ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೨

ಇವರು ಹೂ ಬಿಡಲಿಲ್ಲ; ಹೂವು ಇವರನ್ನು ಬಿಡಲಿಲ್ಲ

ಡಾ. ಹರೀಶ್, ಬಿ.ಎಸ್
9880445913
1

ರಾಜೇಗೌಡರದು ಸಣ್ಣ ಕೃಷಿ ಕುಟುಂಬ. ಊರು ಮಂಡ್ಯ ಜಿಲ್ಲೆ ಬಸರಾಳು ಹೋಬಳಿಯ ಬಿದರಕಟ್ಟೆ. ಇರುವ ಜಮೀನು ಎರಡೂವರೆ ಎಕರೆ ಮಾತ್ರ. ಸಮಗ್ರ ಕೃಷಿ ಅದ್ಧತಿ ಅಳವಡಿಕೆ. ಸಿರಿಧಾನ್ಯ, ತರಕಾರಿ, ತೆಂಗು ಬೆಳೆಗಳ ಜೊತೆ ನಾಲ್ಕು ಮೇಕೆ, ಎರಡು ಎಮ್ಮೆ ಇಪ್ಪತ್ತು ಕೋಳಿ. ಇದೆಲ್ಲದರ ನಡುವೆ ಕೇವಲ ಹತ್ತು ಗುಂಟೆಯಲ್ಲಿ ಎದ್ದು ಕಾಣುವ ಪುಷ್ಪ ಕೃಷಿ. ಮೂವತ್ತೇಳರ ಕೃಷಿಕ ರಾಜೇಗೌಡರಿಗೆ ಅವರು ಮಾಡುತ್ತಿರುವ ಕೃಷಿಯಲ್ಲಿ ನೆಮ್ಮದಿ ಸಿಕ್ಕಿದೆ. ಜೊತೆಗೆ ಬದುಕ ಬಂಡಿ ಸಾಗಿಸಲು ಬೇಕಾದ ಹಣ ಕೂಡ ಸಿಕ್ಕಿದೆ. ಸಾವಯವದೆಡೆಗೆ ಹೆಚ್ಚು ಒಲವಿದ್ದರೂ ಅವಶ್ಯವಿರುವಾಗ ರಾಸಾಯನಿಕ ಗೊಬ್ಬರ ಮತ್ತು ಪೀಡೆನಾಶಕಗಳನ್ನು ಅವಶ್ಯವಿರುವಷ್ಟು ಮಾತ್ರ ಬಳಸುತ್ತಾರೆ.

ಬೆಳೆದಿರುವ ತಳಿಗಳ ವೈವಿಧ್ಯತೆ?

ಬೆಳೆಯಲು ಆಯ್ದುಕೊಂಡದ್ದು ಪ್ರಮುಖವಾಗಿ ಸೇವಂತಿಗೆ. ಚಾಂದಿನಿ, ಪಚ್ಚೆ, ಪೂರ್ಣಿಮ, ಜೂಲ, ಕರ್ನೂಲ್ ಮುಂತಾದ ಒಟ್ಟು ಏಳು ಸೇವಂತಿಗೆ ತಳಿಗಳನ್ನು ಬೆಳೆದಿದ್ದಾರೆ. ಜೊತೆಗೆ ಎರಡು ಗುಂಟೆಯಲ್ಲಿ ಚೈನಾ ಆಸ್ಟರ್ (ಬಟನ್ಸ್) ಕೂಡ ಬೆಳೆಯುತ್ತಾರೆ. ಕಟಾವಿಗೆ ಬಂದಾಗ ನೋಡುವುದೇ ಖುಷಿ. ಇತ್ತೀಚೆಗೆ ಖ್ಯಾತಿ ಪಡೆದಿರುವ ರಬ್ಬರ್ ಸೇವಂತಿಗೆ (ಇದು ಸೇವಂತಿಗೆಯ ಮೇರಿಗೋಲ್ಡ್ ಎಂಬ ತಳಿ) ಕೂಡ ಗೌಡರು ಬೆಳೆದಿರುವ ವಿಶೇಷ ಸೇವಂತಿಗೆ ತಳಿ. ಹೆಚ್ಚು ದಿನ ಬಾಡದಿರುವುದರಿಂದ ಆ ಹೆಸರು. ವರ್ಷದ ಎಲ್ಲ ಕಾಲದಲ್ಲೂ ಹೂ ಬರುವಂತೆ ತಳಿ ಆಯ್ಕೆ ಮಾಡಿರುವುದು ಇವರ ವಿಶೇಷ. ಹಬ್ಬಗಳಲ್ಲಿ ಹೆಚ್ಚು ಹೂ ಇಳುವರಿ ಬರುವಂತೆಯೂ ಯೋಜಿಸಿದ್ದಾರೆ.

