ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೨

ಬೀಜ ಪ್ರಪಂಚ

ಬೀಜ ಪ್ರಪಂಚ: ಬೆಳ್ಳುಳ್ಳಿ

image_
ಡಾ. ಕೆ. ಎಸ್. ಶೇಷಗಿರಿ
9741769213
1

ಸುಮಾರು ೭೦೦೦ ವರ್ಷಗಳ ಇತಿಹಾಸವಿರುವ ಬೆಳ್ಳುಳ್ಳಿಯನ್ನು ಬಳಸದೇ ಭಾರತೀಯರು ಆಹಾರ ತಯಾರಿಸುವುದು ಕಡಿಮೆ ಎಂದರೆ ಅತಿಶಯೋಕ್ತಿಯಾಗಲಾರದು. ಮಧ್ಯ ಏಷ್ಯಾದಲ್ಲಿ ಉಗಮವಾದ ಈ ಬೆಳೆ ರಾಜ್ಯದ ಪ್ರಮುಖ ಗೆಡ್ಡೆ ಮಸಾಲೆ ಬೆಳೆಗಳಲ್ಲಿ ಒಂದಾಗಿದೆ. ವೈಜ್ಞಾನಿಕವಾಗಿ ’ಅಲಿಯಮ್ ಸೆಟೈವಮ್’ ಎಂದು ಕರೆಯಲಾಗುವ ಈ ಬೆಳೆಯು ’ಅಮರಿಲ್ಲಿಡೇಸಿ’ ಕುಟುಂಬಕ್ಕೆ ಸೇರಿದೆ. ಇದನ್ನು ಪ್ರಾಚೀನ ಕಾಲದಲ್ಲಿ ಆಹಾರಕ್ಕೆ ಸುಗಂಧ ನೀಡಲು ಮತ್ತು ಪಾರಂಪರಿಕ ಔಷಧಗಳಲ್ಲಿ ಬಳಸುತ್ತಿದ್ದರು. ಇದರ ಹಲವಾರು ಔಷಧೀಯ ಗುಣಗಳಿಗೆ ಇದರಲ್ಲಿರುವ ’ಅಲ್ಲಿಸಿನ್’ಎಂಬ ಗಂಧಕ ಸಂಯುಕ್ತ ವಸ್ತು ಕಾರಣ. ಇದು ಸುಮಾರು ೬೦ಸೆಂ.ಮೀ. ಎತ್ತರಕ್ಕೆ ಬೆಳೆಯುವ, ಉದ್ದವಾದ, ಚಪ್ಪಟೆಯಾದ ಎಲೆಗಳನ್ನು ಹೊಂದಿದ್ದು, ಎಲೆಗಳು ಗಟ್ಟಿಯಾದ ಗೆಡ್ಡೆಗಳ ಮೇಲೆ ಮೂಡುತ್ತವೆ. ಬಿತ್ತನೆಯಾದ ೪-೫ ತಿಂಗಳಲ್ಲಿ ಬೆಳೆಕೊಯ್ಲಿಗೆ ಬರುತ್ತದೆ. ಹಲವಾರು ಔಷಧೀಯ ಗುಣ ಹೊಂದಿರುವ ಬೆಳ್ಳುಳ್ಳಿ ಅಧಿಕಪ್ರಮಾಣದಲ್ಲಿ ಪೊಟಾಸಿಯಮ್ (೪೦೧ ಮಿ.ಗ್ರಾಂ/೧೦೦ ಗ್ರಾಂ.ತಿರುಳು), ಜೀವಸತ್ವ ಬಿ-೬ (ಶೇ.೬೦), ಮತ್ತು ಜೀವಸತ್ವ-ಸಿ(ಶೇ.೫೨) ಹೊಂದಿದೆ. ನಿತ್ಯದ ಆಹಾರದಲ್ಲಿ ಬೆಳ್ಳುಳ್ಳಿ ಸೇವನೆಯಿಂದ ಹಲವು ಆರೋಗ್ಯ ಲಾಭಗಳಿದ್ದು, ಪ್ರಮುಖವಾಗಿ ಶೀತಬಾಧೆ ನಿವಾರಣೆ, ಅಧಿಕ ರಕ್ತದೊತ್ತಡ ನಿಯಂತ್ರಣ, ಕೊಲೆಸ್ಟಿರಾಲ್ ನಿಯಂತ್ರಣ, ಮುಪ್ಪಾಗುವಿಕೆ ಮುಂದೂಡುವಿಕೆ, ಮೂಳೆಗಳ ಆರೋಗ್ಯ ಮತ್ತು ರಕ್ತದಲ್ಲಿ ವಿಷವಸ್ತುಗಳು ಕಡಿಮೆಯಾಗುತ್ತವೆ

