ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೨

ನಾಟಿಪಶುವೈದ್ಯ

image_
9008598832
1

ಬಿಸಿಲಿನ ಬೇಗೆ ಬಹಳ ಹೆಚ್ಚಿದ್ದಾಗ ಅಥವಾ ಅತಿಯಾದ ಮಳೆಗೆ ಜಾನುವಾರುಗಳು ಸಿಲುಕಿದಾಗ ಅವುಗಳನ್ನು ಕಾಡುವ ವೈರಾಣು ರೋಗವೇ ಕುಂದು ರೋಗ ಅಥವಾ ಎಫೀಮರಲ್ ಫೀವರ್. ಕೆಲವು ಕಡೆ ಈ ರೋಗವನ್ನು ಕುಂಟು ಹಲಗೆ ರೋಗವೆಂದೂ ಕರೆಯುತ್ತಾರೆ. ಮಿಶ್ರತಳಿ ರಾಸುಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವು ಸುಲಭವಾಗಿ ಈ ರೋಗಕ್ಕೆ ತುತ್ತಾಗುತ್ತವೆ. ಹಾಗೆಂದು ನಮ್ಮ ದೇಸೀ ತಳಿಯ ರಾಸುಗಳಲ್ಲಿ ಈ ಸಮಸ್ಯೆ ಇಲ್ಲವೆಂದೇನಲ್ಲ. ಕುಂದು ರೋಗ ಹಲವು ವೇಳೆ ನಮ್ಮ ನಾಟಿ ಹಸು, ಎತ್ತು, ಹೋರಿಗಳನ್ನೂ ಕಾಡುತ್ತದೆ. ವಿಶೇಷವೆಂದರೆ ಇದು ವೈರಾಣು ರೋಗವಾದ್ದರಿಂದ ಇದಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದರೆ ರಾಸುಗಳ ರೋಗಪ್ರತಿಬಂಧಕ ವ್ಯವಸ್ಥೆ ಉತ್ತಮವಾಗಿದ್ದಲ್ಲಿ ೪-೫ ದಿನಗಳಲ್ಲಿ ತಾನೇ ತಾನಾಗಿ ರೋಗ ಹತೋಟಿಗೆ ಬರುತ್ತದೆ. ಹಾಗೆಂದೇ ಈ ರೋಗವನ್ನು ೩-ದಿನದ ಖಾಯಿಲೆ ಎಂದೂ ಕರೆಯುತ್ತಾರೆ. ವಾತಾವರಣದಲ್ಲಿ ಏಕಾಏಕಿ ಏರುಪೇರಾದಾಗ ರಾಸುಗಳು ಕೆಲವೊಮ್ಮೆ ವೈರಾಣುಗಳ ದಾಳಿಗೆ ತುತ್ತಾಗಿ ತೀವ್ರ ಜ್ವರದಿಂದ ಬಳಲುತ್ತವೆ. ಅತಿಯಾದ ಬಿಸಿಲು ಅಥವಾ ಬಿರುಮಳೆಗೆ ಸಿಲುಕಿದ ರಾಸುಗಳನ್ನು ಈ ರೋಗ ಬಾಧಿಸುವ ಸಾಧ್ಯತೆಗಳು ಹೆಚ್ಚು. ನಮ್ಮ ರೈತರು ಈ ರೋಗವನ್ನು ಸುಲಭವಾಗಿ ಪತ್ತೆ ಹಚ್ಚಬಲ್ಲರು. ಅಷ್ಟೇ ಅಲ್ಲದೆ ಕೆಲವು ಸಾಂಪ್ರದಾಯಿಕ ಮನೆಮದ್ದುಗಳನ್ನು ಪ್ರಯೋಗಿಸಿ ಕುಂದು ರೋಗವನ್ನು ಹತೋಟಿಗೆ ತರುವ ವಿದ್ಯೆಯೂ ನಮ್ಮಲ್ಲಿ ಬಹುತೇಕ ರೈತರಿಗೆ ಗೊತ್ತಿದೆ.

