ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೨

ಚೈನಾ ಆಸ್ಟರ್ ಕಡಿಮೆ ವೆಚ್ಚ, ಅಧಿಕ ಲಾಭ

image_
ಚಂದ್ರಶೇಖರ್, ಎಸ್. ವೈ
9448255873
1

ಆಸ್ಟರ್ ಕರ್ನಾಟಕದಲ್ಲಿ ಬಟನ್ಸ್ ಎಂಬ ಹೆಸರಿನಿಂದ ಪ್ರಸಿದ್ಧಿಯಾಗಿರುವ ಕಡಿಮೆ ಅವಧಿಯ ಹೂವಿನ ಬೆಳೆ. ಇದು ದೊಡ್ಡ ರೈತರಿಗಲ್ಲದೆ ಸಣ್ಣ ಮತ್ತು ಅತಿ ಸಣ್ಣ ಕೃಷಿಕರಿಗೆ ಲಾಭದಾಯಕವಾಗಿದ್ದು, ಸಮಗ್ರ ಕೃಷಿ ಪದ್ದತಿಯಲ್ಲಿ ಯಶಸ್ವಿಯಾಗಿ ಬೆಳೆಯಬಹುದಾಗಿದೆ. ಆಸ್ಟರ್ನ ಬಿಡಿ ಹೂ ಹಾಗೂ ಕಾಂಡಸಹಿತ ಹೂಗಳು ಬಳಕೆಯಲ್ಲಿವೆ. ಉದ್ಯಾನವನದ ಸೌಂದರ್ಯ ಹೆಚ್ಚಿಸಲು ಕೂಡ ಇದನ್ನು ಬೆಳೆಸಲಾಗುತ್ತದೆ. ನಮ್ಮ ರಾಜ್ಯದಲ್ಲಿ ತುಮಕೂರು, ಬೆಂಗಳೂರು, ಕೋಲಾರ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇದನ್ನು ಬೆಳೆಯಲಾಗುತ್ತಿದೆ.

ಮಣ್ಣು ಮತ್ತು ಹವಾಗುಣ:

 • ಈ ಬೆಳೆಗೆ ಫಲವತ್ತಾದ ನೀರು ಬಸಿದು ಹೋಗುವಂತಹ ಮರಳು ಮಿಶ್ರಿತ ಗೋಡುಮಣ್ಣು ಸೂಕ್ತ, ಆದರೆ ಜೌಗು ಪ್ರದೇಶ ಅಥವಾ ಹೆಚ್ಚು ತೇವವುಳ್ಳ ಭೂಮಿಯು ಯೋಗ್ಯವಲ್ಲ
 • ಮಣ್ಣಿನ ರಸಸಾರ ೬ ರಿಂದ ೭ ಪ್ರಮಾಣವಿದ್ದರೆ ಸೂಕ್ತ.
 • ಆಸ್ಟರ್ ಬೆಳೆಯ ಬೇಸಾಯವನ್ನು ವರ್ಷವಿಡಿ ಮಾಡಬಹುದಾದರೂ, ಈ ಬೆಳೆಗೆ ತಂಪಾದ ವಾತಾವರಣ (ಚಳಿಗಾಲ) ತುಂಬ ಸೂಕ್ತವಾಗಿದ್ದು, ಮೇ ಜೂನ್ನಲ್ಲಿ ನಾಟಿ ಮಾಡಿದ ಬೆಳೆಯಿಂದ ಅತ್ಯುತ್ತಮ ಇಳುವರಿಯನ್ನು ಪಡೆಯಬಹುದಾಗಿದೆ
 • ವರ್ಗೀಕರಣ ಮತ್ತು ತಳಿಗಳು:

 • ಚೈನಾ ಆಸ್ಟರನ್ನು ಹೂವಿನ ದಳದ ಜೋಡಣೆಯ ಆಧಾರದ ಮೇಲೆ ಸಿಂಗಲ್, ಸೆಮಿಡಬಲ್, ಡಬಲ್, ಅನಿಮೋನ್, ಪೊಂಪನ್ ಮತ್ತು ಪೌಡರ್ ಪಫ್ ಎಂದು ವರ್ಗೀಕರಿಸಲಾಗುವುದು ಮತ್ತು ಗಿಡದ ಎತ್ತರದ ಆಧಾರದ ಮೇಲೆ ಮೂರು ವಿಧಗಳಾಗಿ ವಿಂಗಡಿಸಲಾಗಿದೆ, ಅವುಗಳೆಂದರೆ, ಉದ್ದನೆಯ ತಳಿಗಳು (೭೦೯೦ ಸೆಂ. ಮೀ.), ಮಧ್ಯಮ ಎತ್ತರದ ತಳಿಗಳು(೪೦೬೦ ಸೆಂ. ಮೀ.), ಗಿಡ್ಡ ತಳಿಗಳು (೨೦೪೦ ಸೆಂ. ಮೀ.)
 • ರೈತರ ಅನುಕೂಲಕ್ಕಾಗಿ ಭಾರತೀಂii ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಹೆಚ್ಚು ಇಳುವರಿ ನೀಡುವ ಕಾಮಿನಿ, ಪೂರ್ಣಿಮಾ, ವೈಲೆಟ್ಕುಷನ್, ಶಶಾಂಕ್, ಅರ್ಕಾಆಧ್ಯ ಮತ್ತು ಅರ್ಕಾ ಅರ್ಚನ ತಳಿಗಳನ್ನು ಬಿಡುಗಡೆ ಮಾಡಿದೆ. ಇದಲ್ಲದೆ, ಫುಲೆಗಣೇಶ ವೈಟ್, ಫುಲೆಗಣೇಶ ಪಿಂಕ್, ಫುಲೆಗಣೇಶ ಪರ್ಪಲ್, ಫುಲೆಗಣೇಶ ವೈಲೆಟ್ ತಳಿಗಳನ್ನು ಸಹ ಬೆಳೆಯಬಹುದಾಗಿದೆ.
 • ಸಸ್ಯಾಭಿವೃದ್ಧಿ:

 • ಒಂದು ಹೆಕ್ಟೇರ್ಗೆ ಸುಮಾರು ೭೫೦ ಗ್ರಾಂ ಬೀಜ ಬೇಕಾಗುತ್ತದೆ.
 • ಸಸಿಗಳನ್ನು ಬೆಳೆಸಲು ಏರು ಮಡಿಗಳನ್ನು ತಯಾರಿಸಬೇಕು.
 • ಒಂದು ಹೆಕ್ಟೇರ್ಗೆ ಬೇಕಾಗುವ ಸಸಿಗಳನ್ನು ೭.೫ಮೀ. ಉದ್ದ, ೧.೨ಮೀ. ಅಗಲ ಮತ್ತು ೩೦ಸೆಂ.ಮೀ. ಎತ್ತರದ ೪ ಏರು ಮಡಿಗಳಲ್ಲಿ ಬೆಳೆಸಬಹುದು.
 • ಏರು ಮಡಿಗಳನ್ನು ಶೇ. ೦.೨ ಆಕ್ಸಿಕ್ಲೋರೈಡ್ದ್ರಾವಣದಿಂದ ನೆನೆಸಬೇಕು. ಬೀಜವನ್ನು ತೆಳುವಾಗಿ (೦.೫ಸೆಂ.ಮೀ. ಆಳಕ್ಕೆ) ಹಾಕಿದ ನಂತರ, ಸಣ್ಣಗಾತ್ರದ ಮರಳು ಅಥವಾ ತೆಂಗಿನ ಒಟ್ಟಿನಿಂದ ಮುಚ್ಚಿ ನೀರನ್ನು ಸಿಂಪಡಿಸಬೇಕು.
 • ಸಸಿಗಳು ೪ ರಿಂದ ೬ ವಾರಗಳಲ್ಲಿ ನಾಟಿ ಮಾಡಲು ಸಿದ್ಧವಾಗುತ್ತವೆ.
 • ಬೇಸಾಯ ಕ್ರಮಗಳು:

