ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೨

ಮರಗೆಣಸಿನ ಎಲೆ ಜೈವಿಕ ಕೀಟನಾಶಕ ಸಂಪತ್ತು

ಡಾ. ವಿವೇಕ್ ಹೆಗ್ಡೆ
೯೪೯೫೬೯೪೪೭೯
1

ಹವಾಮಾನ ಬದಲಾವಣೆಯಾಗುತ್ತಿರುವ ಇಂದಿನ ದಿನಗಳಲ್ಲಿ, ಆಹಾರಧಾನ್ಯಗಳ ಉತ್ಪಾದನೆ ಕಡಿಮೆಯಾಗುತ್ತಿದೆ. ಹವಾಮಾನದ ವೈಪರಿತ್ಯ ಸಹಿಸಿಕೊಂಡು ಉತ್ತಮ ಇಳುವರಿ ಕೊಡುವ ಬೆಳೆಗಳೆಂದರೆ ಗೆಡ್ಡೆ ಬೆಳೆಗಳು. ಇದರಿಂದಾಗಿ, ಇವುಗಳನ್ನು ಭವಿಷ್ಯದ ಬೆಳೆಗಳು ಎನ್ನುತ್ತಾರೆ. ಗೆಡ್ಡೆ ಬೆಳೆಗಳಲ್ಲಿ, ಮರಗೆಣಸು ಒಂದು ಪ್ರಮುಖವಾದ ಬೆಳೆ. ಮರಗೆಣಸು ಉಷ್ಣವಲಯದಲ್ಲಿ ಬೆಳೆಯುವಂತಹ ಪ್ರಮುಖ ಬೆಳೆ. ಮರಗೆಣಸನ್ನು ಒಂದು ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತದೆ. ಇದರಿಂದ ಹಲವಾರು ಉತ್ಪನ್ನಗಳನ್ನು ತಯಾರು ಮಾಡಲಾಗುತ್ತದೆ. ಉದಾಹರಣೆಗೆ, ಪಿಷ್ಠ, ಹಿಟ್ಟು, ಚಿಪ್ಸ್, ಸಬ್ಬಕ್ಕಿ (ಸಾಬುಧಾನ), ಅಂಟು (ಗಮ್), ಗ್ಲುಕೋಸ್, ಆಲ್ಕೋಹಾಲ್, ಪಶು ಆಹಾರ ಮುಂತಾದವುಗಳು. ಮರಗೆಣಸನ್ನು ಆಹಾರವನ್ನಾಗಿ ಬಳಸುವುದಲ್ಲದೆ ಬೇರೆ ರೀತಿಯ ಉಪಯೋಗವನ್ನು ಪಡೆದುಕೊಳ್ಳಬಹುದು. ಕೇಂದ್ರಿಯ ಗೆಡ್ಡೆ ಗೆಣಸು ಸಂಶೋಧನಾ ಸಂಸ್ಥೆ (Central Tuber Crops Research Institute), ತಿರುವನಂತಪುರಂ, ಇಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಜಯಪ್ರಕಾಶ್ ನೇತೃತ್ವದ ಸಂಶೋಧನಾ ತಂಡ, ಮರಗೆಣಸಿನ ಎಲೆ ಮತ್ತು ಗೆಡ್ಡೆಯ ತೊಗಟೆಯಲ್ಲಿರುವ ಕೀಟನಾಶಕದ ಗುಣವನ್ನು ಕಂಡುಹಿಡಿದು, ೪ ಬಗೆಯ ಜೈವಿಕ ಕೀಟನಾಶಕಗಳನ್ನು ತಯಾರಿಸಿದ್ದಾರೆ. ಅವುಗಳೆಂದರೆ ನನ್ಮಾ, ಮೆನ್ಮಾ, ಶ್ರೇಯಾ ಮತ್ತು ಶಕ್ತಿ. ಈ ಜೈವಿಕ ಕೀಟನಾಶಕಗಳನ್ನು ಹಾನಿಕಾರಕ ಕೃತಕ ಕೀಟನಾಶಕಗಳಿಗೆ ಪರ್ಯಾಯವಾಗಿ, ಹಣ್ಣು ಮತ್ತು ತರಕಾರಿ ಬೆಳೆಗಳಲ್ಲಿ ಕಂಡುಬರುವ ಕೀಟಗಳನ್ನು ನಿಯಂತ್ರಿಸಲು ಬಳಸಬಹುದು.