ಬೆಳ್ಳುಳ್ಳಿಯಲ್ಲಿ ಬೀಜಗಳ ಉತ್ಪಾದನೆ ಆಗುತ್ತದೆಯಾದರೂ ಸಾಮಾನ್ಯವಾಗಿ ಗೆಡ್ಡೆಗಳಲ್ಲಿರುವ ಇಲುಕುಗಳನ್ನು ನಾಟಿಮಾಡಿ ಕೃಷಿಮಾಡಲಾಗುತ್ತದೆ. ನಾಟಿಗಾಗಿ ಆರೋಗ್ಯವಂತ, ಬಲಿತ, ಮದ್ಯಮದಿಂದ ದೊಡ್ಡಗಾತ್ರದ ಗೆಡ್ಡೆಗಳನ್ನು ಆರಿಸಿಕೊಳ್ಳಬೇಕು. ಗೆಡ್ಡೆಗಳಿಂದ ದಪ್ಪವಾದ ಇಲುಕುಗಳನ್ನು ಬೇರ್ಪಡಿಸಬೇಕು. ಗೆಡ್ಡೆಯ ಹೊರಸುತ್ತಿನಲ್ಲಿರುವ ಇಲುಕುಗಳು ನಾಟಿಗೆ ಅತಿಸೂಕ್ತ. ನಾಟಿಗೆ ಇಲುಕುಗಳು ಕಡಿಮೆಯಾದರೆ ಒಳಸುತ್ತಿನ ಇಲುಕುಗಳನ್ನು ಪ್ರತ್ಯೇಕವಾಗಿ ನಾಟಿಮಾಡಬಹುದು. ನಾಟಿಗೆ ಮೊದಲು ಬೀಜದ ಇಲುಕುಗಳನ್ನು ಶಿಲೀಂಧ್ರ ನಾಶಕ ಮತ್ತು ಕೀಟನಾಶಕ ಮಿಶ್ರಿತ ದ್ರಾವಣದಲ್ಲಿ ಎರಡು ಗಂಟೆಗಳ ಕಾಲ ನೆನಸಿ, ನೆರಳಲ್ಲಿ ಒಣಗಿಸಿ ನಾಟಿ ಮಾಡಿದರೆ ರೋಗ-ಕೀಟ ಬಾಧೆ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ೧೫ ಸೆಂ.ಮೀ. x ೧೫ ಸೆಂ.ಮೀ. ಅಥವಾ ೨೦ ಸೆಂ.ಮೀ. x ೧೦ ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬಹುದು. ಒಂದು ಎಕರೆ ಪ್ರದೇಶಕ್ಕೆ ೧೫೦ ರಿಂದ ೨೦೦ಕಿ.ಗ್ರಾಂ ಬಿತ್ತನೆ ಇಲುಕುಗಳು ಬೇಕಾಗುತ್ತವೆ. ಜೂನ್-ಜುಲೈ ಮತ್ತು ಅಕ್ಟೋಬರ್-ನವೆಂಬರ್ ತಿಂಗಳು ನಾಟಿ ಮಾಡಲು ಸೂಕ್ತ ಕಾಲ