ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧

ಕೃಷಿ ಮತ್ತು ತೋಟಗಾರಿಕೆಯಲ್ಲಿ ಕನ್ನಡತನ

ಸಂಪತ್ ಬೆಟ್ಟಗೆರೆ.
ಕನ್ನಡ ಉಪನ್ಯಾಸಕರು,
8762267491

ನಮ್ಮ ಪಾಲಿಗೆ ಬೇರೆ ಭಾಷೆಗಳು ಬುದ್ದಿಪ್ರಧಾನವಾಗಿದ್ದರೆ; ಕನ್ನಡವು ನಮ್ಮ ಮಾತೃ ಹಾಗೂ ಪ್ರಾದೇಶಿಕ ಭಾಷೆಯಾಗಿರುವುದರಿಂದ ಅದು ಭಾವ ಪ್ರಧಾನವಾಗಿದೆ. ಆದ್ದರಿಂದ ಕೃಷಿಯನ್ನು ನಾವು ಭಾವಪ್ರಧಾನವಾಗಿ ಪರಿಭಾವಿಸಬೇಕಿದೆ. ತಾಯಿಯ ಮಮತೆಯ ಭಾವನೆಗಳು ಮಕ್ಕಳ ಮಾನಸಿಕ ವಿಕಾಸಕ್ಕೆ ಹೇಗೆ ನೆರವಾಗುತ್ತವೆಯೋ; ಹಾಗೆ ಕೃಷಿ ವಿದ್ಯಾರ್ಥಿಗಳಿಗೆ ಕೃಷಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಕನ್ನಡವೇ ಹೆಚ್ಚು ಆಪ್ತ ಭಾಷೆಯಾಗಿದೆ. ಕೃಷಿ ವಿಜ್ಞಾನಿಗಳು ಕೂಡ ರೈತರೊಂದಿಗೆ ಸಂವಾದ ಮಾಡುವಾಗ ಕನ್ನಡ ಭಾಷಿಕವಾಗಿ ಭಾವನಾತ್ಮಕ ಸಂಬಂಧವನ್ನು ಬೆಸೆಯುವ ಮಾಧ್ಯಮವಾಗಿ ಇಲ್ಲಿ ಕಾರ್ಯ ನಿರ್ವಹಿಸುತ್ತದೆ.

ಹಿರಿಯ ಸಾಹಿತಿ ದೇವನೂರ ಮಹಾದೇವ ಅವರ ಎದೆಗೆ ಬಿದ್ದ ಅಕ್ಷರ, ಮಣ್ಣಿಗೆ ಬಿದ್ದ ಬೀಜ ಒಂದಲ್ಲ ಒಂದು ದಿನ ಫಲ ಕೊಟ್ಟೇ ಕೊಡುತ್ತದೆ ಎಂಬ ಮಾತು ಇಲ್ಲಿ ಉಲ್ಲೇಖಾರ್ಹ. ದಿಟ, ಭೂಮಿಗೆ ಬಿದ್ದ ಬೀಜ ಮೊಳಕೆಯೊಡೆದು ಗಿಡವಾಗಿ, ಹೂವಾಗಿ, ಮಿಡಿಯಾಗಿ, ಕಾಯಾಗಿ, ಹಣ್ಣಾಗಿ ಫಸಲಿಗೆ ಬರಲು ಭೂಮಿ ಫಲವತ್ತಾಗಿರಬೇಕು. ಅದೇ ರೀತಿ ಎದೆಗೆ ಬಿದ್ದ ಅಕ್ಷರ ನಮ್ಮ ಹೃದಯವನ್ನು ಆವರಿಸಿ ಶಾಶ್ವತವಾಗಿ ಅಲ್ಲೇ ನೆಲೆಯೂರಿ ಅಚ್ಚಳಿಯದ ಚಿತ್ರವಾಗಿ ಮನಸ್ಸಿನಲ್ಲಿ ದಾಖಲಾಗಿ ಇರಬೇಕಾದರೆ ಅದು ಫಲವತ್ತಾದ ಕನ್ನಡ ಭಾಷೆಯಲ್ಲೇ ಇರಬೇಕು. ಏಕೆಂದರೆ ಕನ್ನಡ ನಮ್ಮ ಜೀವಾನಾಡಿಯಿಂದ ಮಿಡಿದು ಹೊರಹೊಮ್ಮಿದ ನೈಜ ಅಭಿವ್ಯಕ್ತಿ ಭಾಷೆಯಾಗಿದೆ. ಹೀಗಾಗಿ ಕೃಷಿಯು ಸದಾ ಹಸಿರಾಗಿರಬೇಕಾದರೆ ಅದಕ್ಕೆ ಕನ್ನಡದ ಕಪ್ಪು ನೆಲ, ತಂಪುಜಲ, ರೈತಕುಲವೇ ಆಸರೆಯಾಗಿ ಇರಬೇಕಾಗಿರುತ್ತದೆ.