ಕೇಂದ್ರಿಯ ಗೆಡ್ಡೆ ಗೆಣಸು ಸಂಶೋಧನಾ ಸಂಸ್ಥೆ (ಅeಟಿಣಡಿಚಿಟ ಖಿubeಡಿ ಅಡಿoಠಿs ಖeseಚಿಡಿಛಿh Iಟಿsಣiಣuಣe), ತಿರುವನಂತಪುರಂ, ವಿನ್ಯಾಸಗೊಳಿಸಿದ ಉಪಕರಣವನ್ನು ಬಳಸಿ, ಮರಗೆಣಸಿನ ಎಲೆ ಮತ್ತು ಗೆಡ್ಡೆಯ ತೊಗಟೆಯಿಂದ ಜೈವಿಕ ಕೀಟನಾಶಕವನ್ನು ತಯಾರಿಸಲಾಗುತ್ತದೆ. ಮರಗೆಣಸಿನ ಎಲೆ ಮತ್ತು ಗೆಡ್ಡೆಯ ತೊಗಟೆಯನ್ನು ಒಂದು ಪ್ರಮಾಣದ ನೀರಿನೊಂದಿಗೆ ರುಬ್ಬುವ ಘಟಕಕ್ಕೆ ಹಾಕಲಾಗುತ್ತದೆ. ತದನಂತರ ಈ ಮಿಶ್ರಣವನ್ನು ಇನ್ನೊಂದು ಘಟಕಕ್ಕೆ ವರ್ಗಾಯಿಸಲಾಗುತ್ತದೆ. ಇಲ್ಲಿ ಆ ಮಿಶ್ರಣವು ಏಕೀಕರಣಗೊಂಡು ಕಿಣ್ವಗಳ ಪ್ರಕ್ರಿಯೆಯ ಮೂಲಕ ಜೈವಿಕ ಕೀಟನಾಶಕವು ಬಿಡುಗಡೆಗೊಳ್ಳುತ್ತದೆ. ಇದು ಬಟ್ಟಿಇಳಿಸುವಿಕೆಯ ಕ್ರಿಯೆಯಂತೆ ಕಾರ್ಯನಿರ್ವಹಿಸಿದೆ. ಜೈವಿಕಕೀಟನಾಶಕ ಮೆನ್ಮಾ ತಯಾರಿಸುತ್ತದೆ. ಈ ಸತ್ವದ ಜೊತೆಯಲ್ಲಿ ಇನ್ನಿತರೆ ಜೈವಿಕ ಪಧಾರ್ಥಗಳನ್ನು ಬಳಸಿ ನನ್ಮಾ, ಶ್ರೇಯಾ ಮತ್ತು ಶಕ್ತಿ ಎಂಬ ೩ ವಿವಿಧ ಕೀಟನಾಶಕಗಳನ್ನು ತಯಾರಿಸಿದ್ದಾರೆ. ಇದರಿಂದ ಬಂದ ತ್ಯಾಜ್ಯವನ್ನು ಒಂದು ಟ್ಯಾಂಕ್ನಲ್ಲಿ ಸಂಗ್ರಹಿಸಲಾಗುತ್ತದೆ. ಎಲೆ ಅವಶೇಷಗಳನ್ನು ಬೇರ್ಪಡಿಸಿ ಅದರಿಂದ ಬಿಡುಗಡೆಯಾದ ನೀರನ್ನು ಮರುಬಳಕೆ ಮಾಡಲಾಗುತ್ತದೆ. ಎಲೆಯ ಅವಶೇಷಗಳನ್ನು ಪಶು ಆಹಾರವಾಗಿ ಹಾಗು ಕೃಷಿಯಲ್ಲಿ ಗೊಬ್ಬರವಾಗಿ ಬಳಸಲಾಗುತ್ತಿದೆ.

