ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೨

ಹೆಸರು ಬೆಳೆಯಲ್ಲಿ ಹಳದಿ ನಂಜಾಣು ರೋಗ

ಜಯಪ್ಪ
೯೫೩೫೭೯೫೫೧೦
1

ಹೆಸರು ಬೆಳೆಯಲ್ಲಿ ಹಳದಿ ನಂಜಾಣು ರೋಗವು, ಈ ಬೆಳೆಯ ಕಡಿಮೆ ಇಳುವರಿಗೆ ಮುಖ್ಯ ಜೈವಿಕ ಕಾರಣವಾಗಿದೆ. ಹೆಸರಿನ ಹಳದಿ ರೋಗದ ನಂಜಾಣು ಇದರ ರೋಗಕಾರಕವಾಗಿದ್ದು, ಬಿಳಿನೊಣವಾದ ಬೀಮಿಸಿಯ ಟಬಾಸಿ (Bemesia tabaci)ಯು ಇದರ ರೋಗವಾಹಕವಾಗಿದೆ. ಭಾರತದ ಕೃಷಿಯಲ್ಲಿ ಹೆಸರು ಮುಖ್ಯ ಕಾಳು ಬೆಳೆಯಾಗಿದ್ದು, ಅದರದ್ದೇ ಆದ ಮಹತ್ವವನ್ನು ಪಡೆದುಕೊಂಡಿದೆ. ಹೆಸರು ಬೆಳೆಯ ಉತ್ಪಾದನೆಯಲ್ಲಿ ಭಾರತವು ಮುಂಚೂಣಿಯಲ್ಲಿದ್ದು, ಪ್ರಪಂಚದ ಶೇ. ೫೪ ರಷ್ಟು ಉತ್ಪಾದನೆ ಹಾಗೂ ಶೇ. ೬೫ ರಷ್ಟು ಪ್ರದೇಶದ ಪಾಲು ಹೊಂದಿದೆ. ಈ ಬೆಳೆಗೆ ಬರುವ ಎಲ್ಲಾ ರೋಗಗಳ ಪೈಕಿ, ಹಳದಿ ನಂಜಾಣು ರೋಗವು ಅತಿ ಹೆಚ್ಚು ಬಾಧೆಯನ್ನುಂಟು ಮಾಡುತ್ತದೆ. ಕಂಡುಬರುವ ಕಾಲ: ಈ ರೋಗವು ಬೆಳೆಯ ಎಲ್ಲಾ ಋತುವಿನಲ್ಲಿಯೂ ಕಾಣಬಹುದು, ಆದರೆ ಪ್ರಮುಖವಾಗಿ ಬೇಸಿಗೆ ಕಾಲದಲ್ಲಿ ಕಂಡುಬರುತ್ತದೆ. ಲಕ್ಷಣಗಳು: ಸಾಮಾನ್ಯವಾಗಿ ಈ ರೋಗದ ಲಕ್ಷಣಗಳು, ಹೆಸರು ಬೆಳೆಯ ಎಲೆಯ ಮೇಲೆ ಕಂಡುಬರುತ್ತವೆ. ಇದಲ್ಲದೆ, ರೋಗದ ತೀವ್ರತೆ ಹೆಚ್ಚಾದಾಗ ಕಾಯಿಯ ಮೇಲೆಯೂ ಲಕ್ಷಣಗಳನ್ನು ಕಾಣಬಹುದು. 1. ನಂಜು ತಗುಲಿದ ಎಲೆಗಳ ಮೇಲೆ ಅನಿಮಿಯತ ಹಸಿರು ಹಳದಿ ಬಣ್ಣದ ಉದ್ದನೆಯ ಪಟ್ಟಿಗಳು ಕಾಣಿಸುತ್ತವೆ. ಸಣ್ಣ ಎಲೆಗಳ ಮೇಲೆ ಹೆಚ್ಚಾಗಿ ಈ ಲಕ್ಷಣಗಳು ಕಾಣಿಸುತ್ತವೆ, 2. ತುತ್ತಾದ ಗಿಡಗಳಲ್ಲಿ ಕುಬ್ಜತೆಯನ್ನು ಕಾಣಬಹುದು, 3. ಚಿಗುರೆಲೆಗಳು ಸಂಪೂರ್ಣವಾಗಿ ಹಳದಿ ಬಣ್ಣಕ್ಕೆ ತಿರುಗುತ್ತವೆ, 4. ಗಿಡಗಳಲ್ಲಿ ಮುದುಡಿದ ಎಲೆಗಳನ್ನು ಹಾಗೂ ಕುಗ್ಗಿದ ಕಾಯಿಗಳನ್ನು ಕಾಣಬಹುದು, 5. ಬಾಧೆಗೆ ಒಳಗಾದ ಬೆಳೆಯು ಕಡಿಮೆ ಹೂವುಗಳನ್ನು ಒಳಗೊಂಡಿರುತ್ತದೆ ಹಾಗೂ ಕಡಿಮೆ ಮತ್ತು ಚಿಕ್ಕಗಾತ್ರದ ಬೀಜಗಳನ್ನು ಉತ್ಪತ್ತಿ ಮಾಡುತ್ತದೆ. ಹತೋಟಿ ಕ್ರಮಗಳು: ಹೆಸರಿನ ಹಳದಿ ನಂಜಾಣು ರೋಗವು ರೋಗವಾಹಕಗಳಿಂದ ಹರಡುವುದರಿಂದ, ಬಿಳಿನೊಣಗಳ ನಿರ್ವಹಣೆಯು ಮುಖ್ಯವಾಗಿರುತ್ತದೆ. 