ಹಾಡು ಸಂತೋಷ ಪಡಲು ಬೇಕು. ಅದು ಮನಸ್ಸಿಗೆ ಖುಷಿ ಕೊಟ್ಟರೆ ದೇಹವೂ ಉಲ್ಲಸಿತವಾಗುತ್ತದೆ. ಇದನ್ನು ನಮ್ಮ ಗ್ರಾಮೀಣ ಜನರು ಸರಿಯಾಗಿ ಬಲ್ಲವರಾಗಿದ್ದಾರೆ. ಆದ್ದರಿಂದ ಅವರು ದುಡಿಮೆಯಲ್ಲೇ ನುಡಿತೋರಣವನ್ನು ಹಾಡಿನ ರೂಪದಲ್ಲಿ ಕಟ್ಟಿದ್ದಾರೆ. ಅಕ್ಕಿ, ರಾಗಿ ಮುಂತಾದ ಧವಸಧಾನ್ಯಗಳನ್ನು ಬೀಸುವಾಗಲೂ ಭೂಮಿ ತಾಯಿಯ ನೆನಪು ಅವರನ್ನು ಕಾಡದೆ ಬಿಟ್ಟಿಲ್ಲ.

ಏಳುತಲೆ ನಾನೆದ್ದು ಯಾರ್ಯಾಿರ ನೆನೆಯಾಲಿ ಎಳ್ಳು ಜೀರಿಗೆ ಬೆಳೆಯೋಳ| ಭೂಮಿ ತಾಯ ಎದ್ದೊಂದು ಘಳಿಗೆ ನೆನೆದೇನು|ಎಂಬುದಾಗಿ ಹಾಡು ಕಟ್ಟಿ ಹಾಡುವ ಹಳ್ಳಿಯ ಹೆಣ್ಣು ಮಗಳ ಹೃದಯ ದನಿಗೆ ಯಾವ ಪ್ರಶಸ್ತಿ ಕೊಟ್ಟರೂ ಕಡಿಮೆಯೇ. ಅದಕ್ಕಾಗಿಯೇ ಇರಬಹುದು, ಕನ್ನಡದ ಸಾಹಿತ್ಯದಲ್ಲಿ ’ಅವ್ವ’ ಕವಿತೆಯ ಮಗನೆಂದೆ ಕರೆಯಬಹುದಾದ ಕವಿ ಪಿ.ಲಂಕೇಶ್;

ನನ್ನವ್ವ ಫಲವತ್ತಾದ ಕಪ್ಪುನೆಲ, ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂಹಬ್ಬಸುಟ್ಟಷ್ಟು ಕಸುವು, ನೊಂದಷ್ಟು ಹೂಹಣ್ಣು, ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆಎಂದು ಪದ್ಯ ಹೊಸೆದು ಅವ್ವನೊಂದಿಗಿನ ಜೀವನಾನುಭವದ ಕ್ಷಣಗಳನ್ನು ಕೊರಳ ಧ್ವನಿಯಿಂದ ಹೊರಗೆಳೆದುಕೊಂಡು ಬಿಕ್ಕಳಿಸಿ ಕವಿತೆ ರಚಿಸಿ ತುಸು ಸಮಾಧಾನ ತಾಳುತ್ತಾರೆ.

