ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೨

ಚಿತ್ರ ಲೇಖನ- ಔಡಲದ ಕೊಂಡಲಿ ಹುಳು

image_
ಡಾ. ಎಸ್. ಟಿ. ಪ್ರಭು,
9448182225
1

ಔಡಲ ಅಥವಾ ಹರಳು ಬೆಳೆಯಲ್ಲಿ ಕೊಂಡಲಿ ಹುಳು ಅಥವಾ ಮೀಟು ಹುಳು ಎಂದು ಖ್ಯಾತಿಯಾಗಿರುವ ಈ ಕೀಟವು ಪತಂಗ ಜಾತಿಯದಾಗಿದ್ದು ವೈಜ್ಞಾನಿಕವಾಗಿ ಇದನ್ನು ’ಅಖೋಯ ಜನತ’ (ಂಛಿhoeಚಿ ರಿಚಿಟಿಚಿಣಚಿ) ಎಂದು ಕರೆಯುತ್ತಾರೆ. ಈ ಕೀಟ ಪೀಡೆಯು ಇತರೆ ಬೆಳೆಗಳಾದ ಗುಲಾಬಿ, ದಾಳಿಂಬೆ, ಕಿತ್ತಳೆ ಮತ್ತು ಟ್ರೈಡಾಕ್ಸ ಎಂಬ ಕಳೆ ಗಿಡದ ಮೇಲೆಯೂ ಆಕ್ರಮಣ ಮಾಡಬಲ್ಲದು. ಪ್ರೌಢ ಚಿಟ್ಟೆಯು ತೆಳು ಕೆಂಪು ಮಿಶ್ರಿತ ಕಂದು ಬಣ್ಣದ ಮುಂಭಾಗದ ರೆಕ್ಕೆಗಳನ್ನು ಹೊಂದಿದ್ದು ಹಿಂಭಾಗದ ರೆಕ್ಕೆಗಳು ಕಪ್ಪು ಬಣ್ಣದಿಂದ ಕೂಡಿದ್ದು ಅಂಚಿನಲ್ಲಿ ೩ ಬಿಳಿ ಬಣ್ಣದ ಚುಕ್ಕೆಗಳನ್ನು ಮತ್ತು ಒಂದು ಬಿಳಿ ಪಟ್ಟಿಯನ್ನು ಹೊಂದಿರುತ್ತದೆ. ಪತಂಗವು ಗಾತ್ರದಲ್ಲಿ ದೊಡ್ಡದಾಗಿರುತ್ತದೆ (೨ ಇಂಚು). ಹೆಣ್ಣು ಪತಂಗವು ಸುಮಾರು ೪೫೦ ಮೊಟ್ಟೆಗಳನ್ನು ಎಲೆಗಳ ಮೇಲೆ ಇಡುತ್ತದೆ. ಸಣ್ಣ್ಲ ಮರಿಹುಳುಗಳು ಗುಂಪು ಗುಂಪಾಗಿದ್ದು ಔಡಲದ ಎಲೆಗಳನ್ನು ತಿನ್ನಲು ಪ್ರಾರಂಭಿಸುತ್ತವೆ. ದೊಡ್ಡ ಹುಳುಗಳು ಆಕಾಶಬೂದು ಬಣ್ಣ ಹೊಂದಿದ್ದು ಎಲೆಗಳನ್ನು ಪೂರ್ತಿಯಾಗಿ ತಿಂದು ನರಗಳನ್ನು ಮಾತ್ರ ಬಿಡುತ್ತವೆ. ಪೂರ್ಣ ಬೆಳೆದ ಮರಿಗಳು ೬ ರಿಂದ ೭ ಸೆಂ. ಮೀ. ಉದ್ದವಿರುತ್ತವೆ. ಮರಿಯ ದೇಹದ ಎರಡೂ ಕಡೆ ಕೆಂಪು ಮತ್ತು ಬಿಳಿ ಗೆರೆಗಳು ಮತ್ತು ಬಾಲದ ಕಡೆ ಎರಡು ಕೆಂಪು ಸಣ್ಣ ಕೊಂಬಿನಂತಹ ರಚನೆ ಇರುತ್ತದೆ. ಇದರ ಬಾಧೆ ಜುಲೈದಿಂದ ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದು. ಪೂರ್ಣ ಬಲಿತ ಮರಿಹುಳುಗಳು (೧೨ ರಿಂದ ೧೫ ದಿನಗಳು) ಮಣ್ಣಿನಲ್ಲಿ ಅಥವಾ ಎಲೆಗಳ ಮಧ್ಯದಲ್ಲಿ ಕೋಶಾವಸ್ಥೆ ಹಂತಕ್ಕೆ ತಲುಪುತ್ತವೆ (೧೦ ರಿಂದ ೧೪ ದಿನಗಳು).