1. ರೋಗಕ್ಕೆ ತುತ್ತಾದ ಸಸ್ಯಗಳನ್ನು ಪ್ರಾರಂಭದ ಹಂತದಲ್ಲಿಯೇ ಗುರುತಿಸಿ ಕಿತ್ತು ನಾಶಪಡಿಸಬೇಕು. 2. ಬಿಳಿ ನೊಣಗಳ ಹತೋಟಿಗಾಗಿ,೧.೭ ಮಿ.ಲೀ. ಡೈಮೆಥೋಯೇಟ್ ೩೦ ಇಸಿ ಅಥವಾ ೦.೫ ಮಿ.ಲೀ. ಫಾಸ್ಫಾಮಿಡಾನ್ ೮೫ ಡಬ್ಲು.ಎಸ್ಸಿ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. 3. ಅಥವಾ ಪ್ರತಿ ಲೀಟರ್ ನೀರಿಗೆ ೧.೦ ಮಿ.ಲೀ. ಆಕ್ಸಿಡೆಮೆಟಾನ್ ಮಿಥೈಲ್ ೨೫ ಇ.ಸಿ. ಅಥವಾ ೧.೫ ಮಿ.ಲೀ. ಟ್ರೈಅಜೋಫಾಸ್ ೪೦ ಇ.ಸಿ. ಬೆರೆಸಿ ಸಿಂಪರಿಸಬೇಕು. 4. ಅಥವಾ ಇಮೀಡಕ್ಲೋಪ್ರಿಡ್ ೧೭ % Sಐನ್ನು ಪ್ರತಿ ಕೆ. ಜಿ. ಬಿತ್ತನೆ ಬೀಜಗಳಿಗೆ ೫ ಮೀ. ಲೀ. ಬೀಜೋಪಚಾರ ಮಾಡಿ ನಂತರ ೦.೫ ಮೀ. ಲೀ. ಇಮೀಡಕ್ಲೋಪ್ರಿಡ್ ೧೭% Sಐನ್ನು ಪ್ರತಿ ಲೀ. ನೀರಿಗೆ ಬೆರೆಸಿ ಬಿತ್ತನೆ ಮಾಡಿದ ೨೫ ಹಾಗೂ ೪೦ ದಿನಗಳ ನಂತರ ಸಿಂಪರಣೆ ಮಾಡುವುದು. 5. ಇದರ ಜೊತೆಗೆ ಬಿಳಿನೊಣವು ಸಾಕಷ್ಟು ಕಳೆ ಗಿಡಗಳಲ್ಲಿ ತನ್ನ ಜೀವನ ಚಕ್ರವನ್ನು ಮುಗಿಸುವುದರಿಂದ, ಬೆಳೆಯಲ್ಲಿನ ಕಳೆ ನಿರ್ವಹಣೆಯು ರೋಗದ ಹತೋಟಿಯಲ್ಲಿ ಬಹು ಮುಖ್ಯ ಅಂಶವಾಗಿದೆ. ಕಳೆ ನಿರ್ವಹಣೆಗಾಗಿ, ಬಿತ್ತಿದ ೪೦ ದಿನಗಳ ಒಳಗಾಗಿ ಎರಡು ಸಾರಿ ಅಂತರ ಬೇಸಾಯ ಮಾಡಿ ಕಳೆ ಹತೋಟಿ ಮಾಡಬಹುದು. ಅಥವಾ 6. ಬೀಜ ಬಿತ್ತಿದ ಎರಡು ದಿನಗಳ ಒಳಗಾಗಿ ಪ್ರತಿ ಹೆಕ್ಟೇರ್ಗೆ ೩ ಲೀ. ಫ್ಲುಕ್ಲೋರಾಲಿನ್ ೪೫ ಇ.ಸಿ. ಅಥವಾ ೪ ಲೀ. ಅಲಾಕ್ಲೋರ್ ೫೦ ಇ.ಸಿ ಕಳೆನಾಶಕಗಳನ್ನು ೧೦೦೦ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪರಣೆ ಮಾಡುವುದು. ಸಿಂಪರಣೆ ಸಮಯದಲ್ಲಿ ಮಣ್ಣು ಹುಡಿಯಾಗಿದ್ದು, ಸಾಕಷ್ಟು ತೇವಾಂಶ ಹೊಂದಿರಬೇಕು.