ಅಮೆರಿಕಾ ದೇಶದಲ್ಲಿ ಕನ್ನಡದ ತರುಣನೊಬ್ಬ ನಡೆಯುತ್ತಿದ್ದಾನೆ ಎಂದಿಟ್ಟುಕೊಳ್ಳೋಣ. ಅದೇ ಫುಟ್ಪಾತ್ನ ಮೇಲೆ ಅವನಿಗೆ ಎದುರಾಗಿ ಇಂಗ್ಲೆಂಡ್ನ ಚೆಲುವೆಯೊಬ್ಬಳು ಅಭಿಮುಖವಾಗಿ ಬರುತ್ತಿರುವಳು. ಕನ್ನಡದಲ್ಲಿ ಗೆಳೆಯರಿಂದ ’ಗೆಳತಿ ಕವಿ’ ಎಂಬ ಬಿರುದಾಂಕಿತ ಇವನಿಗೆ ಆ ಬಿಳಿ ಮೈ ಚೆಲುವೆ ಮೇಲೆ ಕವಿತೆ ಕಟ್ಟುವ ಅಭೀಪ್ಸೆ ಮೂಡುತ್ತದೆ. ಆಗ ಮನದಲ್ಲೇ ಸಾಲುಗಳು ಒಡಮೂಡಿ ಬಂದವು. ಹೃದಯದ ನೋಟ್ಬುಕ್ಕಿನ ಮೇಲೆ ಅಕ್ಷರವಾಗಿ ಅವು ಅರಳತೊಡಗಿದವು.

ಗೆಳತಿ ನೀನು ತುಂಬಾ ಬೆಳ್ಳಗೆನನ್ನ ಕವಿತೆ ತೆಳು ತೆಳ್ಳಗೆ!ನೀನು ಬೆಳದಿಂಗಳ ಬಾಲೆ ನಾನು ಅಮಾವಾಸ್ಯೆ ಕತ್ತಲೆ!ಒಂದು ಕ್ಷಣ ಭಾವುಕನಾಗಿ ಅಲ್ಲೇ ಮೈಮರೆತು ನಿಂತಿದ್ದಾನೆಂದು ಕಲ್ಪಿಸಿಕೊಂಡಿದ್ದೀರಲ್ಲವೇ? ಆಗ ಅವನ ತಲೆ ಮೇಲೆ ಅಲ್ಲಿನ ಕೆಂಪೆಲೆ ವೃಕ್ಷವೊಂದರ ಒಣಗಿದ ಪುಟ್ಟ ಕೋಲೊಂದು ಕಳಚಿ ಹೆಗಲಿಗೆ ತಾಕಿದಂತೆ ಕೆಳಗೆ ಬೀಳುತ್ತದೆ.

