ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೨

ಆ್ಯಪ್ ಲೋಕ

image_
ಪ್ರದೀಪ್ ಕುಮಾರ್
9538125130

ವೇ2ಎಬಿಐ ಕಿರುತಂತ್ರಾಂಶವನ್ನು ವೇ 2 ಅಗ್ರಿಬಿಸ್ನೆಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂಬುವ ಖಾಸಗಿ ಸಂಸ್ಥೆಯು ಅಭಿವೃದ್ಧಿಪಡಿಸಿದ್ದು ಈ ಸಂಸ್ಥೆಯು ಮಾರ್ಚ್ 2014ರಲ್ಲಿ ಸಂಘಟಿತಗೊಂಡಿತು. ಇದು ಸಂಶೋಧನೆ ಆಧಾರಿತ ಅಗ್ರಿಬಿಸ್ನೆಸ್ ಸಲಹಾ ಸೇವೆಯಾಗಿದ್ದು ಯೋಜನೆಯನ್ನು ಸುಲಭಗೊಳಿಸುವ ಸೇವೆ ಅಲ್ಲದೆ ಇನ್ನೂ ಮುಂತಾದ ಸೇವೆಯನ್ನು ರೈತರು, ವ್ಯಾಪಾರಿಗಳು, ಉದ್ಯಮಿಗಳು ಮತ್ತು ಹೂಡಿಕೆದಾರರಿಗೆ ನೀಡುತ್ತದೆ. ವೇ೨ಎಬಿಐ ಕಿರುತಂತ್ರಾಂಶವನ್ನು ಆಂಡ್ರಾಯ್ಡ್ ಸ್ಮಾರ್ಟ್ಫೋನ್ವುಳ್ಳವರು ಗೂಗಲ್ ಪ್ಲೇಸ್ಟೋರ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ವೇ೨ಎಬಿಐ ಕಿರುತಂತ್ರಾಂಶದ ೧.೫ ಆವೃತ್ತಿಯು ಗೂಗಲ್ ಪ್ಲೇಸ್ಟೋರ್ನಲ್ಲಿ ಲಭ್ಯವಿದ್ದು ಆಂಡ್ರಾಯ್ಡ್ ೩.೦ ಮತ್ತು ಅದಕ್ಕಿಂತ ಹೆಚ್ಚು ಆವೃತ್ತಿಯ ಸ್ಮಾರ್ಟ್ಫೋನ್ವುಳ್ಳವರು ಡೌನ್ಲೋಡ್ ಮಾಡಿ ಉಪಯೋಗಿಸಬಹುದು. ಈ ಆಪ್ ಡೌನ್ಲೋಡ್ ಯಶಸ್ವಿಯಾದ ನಂತರ ಮೊಬೈಲ್ ಪರದೆಯ ಮೇಲೆ ವೇ೨ಎಬಿಐ ಆಪ್ನ ಶಾರ್ಟ್ಕಟ್ ಗುಂಡಿಯು ಗೋಚರವಾಗುತ್ತದೆ. ಬಳಕೆದಾರರು ಆಫ್ಅನ್ನು ಉಪಯೋಗಿಸಲು ಆಪ್ನ ಶಾರ್ಟ್ಕಟ್ ಗುಂಡಿಯನ್ನು ಒತ್ತಿ ಹೆಸರು, ದೂರವಾಣಿ ಸಂಖ್ಯೆ, ಮಿಂಚಂಚೆ ಮತ್ತು ಭಾಷೆಯ ವಿವರಗಳನ್ನು ನೀಡಿ ನೋಂದಣಿ (ಸೈನ್ ಅಪ್) ಮಾಡಿಕೊಳ್ಳಬೇಕು. ಆಪ್ಅನ್ನು ಉಪಯೋಗಿಸಲು ತಕ್ಕಮಟ್ಟಿನ ಇಂಟರ್ನೆಟ್ ಸೌಲಭ್ಯ ಹಾಕಿಸಿ ಇಟ್ಟುಕೊಂಡಿರಬೇಕು.