4

ಕಾಂಡಕೊರಕ ಬಾಳೆಬೆಳೆಯಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ಕೀಟ. ಈ ಕೀಟವು ಬಾಳೆಬೆಳೆಗಾರರಲ್ಲಿ ದುಃಸ್ಪಪ್ನವಾಗಿ ಕಾಡುತ್ತದೆ. ಈ ಕೀಟವನ್ನು ನಿಯಂತ್ರಿಸಲು ನನ್ಮಾ ಮತ್ತು ಮೆನ್ಮಾವನ್ನು ಬಳಸಬಹುದು. ಕೀಟ ಬಾಧೆ ಕಂಡುಬಂದಲ್ಲಿ ಮೆನ್ಮಾವನ್ನು, ಕೇಂದ್ರಿಯ ಗಡ್ಡೆ ಗೆಣಸು ಸಂಶೋಧನಾ ಸಂಸ್ಥೆ ವಿನ್ಯಾಸಗೊಳಿಸಿದ ಸಿರಿಂಜ್ನಲ್ಲಿ ತೆಗೆದುಕೊಂಡು, ಪ್ರತಿ ತೂತಿನ ೫ ಸೆಂಟಿಮೀಟರ್ ಕೆಳಗೆ ಇಂಜೆಕ್ಟ್ ಮಾಡಬೇಕು. ತೆಂಗಿನ ತೋಟದಲ್ಲಿ ಕಂಡುಬರುವ ರೆಡ್ ಪಾಮ್ ವೀವಿಲ್ ಕೀಟಗಳನ್ನು ಕೂಡ ಮೆನ್ಮಾವನ್ನು ಸಿಂಪಡಿಸಿ ಹತೋಟಿಗೆ ತರಬಹುದು. ಮೀಲೀಬಗ್, ಟ್ರಿಪ್ಸ್, ಸ್ಕೇಲ್ ಇನ್ಸೆಕ್ಟ್ಸ್ ಮತ್ತು ವೈಟ್ ಫ್ಲೈಗಳು ಸರ್ವೇಸಾಮಾನ್ಯವಾಗಿ ಹಣ್ಣು ಮತ್ತು ತರಕಾರಿ ಬೆಳೆಗಳಲ್ಲಿ ಕಂಡುಬರುವ ಕೀಟಗಳು. ಈ ಕೀಟಗಳು ಗಿಡದ ಬೆಳವಣಿಗೆಯನ್ನು ಕುಂಠಿತಗೊಳಿಸುವುದಲ್ಲದೆ, ರೋಗ ತರುವ ವೈರಸ್ಗಳನ್ನೂ ಕೂಡ ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಹರಡುವಂತೆ ಮಾಡುತ್ತದೆ. ಈ ಎಲ್ಲಾ ಬಗೆಯ ಕೀಟಗಳನ್ನು, ಮರಗೆಣಸಿನಿಂದ ತಯಾರಿಸಿದ ಜೈವಿಕ ಕೀಟನಾಶಕಗಳಿಂದ ನಿಯಂತ್ರಿಸಬಹುದು.