ಹೀಗೆ ಮೃದು ಏಟು ತಿಂದು ಎಚ್ಚೆತ್ತುಕೊಂಡ ಅವನು ಕವಿತೆಯ ಕಲ್ಪನಾ ಜಗತ್ತಿನಿಂದ ಹೊರಬಂದು ವಾಸ್ತವದ ಅಮೆರಿಕಾದ ಫುಟ್ಪಾತ್ ನೆಲದ ಮೇಲೆ ನಿಂತು ಆಲೋಚನೆ ಮಾಡತೊಡಗುತ್ತಾನೆ. ಮಂದಸ್ಮಿತ ಭಾವದಲ್ಲಿ ಎದುರಿನಿಂದ ಬಂದರೂ ಹಿಂತಿರುಗಿ ನೋಡದೆ ತನ್ನಷ್ಟಕ್ಕೆ ತಾನೆಂಬಂತೆ ಹೋಗುತ್ತಿರುವ ಅವಳ ಆ ಪರಿ ಸೊಬಗಿಗೆ ಅವನ ಮನಸ್ಸು ಮರುಗುತ್ತದೆ. ತನ್ನ ಹಗಲುಗನಸಿಗೆ ತಾನೇ ಪರಿತಪಿಸುತ್ತ ಮುನ್ನಡೆಯಲಾರಂಭಿಸುತ್ತಾನೆ. ಆಗ ಅವನಿಗೆ ಅನಿರೀಕ್ಷಿತವಾಗಿ ರಸ್ತೆಯೊಂದರಲ್ಲಿ ಹಲ್ಲುಕಿರಿದು ಅಣಕಿಸುವಂತೆ ಚಾಚಿಕೊಂಡಿದ್ದ ಗಾಜಿನ ಚೂರೊಂದು ಕಾಲಿಗೆ ಹೊಕ್ಕಿಬಿಡುತ್ತದೆ. ಆ ಕ್ಷಣ ಅವನ ಬಾಯಲ್ಲಿ ’ಅಮ್ಮ’ ಎಂಬ ಪದ ಅಂತರಾಳದಿಂದ ಹೊರಚಿಮ್ಮಿ ಬರುತ್ತದೆ. ಅದು ಅಮೆರಿಕಾದ ಭೂಖಂಡವನ್ನೆಲ್ಲಾ ಸುಳಿದಾಡಿಬಿಡುವಂತೆ ಗಾಳಿಯಲ್ಲಿ ಲೀನವಾಗತೊಡಗುತ್ತದೆ.

ಈಗಷ್ಟೇ ತೋಟಗಾರಿಕೆ ವಿ.ವಿ.ಯಲ್ಲಿ ಎಂ.ಎಸ್ಸಿ ಪಡೆದು ಸಂದರ್ಶಕ ಪ್ರಾಧ್ಯಾಪಕನಾಗಿ ಅಮೆರಿಕಾದ ವಿ.ವಿ ಯೊಂದರ ಮಕ್ಕಳಿಗೆ ಉಪನ್ಯಾಸ ನೀಡಲು ಹೋಗುತ್ತಿರುವ ಈ ತರುಣ ಕವಿ- ಪ್ರಾಧ್ಯಾಪಕನಿಗೆ, ಈ ಕ್ಷಣ ಭಾರತ ನೆಲದ ಕನ್ನಡನಾಡಿನ ಶಿವಮೊಗ್ಗ ಜಿಲ್ಲೆಯಿಂದ ಸರಿ ಸುಮಾರು ೧೪.೪ ಕಿ.ಮೀ ದೂರದಲ್ಲಿರುವ ಕೊನಗವಳ್ಳಿ ಎಂಬ ಪುಟ್ಟ ಗ್ರಾಮ ನೆನಪಾಗುತ್ತದೆ. ಸೀಸದ ಚೂರಿನಿಂದ ಉಂಟಾಗಿರುವ ಗಾಯದ ನೋವಿನ ಜೊತೆಗೆ ಅಮ್ಮನ ಪ್ರೀತಿಯ ನೆನಪಿನ ಭಾವುಕತೆಯು ಒಂದುಗೂಡಿ ರೆಪ್ಪೆಯಂಚಿನಿಂದ ಮುತ್ತಿನ ಧಾರೆಯಾಗಿ ಕೆನ್ನೆಮೇಲೆ ತೊಟ್ಟಿಕ್ಕುತ್ತವೆ. ಆಗ ತನ್ನೂರಿನವರೇ ಆದ ಕವಿ ಲಂಕೇಶಣ್ಣನ ’ಅವ್ವ’ ಪದ್ಯದ ಸಾಲುಗಳನ್ನು ಮೊಬೈಲ್ ಸ್ಕ್ರೀನ್ನಲ್ಲಿ ಗೂಗಲ್ ಸರ್ಚ್ ಇಂಜಿನ್ನಿಂದ ಡೌನ್ಲೋಡ್ ಮಾಡಿಕೊಂಡು ಈ ಭಾವಜೀವಿ ಓದಲಾರಂಭಿಸುತ್ತಾನೆ.

ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ ತೋಳ ಬಂದಿಯ ಗೆದ್ದು ಹೆಂಟಿಗೊಂದು ಮಗೆ ನೀರು ಹಿಗ್ಗಿ ಮೆಣಸು, ಅವರೆ, ಜೋಳ, ತೊಗರಿಯ ಹೂವ ಕೈಯಲ್ಲಿ ಉತ್ತು ಹೂವಲ್ಲಿ ಹೂವಾಗಿ ಕಾಯಲ್ಲಿ ಕಾಯಾಗಿ ಹೆಸರುಗದ್ದೆಯ ನೋಡಿಕೊಂಡು ಯೌವನವ ಕಳೆದಳು ಚಿಂದಿಯ ಸೀರೆ ಉಟ್ಟುಕೊಂಡು.ಇವಳಿಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರುಹೆತ್ತದ್ದಕ್ಕೆ, ಸಾಕಿದ್ದಕ್ಕೆ, ಮಣ್ಣಲ್ಲಿ ಬದುಕಿ ಮನೆಯಿಂದ ಹೊಲಕ್ಕೆ ಹೋದಂತೆ ತಣ್ಣಗೆ ಮಾತಾಡುತ್ತಲೇ ಹೊರಟು ಹೋದದ್ದಕ್ಕೆ.ಎಂದು ’ಅವ್ವ’ ಕವಿತೆಯ ಕೊನೆಯ ಸಾಲುಗಳನ್ನು ಓದುತ್ತಲೇ ಹೃದಯವು ಭಾರವಾದ ಹೆಜ್ಜೆಗಳೊಂದಿಗೆ ಆ ಪ್ರತಿಷ್ಠಿತ ವಿ.ವಿ.ಯ ಸೆಮಿನಾರ್ ಕೊಠಡಿಯನ್ನು ತಲುಪುತ್ತಾನೆ.

