ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೨

ಚಿಂತನೆ

ಗ್ರಾಮೀಣ ಮಕ್ಕಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಬೇಕು

image_
ಡಾ. ಎ.ಎಸ್.ಕುಮಾರ ಸ್ವಾಮಿ.
ಕೃಷಿ ವಿಜ್ಞಾನಿ
9448943990

ಕೀಳರಿಮೆ ಪೀಡಿತ ಗ್ರಾಮೀಣ ವಿದ್ಯಾರ್ಥಿಗಳು: ಜಗತ್ತಿಗೇ ಮಾದರಿ ಸಂವಿಧಾನವೆನ್ನುವ ಹೆಗ್ಗಳಿಕೆಯೊಂದಿಗೆ ಎಪ್ಪತ್ತು ವರ್ಷ ಪ್ರಜಾಪ್ರಭುತ್ವದ ಆಡಳಿತವನ್ನು ಅನುಭವಿಸಿದ ನಂತರವೂ ಗ್ರಾಮ ಮತ್ತು ನಗರಗಳ ಮಧ್ಯದ ವಿದ್ಯಾಭ್ಯಾಸಾವಕಾಶದ ಕಂದಕವು ಹಿರಿದಾಗುತ್ತಾ ಹೋಗುತ್ತಿದೆ. ಗ್ರಾಮೀಣ ಮಕ್ಕಳು ಉತ್ತಮ ವಿದ್ಯಾಭ್ಯಾಸದ ಅವಕಾಶಗಳಿಂದ ವಂಚಿತರಾಗಿದ್ದಾರೆನ್ನಿಸುತ್ತಿದೆ. ಯಾವುದೇ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗ ಪಡೆಯಲು ಮೂಲಭೂತವಾಗಿ ಬೇಕಾದ ಬುದ್ಧಿವಂತಿಕೆಯ ಮಟ್ಟ, ಸಾಧನೆಯ ಹಂಬಲ, ಸಾಧಿಸುವ ಸಾಮರ್ಥ್ಯ, ಭಾವನಾತ್ಮಕ ಮನೋಸ್ಥಿಮಿತ, ಮನೋಸ್ಥೈರ್ಯ, ಸಾಮಾಜಿಕ ಮೌಲ್ಯಗಳ ಅರಿವು, ಇವುಗಳು ಗ್ರಾಮೀಣ ಮತ್ತು ನಗರ ಪ್ರದೇಶದ ಮಕ್ಕಳಿಗೆ ವಿಭಿನ್ನವಾಗಿ ಇರುವುದಿಲ್ಲ. ಆದರೆ, ಗ್ರಾಮೀಣ ಪರಿಸರದಲ್ಲಿ ಬೆಳೆಯುವ ಮಕ್ಕಳು ತಮ್ಮಲ್ಲಿರಬಹುದಾದ ಈ ಗುಣಗಳನ್ನು ಸ್ಪರ್ಧಾತ್ಮಕ ಸನ್ನಿವೇಶಗಳಲ್ಲಿ ಹೊರಹೊಮ್ಮಿಸಿ ಗುರುತಿಸಿಕೊಳ್ಳುವುದರಲ್ಲಿ ಕೀಳಿರಿಮೆ ಪೀಡಿತರಾಗಿ ಉನ್ನತ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿನ ಶೈಕ್ಷಣಿಕ ವಾತಾವರಣ:

ಗ್ರಾಮೀಣ ಪ್ರದೇಶದಲ್ಲಿನ ಶೈಕ್ಷಣಿಕ ವಾತಾವರಣ: ಸಮಾಜದಲ್ಲಿ ತನ್ನ ಆಯ್ಕೆಯ ಯಾವುದಾದರೊಂದು ಕ್ಷೇತ್ರದಲ್ಲಿ ಔನ್ನತ್ಯವನ್ನು ಪಡೆಯಲು ಬೇಕಾದ ವ್ಯಕ್ತಿತ್ವ ವಿಕಸನಕ್ಕೆ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವು ಬುನಾದಿಯನ್ನು ಹಾಕುತ್ತದೆ. ಆದರೆ, ಗ್ರಾಮೀಣ ಪ್ರದೇಶದ ಮಕ್ಕಳು ಹೊರಜಗತ್ತಿಗೆ ತೆರೆದುಕೊಳ್ಳುವುದು ಸೀಮಿತ ವಾಗಿರುವುದರಿಂದ ಹಾಗೂ ಜೀವನದಲ್ಲಿ ಉನ್ನತ ಧ್ಯೇಯಗಳನ್ನಿರಿಸಿಕೊಳ್ಳಲು ಅವರು ದಿನ ನಿತ್ಯವೂ ನೋಡುವ ಜನರಲ್ಲಿ ಮಾದರಿ ವ್ಯಕ್ತಿಗಳಿಲ್ಲ ದಿರುವುದರಿಂದ ತಮ್ಮ ಜೀವನದ ಗುರಿಯನ್ನೂ ಸಹ ಕಿರಿದಾಗಿಸಿಕೊಳ್ಳುತ್ತಾರೆ. ಅವರು ಹೆಚ್ಚು ತೆರೆದುಕೊಳ್ಳುವ ಟಿವಿ, ಸಿನೆಮಾ ಮತ್ತಿತರೆ ಮಾಧ್ಯಮಗಳು ಈ ದಿಶೆಯಲ್ಲಿ ಅವರಿಗೆ ಉಪಕಾರಕ್ಕಿಂತ ಹೆಚ್ಚಾಗಿ ಅಪಕಾರ ಮಾಡುತ್ತಿವೆ. ಇಂದು ಕಿರಿದಾಗಿರುವ ಗ್ರಾಮೀಣ ಸಮಾಜದಲ್ಲಿ, ದುಶ್ಚಟಗಳು ಹೆಚ್ಚಾಗಿ, ಯಾವ ಕಾರಣಕ್ಕೂ ಅನುಕರಣಾರ್ಹರಲ್ಲವೆನ್ನುವವರ ದರ್ಶನವೇ ಹೆಚ್ಚಿನ ಸಂಖ್ಯೆಯಲ್ಲಿ ಆಗುತ್ತದೆ.

ಮನೆಯಲ್ಲಿನ ಶೈಕ್ಷಣಿಕ ವಾತಾವರಣ: ಇದನ್ನು ಅರಿತುಕೊಂಡು ಕೃಷಿ ಕುಟುಂಬದವರು, ವಿಶೇಷವಾಗಿ ತಾಯಂದಿರು ಮಕ್ಕಳಿಗೆ ಮನೆಯಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ದೊರೆಯುವಂತೆ ಮಾಡಬೇಕು. ವಿದ್ಯಾಭ್ಯಾಸದ ಬಗ್ಗೆ ಈಗ ಗ್ರಾಮೀಣ ಕುಟುಂಬಗಳಲ್ಲಿರುವ ಋಣಾತ್ಮಕ ಭಾವನೆಗಳನ್ನು ಹೋಗಲಾಡಿಸಬೇಕು. ವಿದ್ಯಾಭ್ಯಾಸದ ವಿಷಯದಲ್ಲಿ ತಂದೆ ತಾಯಿ ಮತ್ತಿತರ ಕುಟುಂಬದ ಸದಸ್ಯರ ಧನಾತ್ಮಕ ಭಾವನೆಯು ಮಕ್ಕಳಲ್ಲಿ ಒಂದು ನಿರ್ದಿಷ್ಟ ಗುರಿಯನ್ನೂ, ಸಾಧಿಸುವ ಛಲವನ್ನೂ ನೀಡುವುದೆನ್ನುವುದನ್ನು ಮರೆಯಬಾರದು. ಇದರ ಜೊತೆಯಲ್ಲಿ ಶಾಲೆಯಲ್ಲಿ ಒಂದಿಬ್ಬರು ಉತ್ತಮ ಅನುಕರಣಾರ್ಹರಾದ ಗುರುಗಳನ್ನು ಗುರುತಿಸಿ ಅವರಿಂದ ಮಕ್ಕಳಿಗೆ ಸದಾ ಮಾರ್ಗದರ್ಶನ ಹಾಗೂ ಆಪ್ತ ಸಲಹೆ ದೊರೆಯುವಂತೆ ನೋಡಿಕೊಳ್ಳಬೇಕು. ಗ್ರಾಮಗಳಲ್ಲಿ ಈಚಿನ ವರ್ಷಗಳಲ್ಲಿ ಅತಿಯಾಗಿ ಹೆಚ್ಚುತ್ತಿರುವ ಸಮಾಜದ ಘಾತುಕ ಶಕ್ತಿಗಳ ಪರಿಧಿಯಿಂದ ಮಗುವು ಹೊರಗುಳಿಯುವಂತೆ ನೋಡಿಕೊಳ್ಳಬೇಕಾಗಿರುವುದು ತಂದೆ ತಾಯಿಗಳ ಇನ್ನೊಂದು ಪ್ರಮುಖ ಕರ್ತವ್ಯ. ಮನೆಯಲ್ಲಿ ಉತ್ತಮ ವಾತಾವರಣ, ಶಾಲೆಯಲ್ಲಿ ಉತ್ತಮ ಶಿಕ್ಷಕರ ಮಾರ್ಗದರ್ಶನ ಮತ್ತು ಆರೋಗ್ಯಕರ ಸಾಮಾಜಿಕ ಪರಿಸರ ದೊರೆಯುವ ಮಕ್ಕಳಿಗೆ ಗ್ರಾಮೀಣ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವೂ ಸಹ ಜೀವನದಲ್ಲಿ ಬೆಳಕು ನೀಡಬಲ್ಲದೆನ್ನುವುದು ಸತ್ಯ.

