ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೨

ಸಂಪಾದಕೀಯ

ಗುಡಿಸೇರದ ಮುಡಿಯೇರದ

image_
ಕೆ.ಸಿ.ಶಶಿಧರ
shashidhar.kumbar@gmail.com

ಮನಸ್ಸಿಗೆ ಮುದ ನೀಡುವ ಹೂವನ್ನು ಬಳಸಿ ಬಿಸಾಕುವುದು ಸಹಜ. ಬಳಸದೇ ಬಿಸಾಕುವಂತಾದಾಗ ಬೆಳೆದವನ ಬಾಳನ್ನೇ ಬಿಸಾಕಿದಂತೆ. ಹೀಗಾಗುವುದೆ? ಆಗುತ್ತದೆ ಎನ್ನುವುದಕ್ಕೆ ನಮ್ಮ ಅನುಭವ ಹಾಗೂ ಇಲ್ಲಿ ನೀಡಿರುವ ಚಿತ್ರವೇ ಸಾಕ್ಷಿ. ನಾವು ನೋಡಿದ ಜರ್ಬೆರಾಕ್ಕೆ ಬೆಲೆ ಇದೆ, ಕೊಳ್ಳುವವರಿದ್ದಾರೆ, ಬೆಳೆಯುವವರಿದ್ದಾರೆ ಹಾಗಿದ್ದೂ ಹೀಗಾಗಲು ಕಾರಣವೇನು?

ಪುಷ್ಪ ಕೃಷಿ ಪ್ರೋತ್ಸಾಹಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹಲವು ಯೋಜನೆಗಳಿವೆ. ಈ ಯೋಜನೆಗಳು ಉತ್ತಮ ಫಲಿತಾಂಶ ನೀಡುತ್ತಿವೆ. ಇಂದು ಹಲವಾರು ಯುವಕರು ಈ ಯೋಜನೆಗಳು ಫಲಪ್ರದವಾಗಲು ಶ್ರಮಿಸುತ್ತಿದ್ದಾರೆ. ಆದರೆ ಇದಕ್ಕೆ ಪೂರಕವಾಗಿ ಕನಿಷ್ಠ ಜಿಲ್ಲಾ ಮಟ್ಟದಲ್ಲಿಯಾದರೂ ವ್ಯವಸ್ಥಿತ ಮಾರುಕಟ್ಟೆ ಅಭಿವೃದ್ಧಿಯ ಅಗತ್ಯವಿದೆ. ಹೂವಿಗೆ ಕೊಯ್ಲು ನಂತರದ ಬಾಳುವ ಅವಧಿ ಕಡಿಮೆ. ಇದನ್ನೇ ಬಂಡವಾಳವಾಗಿಸಿಕೊಳ್ಳುವ ಮಧ್ಯವರ್ತಿಗಳು ಬೆಳೆಗಾರರ ಬದುಕಲ್ಲಿ ಆಟವಾಡುತ್ತಾರೆ. ಇದನ್ನು ಮೆಟ್ಟಿ ನಿಲ್ಲಲು ಸಹಕಾರಿ ತತ್ವದಡಿ ಈ ಕೃಷಿಕರು ಒಂದಾಗಬೇಕಿದೆ. ಬರೀ ಪುಷ್ಪ ಕೃಷಿ ಮಾಡಿದರಾಗದು. ಅದಕ್ಕೆ ಪೂರಕವಾಗಿ ಬೇಕಾಗುವ ಇತರೆ ಸಸ್ಯಗಳ ಬೆಳೆ ಸಹ ಅಭಿವೃದ್ಧಿಯಾಗಬೇಕು. ಈ ಕೆಲಸಗಳನ್ನು ಬೆಳೆಗಾರರ ಸಹಕಾರ ಸಂಘ ಮಾಡಿದಲ್ಲಿ ಪುಷ್ಪ ಕೃಷಿಯ ಯಶೋಗಾಥೆಗಳು, ಕೃಷಿಕರ ಜೀವನದ ಯಶೋಗಾಥೆಗಳಾಗಲು ಸಾಧ್ಯ.

ಪುಷ್ಪ ಕೃಷಿ ಕುರಿತು ವಿಶೇಷ ಸಂಚಿಕೆಯನ್ನು ನೇಗಿಲ ಮಿಡಿತ ಓದುಗರಿಗಾಗಿ ನೀಡುತ್ತಿದೆ. ಈ ಸಂಚಿಕೆಗಾಗಿ ನಾವು ಸಂಪರ್ಕಿಸಿದವರು ಬಹುಪಾಲು ಯುವಕರಾಗಿದ್ದು, ಅವರ ಪ್ರಯತ್ನಗಳು, ಆಸಕ್ತಿ ನಿಜಕ್ಕೂ ಮಾದರಿ. ಇವರು ತಂತ್ರಜ್ಞಾನ ಅಳವಡಿಕೆಯಲ್ಲೂ, ಕೃಷಿಅಭಿವೃದ್ಧಿಯಲ್ಲೂ ಬೆಳೆದ ರೀತಿಯನ್ನು ನೋಡಿದಾಗ ಎಂತವರೂ ಭೇಷ್ ಎನ್ನುತ್ತಾರೆ. ಇಂತಹ ಯುವ ಪಡೆ ನಮ್ಮ ಕೃಷಿಯ ದಿಕ್ಕನ್ನು ಸರಿದಾರಿಯಲ್ಲಿ ನಡೆಸುತ್ತದೆ ಎಂಬ ಬಲವಾದ ನಂಬಿಕೆ ನನ್ನದು.

4