ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೨

ಆರ್ಕಿಡ್ ಕೃಷಿ

ಡಾ. ಕಾವೇರಮ್ಮ ಎಂ.ಎಂ.
1

ಆರ್ಕಿಡ್ಗಳು ಪುಷ್ಪೋದ್ಯಮದಲ್ಲಿ ಅತಿ ಹೆಚ್ಚು ಬೇಡಿಕೆ ಪಡೆಯುತ್ತಿರುವ ಹೂಗಳು. ವಿಶ್ವ ಮಾರುಕಟ್ಟೆಗೆ ತೈವಾನ್, ಥೈಲ್ಯಾಂಡ್, ನೆದರ್ಲ್ಯಾಂಡ್ಸ್, ಬ್ರೆಜ಼ಿಲ್, ಕೊಲಂಬಿಯಾ, ಮಲೇಶಿಯಾ, ಸಿಂಗಪೂರ್ನಂತಹ ದೇಶಗಳಿಂದ ಆರ್ಕಿಡ್ಗಳನ್ನು ಪೂರೈಸಲಾಗುತ್ತದೆ. ತೈವಾನ್ನಂತ ಸಣ್ಣ ದ್ವೀಪವು ಬಿಲಿಯನ್ ಡಾಲರ್ ಮೊತ್ತದ ಆರ್ಕಿಡ್ಗಳನ್ನು ವಿಶ್ವಾದ್ಯಂತ ರಫ್ತು ಮಾಡುತ್ತದೆ. ಆರ್ಕಿಡ್ಗಳಿಗೆ ನಮ್ಮ ದೇಶದಲ್ಲಿ ಬೇಡಿಕೆ ಹೆಚ್ಚುತ್ತಿದ್ದು, ಸರಾಸರಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆರ್ಕಿಡ್ ಹೂ ಮತ್ತು ಗಿಡಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ನಮ್ಮ ದೇಶದ ಹವಾಮಾನ ಆರ್ಕಿಡ್ ಬೆಳೆಗೆ ಸೂಕ್ತವಾಗಿರುವುದರಿಂದ ಇಲ್ಲಿನ ರೈತರಿಗೆ ಆರ್ಥಿಕ ಬೆಳೆಯಾಗಬಹುದು.

ಆರ್ಕಿಡೇಸಿ ಕುಟುಂಬವು ಸಸ್ಯ ಸಾಮ್ರಾಜ್ಯದಲ್ಲೇ ಅತಿ ಹೆಚ್ಚು ಎಂದರೆ ೨೫,೦೦೦ಕ್ಕೂ ಮೇಲ್ಪಟ್ಟ ಪ್ರಭೇದಗಳನ್ನೊಳಗೊಂಡಿವೆ. ಸುಮಾರು ೨ ಲಕ್ಷಕ್ಕಿಂತ ಹೆಚ್ಚಿನ ಮಾನವ ನಿರ್ಮಿತ ಹೈಬ್ರಿಡ್ಗಳನ್ನು ರಾಯಲ್ ಹಾರ್ಟಿಕಲ್ಚರ್ ಸೊಸೈಟಿ ಲಂಡನ್ನಲ್ಲಿ ನಮೂದಿಸಲಾಗಿದೆ. ಆರ್ಕಿಡ್ಗಳಲ್ಲಿ ಎಷ್ಟೇ ಪ್ರಭೇದಗಳಿದ್ದರೂ, ವಾಣಿಜ್ಯದಲ್ಲಿ ಉಪಯುಕ್ತ ವಿರುವುವು ಫೆಲನಾಪ್ಸಿಸ್, ಡೆಂಡ್ರೋಬಿಯಮ್, ಕ್ಯಾಟ್ಲೇಯಾ, ವ್ಯಾಂಡ, ಮೊಕಾರಾ ಮತ್ತಿನ್ನು ಕೆಲವು.ವಿಶ್ವದಾದ್ಯಂತ ಕಾಡು-ಮೇಡು, ಪರ್ವತದಿಬ್ಬಗಳಲ್ಲಿ ಆರ್ಕಿಡ್ಗಳು ಬೆಳೆದುಕೊಂಡರೂ ಕೂಡ ಸಮಶೀತೋಷ್ಣ ವಲಯದ ಕಾಡುಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವುವು. ಆದರೆ ಹಿಮಪರ್ವತ, ಅರ್ಕ್ಟಿಕ್ ದ್ವೀಪ ಸಮೂಹ, ಅತಿ ಉಷ್ಣದಿಂದ ಕೂಡಿರುವ ಮರುಭೂಮಿಯಲ್ಲಿ ಮಾತ್ರ ಕಾಣಸಿಗದು.

