ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೨

ದಾರಿದೀಪ

ನೆಚ್ಚಿದ್ದು ಸಿಕ್ರೆ ಮೆಚ್ಚಂಗೆ ಮಾಡಬಹುದು

image_
ಡಾ. ಟಿ. ಎಂ. ಸೌಮ್ಯ
9886045712
1

ನೇಗಿಲ ಮಿಡಿತಕ್ಕಾಗಿ ಪುಷ್ಪ ಕೃಷಿ ಕುರಿತ ವಿಶೇಷ ಸಂಚಿಕೆಯನ್ನು ಸಿದ್ದಪಡಿಸುತ್ತಿರುವಾಗ ನಮ್ಮ ತಂಡ ಭೇಟಿಯಿತ್ತದ್ದು ಶಿವಮೊಗ್ಗದ ಹೊರವಲಯ ದಲ್ಲಿರುವ ಬಸವನಗಂಗೂರಿನ ಶ್ರೀ ಪ್ರದೀಪ್ರವರ ಪಾಲಿಹೌಸ್ಗೆ. ಮಧ್ಯಾಹ್ನದ ಬಿಸಿಲಿನಲ್ಲಿ ಹೋದ ನಮಗೆ ಒಂದು ಆತ್ಮೀಯವಾದ ನಗುವಿನೊಂದಿಗೆ ಸ್ವಾಗತಿಸಿದವರು ಶ್ರೀ ಪ್ರದೀಪ್. ಅವರ ಹಿಂದೆಯೇ ಕೆಂಪು, ಗುಲಾಬಿ, ಹಳದಿ, ಕೇಸರಿ, ಬಿಳಿ ಬಣ್ಣಗಳ ಜರ್ಬೆರಾ ಹೂವಿನ ಕಟ್ಟುಗಳನ್ನು ಹೊತ್ತು ತರುತ್ತಿದ್ದ ಕಾರ್ಮಿಕರಲ್ಲಿ ಪ್ಯಾಕಿಂಗ್ಗಾ? ಎಂದು ಕೇಳಿದಾಗ ಸಿಕ್ಕ ಉತ್ತರ ಇಲ್ಲ ತಿಪ್ಪೆಗುಂಡಿಗೆ. ಅಚ್ಚರಿಯೇ? ಹೌದು!! ಈ ಚಿತ್ರಣ ನಮ್ಮ ಕೃಷಿ ಉತ್ಪನ್ನಗಳಿಗಿರುವ ಮಾರುಕಟ್ಟೆ ವ್ಯವಸ್ಥೆಗೆ ಹಿಡಿದಿಟ್ಟ ಕನ್ನಡಿಯಂತಿತ್ತು

ಪ್ರದೀಪ್ರವರು ಮೂಲತಃ ಸಿವಿಲ್ ಇಂಜಿನಿಯರ್ ಆಗಿದ್ದು, ರೈತೋದ್ಯಮಿಯಾಗುವ ಬಯಕೆ, ಕೃಷಿಯೆಡೆಗಿನ ಒಲವು, ಕೌಟುಂಬಿಕ ಕೃಷಿ ಹಿನ್ನೆಲೆಯಿಂದಾಗಿ ಒಬ್ಬ ಯುವ ಕೃಷಿಕರಾಗಿ ಹೊರಹೊಮ್ಮಿದ್ದಾರೆ. ಇಂಜಿನಿಯರಿಂಗ್ ಪದವಿಯ ಜ್ಞಾನ ಮತ್ತು ಕೃಷಿಯೆಡೆಗಿನ ಪ್ರೀತಿಯನ್ನು ಮೇಳೈಸಿ ಬೇರೆಯವರಿಗಿಂತ ಭಿನ್ನವಾಗಿದ್ದನ್ನು ಮಾಡಲು ಯೋಚಿಸಿದಾಗ ಪುಷ್ಪ ಕೃಷಿಯೆಡೆಗೆ ಮನಸ್ಸಾಗಿ, ಕಾರ್ನೇಷನ್ ಹೂವಿನ ಕೃಷಿ ಆರಂಭಿಸಿ, ಅದರಲ್ಲಿ ತಮ್ಮ ಊರಿನ ವಾತಾವರಣಕ್ಕೆ ಸೂಕ್ತವಾಗುವ ತಳಿಯ ಆಯ್ಕೆಯಲ್ಲಿ ಎಡವಿದಾಗ ಎಚ್ಚೆತ್ತುಕೊಂಡು ಇರುವ ತಮ್ಮ ಒಂದು ಎಕರೆ ಪಾಲಿಹೌಸ್ನಲ್ಲಿ ಅರ್ಧ ಎಕರೆಯನ್ನು ಜರ್ಬೆರಾ ಕೃಷಿಗಾಗಿ ಮತ್ತು ತಲಾ ಕಾಲು ಎಕರೆಯಷ್ಟು ಜಾಗವನ್ನು ಸೇವಂತಿಗೆಯ ಸ್ಪೈಡರ್ ತಳಿ ಹಾಗೂ ಟೊಮ್ಯಾಟೊಗಾಗಿ ಮೀಸಲಿಟ್ಟಿದ್ದಾರೆ. ಕಳೆದ ಎರಡು ವರ್ಷಗಳಿಂದ ಜರ್ಬೆರಾ ಬೆಳೆಯುತ್ತಿರುವ ಇವರು ಪ್ರತಿ ಕೆಲವು ನಿಮಿಷಗಳಿಗೊಮ್ಮೆ ಹೇಳುತ್ತಿದ್ದದ್ದು ಇಷ್ಟೆ, ಜರ್ಬೆರಾ ಹೂವಿನ ಕೃಷಿ ಲಾಭದಾಯಕ ಆದರೆ ಸರಕಾರದಿಂದ ಸಿಗಬೇಕಾದ ಸಬ್ಸಿಡಿ ಸರಿಯಾದ ಸಮಯಕ್ಕೆ ಸಿಗಬೇಕು ಹಾಗೂ ಸ್ಥಳೀಯವಾಗಿ ಉತ್ತಮವಾದ ಮಾರಾಟ ವ್ಯವಸ್ಥೆಯಾಗಬೇಕು

