ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೨

ಸಾವಯವ ಸರದಾರರು

ಅರುಣಕುಮಾರ್ ವಿ. ಕೆ.
9449623275
12

ಕೃಷಿಯಲ್ಲಿ ನಾನೆಂದೂ ಹತಾಶನಾಗಿಲ್ಲ. ಬೇರೆ ಜಂಜಾಟಗಳಲ್ಲಿ ಹತಾಶನಾಗಿದ್ದುಂಟು. ಭೂಮಿ ತಿರುಗ್ತಿದೆ, ಕತ್ತಲಿನ ನಂತರ ಬೆಳಕು ಬರುತ್ತೆ. ಹಾಗೆಯೇ ಸೋಲನ್ನನುಭವಿಸಿದವ ಪ್ರಯತ್ನಪಟ್ಟರೆ ಗೆಲುವನ್ನು ಉಂಡೇ ಉಣ್ಣುತ್ತಾರೆ. ಇದು ಪ್ರಾಕೃತಿಕ ನಿಯಮ. ಕೃಷಿಕನಿಗೆ ಒಮ್ಮೆ ಸೋಲು-ಒಮ್ಮೆ ಗೆಲುವು, ಇದು ಇದ್ದದ್ದೆ. ನನ್ನಲ್ಲಿರುವ ವೈವಿಧ್ಯತೆಗಳಿಂದಾಗಿ ನಾನು ಒಂದರಲ್ಲಿ ಸೋತರೂ ಮತ್ತೊಂದರಲ್ಲಿ ಗೆದ್ದಿರುತ್ತೇನೆ. ಭೂಮಿ ಕೊಡ್ತದೆ ಸ್ವಾಮಿ, ಯಾವಾಗ ಕೊಡಬೇಕೋ ಆಗ ಕೊಡ್ತದೆ. ಕೃಷಿಕ ಹತಾಶನಾಗಬಾರದು, ಕೃಷಿಕನಿಗೇ ತೃಪ್ತಿಯಿಲ್ಲ ಎಂದಾದರೆ ಅದು ಇನ್ನಾರಿಗೆ ಸಿಗ್ತದೆ? ಎಂದು ಪ್ರಶ್ನಿಸುವ ಮೂಲಕ ದೇವರಾಯರು ರೈತರಿಗೆ ಹೊಸ ಹುರುಪನ್ನು ತುಂಬುತ್ತಾರೆ. ಶ್ರೀ ಬಿ. ಕೆ. ದೇವರಾವ್ ಮೂಲತಃ ಸಾವಯವ ಕೃಷಿ ಮನೆತನದವರು. ಊರು ಬೆಳ್ತಂಗಡಿ ತಾಲ್ಲೂಕಿನ ಮಿತ್ತಬಾಗಿಲು. ತುಸು ಮುಂದುವರಿದರೆ ಪಶ್ಚಿಮ ಘಟ್ಟದ ಬುಡ ತಲುಪುವಂತಿರುವ ಸುಂದರ ತಾಣ. ಕುದುರೆ ಮುಖಕ್ಕೆ ಸಮೀಪವಿರುವ ನೇತ್ರಾವತಿ ನದಿಯಲ್ಲಿ ಸೇರುವ ಸಣ್ಣ ತೊರೆ ಆಸರೆಯಲ್ಲೇ ಇರುವ ಮಿತ್ತಬಾಗಿಲಿನ ತಪೋಭೂಮಿ ಇವರ ಕೃಷಿ ಭೂಮಿ. ದೇವರಾಯರು ನಾಲ್ಕುವರೆ ಎಕರೆಯಲ್ಲಿ ಭತ್ತ, ಎರಡೂವರೆ ಎಕರೆಯಲ್ಲಿ ಅಡಿಕೆ, ೨೫೦ ತೆಂಗು, ಗೇರು ಮತ್ತು ಉಪಬೆಳೆಯಾಗಿ ಕಾಳುಮೆಣಸಿನ ಕೃಷಿ ಮಾಡುತ್ತಿದ್ದಾರೆ. ತಮ್ಮ ಮನೆಯಂಗಳದಲ್ಲಿಯೇ ಮನೆಯ ಮಟ್ಟಿಗೆ ತರಕಾರಿ ಬೆಳೆದುಕೊಂಡು ಸ್ವಾವಲಂಬಿ ಯಶಸ್ವಿ ಕೃಷಿಕರಾಗಿ ಬದುಕನ್ನು ಕಟ್ಟಿಕೊಂಡಿದ್ದಾರೆ. ನಾಡ ತಳಿಗಳನ್ನು ಸಂರಕ್ಷಿಸಬೇಕೆಂಬ ಕಾಳಜಿಯಿಂದ ಹಸುಗಳನ್ನು ಸಾಕಿದ್ದು, ಕೊಟ್ಟಿಗೆ ನಿರ್ವಹಣೆಯನ್ನು ಪತ್ನಿ ಶಾರದಾ ಅವರೇ ನೋಡಿಕೊಳ್ಳುತ್ತಿದ್ದಾರೆ. ಇವರಿಗೆ ಪಶುಸಾಕಣೆ ಹೈನೋದ್ಯಮವಾಗಿಲ್ಲ. ಬದಲಿಗೆ ಅದು ಅವರ ಕೃಷಿಯ ಕೊಂಡಿಯಾಗಿದೆ. ಸಗಣಿಯಿಂದ ಜೈವಿಕ ಅನಿಲ, ಬಗ್ಗಡದಿಂದ ಕಾಂಪೋಸ್ಟ್ ಅನ್ನು ಪಡೆದು ಮರಳಿ ಮಣ್ಣಿಗೆ ಸೇರಿಸುತ್ತಾರೆ. ದೇವರಾಯರು ಭತ್ತದ ತಳಿಯನ್ನು ಸಂರಕ್ಷಿಸುವಲ್ಲಿ ವಿಶೇಷ ಕಾಳಜಿಯನ್ನು ವಹಿಸಿದ್ದಾರೆ. ಮಿತ್ತಬಾಗಿಲುನಲ್ಲಿಯೇ ೩೩ ಭತ್ತದ ತಳಿಗಳಿರುವುದನ್ನು ಗುರುತಿಸುವ ಇವರು ಈ ಭಾಗದ ಸುತ್ತಮುತ್ತಲಲ್ಲಿ ಕಾಣಲಾಗದಂತಹ ೨೨ ಭತ್ತದ ತಳಿಗಳನ್ನು ದೇವರಾಯರೇ ತಂದು ಬೆಳೆಸಿದ್ದಾರೆ. ಈ ಇಪ್ಪತ್ತೆರಡು ತಳಿಗಳಲ್ಲಿ ಹೆಚ್ಚಿನವು ಹಳೆಯ ತಲೆಮಾರಿನವು. ಅಪರೂಪದ ತಳಿ ಎಲ್ಲಾದರೂ ಇದೆ ಎಂದು ತಿಳಿದರೆ ಸಾಕು, ದೇವರಾಯರು ಆ ಬೆಳೆಗಾರನ ಮನೆಯೆದುರು ನಿಂತು ಕೈ ಒಡ್ಡುವವರೇ. ಇವರು ಬೇಡುವುದು ಕೇವಲ ಮುಷ್ಟಿ ಬೀಜ ಮಾತ್ರ. ಹೀಗೆ ಸಂಗ್ರಹಿಸಿದ ಬೀಜವನ್ನು ಸಂವರ್ಧಿಸಿ ಇತರರಿಗೂ ಹಂಚುತ್ತಾರೆ. ಕಳೆದ ೨೩ ವರ್ಷಗಳಿಂದ ಸಾವಯವ ಕೃಷಿ ಪದ್ದತಿಯನ್ನು ನಿರಂತರವಾಗಿ ಅಳವಡಿಸಿಕೊಂಡು ಬರುತ್ತಿದ್ದಾರೆ. ಅಲ್ಲದೆ ಸಾವಯವ ಪದ್ಧತಿಯಲ್ಲಿಯೇ ಅನೇಕ ಕೀಟ-ರೋಗ ನಿಯಂತ್ರಿಸುವ ಉಪಾಯವನ್ನು ಕಂಡುಕೊಂಡಿದ್ದಾರೆ. ಇವರಲ್ಲಿ ಭತ್ತದ ತಳಿಗಳಾದ ಗಂಧಸಾಲೆ, ರಾಜಕಯಮೆ, ಮಸ್ಸೂರಿ, ಕಯಮೆ, ಆಲ್ಮಂಡೆ, ಕಾವಳ ಕಣ್ಣು, ನಮೊರಡ್ಡೆ, ಕುಳಂಜಿ ಪಿಳ್ಳೆ, ಕಂಡ್ರೆ ಕುಟ್ಟಿ, ಕುಟ್ಟಿ ಕಯಮೆ, ಸುಗ್ಗಿ ಕಯಮೆ, ಕರಿಯ ಜೇಬ, ಅತಿಕಾಯ, ಅತಿಕರಯ, ಶಕ್ತಿ, ಕೆ.ಕೆ.ಪಿ., ಅಜಿಪ್ಪಸಾಲೆ, ಕಲ್ಚರ್, ತೊನ್ನೂರು, ಗುಲ್ವಾಡಿ ಸಣ್ಣಕ್ಕಿ, ಬಾಸುಮತಿ, ಐ.ಆರ್.-೮, ಜಯ ಇತ್ಯಾದಿ ತಳಿಗಳ ಸಂಗ್ರಹವಿದೆ. ಇಂತಹ ವೈಶಿಷ್ಟ್ಯಪೂರ್ಣವಾದ ಸಾವಯವ ಕೃಷಿಕ್ಷೇತ್ರಕ್ಕೆ ಒಮ್ಮೆ ಭೇಟಿ ಕೊಟ್ಟರೆ ತಿಳಿದೀತು.