5

ಯಾವ ತಳಿ ಯಾವಾಗ ನಾಟಿ?

ವರ್ಷ ಪೂರ್ತಿ ಹೂಬಿಡುವ ಜೂಲಾ, ಮೇರಿಗೋಲ್ಡ್ ಮತ್ತು ಚೈನಾ ಆಸ್ಟರ್ ಗಳನ್ನು ಜೂನ್ ನಲ್ಲಿ ನಾಟಿ ಮಾಡಿದರೆ, ಕರ್ನೂಲ್ನ್ನು ಫೆಬ್ರವರಿಯಲ್ಲೂ, ಪಚ್ಚೆ ತಳಿಯನ್ನು ಮಾರ್ಚ್ನಲ್ಲೂ, ಚಾಂದನಿಯನ್ನು ಜುಲೈನಲ್ಲೂ ನಾಟಿ ಮಾಡುತ್ತಾರೆ. ಚಾಂದನಿ ಯಾವಾಗ ನಾಟಿ ಮಾಡಿದರೂ ಹೂಬರುವುದು ಮಾತ್ರ ಚಳಿಗಾಲದಲ್ಲಿ ಅನ್ನೋದು ಗೌಡರ ಅನುಭವದ ಮಾತು. ಹತ್ತು ಗುಂಟೆಯಲ್ಲಿ ಇರುವ ಒಟ್ಟು ಗಿಡಗಳ ಸಂಖ್ಯೆ ಎರಡು ಸಾವಿರ. ಅಂತರ ಬೇಸಾಯ, ಕಟಾವು, ಸಿಂಪಡಣೆಗೆ ಅನುಕೂಲವಾಗಲೆಂದು ಸಾಲುಗಳ ನಡುವೆ ನಾಲ್ಕು ಅಡಿ ಅಂತರ ಕೊಟ್ಟಿದ್ದಾರೆ.

ಪೋಷಕಾಂಶ ನಿರ್ವಹಣೆ ಹೇಗೆ?

ಹತ್ತು ಗುಂಟೆಗೆ ಇವರು ಬಳಸುವುದು ಮೂರು ಟನ್ ಕೊಟ್ಟಿಗೆ ಗೊಬ್ಬರ, ಒಂದೂವರೆ ಟನ್ ಕೆಮ್ಮಣ್ಣು, ಒಂದೂವರೆ ಟನ್ ಕೆರೆಯ ಫಲವತ್ತಾದ ಮೇಲ್ಮಣ್ಣು, ೪೦ ಕಿ. ಗ್ರಾಂ ೨೦:೨೦:೦:೧೫, ೩೦ ಕಿ. ಗ್ರಾಂ ಡಿಎಪಿ, ೨೦ ಕಿ. ಗ್ರಾಂ ೧೫:೧೫:೧೫ ಮತ್ತು ೨೦ ಕಿ. ಗ್ರಾಂ ಪೊಟ್ಯಾಷ್. ರಾಸಾಯನಿಕ ಗೊಬ್ಬರಗಳನ್ನು ಒಟ್ಟು ನಾಲ್ಕು ಕಂತುಗಳಲ್ಲಿ ನೀಡುತ್ತಾರೆ. ಜೊತೆಗೆ ಗಿಡದ ಬೆಳೆವಣಿಗೆ ಉತ್ತಮವಾಗಿರಲು ಸಿಂಪಡಣೆ ಮೂಲಕವೂ ನೀರಿನಲ್ಲಿ ಕರಗುವ ೧೯-೧೯-೧೯ ನ್ನು ೩-೪ ಬಾರಿ ನೀಡುತ್ತಾರೆ. ಮೊಗ್ಗು ಬಂದ ನಂತರ ಈ ಸಿಂಪರಣೆ ನಿಲ್ಲಿಸುವರು, ಇಲ್ಲದಿದ್ದರೆ ಹೂವಿನ ಗುಣಮಟ್ಟ ಹಾಳಾಗುವುದನ್ನು ಸ್ವತಃ ಕಂಡುಕೊಂಡಿದ್ದಾರೆ. ಹೂ ಬಿಸಿಲಿಗೆ ಮಂಕಾಗದಂತೆ ಮಿರಾಕುಲಿನ್ (ಹೂವಿನಂದಾಗುವ ನೀರಾವಿ ತಡೆಯುವುದು) ಎಂಬ ಉತ್ಪನ್ನ ಬಳಸುತ್ತಾರೆ ಹಾಗೂ ಚಳಿಗಾಲದಲ್ಲಿ ಹೂ ಅರಳುವುದನ್ನು ಪ್ರಚೋದಿಸುವ ಸಲುವಾಗಿ ಜಾದೂ ಎಂಬ ಟಾನಿಕ್ ಕೂಡ ಬಳಸುತ್ತಿದ್ದಾರೆ.