ಕೆಲವು ಜಾತಿಯ ನೊಣಗಳ ಕಡಿತದಿಂದಾಗಿ ಜಾನುವಾರುಗಳಿಗೆ ಹರಡುವ ಕುಂದು ರೋಗ ಮೊದಲೇ ತಿಳಿಸಿದಂತೆ ಹವಾಮಾನ ವೈಪರೀತ್ಯದ ಸಂದರ್ಭಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ರೋಗ ತಗುಲಿದ ರಾಸುಗಳು ಆರಂಭದಲ್ಲಿ ತೀವ್ರ ಜ್ವರದಿಂದ ಬಳಲುತ್ತವೆ. ಮೂಗು ಒಣಗುತ್ತದೆ, ರೋಮಗಳು ನಿಮಿರಿ ನಿಲ್ಲುತ್ತವೆ, ಮೇವು ತಿನ್ನುವುದನ್ನು ಬಹುತೇಕ ನಿಲ್ಲಿಸಿ ಗಟ್ಟಿಯಾದ ಸಗಣಿಯನ್ನು ತಿಣುಕುತ್ತಾ ಹಾಕುತ್ತವೆ. ಬಹುಮುಖ್ಯವಾಗಿ ಈ ಲಕ್ಷಣಗಳ ಜೊತೆಗೆ ಹಿಂದಿನ ಅಥವಾ ಮುಂದಿನ ಕಾಲುಗಳಲ್ಲಿ ಕುಂಟು ಉಂಟಾಗುತ್ತದೆ. ೩-೪ ದಿನಗಳಲ್ಲಿ ನಿಧಾನವಾಗಿ ಈ ರೋಗಲಕ್ಷಣಗಳು ಕಡಿಮೆಯಾಗಿ ಜಾನುವಾರುಗಳು ಯಥಾಸ್ಥಿತಿಗೆ ಮರಳುತ್ತವಾದರೂ ರೋಗಪೀಡಿತ ರಾಸುಗಳನ್ನು ಸರಿಯಾಗಿ ನಿರ್ವಹಣೆ ಮಾಡಲೇಬೇಕು. ಸಾಧ್ಯವಾದಷ್ಟೂ ವಿಪರೀತ ಮಳೆ, ಧೂಳು ಮತ್ತು ಬಿಸಿಲಿನಿಂದ ಜಾನುವಾರುಗಳನ್ನು ರಕ್ಷಿಸುವುದರ ಜೊತೆಗೆ ಶುದ್ಧವಾದ ನೀರು ಮತ್ತು ಆಹಾರ ನೀಡುವುದರ ಮೂಲಕ ಈ ರೋಗವನ್ನು ತಡೆಗಟ್ಟಬಹುದು. ಹಲವು ಕಡೆ ಕುಂದು ರೋಗದಿಂದ ನರಳುವ ರಾಸುಗಳ ಕಿವಿ ಕತ್ತರಿಸುವ ಸಂಪ್ರದಾಯವೊಂದು ಚಾಲ್ತಿಯಲ್ಲಿದೆ. ಇದು ಸರ್ವಥಾ ಸರಿಯಲ್ಲ. ಇದರಿಂದ ರಾಸಿಗೆ ಅನಗತ್ಯ ನೋವು-ಕಿವಿಯ ಗಾಯ ವ್ರಣವಾಗುವ ಸಂಭವವೂ ಹೆಚ್ಚು. ಈ ಕೆಳಕಂಡ ಮನೆಮದ್ದುಗಳನ್ನು ಅಗತ್ಯವಾಗಿ ಪ್ರಯೋಗಿಸಬಹುದು.

4

ಕುಂದು ರೋಗ ನಿರ್ವಹಣೆಗೆ ಪ್ರಯೋಗಿಸಬಹುದಾದ ಮನೆಮದ್ದುಗಳು

  • ಲೋಳೆಸರದ ಶುಭ್ರವಾದ ಒಂದು ಪಟ್ಟೆ, ತಲಾ ಒಂದು ಬೊಗಸೆ ಕರಿಬೇವು ಹಾಗೂ ಕಹಿಬೇವಿನ ಸೊಪ್ಪು, ಎರಡು ಅಡಿಕೆ ಮತ್ತು ಒಂದು ನಿಂಬೆ ಗಾತ್ರದ ಬೆಲ್ಲವನ್ನು ಕಲ್ಲಿನ ಮೇಲೆ ಚೆನ್ನಾಗಿ ಅರೆದು ಔಷಧಿ ತಯಾರಿಸಬೇಕು. ಈ ಔಷಧಿಯನ್ನು ಮೂರು ಭಾಗ ಮಾಡಿ ಳಿಗ್ಗೆ, ಮಧ್ಯಾಹ್ನ ಹಾಗೂ ಸಾಯಂಕಾಲ-ಹೇಗೆ ಮೂರು ಬಾರಿ ತಿನ್ನಿಸಬೇಕು. ದಿನಕ್ಕೆ ಮೂರು ಬಾರಿಯಂತೆ ಮೂರು ದಿನಗಳ ಕಾಲ ಈ ಔಷಧಿ ಪ್ರಯೋಗಿಸುವುದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು
  • ಒಂದು ಹಿಡಿ ಲಕ್ಕಿ ಸೊಪ್ಪು, ಒಂದು ಗಡ್ಡೆ ಬೆಳ್ಳುಳ್ಳಿ, ೩೦ ಗ್ರಾಂ ಕಾಳುಮೆಣಸು ಮತ್ತು ಒಂದು ನಿಂಬೆ ಗಾತ್ರದ ಬೆಲ್ಲವನ್ನು ಒಂದು ಲೀಟರ್ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಕಷಾಯ ತಯಾರಿಸಬೇಕು. ಈ ಕಷಾಯವನ್ನು ದಿನಕ್ಕೆರಡು ಬಾರಿಯಂತೆ ಮೂರು ದಿನಗಳ ಕಾಲ ರೋಗಪೀಡಿತ ರಾಸುಗಳಿಗೆ ಕುಡಿಸಬೇಕು.
  • ಎರಡು ಹಿಡಿ ತುಪ್ರದ ಎಲೆ, ಒಂದು ಗಡ್ಡೆ ಈರುಳ್ಳಿ ಮತ್ತು ಒಂದು ಗಡ್ಡೆ ಬೆಳ್ಳುಳ್ಳಿ: ಇಷ್ಟನ್ನೂ ಚೆನ್ನಾಗಿ ಕುಟ್ಟಿ ೧ ಲೀಟರ್ ನೀರಿನಲ್ಲಿ ಕದಡಿಕೊಂಡು ದಿನಕ್ಕೆರಡು ಬಾರಿಯಂತೆ ಕುಡಿಸಬೇಕು.
  •