ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೨

ಬೀಜ ಪ್ರಪಂಚ-ಚವಳಿಕಾಯಿ

image_
ಡಾ. ಕೆ. ಎಸ್. ಶೇಷಗಿರಿ
9741769213
1

ಉಷ್ಣವಲಯದಲ್ಲಿ ಬೆಳೆಯಬಲ್ಲ ಚವಳಿಕಾಯಿ ಒಂದು ಪೌಷ್ಟಿಕ ತರಕಾರಿ ಬೆಳೆ. ಇದರ ಮೂಲ ಸ್ಥಾನ ಭಾರತದ ಒಣ ಪ್ರಾಂತ್ಯವಾಗಿದ್ದು ಪ್ರಪಂಚದ ಶೇ.೮೦ರಷ್ಟು ಉತ್ಪಾದನೆ ಭಾರತ ಮತ್ತು ಪಾಕಿಸ್ತಾನದಲ್ಲಿ ನಡೆಯುತ್ತಿದೆ. ಆಗಾಗ್ಯೆ ಮಳೆ ಬೇಡುವ ಈ ಬೆಳೆಯನ್ನು ಬೀಜದಿಂದ ದೊರೆಯುವ ಅಂಟಿಗಾಗಿ ಕೂಡ ಕೃಷಿ ಮಾಡಲಾಗುತ್ತಿದೆ. ವೈಜ್ಞಾನಿಕವಾಗಿ ಸೈಯಾಮಾಪ್ಸಿಸ್ ಟೆಟ್ರಾಗೊನೊಲೋಬ ಎಂದು ಕರೆಯಲಾಗುವ ಚವಳಿಕಾಯಿ ಫ್ಯಾಬೇಸಿಯೆ ಕುಟುಂಬಕ್ಕೆ ಸೇರಿದ್ದು ಇದನ್ನು ಗೋರಿಕಾಯಿ, ಜವಳಿಕಾಯಿ ಹಾಗು ಗೌರ್ ಎಂದು ಕೂಡ ಕರೆಯಲಾಗುತ್ತದೆ. ಚವಳಿಕಾಯಿಯನ್ನು ಪ್ರಮುಖವಾಗಿ ಖಾದ್ಯವಾಗಿ ಪಲ್ಯ, ತೊವೆ ಮತ್ತು ಲಿಂಬೆ ಹಣ್ಣಿನೊಂದಿಗೆ ಉಪ್ಪಿನಕಾಯಿ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. ಚವಳಿಕಾಯಿ ಒಂದು ಪೌಷ್ಟಿಕ ತರಕಾರಿಯಾಗಿದ್ದು ಪ್ರತಿ ೧೦೦ಗ್ರಾಂ ತರಕಾರಿ ಸೇವನೆಯಿಂದ ದೇಹಕ್ಕೆ, ೧೬ಕಿ.ಕ್ಯಾಲೊರಿ ಶಕ್ತಿ, ೧೧.೦ಗ್ರಾಂ ಶರ್ಕರಪಿಷ್ಟ, ೩.೦ಗ್ರಾಂ ಸಸಾರಜನಕ, ೩.೦ಗ್ರಾಂ ನಾರು, ೧.೦ಗ್ರಾಂ ಖನಿಜಾಂಶ, ೧೩೦.೦ ಮಿ.ಗ್ರಾಂ ಸುಣ್ಣ, ೫೭.೦ ಮಿ.ಗ್ರಾಂ ರಂಜಕ ಹಾಗು ಎ, ಸಿ ಮತ್ತು ಡಿ ಜೀವಸತ್ವಗಳು ದೊರೆಯುತ್ತದೆ. ನಮ್ಮ ದಿನನಿತ್ಯದ ಆಹಾರದಲ್ಲಿ ಚವಳಿಕಾಯಿ ಬಳಕೆಯಿಂದ ಹಲವಾರು ಆರೋಗ್ಯ ಲಾಭಗಳಿವೆ. ಇದರಲ್ಲಿರುವ ಹೆಚ್ಚಿನ ನಾರಿನಂಶದಿಂದ ರಕ್ತದಲ್ಲಿರುವ ಕೊಲೆಸ್ಟಿರಾಲ್ ಅಂಶ ಕಡಿಮೆಯಾಗಿ ಹೃದಯದ ಆರೋಗ್ಯ ಸುಧಾರಿಸುತ್ತದೆ. ಚವಳಿಕಾಯಿ ಪೌಷ್ಟಿಕ ಆಹಾರವಾಗಿದ್ದು ಸಸಾರಜನಕ ಮತ್ತು ಕರಗುವ ನಾರಿನಂಶ ಉತ್ತಮ ದೇಹದಾರ್ಢ್ಯಕ್ಕೆ ಒಳ್ಳೆಯದು. ಮಧುಮೇಹಿಗಳಿಗೆ ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುವಲ್ಲಿ ಚವಳಿಕಾಯಿ ಸಹಾಯ ಮಾಡುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ರಂಜಕದ ಅಂಶದಿಂದ ಮೂಳೆ ಮತ್ತು ಹಲ್ಲಿನ ಬೆಳವಣಿಗೆಗೆ ಇದು ಸಹಾಯಕ. ಚವಳಿಕಾಯಿ ವಿರೇಚನಗುಣ ಹೊಂದಿದ್ದು ಮಲಬದ್ದತೆ ನಿವಾರಣೆಯಲ್ಲಿ ಸಹಾಯ ಮಾಡುತ್ತದೆ. ಇದರಲ್ಲಿ ಲಭ್ಯವಿರುವ ಸುಣ್ಣ ಮತ್ತು ಕಬ್ಬಿಣದ ಅಂಶದಿಂದಾಗಿ ಗರ್ಭಿಣಿ ಮಹಿಳೆಯರಿಗೆ ಒಂದು ಉತ್ತಮ ಆಹಾರವಾಗಬಲ್ಲದು. ಚವಳಿಕಾಯಿ ಒಂದು ವಾರ್ಷಿಕ ಬೇರುಗಂಟು ಸಸ್ಯವಾಗಿದ್ದು ೨-೩ಮೀ. ಎತ್ತರಕ್ಕೆ ಬೆಳೆಯಬಲ್ಲದು. ಇದರಲ್ಲಿ ಎರಡು ಜಾತಿಗಳಿದ್ದು ಪೂಸಾ ಸದಾಬಹಾರ್ ತಳಿ ಒಂದೇ ಕಾಂಡವನ್ನು ಹೊಂದಿದ್ದರೆ, ಪೂಸಾ ಮೌಸಮಿ ತಳಿಯು ರೆಂಬೆ ಒಡೆಯುವ ಕಾಂಡವನ್ನು ಹೊಂದಿರುತ್ತದೆ. ಕಾಂಡ ಹಾಗು ಎಲೆಗಳು ರೋಮಗಳಿಂದ ಕೂಡಿದ್ದು ಕಂಕುಳಲ್ಲಿ ಬಿಳಿ ಅಥವಾ ನೀಲಿ ಹೂವುಗಳನ್ನು ಗೊಂಚಲು ಗೊಂಚಲಾಗಿ ಬಿಡುತ್ತವೆ. ಸುಮಾರು ೬೦-೭೫ದಿನಗಳಲ್ಲಿ ಕಾಯಿಗಳು ಕೊಯ್ಲಿಗೆ ಬರುತ್ತವೆ. ಬೀಜಗಳು ಬಿಳಿ ಅಥವಾ ಬೂದುಬಣ್ಣ ಹೊಂದಿರುತ್ತವೆ. ಚವಳಿಕಾಯಿಯನ್ನು ಬೀಜಗಳಿಂದ ಬೆಳೆಯಲಾಗುತ್ತಿದ್ದು ಒಂದು ಎಕರೆ ಪ್ರದೇಶಕ್ಕೆ ಸುಮಾರು ೧೦-೧೨ ಕಿ.ಗ್ರಾಂ ಬಿತ್ತನೆ ಬೀಜ ಬೇಕಾಗುತ್ತದೆ. ಬಿತ್ತನೆಗೆ ಮೊದಲು ಬೀಜಗಳನ್ನು ೨೦೦ಗ್ರಾಂ ರೈಜೊಬಿಯಮ್ ಜೀವಾಣುಗಳಿಂದ ಉಪಚರಿಸಿ/ ಲೇಪನ ಮಾಡಿ, ಸುಮಾರು ೩೦ ನಿಮಿಷಗಳ ಕಾಲ ನೆರಳಿನಲ್ಲಿ ಒಣಗಿಸಿದ ನಂತರ ೪೫ಸೆಂ.ಮೀ. ಸಾಲುಗಳಲ್ಲಿ ೨೦-೨೫ಸೆಂ.ಮೀ. ಅಂತರದಲ್ಲಿ ಬಿತ್ತನೆ ಮಾಡಬೇಕು