ವಿದ್ಯೆಯೋ, ಕುಲಕಸುಬೋ? ಕೃಷಿ ಕುಟುಂಬಗಳಲ್ಲಿ ಮಕ್ಕಳನ್ನು ದುಡಿಮೆಗೆ ಬಳಸಿಕೊಳ್ಳುವುದು ಅತಿ ಸಾಮಾನ್ಯ. ಮಕ್ಕಳಿಗೆ ಕೃಷಿ ಕಸುಬನ್ನು ಪರಿಚಯ ಮಾಡಿಕೊಡುವ ದೃಷ್ಟಿಯಿಂದ ಇದು ಒಳ್ಳೆಯದೇ. ಆದರೆ, ಇದಕ್ಕೆಂದೇ ನಿರ್ದಿಷ್ಟ ಸಮಯವನ್ನು ಗುರುತಿಸಿ, ಸೀಮಿತ ಸಮಯದಲ್ಲಿ ಮಾತ್ರ ಅವರನ್ನು ಈ ಕೆಲಸಗಳಲ್ಲಿ ತೊಡಗಿಸುವುದು ಉತ್ತಮ. ಸಂಜೆಯ ಹೊತ್ತು ಅಭ್ಯಾಸಕ್ಕೆಂದು ಕೆಲ ಹೊತ್ತನ್ನು ನಿಗದಿ ಪಡಿಸಿ, ಆ ಸಮಯದಲ್ಲಿ ಯಾವುದೇ ಇತರೆ ಕೆಲಸಗಳಾಗಲೀ, ಆಕರ್ಷಣೆಗಳಾಗಲೀ ಇಲ್ಲದಂತೆ ನೋಡಿಕೊಳ್ಳಬೇಕು. ಹೇಗೂ ರಜಾ ದಿನಗಳಲ್ಲಿ ಮಕ್ಕಳನ್ನು ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶವಿದ್ದೇ ಇರುತ್ತದೆ. ಇದೇ ರೀತಿ ಹೆಣ್ಣು ಮಕ್ಕಳನ್ನು ಮನೆಯಲ್ಲಿ ಅಭ್ಯಾಸ ಮಾಡಲು ಅವಕಾಶ ಕೊಡದೆ ಮನೆ ಕೆಲಸಗಳಿಗೆ ಬಳಸಿಕೊಳ್ಳುವುದು ಸಾಮಾನ್ಯ. ಮಗು ಗಂಡಿರಲಿ, ಹೆಣ್ಣಿರಲಿ, ವಿದ್ಯಾಭ್ಯಾಸದಲ್ಲಿ ಸಮನಾಗಿ ಮತ್ತು ಸಂಪೂರ್ಣವಾಗಿ ತೊಡಗಿಕೊಳ್ಳುವಂತಹ ವಾತಾವರಣವನ್ನು ಒದಗಿಸಿಕೊಡುವುದು ತಂದೆ ತಾಯಿಗಳ ಆದ್ಯ ಕರ್ತವ್ಯ.