10

ಕೀಟ-ರೋಗ ನಿರ್ವಹಣೆ

ಮಾರುಕಟ್ಟೆ ಬೇಡಿಕೆ ಹೆಚ್ಚಿರುವಾಗ ವಾರಕ್ಕೊಮ್ಮೆ ಕಟಾವು; ಉಳಿದಂತೆ ವಾರಕ್ಕೊಮ್ಮೆ. ಮನೆಯವರೇ ಕಟಾವು ಮಾಡಿ, ಕೂಲಿ ಆಳಿನ ಅವಶ್ಯಕತೆ ಕಡಿಮೆ ಮಾಡಿಕೊಂಡಿರುತ್ತಾರೆ. ಯಾವುದೇ ತಳಿ ನಾಟಿಯಿಂದ ಮೊದಲ ಕಟಾವಿಗೆ ಬರಲು ಕನಿಷ್ಟ ಎರಡರಿಂದ ಮೂರು ತಿಂಗಳು ಬೇಕಾಗುವುದು. ಒಬ್ಬರು ದಿನದ ನಾಲ್ಕು ಗಂಟೆ ಸಮಯದಲ್ಲಿ ಹತ್ತರಿಂದ ಹನ್ನೆರಡು ಕಿ. ಗ್ರಾಂ ಹೂ ಕಟಾವು ಮಾಡಬಹುದು. ಇದನ್ನು ಮಾಲೆ ಕಟ್ಟಿದರೆ ಮೂವತ್ತು ಮಾರು ಆಗುವುದು. ೧೦ ಗುಂಟೆಯಲ್ಲಿ ಗೌಡರಿಗೆ ಕನಿಷ್ಟ ೩ ಟನ್ ಹೂ ಸಿಗುತ್ತದೆ.

ಮಾರಾಟ?

ಗ್ರಾಹಕರಿಗೆ ನೇರ ಮಾರಾಟ ಗೌಡರ ಯಶಸ್ಸಿನ ಗುಟ್ಟು. ಜೊತೆಗೆ ವರ್ಷ ಪೂರ್ತಿ ಹೂ ಖರೀದಿಸುವ ಖಾಯಂ ಗಿರಾಕಿಗಳೂ ಇದ್ದಾರೆ. ಅದಕ್ಕೇ ಗೌಡರು ವರ್ಷ ಪೂರ್ತಿ ಹೂ ಸಿಗುವಂತೆ ಬೆಳೆ-ತಳಿ ಯೋಜಿಸಿ ಹಾಕಿದ್ದಾರೆ. ಹತ್ತಿರದ ಕೊಪ್ಪ (ಮದ್ದೂರು ತಾಲ್ಲೂಕು) ಇವರ ಪ್ರಮುಖ ಮಾರಾಟ ಕೇಂದ್ರ. ಅಲ್ಲದೇ ತಮ್ಮದೇ ಹೋಬಳಿ ಬಸರಾಳಿನಲ್ಲೂ ಮಾರಾಟ. ಮಿಕ್ಕಂತೆ ಸ್ಥಳೀಯ ಸಂತೆಗಳಲ್ಲೂ ಮಾರಾಟ ಮಾಡುವುದುಂಟು. ಬಹುತೇಕ ಕೃಷಿಕರು ದಲ್ಲಾಳಿಗೆ ಕೆ.ಜಿ ಲೆಕ್ಕದಲ್ಲಿ ಹೂ ಕೊಟ್ಟರೆ ಗೌಡರು ಮಾತ್ರ ತಾವೇ ಮಾಲೆ ಕಟ್ಟಿಸಿಯೇ ಮಾರುವುದು. ಇದರಿಂದಲೇ ಇವರಿಗೆ ನಿವ್ವಳ ಲಾಭ ಹೆಚ್ಚು ಬಂದಿರುವುದು. ಇದು ಅವರ ಜಾಣ್ಮೆಗೆ ಸಾಕ್ಷಿ.

