ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೨

ಅರಿವೆ ಗುರು

ಸೌರ ನೀರೊಲೆ ಕೊಳ್ಳುವ ಮೊದಲು

image_
ಅನಿಲ್ಕುಮಾರ್
9449837309
1

ಬಿಸಿ ನೀರಿಗೆ ಸೋಲಾರ್ ವಾಟರ್ ಹೀಟರ್ ನಗರಗಳಲ್ಲಿ ಕಡ್ಡಾಯವಾಗಿದೆ. ಗ್ರಾಮೀಣ ಭಾಗಕ್ಕೂ ಹೆಜ್ಜೆ ಇಡುತ್ತಲಿದೆ. ಎಲ್ಲೆಡೆ ಇದರ ಅಳವಡಿಕೆ ಒಳ್ಳೆಯದು. ಆದರೆ ಇಂದೂ ಸಹ ಹಾಕಬೇಕಲ್ಲ ಎಂದು ಅಳವಡಿಸುವವರೆ ಹೆಚು. ಹಾಗಾಗಿ ಇವುಗಳನ್ನು ಕೊಳ್ಳುವಾಗ ಅರಿತುಕೊಳ್ಳುವುದಕ್ಕಿಂತ ಮಾರಾಟಗಾರ ಉತ್ತಮವೆಂದು ಹೇಳಿದ್ದನ್ನು ನಂಬಿ ಅಳವಡಿಸುವುದೇ ಹೆಚ್ಚು. ಅರಿಯಬೇಕೆಂದು ಅಂಗಡಿಯವರ ಕೇಳಿದರೆ ಹೇಳುವ ತಿಳುವಳಿಕೆಯುಳ್ಳ ಮಾರಾಟಗಾರರು ಕಡಿಮೆಯೇ. ಈ ಹಿನ್ನೆಲೆಯಲ್ಲಿ ನಮ್ಮ ಓದುಗರಿಗೆ ಅರಿವಿನ ಕೊರತೆ ನೀಗಿಸುವ ಈ ಲೇಖನವನ್ನು ಅನಿಲ್ ಜೊತೆ ಚರ್ಚೆಯೊಂದಿಗೆ ಸಂಪಾದಕರು ಸಿದ್ಧಪಡಿಸಿದ ಲೇಖನ.

ಸೌದೆ, ಸೀಮೆ ಎಣ್ಣೆ, ವಿದ್ಯುತ್ ಹಾಗೂ ಗ್ಯಾಸ್ ಕೊರತೆ ಹಾಗೂ ಅವುಗಳ ಗಗನಮುಖಿ ಬೆಲೆಗಳೇ ಸೌರ ನೀರೊಲೆ ಅಳವಡಿಕೆಗೆ ಕಾರಣ ಎಂದರೆ ತಪ್ಪಲ್ಲ. ಕಾರಣ ಏನೇ ಇರಲಿ ಸೌರ ನೀರೊಲೆ ಅಥವಾ ಸೋಲಾರ್ ವಾಟರ್ ಹೀಟರ್ ಅಥವಾ ಸೋಲಾರ್ ಗೀಜರ್ಗಳ ಅಳವಡಿಕೆ ಒಳ್ಳೆಯದು. ಗ್ರಾಮೀಣ ಭಾಗದಲ್ಲೂ ಇದರ ಅಳವಡಿಕೆ ಹೆಚ್ಚಾಗಬೇಕಿದೆ. ಈ ಹಿನ್ನೆಲೆಯಲ್ಲಿ ತಂತ್ರಜ್ಞಾನದ ಸರಿಯಾದ ಅರಿವು ಅಳವಡಿಕೆಗೆ ಸಹಕಾರಿ.ಸೌರ ನೀರೊಲೆಗಳಲ್ಲಿ ಬಿಸಿ ನೀರ ಸಂಗ್ರಹಕ್ಕೆ ಟ್ಯಾಂಕ್ ಇರುತ್ತದೆ. ನೀರು ಕಾಯಲು ಕೊಳವೆಗಳಿರುತ್ತವೆ. ಟ್ಯಾಂಕ್ ನೀರು ಕಾಯುವ ಕೊಳವೆಗಿಂತ ಎತ್ತರದಲ್ಲಿರುತ್ತದೆ. ಕೊಳವೆಯಲ್ಲಿ ಕಾದ ನೀರು ಹಗುರವಾಗಿ(ಸಾಂಧ್ರತೆ ಕಡಿಮೆಯಾಗಿ) ಮೇಲೇರುತ್ತದೆ. ತಣ್ಣನೆ ನೀರು ಕೊಳವೆಗೆ ಬರುತ್ತದೆ. ಈ ಕ್ರಿಯೆ ನಿರಂತರ. ಟ್ಯಾಂಕ್ನಲ್ಲಿ ನೀರು ತಣ್ಣಗಾಗದಂತೆ ಇನ್ಸುಲೇಶನ್ ಮಾಡಿರುತ್ತಾರೆ.