6

ಹಣ್ಣು ಮತ್ತು ತರಕಾರಿ ಬೆಳೆಗಳಲ್ಲಿ ಕಂಡುಬರುವ ಅಫಿಡ್ಸ್ ಮತ್ತು ಟ್ರಿಪ್ಸ್ಗಳನ್ನೂ ನಿಯಂತ್ರಿಸಲು, ನನ್ಮಾ ಮತ್ತು ಶಕ್ತಿ ಜೈವಿಕ ಕೀಟನಾಶಕಗಳು ಬಹಳ ಪ್ರಯೋಜನಕಾರಿ. ಈ ಕೀಟಗಳನ್ನು ನಿಯಂತ್ರಿಸಲು, ಒಂದು ಲೀಟರ್ ನೀರಿಗೆ ೭ ರಿಂದ ೧೦ ಮಿ.ಲೀ. ಜೈವಿಕ ಕೀಟನಾಶಕವನ್ನು ಬೆರೆಸಿ ಗಿಡಗಳಿಗೆ ಸಿಂಪಡಣೆ ಮಾಡಬೇಕು. ಹಾಗೆಯೆ ಮೀಲೀಬಗ್ಸ್ ಮತ್ತು ವೈಟ್ ಫ್ಲೈಸ್ ನಿಯಂತ್ರಿಸಲು, ೭ ರಿಂದ ೧೦ ಮಿ.ಲೀ. ಶ್ರೇಯಾ ಕೀಟನಾಶಕವನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಗಿಡಗಳಿಗೆ ಸಿಂಪಡಿಸಬೇಕು. ಒಂದು ವಾರದ ನಂತರ ಪುನಃ ಸಿಂಪಡಣೆ ಮಾಡಿದರೆ, ಈ ಕೀಟಗಳು ಸಂಪೂರ್ಣವಾಗಿ ಹತೋಟಿಗೆ ಬರುತ್ತದೆ. ಈ ಎಲ್ಲ ಜೈವಿಕಕೀಟನಾಶಕಗಳನ್ನು ಸಂಜೆಯ ವೇಳೆಯಲ್ಲಿ ಸಿಂಪಡಿಸುವುದು ಉತ್ತಮ. ಹತ್ತೊಂಬತ್ತನೇ ಶತಮಾನದಲ್ಲಿ ಮರಗೆಣಸನ್ನು ಆಹಾರ ಬೆಳೆಯಾಗಿ ಕೇರಳಕ್ಕೆ ಪರಿಚಯಿಸಲಾಯಿತು. ಈಗ ಇಪ್ಪತ್ತೊಂದನೇ ಶತಮಾನದಲ್ಲಿ ಮರಗೆಣಸು ಕೇವಲ ಆಹಾರ ಬೆಳೆಯಾಗದೆ ಅದರಿಂದ ಜೈವಿಕ ಕೀಟನಾಶಕಗಳನ್ನು ಕೂಡ ತಯಾರು ಮಾಡಲಾಗಿದೆ. ಈಗಾಗಲೇ ಕೇರಳದ ರೈತರು ಈ ಕೀಟನಾಶಕಗಳನ್ನು ಬಳಸುತ್ತಿದ್ದಾರೆ. ಇದು ಒಳ್ಳೆಯ ಫಲಿತಾಂಶವನ್ನು ನೀಡುತ್ತದೆ ಎಂದು ರೈತರು ಮನಗಂಡಿದ್ದಾರೆ. ಈ ಜೈವಿಕಕೀಟನಾಶಕಗಳನ್ನು ಕೇಂದ್ರಿಯ ಗೆಡ್ಡೆ ಗೆಣಸು ಸಂಶೋಧನಾ ಸಂಸ್ಥೆ (Central Tuber Crops Research Institute), ತಿರುವನಂತಪುರಂ, ಜನಪ್ರಿಯಗೊಳಿಸುತ್ತಿದೆ ಮತ್ತು ದೇಶದ ಎಲ್ಲ ರೈತರಿಗೂ ತಲುಪುವಂತೆ ಮಾಡಲು ಪ್ರಯತ್ನಿಸುತ್ತಿದೆ.

8

ಯಾವುದೇ ಸಲಹೆ ಬೇಕಾದಲ್ಲಿ ಕೆಳಕಂಡ ವಿಳಾಸಕ್ಕೆ ಸಂಪರ್ಕಿಸಿ: ಡೈರೆಕ್ಟರ್, ಕೇಂದ್ರಿಯ ಗೆಡ್ಡೆ ಗೆಣಸು ಸಂಶೋಧನಾ ಸಂಸ್ಥೆ (Central Tuber Crops Research Institute),ತಿರುವನಂತಪುರಂ,ಕೇರಳ, ಭಾರತ – ೬೯೫೦೧೭. ಫೋನ್: ೦೪೭೧-೨೫೯೮೫೫೧, ಫ್ಯಾಕ್ಸ್: ೦೪೭೧-೨೫೯೦೦೬೩, ಈ-ಮೇಲ್: ctcritvm@yahoo.com, ವೆಬ್ ಸೈಟ್: http://www.ctcri.org