ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೨

ಆರ್ಕಿಡ್ ಲೋಕದ ಅವಿನಾಶ್ ಯುವ ಕೃಷಿಕರಿಗೆ ಮಾದರಿ

image_
ಸಂಪಾದಕರು
1

ಹೊಳೆಹೊನ್ನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಹಾಗೂ ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ನಲ್ಲಿ ಎಲೆಕ್ಟ್ರಾನಿಕ್ಸ್ ಪದವಿ ಪಡೆದ ಈ ಯುವಕನ ಆಯ್ಕೆ ಕೃಷಿಯಾಗಿದ್ದೆ ಹಲವರು ಹುಬ್ಬೇರಿಸುವಂತೆ ಮಾಡಿತ್ತು. ಅಷ್ಟೇ ಅಲ್ಲದೆ ಫಸಲಿಗೆ ಬಂದ, ಒಂದು ಎಕರೆ ಅಡಿಕೆ ಕಡಿದು ಆರ್ಕಿಡ್ ಕೃಷಿಗೆ ಕೈಹಾಕಿದಾಗ ಕೆಣಕಿದವರೆ ಹೆಚ್ಚು. ಆದರೆ ಈ ಪ್ರಯೋಗಶೀಲ ಯುವಕ ಯಾವುದನ್ನು ದಿಢೀರ್ ಎಂದು ಮಾಡದೆ ಪ್ರತಿಯೊಂದನ್ನು ದೊಡ್ಡದಾಗಿ ಮಾಡುವ ಮುನ್ನ ತಾನೇ ಸ್ವತಃ ಪ್ರಯೋಗ ಮಾಡಿ ನಂತರ ದಿಟ್ಟ ಹೆಜ್ಜೆ ಇಡುವ ಇವರ ನಡೆ ನಿಜಕ್ಕೂ ಅನುಕರಣೀಯ.

34

ಇವರು ೨೦೧೩ರಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಶನ್ ಅಡಿ ಸಹಾಯ ಪಡೆದು ಕಾರ್ನೆಶನ್ ಬೆಳೆಯಲು ಪ್ರಾರಂಭಿಸಿದರು. ಒಂದು ಎಕರೆ ಪ್ರದೇಶದಲ್ಲಿ ಪಾಲಿಮನೆ ನಿರ್ಮಿಸಿ ಪ್ರಾರಂಭಿಸಿದ ಕಾರ್ನೆಶನ್ನ ಒಂದು ಬೆಳೆ ಹೋಯಿತು. ಅದಕ್ಕೆ ಜಂತುಹುಳು ಕಾರಣ ಎಂದು ಅರಿತು ಜಂತುಹುಳು ನಿರೋಧಕ ತಳಿ ತಂದು ಯಶಸ್ವಿಯಾಗಿ ೩ ವರ್ಷದಿಂದ ಬೆಳೆಯುತ್ತಿದ್ದಾರೆ. ಒಮ್ಮೆ ಆ ಬೆಳೆ ಸಾಧಿಸಿದ ಮೇಲೆ ಸುಮ್ಮನೆ ಕೂರದೆ ರಾಷ್ಟ್ರೀಯ ತೋಟಗಾರಿಕೆ ಬೋರ್ಡ್ನಿಂದ ನೆರವು ಪಡೆದು ಒಂದು ಎಕರೆ ಪಾಲಿಮನೆ ನಿರ್ಮಿಸಿ ಆರ್ಕಿಡ್ ಬೆಳೆಯಲು ಹೊಸ ಹೆಜ್ಜೆ ಇಟ್ಟವರು ಅವಿನಾಶ್. ಇದಕ್ಕೆ ಪೂರ್ವಭಾವಿಯಾಗಿ ೨೦೧೩ರಲ್ಲಿ ಕೇವಲ ನೂರಿನ್ನೂರು ಆರ್ಕಿಡ್ ಬೆಳೆಸಿ ಪರೀಕ್ಷಿಸಿದ ಅವಿನಾಶ್ ಈ ಕಾರ್ಯ ದೊಡ್ಡ ಮಟ್ಟದಲ್ಲಿ ಮಾಡಲು ಪ್ರೇರಣೆ ನೀಡಿತು. ಚದುರ ಮೀಟರ್ಗೆ ೬೫೦ರಂತೆ ೪೦೦೦ ಚದುರ ಮೀಟರ್ ಪಾಲಿಮನೆ, ೩.೫ ಲಕ್ಷ ವೆಚ್ಚದಲ್ಲಿ ಕಲ್ಲುಕಂಬ, ೧.೫ ಲಕ್ಷ ರೂ. ವೆಚ್ಚದಲ್ಲಿ ಬೆಡ್ಡಿಂಗ್ ಮತ್ತು ೧.೫ ಲಕ್ಷ ರೂ. ವೆಚ್ಚದಲ್ಲಿ ನೀರಾವರಿ ವ್ಯವಸ್ಥೆ, ಸಸಿಯೊಂದಕ್ಕೆ ೬೫ ರೂ.ನಂತೆ ೪೦೫೦೦ ಆರ್ಕಿಡ್ ಸಸಿ ಪೂನಾದಿಂದ ತರಿಸಿ ಕೃಷಿ ಪ್ರಾರಂಭಿಸಿದರು

6

ಐದು ತಿಂಗಳಿಗೆ ಹೂ ಬಿಡಲು ಪ್ರಾರಂಭಿಸಿದರೂ ನಿಯಂತ್ರಿಸಿ ಒಂದು ವರ್ಷಕ್ಕೆ ಉತ್ತಮ ಹೂ ಕೊಯ್ಲು ಪ್ರಾರಂಭಿಸಿದ್ದಾರೆ. ನಿರ್ವಹಣೆ ಕಡಿಮೆಯಾದರೂ ಕೆಲವು ಬ್ಯಾಕ್ಟೀರಿಯಾಗಳಿಂದ ರೋಗ ಹಾಗೂ ಕೊಳೆ ರೋಗ ಬರುವುದು. ವಾರಕ್ಕೆ ೨ ಬಾರಿ ಪೋಷಕಾಂಶಗಳ ಸ್ಪ್ರೇ, ಅಗತ್ಯ ಬಿದ್ದಾಗ ಔಷಧಗಳ ಸಿಂಪರಣೆ ಮಾಡುತ್ತಾರೆ. ಇವರಿಗೆ ಬಸವನಹುಳು(ಸ್ನೇಲ್) ಕಾಟ ಪ್ರಾರಂಭವಾಗಿತ್ತು. ಒಂದು ಜೊತೆ ಕೋಳಿಯನ್ನು ಬಿಟ್ಟು ಇದರ ನಿಯಂತ್ರಣ ಮಾಡಿದ ಯಶೋಗಾಥೆ ಇವರ ಹತ್ತಿರವಿದೆ. ಇಂದು ಅವರ ಆರ್ಕಿಡ್ ಲೋಕದಲ್ಲಿ ಬಿಳಿ ಹಾಗೂ ನೇರಳೆ ಹೂಗಳು ಕಣ್ಮನ ಸೆಳೆಯುವಂತಿವೆ. ಸ್ವತಃ ತಾವೇ ನಿರ್ವಹಣೆ ಮಾಡುವ ಯುವಕನ ನಿತ್ಯ ಕೃಷಿ ಕಾಯಕ ಮಾದರಿ. ಅರವತ್ತರಿಂದ ೧೦೦ ಬಂಚ್ ಹೂ ಪ್ರತಿ ಬಂಚಿಗೆ ೯೦ ರಿಂದ ೧೮೦ ರೂ. ಬೆಲೆ. ಒಮ್ಮೆ ೨೫೦ ಸಿಕ್ಕಿದ್ದೂ ಇದೆ. ಬೆಂಗಳೂರಲ್ಲಿ ಬೆಲೆ ಇನ್ನೂ ಜಾಸ್ತಿ ನಮಗೆ ಅಷ್ಟು ಸಿಗುತ್ತಿಲ್ಲ ಅಷ್ಟೆ ಅನ್ನುತ್ತಾರೆ.