ಆಪ್ನ ಪರದೆಯಲ್ಲಿ ಕಂಡುಬರುವ ಬೆಳೆಗಳ ಚಿತ್ರದ ಮೇಲೆ ಬಳಕೆದಾರರು ಕ್ಲಿಕ್ ಮಾಡಿ, ಕ್ಲಿಕ್ ಮಾಡಿದ ಬೆಳೆಯ ಪ್ರಸ್ತುತ ಮಾರುಕಟ್ಟೆ ಬೆಲೆ, ಬೆಳೆಯ ಬೆಲೆಯ ಮೇಲ್ನೋಟ, ಮಾರುಕಟ್ಟೆಯ ಸಾರಾಂಶ, ಮಾರುಕಟ್ಟೆಯ ವಿಮರ್ಶೆಯ ಮಾಹಿತಿಯನ್ನು ತಿಳಿಯಬಹುದು. ಆಪ್ವು ಸದ್ಯಕ್ಕೆ ಟೊಮ್ಯಾಟೊ, ಈರುಳ್ಳಿ, ತೊಗರಿ, ಮುಸುಕಿನ ಜೊಳ, ಕಾಫಿ, ಮೆಣಸು, ಅಡಿಕೆ ಮತ್ತು ತೆಂಗು ಬೆಳೆಯ ಮಾಹಿತಿಯನ್ನು ನೀಡಲು ಶಕ್ಯವಾಗಿದೆ. ಬಳಕೆದಾರರು ಬೆಳೆಯ ಬೆಲೆಯ ಮೇಲ್ನೋಟವನ್ನು (ಪ್ರೈಸ್ ಔಟ್ಲುಕ್) ಕ್ಲಿಕ್ ಮಾಡಿ, ಬೆಳೆಯ ಗುಣಮಟ್ಟಕ್ಕೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ನಿಗದಿಯಾದ ಬೆಲೆ ಮತ್ತು ರೈತರು ಹೆಚ್ಚು ಆದಾಯ ಗಳಿಸಲು ಅನುಸರಿಸಬೇಕಾದ ತಾಂತ್ರಿಕ ಮಾಹಿತಿಯನ್ನು ಪಡೆಯಬಹುದು. ಬಳಕೆದಾರರು ಮಾರುಕಟ್ಟೆ ಸಾರಾಂಶ (ಮಾರ್ಕೆಟ್ ಸಮ್ಮರಿ) ಕ್ಲಿಕ್ ಮಾಡಿ ಆಯ್ಕೆ ಮಾಡಿದ ಬೆಳೆಯ ಮಾರುಕಟ್ಟೆಯ ಸಂಕ್ಷಿಪ್ತ ವಿವರವನ್ನು ಪಡೆಯಬಹುದು. ಅಲ್ಲದೆ ಬುಲ್ ಅಂಡ್ ಬೀರ್ ಗುಂಡಿಯನ್ನು ಒತ್ತಿ ಆಯ್ಕೆ ಮಾಡಿದ ಬೆಳೆಯ ಬುಲ್ ಅಂಡ್ ಬೀರ್ ಅಂಶಗಳ ಮಾಹಿತಿಯನ್ನು ಪಡೆಯಬಹುದು. ಇದೇ ರೀತಿ ಚಾರ್ಟ್ ಅಂಡ್ ಫಿಗರ್ ಗುಂಡಿಯನ್ನು ಒತ್ತಿ ಆಯ್ಕೆ ಮಾಡಿದ ಬೆಳೆಯ ಅಂಕಿ ಅಂಶಗಳ ರೇಖಾಚಿತ್ರವನ್ನು ನೋಡಬಹುದು. ಮಾರುಕಟ್ಟೆ ವಿಮರ್ಶೆ(ಮಾರ್ಕೆಟ್ ರಿವ್ಯೂ) ಗುಂಡಿಯನ್ನು ಒತ್ತಿ ಆಯ್ಕೆ ಮಾಡಿದ ಬೆಳೆಯ ಮಾರುಕಟ್ಟೆ ಪುನರಾವಲೋಕನ ಮಾಡಬಹುದು. ಬಳಕೆದಾರರು ನ್ಯೂಸ್ ಅಂಡ್ ಇವೆಂಟ್ಸ್ ಗುಂಡಿಯನ್ನು ಒತ್ತಿ ಆಯ್ಕೆ ಮಾಡಿದ ಬೆಳೆಗೆ ಸಂಬಂಧಿಸಿದ ಇತ್ತೀಚಿನ ಸುದ್ದಿ ಸಮಾಚಾರವನ್ನು ತಿಳಿಯಬಹುದು.