  17
 • ಚೈನಾ ಆಸ್ಟರ್ ಹೂವನ್ನು ಬೆಳೆಯಲು ಆಯ್ಕೆ ಮಾಡಿರುವ ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಬೇಕು.
 • ಒಂದು ಹೆಕ್ಟೇರಿಗೆ ೨೦ ಟನ್ ಕೊಟ್ಟಿಗೆಗೊಬ್ಬರ, ೯೦ಕೆ.ಜಿ. ಸಾರಜನಕ, ೧೨೦ಕೆ.ಜಿ. ರಂಜಕ, ಮತ್ತು ೬೦ಕೆ.ಜಿ. ಪೊಟ್ಯಾಷ್ ಸತ್ವವುಳ್ಳ ರಾಸಾಯನಿಕ ಗೊಬ್ಬರವನ್ನು ಮಣ್ಣಿಗೆ ಸೇರಿಸಿ ಭೂಮಿಯನ್ನು ಹದ ಮಾಡಿಕೊಂಡು ೩೦ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬೇಕು.
 • ನಾಟಿ ಮಾಡಿದ ಒಂದು ತಿಂಗಳ ನಂತರ ಕುಡಿ ಚಿವುಟಿ ಹೆಕ್ಟೇರಿಗೆ ೯೦ಕೆ.ಜಿ. ಸಾರಜನಕವನ್ನು ಮೇಲು ಗೊಬ್ಬರವಾಗಿ ಮಣ್ಣಿಗೆ ಸೇರಿಸಬೇಕು.
 • ಮಣ್ಣು ಮತ್ತು ಹವಾಗುಣದ ಅನುಗುಣವಾಗಿ ೫ರಿಂದ೭ ದಿನ ಅಂತರದಲ್ಲಿ ನೀರು ಹಾಯಿಸಬೇಕು.
 • ಕೊಯ್ಲು ಮತ್ತು ಇಳುವರಿ:

 • ನಾಟಿಯಾದ ಮೂರುವರೆ ಅಥವಾ ನಾಲ್ಕು ತಿಂಗಳಲ್ಲಿ ಹೂ ಕೊಯ್ಲಿಗೆ ಬರುತ್ತದೆ.
 • ಒಂದು ಹೆಕ್ಟೇರಿಗೆ ೧೦ರಿಂದ ೧೨.೫ ಟನ್ ಹೂವಿನ ಇಳುವರಿಯನ್ನು ಪಡೆಯಬಹುದು. ಒಂದು ಹೆಕ್ಟೇರಿಗೆ ಸುಮಾರು ರೂ. ೧೮೦೦೦/- ರಿಂದ ೨೦೦೦೦/- ವರೆಗೆ ಖರ್ಚು ತಗಲಬಹುದು.
 • ಒಟ್ಟು ಆದಾಯ (ರೂ. ೧೦/- ರಂತೆ ಕೆ.ಜಿ ಹೂವಿಗೆ) ರೂ. ೧, ೦೦, ೦೦೦/- ನಿರೀಕ್ಷಿಸಬಹುದು.
 • ಪೂರ್ತಿ ಅರಳಿದ ಹೂಗಳನ್ನು ತೊಟ್ಟು ಸಹಿತ ಅಥವಾ ತೊಟ್ಟುರಹಿತವಾಗಿ ಕೊಯ್ಲು ಮಾಡಬಹುದು.
 • ಇಡೀ ಸಸ್ಯವನ್ನು ಕಿತ್ತಾಗ ಕೆಳಗಿನ ಹಾಗೂ ಹಾಳಾದ ಎಲೆಗಳನ್ನು ತೆಗೆದು ಸ್ವಚ್ಚ ನೀರಿರುವ ಬಕೇಟ್ನಲ್ಲಿ ತಕ್ಷಣವೇ ಇರಿಸಬೇಕು.
 • ಕೊಯ್ಲೋತ್ತರ ನಿರ್ವಹಣೆ
 • ವರ್ಗೀಕರಣ: ಕತ್ತರಿಸಿದ ಹೂಗಳನ್ನು ಕಾಂಡದ ಉದ್ದವನ್ನಾಧರಿಸಿಯೂ, ಬಿಡಿ ಹೂಗಳನ್ನು ಗಾತ್ರವನ್ನಾಧರಿಸಿ ವರ್ಗೀಕರಣ ಮಾಡಲಾಗುತ್ತದೆ.
 • ಪ್ಯಾಕಿಂಗ್: ಬಿಡಿ ಹೂಗಳನ್ನು ಗೋಣಿ ಚೀಲಗಳಲ್ಲಿ ತುಂಬಿ ಮಾರುಕಟ್ಟೆಗೆ ಕಳುಹಿಸಲಾಗುತ್ತದೆ. ಕಾಂಡ ಸಮೇತ ಕತ್ತರಿಸಿದ ಹೂಗಳನ್ನು ಕಂತೆ ಮಾಡಿ ಸಿ.ಎಫ್.ಬಿ. ಪೆಟ್ಟಿಗೆಗಳಲ್ಲಿ ಪ್ಯಾಕ್ ಮಾಡುವುದು ಸೂಕ್ತ.
 • ಶೈತ್ಯ ಸಂಗ್ರಹಣೆ: ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಿದ್ದಾಗ ಕಡಿಮೆ ಉಷ್ಣಾಂಶದಲ್ಲಿ (೪ಡಿಗ್ರಿ ಸೆ.) ೧ ರಿಂದ ೩ ವಾರಗಳವರೆಗೆ ಸಂಗ್ರಹಿಸಿಡಬಹುದು.
 • ಹೂದಾನಿಯಲ್ಲಿ ಇರಿಸುವಿಕೆ: ಹೂದಂಟಿನ ಕೆಳಗೆ ಬ್ಲೇಡ್ನಿಂದ ಕತ್ತರಿಸಿ, ಹೆಚ್ಚಿನ ಎಲೆಗಳನ್ನು ತೆಗೆದು ಹಾಕಿ ನೀರಿನಲ್ಲಿ ಸುಕ್ರೋಸ್ (ಶೇ.೨)+ ಅಲ್ಯುಮಿನಿಯಮ್ ಸಲ್ಫೇಟ್ (೨೦೦ ಪಿಪಿಎಂ) ಬೆರೆಸಿದ ದ್ರಾವಣದಲ್ಲಿ ಇರಿಸಬೇಕು. ಸಿಲ್ವರ್ ನೈಟ್ರೇಟ್ (೧೦೦೦ ಪಿಪಿಎಂ) ದ್ರಾವಣದಲ್ಲಿ ೧೦ ಸೆಕೆಂಡುಗಳವರೆಗೆ ಇರಿಸುವುದರಿಂದಲೂ ಹೂವಿನ ಬಾಳಿಕೆ ಹೆಚ್ಚಿಸಬಹುದು.
 • ಬೀಜ ಸಂಗ್ರಹಣೆ: ಗಿಡದಲ್ಲಿಯ ಒಳ್ಳೆಯ ಗಾತ್ರದ ಹೂಗಳು ಒಣಗಿದಾಗ ಬೀಜವನ್ನು ಬಿಡಿಸಿ, ಸ್ಪಚ್ಫಗೊಳಿಸಿ ಪಾಲಿಥಿನ್ ಚೀಲಗಳಲ್ಲಿ ತುಂಬಿ ತಂಪಾದ ವಾತಾವರಣದಲ್ಲಿ(ಫ್ರಿಜ್ನಲ್ಲಿ) ಇರಿಸಿ ಮುಂದಿನ ಬೆಳೆ ಬೆಳೆಯಲು ಉಪ ಯೋಗಿಸಬಹುದು.
 • ಸಸ್ಯ ಸಂರಕ್ಷಣ ಕ್ರಮಗಳು