ಶಾಲೆಯ ಹೊರಗೆ ಶಿಕ್ಷಕರ ಮಾರ್ಗದರ್ಶನ: ಕಲಿಕೆ ಮತ್ತು ಮಗುವಿನ ವ್ಯಕ್ತಿತ್ವ ವಿಕಸನ ಕೇವಲ ಶಾಲೆಯಲ್ಲಿ ಮತ್ತು ಮನೆಯಲ್ಲಿ ಆಗುವುದಿಲ್ಲ. ಶಾಲೆಯ ಹೊರಗಿರುವ ಸಮಯದಲ್ಲಿಯೂ ಮಗುವು ಸಮಾಜವನ್ನು ನೋಡಿ ಸತತವಾಗಿ ಕಲಿಯುತ್ತಿರುತ್ತದೆ. ಶಾಲೆಯ ಅವಧಿಯ ನಂತರವೂ ಸಹ ಗ್ರಾಮಗಳಲ್ಲಿ ಉತ್ತಮ ಶಿಕ್ಷಕರ ಲಭ್ಯತೆಯು ಮಕ್ಕಳ ಜೀವನದಲ್ಲಿ ಶಿಸ್ತನ್ನೂ, ಉತ್ತಮ ಅಭ್ಯಾಸಗಳನ್ನು ಬೆಳೆಸುವಲ್ಲಿ ಅನುಕೂಲ ವಾಗಬಲ್ಲದು. ಆದರೆ, ಇಂದು ಒಬ್ಬರಾದರೂ ಶಿಕ್ಷಕರು ಗ್ರಾಮದಲ್ಲಿಯೇ ವಾಸ್ತವ್ಯ ಮಾಡುವುದು ಬಹಳ ಅಪರೂಪ. ಶಾಲಾ ಶಿಕ್ಷಕರುಗಳಲ್ಲಿ ಒಬ್ಬರಿಗಾದರೂ ವಸತಿ ಗೃಹ ಕಟ್ಟಿಸಿ ಅವರ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡುವ ಬಗ್ಗೆ ಸರ್ಕಾರಗಳು ಆಲೋಚಿಸಬಹುದು. ಶಿಕ್ಷಕರು ಮತ್ತು ಗ್ರಾಮದಲ್ಲಿರುವ ಇತರೆ ವಿದ್ಯಾವಂತರು ಮಕ್ಕಳಿಗೆ ಅನುಕರಣೀಯವಾಗುವಂತಹ ಜೀವನ ನಡೆಸಬೇಕು.