ನೀರು ಬಿಸಿಯಾಗಲು ಬಳಸುವ ಕೊಳವೆಗಳಲ್ಲಿ ಎರಡು ರೀತಿ ಇದ್ದು ಇದನ್ನಾಧರಿಸಿಯೇ ಸೋಲಾರ್ ವಾಟರ್ ಹೀಟರ್(ಸೌರ ನೀರೊಲೆ)ನ ಎರಡು ಮಾದರಿಗಳು ಮಾರುಕಟ್ಟೆಯಲ್ಲಿ ಲಭ್ಯ.

 • ಫಲಕ ಮಾದರಿ-ಸೋಲಾರ್ ಪ್ಲ್ಯಾಟ್ ಪ್ಲೇಟ್ ಕಲೆಕ್ಟರ್
 • ಕೊಳವೆ ಮಾದರಿಇವ್ಯಾಕ್ಯುವೇಟೆಡ್ ಟ್ಯೂಬ್ ಕಲೆಕ್ಟರ್(ಇಟಿಸಿ)
 • ಪಿಂಕ್ ಸ್ಪೇತ್: ಪಿಂಕ್, ಜಾನ್ಸನ್ ಪಿಂಕ್, ಚೀರ್ಸ್.

  ಫಲಕ ಮಾದರಿ: ಇದರಲ್ಲಿ ಸಣ್ಣ ವ್ಯಾಸದ ತಾಮ್ರದ ಕೊಳವೆಯನ್ನು ಗ್ಲಾಸ್ ಮೇಲ್ಮುಖವಿರುವ ಬಾಕ್ಸ್ನಲ್ಲಿ ಅಳವಡಿಸಲಾಗಿರುತ್ತದೆ. ಇದರ ಒಂದು ತುದಿ ಟ್ಯಾಂಕ್ ತಳಭಾಗಕ್ಕೆ ಮತ್ತೊಂದು ತುದಿ ಟ್ಯಾಂಕ್ ಮೇಲ್ಭಾಗಕ್ಕೆ ಜೋಡಿಸಲಾಗಿರುತ್ತದೆ. ಟ್ಯಾಂಕ್ ತಳಭಾಗಕ್ಕೆ ಜೋಡಿಸಿದ ಕಡೆಯಿಂದ ತಣ್ಣೀರು ಪ್ರವೇಶವಾಗಿ ಸೂರ್ಯನ ಶಾಖದಿಂದ ಬಿಸಿಯಾದ ತಾಮ್ರದ ಕೊಳವೆಗಳಿಂದ ಕಾದು ಮೇಲೇರುತ್ತದೆ. ತಾಮ್ರದ ಕೊಳವೆ ಬೇಗ ಬಿಸಿಯಾಗಲು ಬಾಕ್ಸ್ ಒಳಗಡೆ ಕಪ್ಪು ಬಣ್ಣದ ಶಾಖ ಹೀರುವ ಪದರಗಳನ್ನು ಅಳವಡಿಸಲಾಗಿರುತ್ತದೆ.