4

ಹೌದು, ಅವರು ಪದೇ ಪದೇ ಈ ವಿಷಯವನ್ನು ನಮ್ಮಲ್ಲಿ ಹೇಳಲು ಕಾರಣ ಅವರ ಪಾಲಿಹೌಸ್ನ ನಿರ್ಮಾಣಕ್ಕಾಗಿ ದೊರೆಯಬೇಕಿದ್ದ ಅನುದಾನ ಎರಡು ವರ್ಷಗಳು ಕಳೆದರೂ ದೊರೆಯದೇ ಇರುವುದು. ರಾಷ್ಟ್ರೀಯ ತೋಟಗಾರಿಕೆ ಬೋರ್ಡ್ನ ಅಧಿಕಾರಿಗಳು ಭೇಟಿಯಿತ್ತು ಆರು ತಿಂಗಳುಗಳೇ ಕಳೆದಿವೆಯಾದರೂ ಸಬ್ಸಿಡಿ ದೊರೆತಿಲ್ಲ. ಪಾಲಿಹೌಸ್, ಹನಿ ನೀರಾವರಿ, ರಸಾವರಿ, ಕೃಷಿ ಹೊಂಡಗಳ ನಿರ್ಮಾಣಕ್ಕಾಗಿ ವ್ಯಯಿಸಿದ್ದು ಬರೋಬ್ಬರಿ ೬೩ ಲಕ್ಷಕ್ಕೂ ಹೆಚ್ಚು. ಸರಕಾರದಿಂದ ದೊರೆಯಬೇಕಿದ್ದ ಸಬ್ಸಿಡಿಗಾಗಿ ಕಾಯ್ದಿರುವ ಇವರ ಆದಾಯವೆಲ್ಲ ಬ್ಯಾಂಕ್ನ ಬಡ್ಡಿ ಮತ್ತು ಇತರೆ ಖರ್ಚುಗಳನ್ನು ನಿಭಾಯಿಸಲು ಕಡಿಮೆಯೆನಿಸುತ್ತದೆ. ತಮ್ಮ ಕೃಷಿಯನ್ನು ವ್ಯವಸ್ಥಿತವಾಗಿ ನಿರ್ವಹಿಸುತ್ತಿರುವ ಇವರು ಕೇವಲ ರಾಸಾಯನಿಕ ಗೊಬ್ಬರಗಳನ್ನೇ ಬಳಸದೇ ಎರೆಹುಳು ಗೊಬ್ಬರ, ತಿಪ್ಪೆಗೊಬ್ಬರಗಳನ್ನು ಬಳಸುತ್ತಾ ಪ್ರತಿ ಹದಿನೈದು ದಿನಗಳಿಗೊಮ್ಮೆ ಜೀವಾಮೃತವನ್ನೂ ಬಳಸುತ್ತಾರೆ. ನಾಟಿ ಮಾಡಿದ ದಿನದಿಂದ ಮೂರು ವರ್ಷಗಳ ಕಾಲ ಇರುವ ಜರ್ಬೆರಾ ಮೊದಲ ಮೂರು ತಿಂಗಳು ಕಳೆದ ನಂತರ ಆದಾಯವನ್ನು ಕೊಡಲಾರಂಭಿಸಿತು. ಈಗಲೂ ಪ್ರತಿದಿನ ತಮ್ಮ ಅರ್ಧ ಎಕರೆಯಲ್ಲಿರುವ ಹನ್ನೆರೆಡು ಸಾವಿರ ಗಿಡಗಳಿಂದ ಸುಮಾರು ೧೨೦೦ ರಿಂದ ೧೫೦೦ರವರೆಗೆ ಹೂಗಳನ್ನು ಪಡೆಯುತ್ತಿರುವ ಇವರು ಹೂಗಳನ್ನು ಕೆಲವೊಮ್ಮೆ ಬೆಂಗಳೂರು, ಗುಲ್ಬರ್ಗಾಗಳಲ್ಲಿ ಮಾರಾಟ ಮಾಡಿದ್ದಾರೆ. ಆದರೆ ಹೆಚ್ಚಿನದಾಗಿ ಸ್ಥಳೀಯ ಮಾರುಕಟ್ಟೆಯನ್ನೇ ಅವಲಂಬಿಸಿರುತ್ತಾರೆ. ಹೂವಿನ ಗುಚ್ಛ ಮತ್ತು ಅಲಂಕಾರಕ್ಕಾಗಿ ಬಳಸುವ ಫಿಲ್ಲರ್ ಮಟೀರಿಯಲ್ ಗಳಾದ ಆಸ್ಪರಾಗಸ್, ಹೆಲಿಕೋನಿಯ, ಬ್ಲೂಡೇಸಿ, ಎಲ್ಲೋ ಡೇಸಿ, ಗ್ಲ್ಯಾಡ್ಸ್, ಗೋಲ್ಡನ್ರಾಡ್ಗಳು ಸ್ಥಳೀಯವಾಗಿ ಸಿಗುವಂತಾದರೆ, ಸ್ಥಳೀಯ ಮಾರುಕಟ್ಟೆಯಲ್ಲೇ ಹೂಗಳಿಗೂ ಒಳ್ಳೆಯ ಬೆಲೆ ಸಿಗುತ್ತದೆ ಎನ್ನುವುದು ಪ್ರದೀಪ್ರವರ ವ್ಯವಹಾರಿಕ ಅಂದಾಜು. ಸುಂದರವಾದ ಹೂಗಳನ್ನು ನೀಡುವ ಇವರ ಗಿಡಗಳನ್ನು ಭಾದಿಸುತ್ತಿರುವ ಕೀಟ ಹಾಗೂ ರೋಗಗಳು ಥ್ರಿಪ್ಸ್, ನುಸಿ, ಬೂದು ರೋಗ, ಎಲೆ ಸುರಂಗ ಕೀಟ ಮತ್ತು ಎಲೆ ತಿನ್ನುವ ಕೀಟಗಳು. ಇಂಜಿನಿಯರ್ ಪ್ರದೀಪ್ರವರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಕೂಡ ತಾಂತ್ರಿಕವಾಗಿ ಕೆಲಸ ಮಾಡುವುದನ್ನು ರೂಢಿಸಿಕೊಂಡಿರುವುದು ಖುಷಿಯ ವಿಷಯ.