ಆಪ್ತ ಸಲಹೆ ಮತ್ತು ಮಾರ್ಗದರ್ಶನ: ಹೈಸ್ಕೂಲ್ ವಿದ್ಯಾಭ್ಯಾಸದ ಹಂತದಲ್ಲಿ ಮಕ್ಕಳು ತಮ್ಮ ಭವಿಷ್ಯದ ಓದಿನ ಕ್ಷೇತ್ರಗಳನ್ನು ನಿರ್ಧರಿಸಲು ಆರಂಭಿಸುತ್ತಾರೆ. ಆ ಸಮಯದಲ್ಲಿ ಮುಖ್ಯ ಕವಲುಗಳಾದ ವಿಜ್ಞಾನ, ಕಲೆ ಅಥವಾ ವಾಣಿಜ್ಯ ಇವು ಮೂರರಲ್ಲಿ ಯಾವ ದಾರಿಯನ್ನು ಆರಿಸಿಕೊಳ್ಳಬೇಕೆನ್ನುವುದನ್ನು ನಿರ್ಧರಿಸಬೇಕಾಗಿರುತ್ತದೆ. ವಿದ್ಯಾರ್ಥಿಯ ಒಲವು, ಬುದ್ಧಿಮತ್ತೆ, ಅವಕಾಶಗಳು, ಸಾಧ್ಯತೆಗಳು ಮುಂತಾದ ವಿಷಯಗಳನ್ನು ಪರಿಗಣಿಸಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕಾಗಿರುತ್ತದೆ. ಶಿಕ್ಷಕರು ಈ ಕೆಲಸ ಮಾಡಲು ಅನುಕೂಲವಾಗುವಂತೆ, ಎಲ್ಲಾ ಸೆಕೆಂಡರಿ ಶಾಲೆಗಳಿಗೆ ರಾಜ್ಯದಲ್ಲಿ ಲಭ್ಯವಿರುವ ಉನ್ನತ ಶಿಕ್ಷಣದ ಅವಕಾಶಗಳು, ಶಾಖೆಗಳು, ವಿವಿಧ ಪದವಿಗಳ ಪ್ರವೇಶಕ್ಕೆ ಬೇಕಾದ ಅರ್ಹತೆಗಳು, ಕಳೆದ ವರ್ಷಗಳಲ್ಲಿ ಪ್ರವೇಶ ಪಡೆದವರ ಅರ್ಹತಾ ಮಟ್ಟ ಮುಂತಾದ ವಿಷಯಗಳನ್ನೊಳಗೊಂಡ ಒಂದು ಅಧಿಕೃತ ಮಾಹಿತಿ ಪತ್ರಿಕೆಯನ್ನು (ಸುಲಭವಾಗಿ ಪ್ರದರ್ಶಿಸಬಹುದಾದ ಗೋಡೆ ಪತ್ರಿಕೆಯ ರೂಪದಲ್ಲಿ) ಕಳಿಸಿಕೊಡುವುದರಿಂದ ಗ್ರಾಮೀಣ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಲು ಅನುಕೂಲವಾಗುವುದು..

ಬೆಳಕು ನೀಡಿ: ಗ್ರಾಮೀಣ ಪ್ರದೇಶದ ಮಕ್ಕಳ ವಿದ್ಯಾಭ್ಯಾಸದಲ್ಲಿ ಸಂಜೆ/ರಾತ್ರಿ ಸಮಯದಲ್ಲಿ ವಿದ್ಯುತ್ ಲಭ್ಯತೆಯು ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯುತ್ ಕೊರತೆಯಿಂದ ಗ್ರಾಮೀಣ ಪ್ರದೇಶದ ಮಕ್ಕಳು ನಗರ ಪ್ರದೇಶದ ಮಕ್ಕಳಿಗಿಂತ ಹೆಚ್ಚು ಅನಾನುಕೂಲಗಳನ್ನು ಎದುರಿಸುತ್ತಾರೆ. ವಿಶೇಷವಾಗಿ ಪರೀಕ್ಷಾ ಸಿದ್ಧತೆಗಳನ್ನು ಮಾಡಿಕೊಳ್ಳುವ ಜನವರಿಯಿಂದ ಮಾರ್ಚ್ವರೆಗಿನ ಸಮಯದಲ್ಲಿ ವಿದ್ಯುತ್ ಕೊರತೆ ಹೆಚ್ಚು. ಈ ತಾರತಮ್ಯವನ್ನು ಸರಿಪಡಿಸಲಾಗದಿದ್ದರೆ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಹಾಯ ಧನವನ್ನು ನೀಡಿ, ಅತಿ ಕಡಿಮೆ ಬೆಲೆಯಲ್ಲಿ ರೀಚಾರ್ಜೆಬಲ್ ಎಲೆಕ್ಟ್ರಿಕಲ್ / ಸೋಲಾರ್ ದೀಪಗಳನ್ನು ಒದಗಿಸುವ ಯೋಜನೆಗಳನ್ನು ಜಾರಿಗೆ ತರಬೇಕು. .