15

ಖರ್ಚು-ಆದಾಯ

ಬಹಳ ಸುಲಭವಾಗಿ ಹೇಳುತ್ತಾರೆ ಗೌಡ್ರು. ಸರ್ ಒಟ್ಟಾರೆ ನಮ್ಮ ಮನೆಯವರ ಶ್ರಮಕ್ಕೂ ಬೆಲೆ ಕಟ್ಟೋದಾದ್ರೆ ಹತ್ತು ಗುಂಟೆಗೆ ವರ್ಷಕ್ಕೆ ಇಪ್ಪತ್ತೈದು ಸಾವಿರ ಖರ್ಚು ಬರುತ್ತೆ. ಕೊಟ್ಟಿಗೆ ಗೊಬ್ಬರ, ಕೆಮ್ಮಣ್ಣು, ಕೆರೆ ಮಣ್ಣಿಗೆ ಆರು ಸಾವ್ರ; ನಾಟಿಗೆ ಬಳಸೋ ಗಿಡಗಳಿಗೆ ಮೂರು ಸಾವ್ರ; ರೋಗ-ಕೀಟ ನಿರ್ವಹಣೆಗೆ ಎಂಟು ಸಾವ್ರ; ಲೇಬರ್ ಒಂದೆಂಟ್ ಸಾವ್ರ. ಮೂರು ಟನ್ ವರ್ಷದ ಹೂವಿನ ಇಳುವರಿ; ಒಂದು ಕೆ.ಜಿಗೆ ಮೂರು ಮಾರು ಕಟ್ಟಬಹುದು. ಅಂದ್ರೆ ಮೂರು ಟನ್ನಿಗೆ ೯೦೦೦ ಮಾರು. ಕನಿಷ್ಟ ಮಾರಿಗೆ ೧೫ ರೂಪಾಯಂಗೆ ಮಾರ್ತೀವಿ. ಲಾಭನ ನೀವೇ ಲೆಕ್ಕ ಹಾಕ್ಕೋಳಿ ಅಂತ ಮಾತು ಮುಗಿಸುತ್ತಾರೆ ಗೌಡರು. ಕನಿಷ್ಟ ಹತ್ತು ಗುಂಟೆಗೆ ಉಳಿಯುವ ನಿವ್ವಳ ಲಾಭ ಒಂದು ಲಕ್ಷ. ಇನ್ನೆಷ್ಟು ಬೇಕು ಅಂತ ಬೊಟ್ಟು ಮಾಡುತ್ತಾರೆ.

ರಾಜೇಗೌಡರ ಸಂಪರ್ಕ ಸಂಖ್ಯೆ ೯೫೩೫೩೧೨೪೭೨; ನನ್ನದು ೯೪೮೦೫೫೭೬೩೪. ಹೂ ಬೆಳೆಯುವ ಆಸಕ್ತ ಸಹ ಕೃಷಿಕರೆಗೆ ಸ್ವಲ್ಪ ಪ್ರಮಾಣದ ನೆಡು ಸಾಮಗ್ರಿಯನ್ನು ಗೌಡರು ಉಚಿತವಾಗಿಯೇ ಕೊಟ್ಟಿದ್ದಾರೆ. ಹೀಗೆ ಪಡೆದವರ ಸಂಖ್ಯೆ ಐವತ್ತಕ್ಕೂ ಹೆಚ್ಚು.