  ಕೊಳವೆ ಮಾದರಿ ಮಾದರಿಯಲ್ಲಿ ಗಾಜಿನ ಕೊಳವೆಗಳನ್ನು ಟ್ಯಾಂಕ್ ಕೆಳಭಾಗದಲ್ಲಿ ಜೋಡಿಸಲಾಗಿರುತ್ತದೆ. ಇದರ ಮೂಲಕ ನೀರು ಕೆಳ ಹರಿದು ಬಿಸಿಯಾದ ನೀರು ಮೇಲೇರುತ್ತದೆ

  10

  ಯಾವ ಮಾದರಿ ಕೊಳ್ಳಬೇಕು

  ಎರಡೂ ಮಾದರಿಯಲ್ಲಿ ಉತ್ತಮ ಅಂಶಗಳ ಮಿತಿಗಳು ಇವೆ. ಇವುಗಳನ್ನು ಅರಿತುಕೊಳ್ಳಬೇಕು. ಕೊಳವೆ ಮಾದರಿಯ ಕಾರ್ಯಕ್ಷಮತೆ ಹೆಚ್ಚು ಬೆಲೆ ಕಡಿಮೆ ಬೇಗನೆ ನೀರು ಬಿಸಿಯಾಗುತ್ತದೆ. ಗಡುಸು/ಮೆದು ನೀರು/ಒಂಡು ನೀರು ಎಲ್ಲದಕ್ಕೂ ಉತ್ತಮ ಎನ್ನುವುದು ಇವುಗಳ ಹೆಗ್ಗಳಿಕೆ. ಇದರಿಂದಲೇ ಇವು ಜನಪ್ರಿಯ ಆದರೆ ಗಾಜಿನ ಕೊಳವೆಗಳ ಸೂಕ್ಷ್ಮ ನಿರ್ವಹಣೆ ಇವುಗಳ ಕೊರತೆ. ಫಲಕ ಮಾದರಿಯ ಕಾರ್ಯಕ್ಷಮತೆ ಕೊಳವೆಗಿಂತ ಕಡಿಮೆ ಬೆಲೆ ಜಾಸ್ತಿ. ಆದರೆ ಗಟ್ಟಿ, ದೀರ್ಘಬಾಳಿಕೆ, ಗರಿಷ್ಠ ತಾಪಮಾನ ತಲುಪುವುದು ನೀರಿನ ಒತ್ತಡ ಜಾಸ್ತಿ ಇದ್ದಲ್ಲಿಯೂ ಕಾರ್ಯ ಮಾಡುತ್ತದೆ. ಗಡುಸು ನೀರು ಇದ್ದಾಗ ಕೊಳವೆ ಸಣ್ಣದಿರುವುದರಿಂದ ಕಟ್ಟಿಕೊಳ್ಳುವ ಸಾಧ್ಯತೆ ಹೆಚ್ಚಿರುವುದರಿಂದ ಬೇಗ ಹಾಳಾಗುತ್ತದೆ. ತಾಮ್ರದ ಕೊಳವೆಯಿಂದಾಗಿ ಬೆಲೆ ಜಾಸ್ತಿ. ಆದರೆ ಸವಕಳಿ ಬೆಲೆ ಹೆಚ್ಚು. ಇವುಗಳನ್ನು ತುಲನೆ ಮಾಡಿ ನಮ್ಮ ಅಗತ್ಯಗಳಲ್ಲಿ ಯಾವುದು ಮೇಲುಗೈ ಪಡೆಯುತ್ತದೆಯೋ ಅದನ್ನು ಕೊಳ್ಳಬೇಕು.ಕೊಳವೆ ಮಾದರಿ ಕಾರ್ಯಕ್ಷಮತೆ ಹೆಚ್ಚಿರಲು ಕಾರಣ ದಿನದ ಎಲ್ಲಾ ಕಾಲದಲ್ಲೂ ಸೂರ್ಯನ ಕಿರಣಗಳು ನೇರವಾಗಿ (ಲಂಬವಾಗಿ) ಕೊಳವೆಗೆ ತಲುಪುತ್ತವೆ. ಆದರೆ ಫಲಕ ಮಾದರಿಯಲ್ಲಿ ಮಧ್ಯಾಹ್ನದ ಬಿಸಿಲಲ್ಲಿ ಮಾತ್ರ ನೇರ ತಲುಪುತ್ತವೆ.

