ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೨

ಬಾಲವನ

ನಮ್ಮನ್ನೆಲ್ಲಾ ಬೆರಗುಗೊಳಿಸುವ ಬರಗು

image_
ಶಶಿಕಲಾ ಎಸ್.ಜಿ
9945082141
1

ಮಕ್ಕಳೇ, ನೀವು ಈವರೆಗೆ ನವಣೆ, ಸಾಮೆ, ಸಜ್ಜೆ, ಹಾರಕ, ಕೂರಲೆ ಸಿರಿಧಾನ್ಯಗಳ ಬಗ್ಗೆ ತಿಳಿದುಕೊಂಡಿದ್ದೀರಾ, “ಬರಗು”- ಎಂಬ ಸಿರಿಧಾನ್ಯದ ಹೆಸರನ್ನು ಎಲ್ಲಿಯಾದರು ಕೇಳಿದ್ದೀರಾ?, ಬಹುಶಃ ನಿಮ್ಮ ಉತ್ತರ ಇಲ್ಲಾ ಎಂಬುದಾಗಿರುತ್ತದೆ. ಬರಗು ಎಂಬುದು ಸಹ ಒಂದು ಪ್ರಮುಖ ಸಿರಿಧಾನ್ಯ.

ಸಿರಿಧಾನ್ಯಗಳಲ್ಲಿ ಒಂದಾದ ಬರಗದ ವೈಜ್ಞಾನಿಕ ಹೆಸರು ‘ಪ್ಯಾನಿಕಮ್ ಮಿಲೇಸಿಯಮ್’ ಇಂಗ್ಲಿಷ್ನಲ್ಲಿ ‘ಪ್ರೊಸೊ ಮಿಲೆಟ್’ ಎಂದು ಕರೆಯಲಾಗುತ್ತದೆ. ತೆಳುಹಳದಿ ಬಣ್ಣದ ಬರಗುವಿನ ಕಾಳುಗಳು ಕಣ್ಣಿಗೆ ಫಳಫಳ ಹೊಳೆಯುತ್ತವೆ. ಮೇಲ್ನೋಟಕ್ಕೆ ಸಾಮೆಯನ್ನು (ಸಾವೆ) ಹೋಲುವ ಈ ಧಾನ್ಯ, ತುಸು ಎತ್ತರವಾಗಿ ಬೆಳೆಯುತ್ತದೆ. ಕಾಳುಗಳು ಸಾಸಿವೆ ಗಾತ್ರ ಇರುತ್ತವೆ. ಮಳೆಯಾಶ್ರಿತ ಹಾಗೂ ನೀರಾವರಿ ಈ ಎರಡೂ ವಿಧಾನದಲ್ಲಿ ಬೆಳೆಯಬಹುದಾದ ಬರಗು, ಎಂಥದೇ ನೆಲಕ್ಕೂ ಸೈ. ಕಲ್ಲು, ಮಸಾರಿ ಜಮೀನಿನಲ್ಲಿ ಹೆಚ್ಚು ಖರ್ಚಿಲ್ಲದೇ ಸುಲಭವಾಗಿ ಬೆಳೆಯುವ ಸಿರಿಧಾನ್ಯವಿದು. ಅನೇಕ ಪ್ರಕಾರದ ಹವಾಮಾನ ಹಾಗೂ ಮಣ್ಣಿನಲ್ಲಿ ಬೆಳೆಯಬಹುದಾದ ಬೆಳೆ. ಇದು ಅತಿಕಡಿಮೆ ಅವಧಿಯಲ್ಲಿ ಅಂದರೆ ನೆಟ್ಟು ಸುಮಾರು ೬೦-೭೫ ದಿನಗಳಲ್ಲಿ ಕಟಾವಿಗೆ ಬರುತ್ತದೆ. ಇದನ್ನು ಹಿಂಗಾರಿನ ಬೆಳೆಯಾಗಿ ಬೆಳೆಯುವುದು ಹೆಚ್ಚು. ೩-೪ ಅಡಿ ಎತ್ತರಕ್ಕೆ ಬೆಳೆಯುತ್ತದೆ. ಅಕಾಲಿಕ ಮಳೆ ಸುರಿದರೂ ಪೈರು ನೆಲ ಕಚ್ಚದೇ ದೃಢವಾಗಿ ನಿಲ್ಲುವ ಶಕ್ತಿ ಪಡೆದಿದೆ. ಮಲೆನಾಡಿನಲ್ಲಿ ಭತ್ತದ ಕೊಯ್ಲು ಆದ ಬಳಿಕ ಗದ್ದೆಯಲ್ಲಿ ಬೇಸಿಗೆ ಬೆಳೆಯಾಗಿ ಬೆಳೆಯಬಹುದಾದ ಸಿರಿಧಾನ್ಯವಿದು. ಇದರ ತುದಿಯಲ್ಲಿರುವ ಗೊಂಚಲುಗಳು ಮುಂದಕ್ಕೆ ಬಾಗಿರುವುದರಿಂದ ಇದಕ್ಕೆ ಃಡಿoom ಅoಡಿಟಿ (ಪೊರಕೆ ಜೋಳ) ಎಂದು ಕರೆಯಲಾಗುತ್ತದೆ. ಇದರ ಬೀಜಗಳು ಕಾಲು ಇಂಚು ದಪ್ಪವಾಗಿದ್ದು ಸುತ್ತಲೂ ಮೃದುವಾದ ಹೊಳೆಯುವ ಸಿಪ್ಪೆ ಹೊಂದಿವೆ