4

ವಿಂಗಡಣೆ:

ಪರಿಸರದಲ್ಲಿ ಕಂಡುಬರುವ ಪ್ರಕಾರ ಆರ್ಕಿಡ್ಗಳನ್ನು ಎಪಿಫೈಟ್ (ಮರದ ಮೇಲೆ ಬೆಳೆದುಕೊಳ್ಳುವ) ಮತ್ತು ಟೆರೆಸ್ಟ್ರಿಯಲ್ (ಭೂ ಆಧಾರಿತ) ಎಂದು ವಿಂಗಡಿಸಲಾಗಿದೆ. ಎಪಿಫೈಟ್ಗಳು ವಾಣಿಜ್ಯದಲ್ಲಿ ಅತೀ ಹೆಚ್ಚಿನ ಮಹತ್ವ ಪಡೆದಿದ್ದು, ಇವುಗಳನ್ನು ಮೊನೋಪೋಡಿಯಲ್ ಮತ್ತು ಸಿಂಪೋಡಿಯಲ್ ಎಂದು ವಿಭಜಿಸಲಾಗಿದೆ. ಮೊನೋಪೋಡಿಯಲ್ ಗಿಡವು ಒಂದೇ ಕಾಂಡವನ್ನೊಳಗೊಂಡಿದ್ದು, ನಿಧಾನವಾಗಿ ಬೆಳೆಯುತ್ತದೆ. ಉದಾಹರಣೆಗೆ ಫೆಲನಾಪ್ಸಿಸ್, ವ್ಯಾಂಡ, ಅರಾಂತೆರಾ ಇತ್ಯಾದಿ. ಸಿಂಪೋಡಿಯಲ್ ಆರ್ಕಿಡ್ಗಳು ಶುಂಠಿಯಂತೆ ತೆವಳುವ ಜೀವನ ಕ್ರಮವನ್ನೊಳಗೊಂಡಿದ್ದು, ಹೋಲಿಕೆಯಲ್ಲಿ ವೇಗವಾಗಿ ಬೆಳೆದು ಹೂ ಬಿಡುತ್ತದೆ. ಉದಾಹರಣೆಗೆ ಡೆಂಡ್ರೋಬಿಯಂ, ಆನ್ಸೀಡಿಯಂ ಇತ್ಯಾದಿ. ಟೆರೆಸ್ಟ್ರಿಯಲ್ ಆರ್ಕಿಡ್ಗಳು ಇತರ ಗಿಡಗಳಂತೆ ಬೆಳೆಯುತ್ತವೆ. ಉದಾಹರಣೆಗೆ ಗ್ರೌಂಡ್ ಆರ್ಕಿಡ್ (ಸ್ಪಾತೋಗ್ಲಾಟಿಸ್), ಕೆಲಾಂತೆ, ಬ್ಯಾಂಬೂ ಆರ್ಕಿಡ್ ಮುಂತಾದವು.