89

ಇಷ್ಟೊಂದು ಬಂಡವಾಳ ಹೂಡಿ ಅಡಿಕೆ ಕಡಿದು ಆರ್ಕಿಡ್ ಬೆಳೆಸಿದ ಈ ಯುವಕ ಎರಡ್ಮೂರು ವರ್ಷದಲ್ಲಿ ಲಾಭ ಬಂದೇ ಬರುತ್ತೆ ಅನ್ನುತ್ತಾರೆ. ಕಾರ್ನೇಶನ್ನಲ್ಲಿ ಈಗಾಗಲೇ ಹೂಡಿಕೆಯಿಂದ ಮುಕ್ತವಾಗಿ ಲಾಭ ಗಳಿಸಿದ್ದೇನೆ ಎನ್ನುತ್ತಾರೆ. ನಾನು ಪ್ರಯೋಗ ಮಾಡಿಯೇ ಕಲಿತಿದ್ದೇನೆ. ಉಳಿದವರಿಗೆ ನಮ್ಮ ಅನುಭವ ಉಪಯೋಗ ಆಗಬೇಕು. ಇದಕ್ಕೆ ತರಬೇತಿ ಕೇಂದ್ರ ಮಾಡಬೇಕು. ಕುಂಡಗಳಲ್ಲಿ ಆರ್ಕಿಡ್ ಬೆಳೆಸಿ ಮನೆಯಲ್ಲಿ ಅಲಂಕಾರಕ್ಕೆ ಬಳಸುವವರಿಗೆ ಕೊಡುವಂತೆ ಮಾಡುವುದು ಇವರ ಕನಸಿನ ಯೋಜನೆಗಳು. ಇದರೊಂದಿಗೆ ಗುಲಾಬಿ ಬೆಳೆಯ ಪ್ರಯೋಗದ ತಾಕೂ ಹಾಲಿ ನೋಡಲು ಸಿಗುತ್ತದೆ. ಇದರ ಯಶಸ್ಸು ನೋಡಿ ಮುಂದೆ ಅದನ್ನು ಪ್ರಾರಂಭಿಸಬೇಕೆಂದಿದ್ದೇನೆ ಅನ್ನುತ್ತಾರೆ. ಅಡಿಕೆಯ ಮಧ್ಯ ಅಂತರ ಬೆಳೆಯಾಗಿ ಪಿಲ್ಲರ್ಗೆ ಬಳಸುವ ಸಸ್ಯಗಳನ್ನು ಬೆಳೆಸುವ ಪ್ರಯೋಗ ಸಹ ಪ್ರಾರಂಭಿಸಿದ್ದಾರೆ. ಸಾವಯವ ಪೋಷಕಾಂಶ ನಿರ್ವಹಣೆಗೆ ಹಸುಗಳನ್ನು ಸಾಕಿದ್ದಾರೆ. ಪಾಲಿಮನೆಗಳ ಮೇಲೆ ಬೀಳುವ ಮಳೆ ನೀರು ಸಂಗ್ರಹಿಸಿ ನೀರಾವರಿಗೆ ಬಳಸುತ್ತಾರೆ. ಹೀಗೆ ಇವರ ಸಾಧನೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಪ್ರಚಾರದ ಹಿಂದೆ ಬೀಳದೆ ಪ್ರಯೋಗಶೀಲನಾಗಿರುವ ಯುವಕ ನಿಜಕ್ಕೂ ಯುವ ಕೃಷಿಕರಿಗೆ ಮಾದರಿ.