ಪಟ್ಟಣಗಳ ವಿದ್ಯಾಭ್ಯಾಸ ಉತ್ತರವಾಗುವುದೇ? ಗ್ರಾಮೀಣ ವಿದ್ಯಾಭ್ಯಾಸದ ಸಮಸ್ಯೆಗಳ ಮರ್ಮವನ್ನರಿತ ಕೆಲವು ತಂದೆ ತಾಯಿಗಳು ವಿಶೇಷ ವ್ಯವಸ್ಥೆಗಳನ್ನು ಮಾಡಿ ಮಕ್ಕಳು ಹತ್ತಿರದ ಪಟ್ಟಣ / ನಗರಗಳಲ್ಲಿದ್ದುಕೊಂಡು ವ್ಯಾಸಂಗ ಮಾಡಲು ಅನುವು ಮಾಡಿಕೊಡುತ್ತಾರೆ. ಆದರೆ, ಈ ಸೌಭಾಗ್ಯವು ಕೆಲವರಿಗೆ ಮಾತ್ರ ಸೀಮಿತ. ಸಮಾಧಾನಕರ ವಸತಿ, ಊಟ ಮತ್ತು ವಿದ್ಯಾಭ್ಯಾಸದ ಸೌಲಭ್ಯ ದೊರೆಯುವಂತಹ ಕೆಲವು ಆಯ್ದ ಸ್ಥಳಗಳು ದೊರೆತರೆ ಮಕ್ಕಳ ಸೌಭಾಗ್ಯವೆಂದೇ ಹೇಳಬೇಕು. ಹಲವು ನಗರ ಪ್ರದೇಶಗಳಲ್ಲಿ ಕೆಲವು ಮಠಗಳು, ಹಾಸ್ಟೆಲ್ಗಳು, ಈ ಸೌಲಭ್ಯವನ್ನು ಕೊಡುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು. ಕೆಲವರು ಉತ್ತಮ ಸ್ಥಿತಿವಂತರು ಸ್ವಂತದ್ದೇ ಒಂದು ಮನೆ ವ್ಯವಸ್ಥೆ ಮಾಡಿ, ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ತಮ್ಮ ವಾಸವನ್ನೂ ಸಹ ನಗರಗಳಿಗೆ ಬದಲಾಯಿಸಿಕೊಳ್ಳುತ್ತಾರೆ. ಆದರೆ, ಕೆಲವು ಸಂದರ್ಭಗಳಲ್ಲಿ ಸರಿಯಾದ ಮೇಲ್ವಿಚಾರಣೆಯಿಲ್ಲದೆ ಇದ್ದರೆ, ಮಕ್ಕಳು ಪಟ್ಟಣ/ನಗರ ಜೀವನದ ಆಕರ್ಷಣೆಗಳಿಗೆ ಮಾರು ಹೋಗಿ ವಿದ್ಯಾಭ್ಯಾಸಕ್ಕೆ ಹಿನ್ನಡೆಯಾಗುವುದೂ ಕಾಣಸಿಗುತ್ತದೆ.

ಹೆಚ್ಚಿನ ವಸತಿ ಶಾಲೆಗಳು ಬೇಕು: ಈಗ ಗ್ರಾಮೀಣ ವಿದ್ಯಾರ್ಥಿಗಳು ಪ್ರವೇಶಾವಕಾಶ ಪಡೆದುಕೊಳ್ಳುವಂತಹ ವಸತಿ ಶಾಲೆಗಳ ಸಂಖ್ಯೆಗಳು ಅತಿ ಕಡಿಮೆ. ಈಗ ಇರುವ ವಸತಿ ಶಾಲೆಗಳ ಜೊತೆಯಲ್ಲಿ ಕೃಷಿ ಸಂಬಂಧಿತ ಬೃಹತ್ ಉದ್ದಿಮೆಯವರು, ವಿವಿಧ ಕೃಷಿಕರ ಸಂಘಗಳು, ಸಂಘಟನೆಗಳು, ಇನ್ನೂ ಕೆಲವು ಉತ್ತಮ ಗುಣಮಟ್ಟದ ವಸತಿ ಶಾಲೆಗಳನ್ನು ಅಥವಾ ಕೊನೆಯ ಪಕ್ಷ ಉತ್ತಮ ಶಾಲೆಗಳಿರುವ ಪರಿಸರದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ವಸತಿ ನಿಲಯಗಳನ್ನು ಸ್ಥಾಪಿಸುವ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ಸಹಕಾರ ಮಾಡಬಹುದು. .

