ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೨

ಅನುಕೂಲಕಾರಿ ಹಿಂಗಾರಿ ಜೋಳ, ಎಸ್ಪಿವಿ-೨೨೧೭

ಹೆಚ್. ಎಂ. ಸಣ್ಣಗೌಡ್ರ
೯೯೬೪೨೦೪೫೭೧
1

ಜೋಳ ಒಂದು ಪ್ರಮುಖ ಹಿಂಗಾರಿ ಬೆಳೆಯಾಗಿದ್ದು, ದಾವಣಗೆರೆ ಜಿಲ್ಲೆಯಾದ್ಯಂತ ೧೫೦೦ ಹೆಕ್ಟೇರ್ ಪ್ರದೇಶದಲ್ಲಿ ಸರಿಸುಮಾರು ೩೦೦೦ ಟನ್ ಉತ್ಪಾದನೆ ಮಾಡಲಾಗುತ್ತಿದೆ. ಒ-೩೫-೧ (ಮಾಲ್ದಂಡಿ) ತಳಿಯನ್ನು ರೈತರು ಅನೇಕ ವರ್ಷದಿಂದ ಉಪಯೋಗಿಸುತ್ತಿದ್ದಾರೆ. ಈ ತಳಿಯು ಅತ್ಯುತ್ತಮವಾಗಿದ್ದು ಉತ್ತಮ ಇಳುವರಿ ಕೂಡ ನೀಡುವುದರಿಂದ ರೈತರ ಆಯ್ಕೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಆದರೆ, ತೆನೆ ಬಿಟ್ಟಾಗ ಅಕಾಲಿಕ ಮಳೆಯಿಂದಾಗಿ ಬರುವ ಕಾಡಿಗೆ ರೋಗವನ್ನು (ಕಾಳು ಕಪ್ಪಾಗುವಿಕೆ) ತಡೆದುಕೊಳ್ಳುವ ಶಕ್ತಿ ಈ ತಳಿಗೆ ಇರುವುದಿಲ್ಲ ಮತ್ತು ಕಟಾವಿಗೂ ಮುನ್ನವೆ ನೆಲಕ್ಕೆ ಬೀಳುವುದರಿಂದ ಕಟಾವು ಮಾಡಲು ಕಷ್ಟಕರವಾಗುವುದಲ್ಲದೇ ಉತ್ಪಾದನೆಯಲ್ಲಿ ನಷ್ಟ ಅನುಭವಿಸಬೇಕಾಗಬಹುದು. ಧಾರವಾಡ ಕೃಷಿ ವಿಶ್ವವಿದ್ಯಾನಿಲಯ ಈ ದಿಸೆಯಲ್ಲಿ ಸಂಶೋಧನೆ ಕೈಗೊಂಡು ಹೊಸ ಉತ್ತಮ ತಳಿಯನ್ನು ೨೦೧೪ ಇಸವಿಯಲ್ಲಿ ಬಿಡುಗಡೆ ಮಾಡಿದ್ದು ಈ ತಳಿಯು ಕಾಡಿಗೆ ರೋಗವನ್ನು ತಡೆದುಕೊಳ್ಳುವ ಶಕ್ತಿ ಹೊಂದಿರುವುದಲ್ಲದೆ ಒ-೩೫-೧ (ಮಾಲ್ದಂಡಿ) ತಳಿಗಿಂತ ಹೆಚ್ಚಿನ ಇಳುವರಿ ನೀಡುತ್ತದೆ. ಇದಲ್ಲದೆ ಬೆಳೆ ಪೂರ್ತಿ ಬೆಳೆದು ನಿಂತಾಗ ನೆಲಕ್ಕೆ ಬೀಳುವ ಪ್ರಮಾಣ ತುಂಬಾ ಕಡಿಮೆ ಇದೆ. ಕಳೆದ ವರ್ಷ (೨೦೧೬-೧೭) ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ನ್ಯಾಮತಿ ಗ್ರಾಮದಲ್ಲಿ ಐಸಿಎಅರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಇಲಾಖೆಯ ಸಹಯೋಗದೊಂದಿಗೆ ಆಯ್ದ ಹತ್ತು ರೈತರ ತಾಕುಗಳಲ್ಲಿ ಪ್ರಾತ್ಯಕ್ಷತೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಳೆದ ವರ್ಷ ವಾಡಿಕೆಗಿಂತ ಕಡಿಮೆ ಮಳೆ ಇದ್ದರೂ ಕೂಡ ಪ್ರಾತ್ಯಕ್ಷಿಕೆ ಯಶಸ್ವಿಯಾಗಿದ್ದು ರೈತರು ಉತ್ತಮ ಇಳುವರಿ ಪಡೆದಿರುತ್ತಾರೆ. ಈ ತಳಿಯ ಕಾಳುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದ್ದು ಸುಮಾರು ೨೦೦-೨೫೦ ಪ್ರತಿ ಕ್ವಿಂಟಾಲ್ಗೆ ಹೆಚ್ಚಿನ ದರ ನಿಗದಿಯಾಗಿತ್ತು. ಪ್ರಾತ್ಯಕ್ಷಿಕೆಯಲ್ಲಿನ ಸರಾಸರಿ ಇಳುವರಿ ಗಮನಿಸಿದಾಗ ಪ್ರತಿ ಹೆಕ್ಟೇರಿಗೆ ಎಸ್ಪಿವಿ-೨೨೧೭ ತಳಿಯು ೮.೦೦ ಕ್ವಿಂಟಾಲ್ ಇಳುವರಿ ನೀಡಿದರೆ ಒ-೩೫-೧ ತಳಿಯು ೭.೪ ಕ್ವಿಂಟಾಲ್ ನಷ್ಟು ಮಾತ್ರ ಇಳುವರಿ ನೀಡಿತ್ತು. ಈ ತಳಿಯ ಉತ್ತಮ ಗುಣಮಟ್ಟದ ಬೀಜಗಳು ಬೇಕಾದಲ್ಲಿ ಆಸಕ್ತ ರೈತರು ಈ ಕೆಳಗೆ ನೀಡಿದ ವ್ಯಕ್ತಿಗಳನ್ನು, ಸಂಪರ್ಕಿಸಿ: ಸಿದ್ದಲಿಂಗಪ್ಪ, ಸುರಹೊನ್ನೆ: ೯೭೪೨೧೫೮೨೬೨, ಸುನಿಲ್, ನ್ಯಾಮತಿ: ೯೭೩೯೬೫೬೭೫೬, ರಾಮಜಿನಾಯ್ಕ, ಸಹಾಯಕ ಕೃಷಿ ಅಧಿಕಾರಿ, ನ್ಯಾಮತಿ: ೮೨೭೭೯೩೧೨೧೯, ಹೆಚ್.ಎಂ. ಸಣ್ಣಗೌಡ್ರ, ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ: ೯೯೬೪೨೦೪೫೭೧.