ಕೀಟದ ನಿರ್ವಹಣೆ: 1. ಮರಿಹುಳುಗಳು ದೊಡ್ಡದಾಗಿರುವುದರಿಂದ ಕೈಯಿಂದ ಆರಿಸಿ ತೆಗೆಯುವುದು ಈ ಕೀಟದ ಹತೋಟಿಯಲ್ಲಿ ಪ್ರಮುಖ ಕೆಲಸವಾಗಿರುತ್ತದೆ. 2. ಪ್ರಕೃತಿಯಲ್ಲಿ ಈ ಕೀಟದ ವಂಶಾಭಿವೃದ್ದಿಯನ್ನು ತಡೆಯಲು ಜೈವಿಕ ಹತೋಟಿಯೂ ಸಹ ರೈತರಿಗೆ ಪರೋಕ್ಷವಾಗಿ ಸಹಕಾರಿಯಾಗಿದೆ. ಈ ಪತಂಗದ ಮೊಟ್ಟೆಗಳನ್ನು ಟ್ರೈಕೋಗ್ರಾಮಾ, ಟೆಲೆನೋಮಸ್ ಮತ್ತು ಟೆಟ್ರಾಸ್ಟಿಕಸ್ ಎಂಬ ಮೂರು ಜಾತಿಯ ಪರತಂತ್ರ ಜೀವಿಗಳು ನೈಸರ್ಗಿಕವಾಗಿ ಆಕ್ರಮಣ ಮಾಡಿ ನಾಶಮಾಡುತ್ತವೆ. ನಂತರ ಬ್ರಾಕೋನಿಡ್ ಎಂಬ ಮತ್ತೊಂದು ಪರತಂತ್ರ ಜೀವಿಯು ಕೊಂಡಲಿ ಹುಳದ ಮರಿ ಹಂತದಲ್ಲಿ ಆಕ್ರಮಣ ಮಾಡಿ ನಾಶಮಾಡುತ್ತವೆ. 3. ಔಡಲ ಹೊಲದಲ್ಲಿ ಅಲ್ಲಲ್ಲಿ ಎಕರೆಗೆ ೧೦ ರಿಂದ ೧೨ ಕವಲೊಡೆದ ಕೋಲುಗಳನ್ನು ನೆಡುವುದರಿಂದ ವಿವಿಧ ರೀತಿಯ ಕೀಟಭಕ್ಷಕ ಪಕ್ಷಿಗಳಾದ ಮೈನಾ, ಕಾಜಾಣ, ಮುಂತಾದವುಗಳನ್ನು ಬೆಳೆಗೆ ಆಕರ್ಷಿಸಿ ಹುಳುಗಳನ್ನು ತಿನ್ನಲು ಅವಕಾಶ ಮಾಡಿಕೊಡಬೇಕು. 4. ಕೀಟ ಬಾಧೆ ಕಂಡುಬಂದಾಗ ಶೇ. ೫ ರ ಬೇವಿನ ಕಷಾಯ ಅಥವಾ ಬೇವಿನ ಎಣ್ಣೆಯನ್ನು ಸಿಂಪರಣೆ ಮಾಡಬಹುದು. ಕೃತಕ ಕೀಟನಾಶಕಗಳಲ್ಲಿ ೧ ಮಿ. ಲೀ. ೦.೫ ಮಿ. ಲೀ. ಫೆನವಲರೇಟ್ ೧೦ ಇ.ಸಿ ಅಥವಾ ೦.೫ ಮಿ. ಲೀ. ಸೈಪರ್ಮೆಥ್ರಿನ್ ೧೦ ಇ.ಸಿ. ಅಥವಾ ಥಯೋಡಿಕಾರ್ಬ ೧ ಗ್ರಾಂ. ಅಥವಾ ಸ್ಪೈನೋಸ್ಯಾಡ್ ೦.೩ ಮಿ. ಲಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿ ಅಥವಾ ಪ್ರತಿ ಎಕರೆಗೆ ೮-೧೦ ಕಿ.ಗ್ರಾಂ ಶೇ. ೨ ರ ಶೇ. ೦.೪ ರ ಫೆನ್ವಲರೇಟ್ ಪುಡಿಯನ್ನು ಧೂಳೀಕರಿಸಬಹುದು.

456