  ಹೇನು, ಥ್ರಿಪ್ಸ್, ಎಲೆ ತಿನ್ನುವ ಹುಳು, ಎಲೆ ಚುಕ್ಕೆ ರೋಗ, ಸೊರಗುರೋಗ ಮತ್ತು ಹೂ ಅಂಗಮಾರಿರೋಗ (ನಂಜುರೋಗ) ಇವು ಚೈನಾ ಆಸ್ಟರ್ನಲ್ಲಿ ಸಾಮಾನ್ಯವಾಗಿ ಕಂಡುಬರುವ ಕೀಟ ಮತ್ತು ರೋಗಗಳು.

  ಹತೋಟಿ ವಿಧಾನ :

 • ಚೆನ್ನಾಗಿ ನೀರು ಬಸಿದು ಹೋಗುವಂತೆ ಮಾಡಿ ಬೆಳೆಯನ್ನು ಸೊರಗು ರೋಗದಿಂದ ರಕ್ಷಿಸಬೇಕು. ಸೊರಗು ರೋಗದ ನಿಯಂತ್ರಣಕ್ಕಾಗಿ ೧ ಗ್ರಾಂ ಕಾರ್ಬೆಂಡೇಜಿಂ ಪ್ರತಿ ಲೀಟರ್ ನೀರಿಗೆ ಬೆರೆಸಿ ತೋಯಿಸಬೇಕು.
 • ಕೀಟಗಳಾದ ಹೇನು, ಥ್ರಿಪ್ಸ್ ಹಾಗೂ ರೋಗಬಾಧೆ(ಎಲೆ ಚುಕ್ಕೆ ರೋಗ) ಕಂಡುಬಂದಾಗ ಬೆಳಗ್ಗೆ ೨ ಮಿ.ಲೀ. ಮೀಥೈಲ್ ಪ್ಯಾರಾಥಿಯಾನ್ ಮತ್ತು ೨ ಗ್ರಾಂ ಮ್ಯಾಂಕೋಜೆಬ್ನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
 • ಬೇವಿನ ಬೀಜದ ಕಷಾಯ (ಶೇ. ೪ ರ) ಅಥವಾ ಎಂಡೋಸಲ್ಫಾನ್(೨ ಮಿ..ಲೀ.) ಸಿಂಪಡಿಸು ವುದರಿಂದ ಹೂವು ಮತ್ತು ಕಾಯಿಕೊರೆಯುವ ಹುಳುಗಳನ್ನು ನಿಯಂತ್ರಿಸಬಹುದು.
 • ಹೂಗಳು ಸಂಪೂರ್ಣವಾಗಿ ಎಲೆಗಳಾಗಿ ಪರಿವರ್ತನೆಯಾಗುವ ಅಂಗಮಾರಿ ರೋಗವು ಬಹಳಷ್ಟು ಆರ್ಥಿಕ ನಷ್ಟವುಂಟು ಮಾಡುತ್ತದೆ. ರೋಗ ಕಾಣಿಸಿಕೊಂಡ ಗಿಡಗಳನ್ನು ಕಿತ್ತೊಗೆದು ಇತರೆ ಗಿಡಗಳಿಗೆ ಹರಡದಂತೆ ಅಂತರವ್ಯಾಪಿ ಕೀಟನಾಶಕ ಮೊನೊಕ್ರೋಟೋಪಾಸ್ (೨ ಮಿ.ಲೀ./ಲೀ. ನೀರಿಗೆ) ಸಿಂಪಡಿಸಬೇಕು.
 • ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:

 • ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಬೆಂಗಳೂರು( ೦೮೦-೨೮೪೬೬೪೭೧)
 • ತೋಟಗಾರಿಕೆ ಮ.ವಿ, ಮೂಡಿಗೆರೆ(೦೮೨೬೩-೨೨೮೧೫೨)
 • ಉಚಿತ ಕರೆ ಮಾಡಿ: ೧೫೫೧
 •