 • ಫಲಕ ಮಾದರಿಯಲ್ಲಿ ಕೊಳವೆಗಳು ಸಂಪೂರ್ಣ ತಾಮ್ರವೇ ಅಲ್ಯೂಮಿನಿಯಂ ಮಿಶ್ರ ಮಾಡಲಾಗಿದೆಯೇ ಅಥವಾ ಬರೀ ಅಲ್ಯೂಮಿನಿಯಂ ಎನ್ನುವುದರ ಮೇಲೆ ಗುಣಮಟ್ಟ ನಿಗದಿಯಾಗುತ್ತದೆ. ಪೂರ್ಣ ತಾಮ್ರ ಒಳ್ಳೆಯದು. ಫಲಕದ (ಪ್ಯಾನೆಲ್) ಅಳತೆ ೧೦೦ ಲೀಟರ್ಗೆ ೪ ಘಿ ೮ ಆಗಿದ್ದು ೪ ರಿಂದ ೯ ಸಾಲು ಫಿಕ್ಸ್ ಇರಬೇಕು. ಸಾಲು ಹೆಚ್ಚಾದಂತೆ ಉತ್ತಮ ಫಲಿತಾಂಶ ಬೆಲೆ ಸ್ಪರ್ಧೆಗಾಗಿ ಸಾಲು ಕಡಿಮೆ ಮಾಡುವುದರ ಬಗ್ಗೆ ಎಚ್ಚರವಿರಬೇಕು.
 • ಕೊಳವೆ ಮಾದರಿಯಲ್ಲಿ ಕೊಳವೆ ವ್ಯಾಸ (೪೭ರಿಂದ ೫೦ ಮಿ. ಮೀ.) ಉದ್ದ (೧.೫ ರಿಂದ ಮೀಟರ್) ಹಾಗೂ ಟ್ಯೂಬ್ಗಳ ಸಂಖ್ಯೆ ೧೦೦ ಲೀಟರ್ಗೆ ೧೦-೧೫. ಕೊಳವೆ ಹೆಚ್ಚಿದಷ್ಟು ನೀರು ಕಾಯುವ ಸಾಮರ್ಥ್ಯ ಹೆಚ್ಚು. ಬೆಲೆ ಸ್ಪರ್ಧೆಗೆ ಕಡಿಮೆ ಕೊಳವೆಗಳು ಹಾಗೂ ಉದ್ದ, ವ್ಯಾಸ ಕಡಿಮೆ ಮಾಡುವುದರ ಬಗ್ಗೆ ಎಚ್ಚರಿಕೆ ವಹಿಸಬೇಕು..
 • ಟ್ಯಾಂಕ್ ಗುಣಮಟ್ಟ: ಒಳಗೊಂದು ಹೊರಗೊಂದು ಎರಡು ಟ್ಯಾಂಕ್ ಇರುತ್ತವೆ. ಅವುಗಳ ಮಧ್ಯೆ ಉಷ್ಣ ನಿರೋಧಕ(ಇನ್ಸುಲೇಶನ್) ಇರುತ್ತದೆ. ಉಷ್ಣ ನಿರೋಧಕವಾಗಿ ಪಫ್(PUಈ) ಬಳಸಿದ್ದಲ್ಲಿ ಉತ್ತಮ. ಬೆಲೆ ಸಮರಕ್ಕೆ ಬೇರೆ ಉಷ್ಣ ನಿರೋಧಕ ಬಳಕೆ ಬಗ್ಗೆ ಎಚ್ಚರ ವಹಿಸಬೇಕು.