ನಮ್ಮ ತಂಡ ಮೆಚ್ಚಿದ್ದು

ಇಂದಿನ ಯುವ ಪೀಳಿಗೆಯಂತೆ ಶ್ರೀ ಪ್ರದೀಪ್ರವರು ಸಹ ಅಂತರ್ಜಾಲದ ಬಳಕೆಯಿಂದ ಮತ್ತು ಕೃಷಿ ಪದವಿಯೊಂದಿರುವ ಸ್ನೇಹಿತರೊಂದಿಗಿನ ಒಡನಾಟದಿಂದ ಕೆಲವು ಮೆಚ್ಚುವಂತಹ ಕೆಲಸಗಳಿಗೆ ಕೈ ಹಾಕಿದ್ದಾರೆ. ಅದರಲ್ಲಿ ನಮಗೆ ತುಂಬಾ ಖುಷಿಯೆನಿಸಿದ್ದು ಗಾಳಿ ತಡೆಗಾಗಿ ಪಾಲಿಹೌಸ್ನ ಒಂದು ಭಾಗಕ್ಕೆ ನುಗ್ಗೆ, ಇನ್ನೊಂದು ಬದಿಗೆ ಇತ್ತೀಚೆಗಷ್ಟೇ ನಾಟಿ ಮಾಡಿರುವ ಸಪೋಟ ಮತ್ತು ಸಾಗುವಾನಿ ಗಿಡಗಳನ್ನು ನೆಟ್ಟಿರುವುದು. ನುಗ್ಗೆಯಲ್ಲಿ ಅಂತರ ಬೆಳೆಯಾಗಿ ಕ್ಯಾಪ್ಸಿಕಂ (ದೊಣ್ಣೆಮೆಣಸಿನಕಾಯಿ), ಅಲ್ಲಲ್ಲಿ ಬದನೆ ಹಾಗೂ ಮಧ್ಯದ ಪಟ್ಟಿಗಳಲ್ಲಿ ಕೆಂಪು ಹರಿವೆ, ಪಾಲಾಕ್ ಮತ್ತು ಎಳೆ ಹರಿವೆ ಸೊಪ್ಪುಗಳನ್ನು ಬೆಳೆಯುತ್ತಿರುವುದು. ಅಷ್ಟಾಗಿ ಮಳೆಯಾಗದ ಬಸವನಗಂಗೂರಿನಲ್ಲಿ ನೀರಿನ ಮಹತ್ವ ತಿಳಿದುಕೊಂಡಿರುವ ಇವರು ಪಾಲಿಹೌಸ್ನ ಮೇಲ್ಛಾವಣಿಯಿಂದ ಬರುವ ನೀರನ್ನೂ ಕೃಷಿ ಹೊಂಡಕ್ಕೆ ಕೊಯ್ಲು ಮಾಡುತ್ತಾರೆ. ತಮ್ಮ ಇನ್ನುಳಿದ ಮುಕ್ಕಾಲು ಎಕರೆ ಜಮೀನು ಕೂಡ ಹೂ ಬೆಳೆಗೆ ಮೀಸಲಾಗಿದ್ದು ಅಲ್ಲಿ ಸುಗಂಧರಾಜ ಬೆಳೆಯಲಾಗಿದೆ. ಈಗ ಅವರಿಗಿರುವ ಆಸಕ್ತಿ ಸಪೋಟಾ ಗಿಡಗಳ ಮಧ್ಯವಿರುವ ಜಾಗ ಹಾಗೂ ಕೃಷಿ ಹೊಂಡದ ಸುತ್ತಮುತ್ತಲಿನ ಜಾಗಗಳಲ್ಲಿ ಒಂದು ಉತ್ತಮ ಮೇವಿನ ಬೆಳೆ ಬೆಳೆದು ತಮ್ಮಲ್ಲಿರುವ ೪ ಎಮ್ಮೆ ಮತ್ತು ೪ ಹಸುಗಳಿಗೆ ಹಸಿರು ಮೇವು ಒದಗಿಸುವುದು. ಸಮಗ್ರ ಚಿಂತನೆಯೊಂದಿಗೆ ಕೃಷಿಯನ್ನು ಮಾಡುತ್ತಿರುವ ಇವರ ಕನಸುಗಳು ನನಸಾಗಲಿ. ಹಲವರಿಗೆ ಮನೆ ಕಟ್ಟಲು ನೆರವಾಗುವ ಸಿವಿಲ್ ಇಂಜಿನಿಯರ್ ಪ್ರದೀಪ್ರವರ ಬನಸಿರಿಯು ಕೃಷಿಯ ವಿವಿಧ ಆಯಾಮಗಳ ಸಿರಿವಂತಿಕೆಯಿಂದ ಕೂಡಿರಲಿ ಎಂದು ಆಶಿಸುತ್ತೇನೆ. ಪ್ರದೀಪ್ರವರನ್ನು ಸಂಪರ್ಕಿಸಲು ೯೬೩೨೮೩೧೭೩೧ಗೆ ಕರೆ ಮಾಡಬಹುದು