ಕೀಳಿರಿಮೆ ಹೋಗಲಾಡಿಸಿ: ಗ್ರಾಮೀಣ ಪ್ರದೇಶದ ಮಕ್ಕಳು ಉನ್ನತ ವ್ಯಾಸಂಗಕ್ಕೆ ಪಟ್ಟಣ, ನಗರಗಳಿಗೆ ಬಂದಾಗ ಅವರು ಭಾಷಾ ತೊಡಕು; ಅನಾಕರ್ಷಕ ಉಡುಪು; ನಡೆ ನುಡಿಯಲ್ಲಿ ಕಾಣದ ನಯವಂತಿಕೆ; ವೈಯಕ್ತಿಕ ಸ್ವಚ್ಛತೆಯ ಕೊರತೆ ಮುಂತಾದ ಕಾರಣಗಳಿಂದ ಕೀಳಿರಿಮೆ ಪೀಡಿತರಾಗಿ ಕಲಿಕಾ ಅವಕಾಶಗಳಲ್ಲಿ ಸಮಾನತೆಯಿಂದ ವಂಚಿತರಾಗುವ ಸಾಧ್ಯತೆಗಳಿರುತ್ತವೆ. ತಪ್ಪಿಲ್ಲದ ಆಂಗ್ಲ ಭಾಷೆಯ ಬಳಕೆ, ಶುಭ್ರ ಉಡುಪು, ವೈಯಕ್ತಿಕ ಸ್ವಚ್ಛತೆ, ನಯವಾದ ನಡೆ ನುಡಿಗಳ ಅಭ್ಯಾಸವನ್ನು ಮಕ್ಕಳಿಗೆ ಮೊದಲಿನಿಂದಲೇ ಮಾಡಿಸುವುದರಿಂದ ಈ ಸಮಸ್ಯೆಯನ್ನು ಬಹುತೇಕ ತಪ್ಪಿಸಬಹುದು. .

ಸಮಯದ ಸದುಪಯೋಗಕ್ಕೆ ಮಹತ್ವ ನೀಡಿ: ವಿದ್ಯಾರ್ಥಿಗಳಿಗೆ ಸಮಯವೇ ಸಂಪತ್ತು. ವಿದ್ಯಾರ್ಥಿ ಜೀವನದಲ್ಲಿ ಅವರು ಸಮಯವನ್ನು ಬಳಸಿಕೊಳ್ಳುವ ರೀತಿಯು ಅವರ ಇಡೀ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಸಮಯ ಪಾಲನೆಯನ್ನು ರೂಢಿ ಮಾಡಿಸಿ. ದೊರೆಯುವ ಸಮಯವನ್ನು ಅತ್ಯಂತ ಯೋಜಿತ ರೀತಿಯಲ್ಲಿ ಸಂಪೂರ್ಣವಾಗಿ, ಸಮರ್ಪಕವಾಗಿ ಬಳಸಿಕೊಳ್ಳುವುದರ ಮಹತ್ವವನ್ನು ತಿಳಿಸಿಕೊಡಿ. ಮೊಬೈಲ್ ಟಿವಿಗಳಲ್ಲಿ ಸಮಯ ಕಳೆಯುವುದನ್ನು ಅಭ್ಯಾಸ ಮಾಡಿಕೊಳ್ಳಲು ಬಿಡಬೇಡಿ. ಉತ್ತಮ ಪುಸ್ತಕಗಳ ವ್ಯಾಸಂಗವನ್ನು ಅಭ್ಯಾಸ ಮಾಡಿಸಿ. ಉತ್ತಮ ಸ್ನೇಹಿತರನ್ನು ಗಳಿಸುವುದನ್ನು ಕಲಿಸಿ. .

ವಿದ್ಯಾಭ್ಯಾಸವೇ ಗ್ರಾಮೀಣ ಅಭಿವೃದ್ಧಿಗೆ ಮೂಲ ಮಂತ್ರ., ಹೆಚ್ಚು ಗ್ರಾಮೀಣ ಮಕ್ಕಳು ವಿದ್ಯಾವಂತರಾಗಿ ದೇಶ ಸೇವೆ ಮಾಡುವಂತಾಗಲಿ.