  ಒಳಭಾಗದ ಟ್ಯಾಂಕ್ನಲ್ಲಿ ಹಲವು ಲೋಹ ಬಳಸುತ್ತಾರೆ.- ಸ್ಟೈನ್ಲೆಸ್ ಸ್ಟೀಲ್ ೩೧೬ ಅಥವಾ ೩೦೪ ಗ್ರೇಡ್ ೦.೫ರಿಂದ ೧ ಎಂ ಎಂ ದಪ್ಪ, -ಜಿಪಿ(ಗ್ಯಾಲ್ವನೈಜ್ಡ್ ಐರನ್) ಅಥವಾ ಎಂ. ಎಸ್ ಸ್ಟೀಲ್ಗೆ ಪೌಡರ್ ಕೋಟಿಂಗ್ ಮಾಡಿರುತ್ತಾರೆ. ೧ ಎಂ ಎಂಗಿಂತ ದಪ್ಪವಿರಬೇಕು.

  ಒಳ್ಳೆಯದು ಯಾವುದು? ಸ್ಟೈನ್ಲೆಸ್ ಸ್ಟೀಲ್ ೩೧೬ ಒಳ್ಳೆಯದು ೩೦೪ ಬಳಸಬಹುದು. ಜಿಪಿ/ ಎಂ ಎಸ್ ಬೇಗ ಹಾಳಾಗುತ್ತದೆ. ಜೊತೆಗೆ ಅವುಗಳ ಬಣ್ಣ ಹೆಚ್ಚಿ ಉಷ್ಣತೆಯಿಂದ ಕರಗಿ ನೀರಿಗೆ ಸೇರುವ ಸಾಧ್ಯತೆ ಉಂಟು.

  ಹೊರಭಾಗದ ಟ್ಯಾಂಕ್: ಸ್ಟೈನ್ಲೆಸ್ ಸ್ಟೀಲ್ ೨೦೪ ಗ್ರೇಡ್ ಅಥವಾ ಜಿಪಿ ಪೌಡರ್ ಕೋಟೆಡ್, ತುಕ್ಕು ನಿರೋಧಕ ಟ್ಯಾಂಕ್ ಆಯ್ಕೆ ಮಾಡಿಕೊಳ್ಳಬೇಕು. ದರ ಸಮರಕ್ಕಾಗಿ ಬಳಸುವ ಸ್ಟೀಲ್ ದಪ್ಪ ವ್ಯತ್ಯಾಸವನ್ನು ಗ್ರಾಹಕರ ಗಮನಕ್ಕೆ ತರದಿರಬಹುದು. ಕೊಳ್ಳುವಾಗ ಟ್ಯಾಂಕ್ಗಳನ್ನು ಪರೀಕ್ಷಿಸಿಯೇ ಕೊಳ್ಳಬೇಕು.