ಚೀನಾ ಹಾಗೂ ಪಶ್ಚಿಮ ಯೂರೋಪಿನ ಕೆಲ ಪ್ರದೇಶಗಳಲ್ಲಿ ಈಗಲೂ ಬರಗು ಬೆಳೆಯಲಾಗುತ್ತದೆ. ಭಾರತದಲ್ಲಿ ಈ ಬೆಳೆಯನ್ನು ಬಿಹಾರ, ಆಂಧ್ರಪ್ರದೇಶ, ಉತ್ತರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ಕಾಣಬಹುದು. ತಮಿಳಿನಲ್ಲಿ ಇದಕ್ಕೆ ‘ಪನಿವೆರಗು’ ಎಂಬ ಹೆಸರಿದೆ. ಅಂದರೆ ಇಬ್ಬನಿಯನ್ನೇ ಆಧರಿಸಿ ಬೆಳೆಯುವಂಥದು. ಕಡಿಮೆ ನೀರಿದ್ದರೂ ಬೆಳೆಯುವ ಬೆಳೆ ಎಂದರ್ಥ. ಬರಗು (ತೆಲುಗಿನಲ್ಲಿ ‘ವರಿಗಲು’) ಆಂಧ್ರದ ಕರಾವಳಿ ತೀರದ ರೈತರ ಪ್ರಮುಖ ಬೆಳೆಗಳಲ್ಲೊಂದಾಗಿತ್ತು. ಸಂಕ್ರಾಂತಿ ಹಬ್ಬದ ದಿನ ವಿಶೇಷ ತಿನಿಸುಗಳನ್ನು ಬರಗುವಿನಿಂದಲೇ ಮಾಡುವ ಸಂಪ್ರದಾಯ ಈಗಲೂ ಅಲ್ಲಿದೆ.

ಹೆಚ್ಚು ಪ್ರಮಾಣದ ಪ್ರೋಟೀನ್ ಇರುವ ಆಹಾರಧಾನ್ಯ. ನಾರು, ಕಬ್ಬಿಣ ಮತ್ತು ಕ್ಯಾಲ್ಸಿಯಂ ಸಹ ಹೆಚ್ಚಿನ ಮಟ್ಟದಲ್ಲಿ ಹೊಂದಿರುವ ಬರಗುವಿನ ಅನ್ನ ಅತ್ಯಂತ ರುಚಿಕರವಾಗಿದ್ದು ಸುವಾಸನೆಯಿಂದ ಕೂಡಿರುವುದು ಇದರ ವಿಶೇಷತೆ. ಅಕ್ಕಿಯನ್ನು ಬಳಸುವಂತೆ ಬರಗು ಧಾನ್ಯವನ್ನು ಬಳಸಿ ಅನ್ನ, ದೋಸೆ, ಪೊಂಗಲ್, ಇಡ್ಲಿ ಮುಂತಾದ ರುಚಿಕರ ಅಡುಗೆಗಳನ್ನು ಮಾಡಬಹುದು. ಪ್ರತಿ ದಿನ ಬರಗು ತಿನ್ನುವುದರಿಂದ ಚರ್ಮದ ಕಾಂತಿ ಹೆಚ್ಚಾಗಿ, ಚರ್ಮ ಸುಕ್ಕಾಗುವುದನ್ನು ತಡೆಯಬಹುದು, ನರ ಮಂಡಲಗಳನ್ನು ಬಲಗೊಳಿಸಿ, ನರ ದೌರ್ಬಲ್ಯವನ್ನು ತಪ್ಪಿಸುವ ಶಕ್ತಿ ಈ ಧಾನ್ಯಕ್ಕಿದೆ, ಮೂಳೆಗಳನ್ನು ಗಟ್ಟಿ ಮಾಡುವುದಲ್ಲದೆ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ರೋಗಗಳನ್ನು ತಡೆಗಟ್ಟುತ್ತದೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ ಸಕ್ಕರೆ ಖಾಯಿಲೆ ಬರದಂತೆ ಬರಗು ತಡೆಗಟ್ಟುತ್ತದೆ, ಬರಗು ಎಂಬ ಸಣ್ಣ ಧಾನ್ಯ ನಾವು ನೀವೆಲ್ಲಾ ಬೆರಗಾಗುವಷ್ಟು ಔಷಧೀಯ ಗುಣಗಳನ್ನು ಹೊಂದಿದೆ, ಮತ್ಯಾಕೆ ತಡ ಬರಗನ್ನು ನಿಮ್ಮ ಆಹಾರದಲ್ಲಿ ಸೀರಿಸಿ, ಸೇವಿಸಿ ಆರೋಗ್ಯವಂತರಾಗಿ ಬೆಳೆಯಿರಿ