ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೨

ವಿಭಿನ್ನ ಚಿಂತನೆ

ಹೊಸ ಆಯಾಮಕ್ಕೆ ನಾಂದಿ

image_
ಬಿ. ಎಮ್. ಚಿತ್ತಾಪೂರ,
9448821755

ಭತ್ತದಲ್ಲಿ ಶ್ರೀ (ಸಿಸ್ಟಮ್ ಆಫ್ ರೈಸ್ ಇಂಟೆನ್ಸಿಫಿಕೇಶನ್/ಮಡಗಾಸ್ಕರ ಪದ್ಧತಿ) ಪದ್ಧತಿಯನ್ನು ಮೂಲದಲ್ಲಿ ರಾಸಾಯನಿಕ ಗೊಬ್ಬರದ ಉಳಿತಾಯಕ್ಕೆಂದು ಶಿಕ್ಷಕನೊಬ್ಬ ಮಡಾಗಾಸ್ಕರ್ನಲ್ಲಿ ಹುಟ್ಟುಹಾಕಿದ. ಇದಕ್ಕಾಗಿ ೨೫ ಅಡಿ ಉದ್ದ ೪ ಅಡಿ ಅಗಲದ ನಾಲ್ಕು ಮಡಿಗಳು ಬೇಕು. ಮಡಿಗಳಲ್ಲಿ ಪದರುಗಳಲ್ಲಿ ೧ ಗೊಬ್ಬರ-೧ ೧/೨ ಮಣ್ಣು -೨ ೧/೨ ಗೊಬ್ಬರ-೨ ೧/೨ ಮಣ್ಣು ತುಂಬಬೇಕು. ಮಡಿಗಳ ಸುತ್ತಲು ನೀರು ನಿಲ್ಲುವಂತೆ ಹರಿ ಮಾಡಬೇಕು. ಎಕರೆಗೆ ಎರಡು ಕಿ.ಗ್ರಾಂ ಬೀಜ ಸಾಕು. ಬೀಜಗಳನ್ನು ೧೨ ಗಂಟೆ ನೆನೆಸಿ ನೆರಳಿನಲ್ಲಿ ಒಣಗಿಸಿ ಗೋಣಿ ಚೀಲದಲ್ಲಿ ಒಂದುದಿನ ಬಿಗಿಯಾಗಿ ಕಟ್ಟಿ ಚೀಲಕ್ಕೆ ಆಗಾಗ ನೀರು ಚಿಮುಕಿಸುತ್ತಿರಬೇಕು. ಮಡಿಯಲ್ಲಿ ಬಿತ್ತನೆ ಮಾಡುವಾಗ ಬಿಡಿಬಿಡಿಯಾಗಿ ಹರಡಿ ಮೇಲೆ ೧ ಸಾವಯವ ಗೊಬ್ಬರವನ್ನು ಹರಡಬೇಕು. ೮ ರಿಂದ ೧೦ ದಿನಗಳ ಸಸಿಗಳು ನಾಟಿಗೆ ಸೂಕ್ತ, ಮಡಿಯಿಂದ ಕಿತ್ತ ಒಂದು ಗಂಟೆಯಲ್ಲಿ ನಾಟಿ ಮಾಡಬೇಕು. ೨೫ ಸೆಂ.ಮೀ. ಮತ್ತು ೨೫ ಸೆಂ.ಮೀ. ಅಂತರದಲ್ಲಿ ಮತ್ತು ಒಂದು ಇಂಚು ಆಳದಲ್ಲಿ ಒಂದು ಗುಣಿಗೆ ಒಂದು ಸಸಿಯಂತೆ ನೆಡಬೇಕು. ಗದ್ದೆಯಲ್ಲಿ ನೀರು ನಿಲ್ಲಿಸಬೇಕಿಲ್ಲ. ತೇವಾಂಶವಿರುವಂತೆ ನೋಡಿಕೊಂಡರೆ ಸಾಕು. ನೆಲದಲ್ಲಿ ಬಿರುಕು ಕಾಣಿಸುವ ಮುನ್ನ ನೀರು ಹರಿಸಿ ತೇವಾಂಶ ಕಾಪಾಡುವುದು ಬಹಳ ಮುಖ್ಯ. ನಾಟಿ ಮಾಡಿದಾಗಿನಿಂದ ತೆನೆ ಬಲಿಯುವರೆಗೆ ೧ ಅಂಗುಲ ನೀರು ನಿಲ್ಲಿಸುವುಸುವುದು ಅಗತ್ಯ. ವಾಡಿಕೆಗಿಂತ ಒಂದು ವಾರ ಮುಂಚೆಯೆ ಬೆಳೆ ಕಟಾವಿಗೆ ಬರುತ್ತದೆ ಮತ್ತು ಶೇ. ೧೫ ರಷ್ಟು ಹೆಚ್ಚಿನ ಇಳುವರಿ ಪಡೆಯುವುದು ಸಾಧ್ಯ. ಇದೆ ಕ್ರಮವನ್ನು ರಾಗಿ ಉತ್ಪಾದನೆಯಲ್ಲಿ ಹಾವೇರಿ ಭಾಗದ ರೈತರು ಅನುಸರಿಸಿದ್ದುಂಟು. ಸಸಿಗಳನ್ನು ೧೮ ಅಂಗುಲ ಘಿ ೧೮ ಅಂಗುಲ ಚೌಕಾಕಾರದಲ್ಲಿ ನಾಟಿ ಮಾಡಿ ಸಾವಯವ ಬೇಸಾಯದಲ್ಲಿ ಸಾಮಾನ್ಯ ಪದ್ಧತಿಗಿಂತ ಹೆಚ್ಚಿನ ಇಳುವರಿ ಪಡೆದುದನ್ನು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳೆ ಅನುಮೋದಿಸಿದ ವರದಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.