  ಸಾಮರ್ಥ್ಯ: ನಾಲ್ಕು ಜನರಿರುವ ಕುಟುಂಬಕ್ಕೆ ಬರಿ ಸ್ನಾನದ ಅವಶ್ಯಕತೆಗೆ ಕನಿಷ್ಠ ೧೦೦ ಲೀಟರ್ ಸಾಮರ್ಥ್ಯ ಅಗತ್ಯ. ಅಡುಗೆ ಮನೆಗೆ ಪ್ರತ್ಯೇಕ ೫೦ ಲೀಟರ್ ಸಾಮರ್ಥ್ಯದ ಸೌರ ನೀರೊಲೆ ಅಡುಗೆಗೆ ಬಳಸುವ ಇಂಧನ ಉಳಿಸಲು ಸಹಕಾರಿ ಆಗಬಲ್ಲದು. ಹೆಚ್ಚುವರಿ ಟ್ಯಾಂಕ್ ಇದು ಮುಖ್ಯ ಟ್ಯಾಂಕ್ನಲ್ಲಿ ನೀರಿನ ಒತ್ತಡ ತಡೆಯುತ್ತದೆ. ತೆಳುವಾದ ಟ್ಯಾಂಕ್ ಇದ್ದಾಗ ಇದನ್ನು ಬಳಸುತ್ತಾರೆ. ಇದನ್ನು ಅಗತ್ಯತೆ ನೋಡಿ ಅಳವಡಿಸಿಕೊಳ್ಳಬೇಕು. ಆಯ್ಕೆ ಮಾಡುವಾಗ ಒಮ್ಮೆಲೆ ಸೂಕ್ತ ಸಾಮರ್ಥ್ಯದನ್ನು ಕೊಳ್ಳಬೇಕು. ಕಾರಣ ಪುನಃ ಸಾಮರ್ಥ್ಯ ಹೆಚ್ಚಿಸುವುದು ಸುಲಭವಲ್ಲ. ಎರಡು ಬಾತ್ರೂಂಗಳಿಗೆ ಅಳವಡಿಸುವಾಗ ೧೦೦ ಲೀಟರ್ ಸಾಮರ್ಥ್ಯ ಸಾಕಾಗುವಂತಿದ್ದರೆ ಒಂದೇ ಟ್ಯಾಂಕ್ ಬಳಸಿ ೨೦೦ ಲೀಟರ್ಗೆ ಅಗತ್ಯವಿದ್ದರೆ ೧೦೦ರ ಎರಡು ಸೋಲಾರ್ ಬಳಸಿ ಪ್ರತ್ಯೇಕ ಸಂಪರ್ಕ ಮಾಡುವುದು ಹೆಚ್ಚು ಪ್ರಯೋಜನಕಾರಿ.

  ಸ್ಟ್ಯಾಂಡ್ ಜಿಪಿ ಅಥವಾ ಎಂ. ಎಸ್ನಿಂದ ಮಾಡುತ್ತಾರೆ. ತುಕ್ಕು ನಿರೋಧಕ ಗುಣ ವಿರುವುದರಿಂದ ಜಿಪಿ ಉತ್ತಮ. ಕೊಳ್ಳುವಾಗ ಐಎಸ್ಪಿ/ಬಿಎಸ್ಐ ಇತರೆ ಪ್ರಮಾಣಿತ ಚಿಹ್ನೆಗಳನ್ನು ನೋಡಿ ಖಾತ್ರಿಪಡಿಸಿಕೊಳ್ಳಿ.

  21

  ನಿರ್ವಹಣೆ:

 • ನೀರು ಕಾಯುವ ಕೊಳವೆ ಅಥವಾ ಫಲಕದ ಮೇಲೆ ಧೂಳು, ಹಕ್ಕಿಗಳ ಗಲೀಜೂ ಇತ್ಯಾದಿ ಬಿದ್ದಿರುತ್ತದೆ. ಅದನ್ನು ಕಾಲಕಾಲಕ್ಕೆ ಸ್ವಚ್ಛ ಮಾಡಬೇಕು. ಸ್ವಚ್ಛ ಮಾಡುವಾಗ ಎಚ್ಚರಿಕೆ ಅಗತ್ಯ. ಕಾರಣ ಗಾಜಿನ ಕೊಳವೆ ಫಲಕಗಳಿಗೆ ಹಾನಿಯಾಗಬಾರದು.
 • ಸ್ಟ್ಯಾಂಡ್ ಮತ್ತು ಇತರೆ ಜಿಪಿ/ಎಂಎಸ್ ಭಾಗಗಳು ತುಕ್ಕು ಹಿಡಿಯದಂತೆ ಬಣ್ಣ ಹಚ್ಚಿ ನಿರ್ವಹಿಸಬೇಕು.
 • ಬಹುದಿನಗಳವರೆಗೆ ಉಪಯೋಗಿಸದೇ ಇದ್ದಾಗ ನೀರು ಹೆಚ್ಚು ಕಾದು ಆವಿಯಾಗುತ್ತದೆ. ಇದು ಹೊರ ಹೋಗಲು ತೆರೆದ ಕೊಳವೆ ಕೊಟ್ಟಿರುತ್ತಾರೆ. ಇದು ಸದಾ ತೆರೆದಿರಬೇಕು. ನೀರು ಆರುತ್ತದೆ. ಎಂದು ಕೆಲವರು ಮುಚ್ಚಿಬಿಡುತ್ತಾರೆ ಇದು ತಪ್ಪು.
 • ಬಿಸಿ ನೀರು ಖಾಲಿಯಾದಂತೆ ತಣ್ಣೀರು ಸೇರುವುದರಿಂದ ಒಬ್ಬರಾದ ನಂತರ ಒಬ್ಬರಂತೆ ಹೆಚ್ಚು ಅಂತರ ಕೊಡದಂತೆ ನೀರು ಬಿಟ್ಟುಕೊಂಡು ಬಳಸುವುದು ಒಳ್ಳೆಯ ನಿರ್ವಹಣಾ ಕ್ರಮ.
 • ಪ್ರತಿವರ್ಷ ಮಳೆಗಾಲದ ನಂತರ ಸಂಪೂರ್ಣ ಟ್ಯಾಂಕ್, ನೀರು ಕಾಯುವ ಕೊಳವೆಗಳನ್ನು ಸಂಪೂರ್ಣ ಸ್ವಚ್ಛ ಮಾಡಬೇಕು. ಹೀಗೆ ಮಾಡುವಾಗ ಬಿಸಿ ನೀರು ಬಳಸಿದ ನಂತರ ತೊಳೆಯಬೇಕು. ಇಲ್ಲದಿದ್ದರೆ ಬಿಸಿ ನೀರು ಹೊರ ಹರಿಸಿ ತಣ್ಣೀರು ತುಂಬಿದ ಮೇಲೆ ತೊಳೆಯಲು ಪ್ರಾರಂಭಿಸಬೇಕು.
 • ಮಳೆಗಾಲದಲ್ಲಿ ಒಂದೆರಡು ತಿಂಗಳ (ಪ್ರದೇಶವಾರು ಬದಲಾಗುತ್ತದೆ) ನೀರು ನಮಗೆ ಬೇಕಾದಷ್ಟು ಬಿಸಿ ಆಗದಿರಬಹುದು. ಅದಕ್ಕೆ ಪೂರಕ/ಪರ್ಯಾಯ ವ್ಯವಸ್ಥೆ ಬಳಸಬಹುದು. ಸೋಲಾರ್ ಟ್ಯಾಂಕ್ ಒಳಗೆ ವಿದ್ಯುತ್ ಕಾಯಿಲ್ ಅಳವಡಿಸಬಹುದು. ಇಂತಹ ಸಂದರ್ಭಗಳಲ್ಲಿ ಸುರಕ್ಷಿತ ಸಾಧನ ಅಳವಡಿಸಬೇಕು. ಅರಿತು ಅಳವಡಿಸಿದರೆ ಸೋಲಾರ್ ಸಮರ್ಪಕ ಕಾರ್ಯ ಮಾಡುತ್ತದೆ. ಇಲ್ಲದಿದ್ದರೆ ಇಲ್ಲದ ಕಿರಿಕಿರಿ. ಆದ್ದರಿಂದ ಉತ್ತಮ ಗ್ರಾಹಕರಾಗಿ ಕೊಳ್ಳಿ. ಆಗ ನಿಮ್ಮ ಹೂಡಿಕೆಗೆ ತಕ್ಕ ಪ್ರತಿಫಲ ದೊರೆಯುತ್ತದೆ. ನಮ್ಮ ಶಕ್ತಿ ಬಳಕೆ ಸೌರ್ಯ ಶಕ್ತಿಯಾದಾಗ ನಿರಂತರತೆ ಸುಸ್ಥಿರತೆಯತ್ತ ಸಾಗಲು ದಾರಿ ತನ್ನ ತಾನೆ ತೆರೆಯುತ್ತಾ ಹೋಗುತ್ತದೆ. ಈ ದಾರಿಯನ್ನು ನಮ್ಮದಾಗಿಸಿಕೊಳ್ಳೋಣ.
 •