್ಮ ಊರಿನ ಸಮೀಪದಲ್ಲೇ ಇದ್ದ ದೇವನಾಳದಲ್ಲಿರುವಂಥ ೧೨ ಎಕರೆ ಹೊಲದಲ್ಲೇ ಬಂದು ಮನೆ ಕಟ್ಟಿಕೊಂಡು ೨೦೦೦ದಿಂದ ವಾಸವಾಗಿದ್ದಾರೆ. ಮಗ ರಾಘವೇಂದ್ರರವರು ಬಿ.ಇ ಪದವಿ ನಂತರ ಪುಣೆಯಲ್ಲಿಯ ಪ್ರತಿಷ್ಠಿತ ಸಾಪ್ಟವೇರ್ ಕಂಪನಿಯೊಂದರಲ್ಲಿ ಸೇವೆಯಲ್ಲಿ ಸೇರಿದರೆ, ಮಹೇಶ ಪಿಯುಸಿ ಚೆನ್ನಾಗಿ ಓದಿ ಪಾಸಾದರೂ ತಮ್ಮೊಂದಿಗೆ ೧೨ ಎಕರೆ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ಜೊತೆಯಾಗಿದ್ದಾರೆ. ಕೊಳವೆ ಭಾವಿ ಕೊರೆಸಿ ಹಗಲಿರುಳು ಶ್ರಮಿಸಿ ತಮ್ಮ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದರು. ಅದರ ಫಲವಾಗಿ ಇಂದು ಹೊಲದ ಮನೆಯಲ್ಲಿ ಸುಮಾರು ಹನ್ನೆರಡು ಕುಟುಂಬಗಳು ವಾಸಿಸುತ್ತಿದ್ದು, ೨೦ ರಷ್ಟು ಹೈನುರಾಸುಗಳು, ನಾಲ್ಕು ಹೋರಿಗಳೊಂದಿಗೆ ನೆಲೆಸಿದ್ದಾರೆ. ಈ ಸಾವಯವ ಕೃಷಿಕರ ಕೃಷಿ ತಾಂತ್ರಿಕತೆಗಳನ್ನು ಅನುಸರಿಸಿ ಸ್ಥಳೀಯವಾಗಿ ನಿರ್ಮಿಸಿದ ಹೈಡ್ರೋಫೋನಿಕ್ಸ್ ಘಟಕ, ಚಾಫ್ಕಟರ್, ಬಯೋಗ್ಯಾಸ್ ಘಟಕ, ಬಯೋಡೈಜಸ್ಟರ್ ಘಟಕಗಳು, ಒಂದು ಜಾನ್ಡೀರ್ ಟ್ರಾಕ್ಟರ್ಗಳು ಇಟ್ಟುಕೊಂಡಿದ್ದಾರೆ. ಜೊತೆಗೆ ನಾಲ್ಕು ಎರೆಹುಳು ಘಟಕಗಳು ಇವೆ. ಇವರ ಹನ್ನೆರಡು ಎಕರೆ ಕ್ಷೇತ್ರದಲ್ಲಿಯ ಬೆಳೆ ಯೋಜನೆಯನ್ನೂ ರೂಪಿಸಿದ್ದಾರೆ. ಬಾಗಲಕೋಟ ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಅತ್ಯಂತ ವೈಜ್ಞಾನಿಕ ವಿಧಾನವನ್ನು ತಮ್ಮ ಕ್ಷೇತ್ರದಲ್ಲಿ ಅನುಸರಿಸುತ್ತಿದ್ದಾರೆ.

3

೧.ಅರಣ್ಯಕೃಷಿ: ಅರ್ಧ ಎಕರೆಯಲ್ಲಿ ೮ x ೬ ಅಡಿ ಅಂತರದಲ್ಲಿ ೩೦೦ ತೇಗದ ಮರಗಳನ್ನು ೧೨ ವರ್ಷದ ಹಿಂದೆ (೨೦೦೪-೦೫) ಹಾಕಿದ್ದಾರೆ. ಮೊದಲ ನಾಲ್ಕು ವರುಷಗಳಲ್ಲಿ ಬಾಳೆ (ಸ್ಥಳೀಯ ತಳಿ) ಬೆಳೆಯನ್ನು ಮಧ್ಯಂತರ ಬೆಳೆಯಾಗಿ ಹಾಕಿ ಲಾಭದಾಯಕ ನೀರಾವರಿ ಬೆಳೆಯನ್ನಾಗಿಸಿದರು. ೨.ವಾಣಿಜ್ಯ ಬೆಳೆ- ನೀರಾವರಿ ಕಬ್ಬು: ೬ ಎಕರೆ ಸಮತಟ್ಟು ಭೂಮಿಯಲ್ಲಿ ೮ ಅಡಿ ಅಂತರದಲ್ಲಿ ೧.೫ ಅಡಿ ಅಂತರಕ್ಕೊಂದು ಕಬ್ಬು ಕಣ್ಣು ಬರುವಂತೆ ಸಿಓಸಿ - ೨೬೫ ತಳಿಯನ್ನು ಡಿಸೆಂಬರ್ ತಿಂಗಳಲ್ಲಿ ನೆಟ್ಟಿದ್ದರು. ಅಗಲ ಅಂತರದ ಕಬ್ಬು (೬ ಎಕರೆ) ಬೆಳೆಯ ಮಧ್ಯ ಅಂತರ ಬೆಳೆಯಾಗಿ ತಲಾ ಎರಡು ಎಕರೆಗಳಲ್ಲಿ ಬೆಳೆದಿದ್ದಾರೆ. ಬೆಂಡಿಯಿಂದ ಒಂದು ಲಕ್ಷ ಲಾಭ ಪಡೆದರೆ, ಉಳ್ಳಾಗಡ್ಡೆಯಿಂದ ಇಪ್ಪತೈದು ಸಾವಿರ ಹಾಗೂ ಗೋವಿನ ಜೋಳದಿಂದ ಅರವತ್ತು ಕ್ವಿಂಟಾಲು ಪಡೆದಿದ್ದಾರೆ. ಅವರಿಗೆ ಉಳ್ಳಾಗಡ್ಡಿ ಯನ್ನು ಅಂತರ ಬೆಳೆಯಾಗಿ ಬೆಳೆದಾಗ ಬೀಜ ದೋಷದಿಂದ ಕಡಿಮೆ ಲಾಭವಾಗಿದ್ದರೂ ಸಹ ಕಬ್ಬು ಬೆಳೆಗೆ ಅಂತರ ಬೆಳೆಯಾಗಿ ಉಳ್ಳಾಗಡ್ಡಿಯೇ ಉಪಯುಕ್ತ ಎಂಬುದನ್ನು ಕಂಡುಕೊಂಡಿದ್ದಾರೆ. ೩.ಸ್ಥಳೀಯ ಬಾಳೆ + ಚೆಂಡು ಹೂವು: ೮ x ೬ ಅಡಿ ಅಂತರದ ಮಧ್ಯಂತರ ಬೆಳೆಯಾಗಿ ಕಳೆದ ನಾಲ್ಕು ವರ್ಷಗಳಿಂದ ಅನುಸರಿಸುತ್ತಿದ್ದಾರೆ. ಈ ಬೆಳೆ ಪದ್ಧತಿ ಅಧಿಕ ಲಾಭ ನೀಡುತ್ತಿದೆ. ಚೆಂಡು ಹೂವು ಕಲ್ಕತ್ತಾ ಸ್ಟೆಂಪ್ ಎಂಬ ಉತ್ತಮ ಇಳುವರಿ ನೀಡುವ ಹೂವು ತಳಿಯಾಗಿದ್ದು, ತಿಂಗಳ ಬೆಳೆ ಪ್ರೂನ್(ಚಿಗುರು ಕತ್ತರಿಸುವ)ಮಾಡುವ ಪದ್ಧತಿಯಿಂದಾಗಿ ಟೊಂಗೆಗಳೊಡೆದು ಅಧಿಕ ಮೊಗ್ಗು ಹೂವು ಆಗುವಂತೆ ಮಾಡಿದ್ದಾರೆ. ಒಂದು ಬಾರಿ ದಸರೆಯಲ್ಲಿ ಹೂವು ತೆಗೆದರೆ ಎರಡನೆಯ ದೀಪಾವಳಿಯಲ್ಲಿ ಪೂರ್ತಿ ಹೂವು ತೆಗೆದೇ ಬಿಡುವರು. ಹೊಲದಲ್ಲೇ ೮೦ ರೂ. ಕೆ.ಜಿ ಬೆಲೆ ಪಡೆಯುತ್ತಿದ್ದಾರೆ. ಗೋವೆಯಲ್ಲಿ ರೂ.೧೦೦ ಪ್ರತಿ ಕೆ.ಜಿಗೆ ಪಡೆದಿದ್ದಾರೆ.