7

ಬೆಳಕು / ನೆರಳು ನಿಯಂತ್ರಣ:

9

ಕೆಲವು ಆರ್ಕಿಡ್ಗಳು ಸಂಪೂರ್ಣ ಬೆಳಕನ್ನಾಶ್ರಯಿಸಿ ಬೆಳೆಯುತ್ತವೆ. ಉದಾಹರಣೆಗೆ ಅರಾಕ್ನಿಸ್, ಅರಾಂತೆರಾ, ಮೊಕಾರಾ, ಸ್ಪಾತೋಗ್ಲಾಟಿಸ್. ಕೆಲವೊಂದು ಆರ್ಕಿಡ್ಗಳು ಸಣ್ಣ ಪ್ರಮಾಣದ ನೆರಳಿನಲ್ಲಿ ಬೆಳೆಯುತ್ತವೆ. ಉದಾಹರಣೆಗೆ ವ್ಯಾಂಡ, ಕ್ಯಾಟ್ಲೆಯಾ, ಆನ್ಸೀಡಿಯಂ, ಡೆಂಡ್ರೋಬಿಯಂ. ಫೆಲನಾಪ್ಸಿಸ್, ಡೊರೈಟೀಸ್ ಮತ್ತು ಕೆಲಾಂತೆ ಹೆಚ್ಚು ನೆರಳಾಶ್ರಿತ ಆರ್ಕಿಡ್ಗಳು.

11

ತೇವಾಂಶ ಮತ್ತು ನೀರಾವರಿ:

ಆರ್ಕಿಡ್ ಬೆಳೆಯುವಾಗ ೬೦ ಪ್ರತಿಶತಕ್ಕೂ ಮೀರಿ ತೇವಾಂಶವಿರುವುದು ಅನಿವಾರ್ಯ. ನೀರು ಸಿಂಪಡಿಸುವುದರಿಂದ ಗಿಡಗಳ ತಾಜಾತನವನ್ನು ಕಾಪಾಡಿಕೊಳ್ಳಬಹುದು. ಹಸಿರು ಮನೆಯಲ್ಲಿ ಬೆಳೆಯುವಾಗ ನೀರಾವರಿಗೆ ಮಿಸ್ಟರ್ಗಳ ಅಳವಡಿಕೆ ಸೂಕ್ತ. ಮಳೆಗಾಲದಲ್ಲಿ ದಿನಕ್ಕೊಂದು ಬಾರಿ ಮತ್ತು ಬೇಸಿಗೆಯಲ್ಲಿ ೨-೩ ಬಾರಿ ಹತ್ತು ನಿಮಿಷಗಳ ಕಾಲ ಮಿಸ್ಟರ್ ಚಲಾಯಿಸುವುದು ಅಗತ್ಯ. ಇದರಿಂದ ಗಿಡಕ್ಕೆ ನೀರು ಪೂರೈಕೆಯಾಗುವುದಲ್ಲದೇ ತೇವಾಂಶವೂ ಹೆಚ್ಚುವುದು.

ಪೋಷಕಾಂಶ ನಿರ್ವಹಣೆ:

ಉತ್ತಮ ಬೆಳೆಗೆ ಸಮಗ್ರ ಪೋಷಕಾಂಶಗಳ ನಿರ್ವಹಣೆ ಬಹುಮುಖ್ಯ ಅಂಶವಾಗಿದೆ. ದ್ರವರೂಪದ ೧೯:೧೯:೧೯ ಸಾರಜನಕ: ರಂಜಕ: ಪೊಟ್ಯಾಷ್ ಶೇ.೦.೨ ರಂತೆ ವಾರಕ್ಕೊಮ್ಮೆ; ಲಘುಪೋಷಕಾಂಶ ಮತ್ತು ಸಗಣಿ-ಗಂಜಲ-ನೀರಿನ ಮಿಶ್ರಣವನ್ನು ಎರಡು ವಾರಕ್ಕೊಮ್ಮೆ ಸಿಂಪಡಿಸುವುದು ಅಗತ್ಯ.