8

ಮನದಾಳದ ಮಾತು

ಪುಸ್ತಕದಲ್ಲಿ ಲೆಕ್ಕ ಹಾಕೋ ಆದಾಯ ಬರೋದು ಕಷ್ಟ. ಬಾವಿಗೆ ಬಿದ್ದಾಗಲೇ ಆಳ ಗೊತ್ತಾಗೋದು. ಈ ತರಹದ ಕೃಷಿಗೆ ಹೆಚ್ಚು ಮೂಲ ಬಂಡವಾಳ ಮತ್ತು ನಿರ್ವಹಣಾ ವೆಚ್ಚ ಇರೋದ್ರಿಂದ ಸಬ್ಸಿಡಿ ಇಲ್ದೆ ಪಾಲಿಹೌಸ್ನಲ್ಲಿ ಕೃಷಿ ಮಾಡೋದು ಕಷ್ಟ. ಅಲ್ದೇ ಸರಿಯಾದ ಮಾರುಕಟ್ಟೆ ಬೇರೆ ಸಿಗೋಲ್ಲ. ಸೀಸನ್ನಲ್ಲಿ ಮಾತ್ರ ಒಳ್ಳೆ ರೇಟ್ ಸಿಗುತ್ತೆ ಆದ್ರೆ ಸೀಸನ್ ಅಂತ ಸಿಗೋದೇ ಆರೇಳು ತಿಂಗಳು ಮಾತ್ರ. ಸೀಸನ್ ಇಲ್ಲಾಂತ ಗಿಡನ್ನ ನೋಡ್ಕೊಳ್ದೇ ಇರೋಕ್ಕಾಗಲ್ಲ. ಅದಕ್ಕೆ ಸರಕಾರದಿಂದ ಸಬ್ಸಿಡಿ ದೊರೆಯುತ್ತೆ ಅಂತಾನೇ ಶುರುಮಾಡಿರೋ ಇಂತಹ ಕೆಲಸಗಳಿಗೆ ಸರಿಯಾದ ಸಮಯಕ್ಕೆ ಸಿಗಬೇಕಾದ ಸಬ್ಸಿಡಿ ಸಿಕ್ರೆ ರೈತರು ಧೈರ್ಯದಿಂದಿರಬಹುದು. ರೈತರು ನೆಚ್ಚಿಕೊಂಡ ಸರಕಾರದ ಸವಲತ್ತುಗಳು ಸಮಯಕ್ಕೆ ಸರಿಯಾಗಿ ಸಿಕ್ರೆ ನಾಲ್ಕು ಜನ ಮೆಚ್ಚೋ ಅಂತಾ ಕೆಲಸ ಮಾಡಬಹುದು. ತೆಗೆದುಕೊಂಡಿರೋ ಸಾಲಕ್ಕೆ ತಿಂಗಳಿಗೆ ಬಡ್ಡಿನೇ ೫೦ ಸಾವಿರ ಆಗುತ್ತೆ ಇನ್ನು ಗೊಬ್ಬರ, ನಿರ್ವಹಣೆ, ಪ್ಯಾಕಿಂಗ್, ಪ್ಯಾಕೇಜಿಂಗ್, ಸಾಗಾಣಿಕೆ, ಕೃಷಿ ಕಾರ್ಮಿಕರ ಖರ್ಚು ವೆಚ್ಚ ಎಲ್ಲಾ ಸೇರಿ ಒಂದೂ ಕಾಲು ಲಕ್ಷ ಆಗಿಬಿಡುತ್ತೆ. ಹಾಗಾಗಿ ಹತ್ತು ಹೂವಿನ ಒಂದು ಗೊಂಚಲಿಗೆ ಏನಿಲ್ಲ ಅಂದ್ರು ೬೦ ರಿಂದ ೭೦ ರೂಪಾಯಿ ಸಿಗಬೇಕಾಗುತ್ತೆ. ಅದಕ್ಕಿಂತ ಕಡಿಮೆಯಿದ್ದಾಗ ಮಾರಾಟ ಮಾಡ್ಲಿಕ್ಕೆ ಹೋದ್ರೆ ಲಾಭಕ್ಕಿಂತ ನಷ್ಟನೇ ಜಾಸ್ತಿ. ಅಂತಹ ಟೈಂನಲ್ಲಿ ಗಿಡ ಸ್ವಚ್ಛವಾಗಿ ಇಡೋಕೆ ಹೂಗಳನ್ನ ಕಿತ್ತು ತಿಪ್ಪೆಗೇ ಹಾಕ್ಸಿಬಿಡ್ತಿನಿ..... ಪ್ರದೀಪ್