5

೪.ಹೈನುಗಾರಿಕೆ: ೧೨ ಜವಾರಿ ಎಮ್ಮೆ, ೪ ಎಮ್ಮೆ ಕರು, ನಾಲ್ಕು ಸ್ಥಳೀಯ ಆಕಳು ಅವುಗಳಿಗೆ ೨ ಕರುಗಳು ದಿನವೊಂದಕ್ಕೆ ಮನೆಗೆ ಉಪಯೋಗಿಸಿದ ನಂತರ ದಿನನಿತ್ಯ ೨೦ ಲೀಟರ್ನಷ್ಟು ಹಾಲನ್ನು ಕೆಎಂಎಫ್ಗೆ ಮಾರುತ್ತಿದ್ದರೆ, ಎಮ್ಮೆ ಹಾಲಿಗೆ ೪೦ ರೂ./ಲೀ. ಇದ್ದರೆ, ಆಕಳು ಹಾಲಿಗೆ ೨೫-೩೦ ರೂ./ಲೀ. ಪಡೆಯುತ್ತಿದ್ದಾರೆ. ಈ ಎಲ್ಲ ದನಕರುಗಳಿಂದಾಗಿ ಲಭಿಸುವ ಸಗಣಿ ಗಂಜಲುವಿನಿಂದಾ ಬಯೋಡೈಜಸ್ಟರ್ಗಲ್ಲದೇ ಬಯೋಗ್ಯಾಸ್ ಘಟಕಕ್ಕೆ ಬಳಸುತ್ತಿದ್ದಾರೆ. ಪ್ರತಿ ದಿನವೂ ೮೦೦-೧೦೦೦ ಕಿಲೋ ಸಗಣಿ ಪಡೆಯುತ್ತಾರೆ. ದನಗಳಿಗಾಗಿಯೇ ಅರ್ಧ ಎಕರೆಯಲ್ಲಿ ಮೇವು ಬೆಳೆ ಬೆಳೆಯುತ್ತಿದ್ದಾರೆ. ಇದರಲ್ಲಿ ಅತ್ಯುತ್ತಮ ಸೈಲೇಜ್ ತಯಾರಿಸಿಕೊಳ್ಳುತ್ತಿದ್ದಾರೆ. ಈ ಉಪ್ಪು ಮಿಶ್ರಿತ ಹಸಿ ಮೇವು ಹಿಂಡು ದನಗಳಿಗೆ ಪೌಷ್ಠಿಕ ಆಹಾರವಾಗಿ ನೀಡುತ್ತಾರೆ. ಜೊತೆಗೆ ರೂಪಾಯಿ ೪೦೦೦ ದಷ್ಟು ಹಣದ ಖರ್ಚಿನಿಂದ ಕೆಎಂಎಫ್ ಪಶು(ದನ) ಆಹಾರ ತಿಂಗಳಿಗೊಮ್ಮೆ ಖರೀದಿಸುತ್ತಾರೆ. ಮೇವಿಗಾಗಿ ಹೈಡ್ರೋಫೋನಿಕ್ ಘಟಕದಿಂದಲೂ ಗೋವಿನ ಜೋಳ ಸಿದ್ಧಪಡಿಸುವುದು ಇವರ ವಿಶೇಷತೆಯಾಗಿದೆ. ೫.ಎರೆಗೊಬ್ಬರ ಘಟಕ: ೨೦ x ೨೦ x ೧೦ ಅಡಿ ಹಾಗೂ ೨೦ x ೧೫ x ೫ ಅಡಿ ಹೀಗೆ ಎರಡು ದೊಡ್ಡ ಎರೆಗೊಬ್ಬರ ಘಟಕಗಳಿಂದ ವರ್ಷಕ್ಕೆ ಸುಮಾರು ೧೮೦-೨೦೦ ಟನ್ಗಳಷ್ಟು ಎರೆಹುಳು ಗೊಬ್ಬರ ವೈಜ್ಞಾನಿಕವಾಗಿ ಸಿದ್ಧಪಡಿಸುತ್ತಾರೆ. ೬.ಬಯೋಡೈಜಸ್ಟರ್ ಘಟಕ: ೨೦ x ೧೨ x ೬ ಅಡಿ ಟ್ಯಾಂಕ್ನಲ್ಲಿ ಎಮ್ಮೆ, ಆಕಳು ಸಗಣಿ ಗಂಜಲ ಜೊತೆಗೆ ಫಾರ್ಮ್ನ ಕತ್ತರಿಸಿದ ಬೆಳೆಯ ಎಲ್ಲಾ ತ್ಯಾಜ್ಯ, ಹುಲ್ಲು, ಬೇವು, ಚದುರಂಗಿ ಎಲೆ ತಪ್ಪಲುಗಳನ್ನು ಹಾಕುತ್ತಾರೆ. ಇದರಲ್ಲಿಯ ಎರೆಹುಳುಗಳಿಂದಾಗಿ ಎರೆಜಲ ಸಿದ್ಧಪಡಿಸಿ ಜಮೀನಿಗೆ ಹಾಕುತ್ತಾರೆ. ಈ ೧೨ ಎಕರೆ ಜಮೀನಿನ ಯೋಜನೆಗಳಿಂದ ವರ್ಷ ಒಂದಕ್ಕೆ ೧೦-೧೨ ಲಕ್ಷ ರೂಪಾಯಿ ನಿವ್ವಳ ಲಾಭ ಪಡೆಯುತ್ತಾರೆ. ಅಲ್ಲದೇ ಹಲವಾರು ಜನಕ್ಕೆ ಉದ್ಯೋಗಾವಕಾಶ ನೀಡಿದ (ಜೈ ಜವಾನ್) ಶ್ರೇಷ್ಠ ಸಾವಯವ ಕೃಷಿಕರಾಗಿದ್ದಾರೆ