ಬೆಳೆಯುವ ಮಾದ್ಯಮ:

ಉತ್ತಮ ಬೆಳೆಯುವ ಮಾಧ್ಯಮದ ಲಕ್ಷಣವೆಂದರೆ ಗಿಡದ ಬೇರಿಗೆ ಹವಾಸಂಚಲನೆ ಒದಗಿಸುವುದು, ಸೂಕ್ತ ಪ್ರಮಾಣದ ನೀರು ಹಿಡಿದಿಟ್ಟುಕೊಳ್ಳುವುದು ಮತ್ತು ಬೇರಿಗೆ ಆಧಾರ ಒದಗಿಸುವುದು. ಇವುಗಳನ್ನು ಪೂರೈಸಲು ತೆಂಗಿನ ನಾರು, ಸ್ಪಾಗ್ನಮ್ ಮಾಸ್, ಹೆಂಚಿನ ಚೂರು ಮತ್ತು ಇದ್ದಿಲುಗಳ ಮಿಶ್ರಣವನ್ನು ಉಪಯೋಗಿಸಲಾಗುವುದು.

18

ಸಸ್ಯ ಸಂರಕ್ಷಣೆ:

ಬಸವನ ಹುಳು ಬೇಸಾಯಕ್ಕೆ ಭಾದೆಯುಂಟು ಮಾಡುವ ಮುಖ್ಯ ಕೀಟವಾಗಿದೆ. ರಾತ್ರಿ ಹೊತ್ತು ಹೊರಬರುವುದರಿಂದ ಇವುಗಳನ್ನು ಹಿಡಿದು ಉಪ್ಪಿನ ದ್ರಾವಣಕ್ಕೆ ಹಾಕುವುದರ ಮೂಲಕ ಬಸವನ ಹುಳುವಿನ ಸಂಖ್ಯೆಯನ್ನು ಹತೋಟಿ ಮಾಡಬಹುದು. ಗಿಡಗಳನ್ನಿರಿಸುವ ಸ್ಟ್ಯಾಂಡ್ಗಳ ಕಾಲುಗಳಲ್ಲಿ ಉಪ್ಪಿರುವ ತಟ್ಟೆಯನ್ನಿರಿಸಿ ಹುಳು ಮೇಲೇರದಂತೆ ತಡೆಯಬಹುದು.

ಹಸಿರು ಮನೆಯಲ್ಲಿ ತೇವಾಂಶ ಕುಸಿದರೆ ನುಸಿಯ ಭಾದೆ ಹೆಚ್ಚುತ್ತದೆ. ತೇವಾಂಶವನ್ನು ಹೆಚ್ಚಿರಿಸಿಕೊಂಡರೆ ಈ ಸಮಸ್ಯೆ ಕಂಡುಬರುವುದಿಲ್ಲ. ಕಾಯಿಲೆಗಳೆಂದರೆ, ಫ್ಯುಸೇರಿಯಂ ಸೊರಗು ರೋಗ, ಯರ್ವೀನಿಯಾ ಕೊಳೆತ, ಎಲೆ ಚುಕ್ಕಿ ರೋಗ ಮತ್ತು ಬಾಟ್ರೈಟಿಸ್ ಹೂ ಚುಕ್ಕೆ ರೋಗ ಪ್ರಮುಖವಾದವು. ಎರಡು ವಾರಕ್ಕೊಮ್ಮೆ ಸಗಣಿ ದ್ರಾವಣಕ್ಕೆ ಸೂಡೊಮೋನಾಸ್ ಫ್ಲಾರೆಸೆನ್ಸ್ ಸೇರಿಸಿ ಸಿಂಪಡಿಸುವುದರಿಂದ ಬಹುತೇಕ ಖಾಯಿಲೆಗಳನ್ನು ತಡೆಯಬಹುದು. ಅರಳಿದ ಹೂವನ್ನು ಮಂಜು ಮತ್ತು ಮಳೆ ನೀರಿನಿಂದ ಸಂರಕ್ಷಿಸಿದರೆ ಬಾಟ್ರೈಟಿಸ್ ಹೂ ಚುಕ್ಕೆ ರೋಗ ಬಾರದಂತೆ ತಡೆಯಬಹುದು.

22