ಆ ಸಾಲುಗಳು ಅವನಲ್ಲಿ ಭಾವದಲೆಗಳನ್ನು ಹೊಮ್ಮಿಸಿ ಬಿಡುತ್ತವೆ. ಆಗವನು ತನ್ನೊಡಲಾಳದ ವಿಚಾರಧಾರೆಯ ಭಾವಕೋಶವನ್ನೇ ತೆರದಿಟ್ಟು ಹಗುರವಾಗುತ್ತಾನೆ. ಅಲ್ಲಿನ ಕುಲಪತಿಗಳು ಒಳಗೊಂಡಂತೆ ಆ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿದ್ದ ಎಲ್ಲರೂ ಎದ್ದುನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿ ಪುಳಕಿತರಾಗುತ್ತಾರೆ. ಹೀಗೆ ನಮ್ಮ ಕನ್ನಡನಾಡಿನ ಕೃಷಿ ವಿಜ್ಞಾನಿಗೆ ಆಗ ಆದ ಆ ರೋಮಾಂಚನವನ್ನು ನಾವೂ ಪರಿಭಾವಿಸಿಕೊಳ್ಳಬೇಕಿದೆ. ಇದರಿಂದ ತಿಳಿಯುವುದೇನೆಂದರೆ ಕೃಷಿ ಶಿಕ್ಷಣವು ಸೇರಿದಂತೆ ಅನೇಕ ಶಿಕ್ಷಣ ಕ್ರಮಗಳಲ್ಲಿ ಪ್ರಾದೇಶಿಕ ಭಾಷೆಯ ಸಂಸ್ಪರ್ಶ ಇದ್ದರೆ ಅಭಿವ್ಯಕ್ತಿಗೆ ನೈಜ ಶಕ್ತಿಯ ಚಾಲನೆ ಇದ್ದೇ ಇರುತ್ತದೆ. ಹಾಗೆ ಗಮನಿಸಿಕೊಂಡಂತೆ ಹಿಂದಿನ ಕಾಲಘಟ್ಟದ ಹಳೆ ತಲೆಮಾರಿನ ರೈತರಿಗೂ, ಈಗಿನ ರೈತ ಸಮುದಾಯದ ಪರಿಸ್ಥಿತಿಗೂ ಬಹಳ ವಿಭಿನ್ನವಾದ ವ್ಯತ್ಯಾಸದ ವ್ಯಕ್ತಿತ್ವ ಕಂಡುಬರುತ್ತಿದೆ. ಅಂತದ್ದೇನೂ ಲಾಭದಾಯಕ ನಿರೀಕ್ಷೆಗಳಿಲ್ಲದೆ ಕೇವಲ ಬಿತ್ತಿದ ಫಲಕ್ಕೆ ಫಸಲಿನ ಪ್ರತಿಫಲವನ್ನಷ್ಟೆ ಎದುರು ನೋಡುತ್ತಿದ್ದ ಅಂದಿನ ರೈತನ ಮನೋಸ್ಥಿತಿಯೇ ಇಂದು ಬದಲಾದಂತೆ ತೋರುತ್ತಿದೆ. ಭತ್ತ, ರಾಗಿ, ತರಕಾರಿ ಬೆಲೆ ಕಡಿಮೆಯಾಯಿತೆಂದು ಕೂಲಿಕಾರರ ಸಂಬಳ ಹಾಗೂ ಖರ್ಚುವೆಚ್ಚ ಅಧಿಕ ಇದೆಯೆಂದು ನೆಪಹೇಳಿ ಆಹಾರ ಬೆಳೆಗೆ ಬದಲು ಅಡಿಕೆ, ಶುಂಠಿ, ಬಾಳೆ, ಕಾಫಿ, ಏಲಕ್ಕಿಯಂತಹ ಆಕರ್ಷಕ ವಾಣಿಜ್ಯ ಬೆಳೆಗಳಿಗಾಗಿ ಆಹಾರ ಬೆಳೆಯನ್ನು ಬೆಳೆಯಲಾಗುತ್ತಿದ್ದ ನೀರಾವರಿಯ ಫಲವತ್ತಾದ ನೆಲವನ್ನು ಒಣಭೂಮಿಯನ್ನಾಗಿ ಪರಿವರ್ತನೆ ಮಾಡಲಾಗುತ್ತಿದೆ. ಇದರ ಪರಿಣಾಮ ಅಂತರ್ಜಲವು ಭೂಗರ್ಭದ ಆಳಕ್ಕಿಳಿದು ಅಡಿಸೇರಿ ಭೂಮಿಯ ಫಲವತ್ತತೆ ಬರಿದಾಗುತ್ತಿದೆ. ಇದರಿಂದ ’ನನ್ನವ್ವ ಫಲವತ್ತಾದ ಕಪ್ಪುನೆಲ’ ಎಂಬ ಕವಿಪದ್ಯ ಕೂಡ ಅರ್ಥಶೂನ್ಯತೆಯಿಂದ ಬಳಲಿದಂತೆ ಭಾಸವಾದರೂ ಅಚ್ಚರಿಯಿಲ್ಲ

ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಆಶಯದಂತೆ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ’ಕೃಷಿ ಕನ್ನಡ’ ಎಂಬ ವಿಷಯವನ್ನು ಅಳವಡಿಸಿ ಬೋಧಿಸಲು ಅನುವು ಮಾಡಿಕೊಟ್ಟಿರುವುದು ಒಂದೊಳ್ಳೆಯ ವಿವೇಚನಾಶೀಲ ಕಾರ್ಯವಾಗಿದೆ. ’ಕೃಷಿ ಕನ್ನಡ’ ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳು ನಮ್ಮ ನಾಡಿನ ಸಂಸ್ಕೃತಿ, ಸಾಹಿತ್ಯ, ಜಾನಪದ ಮುಂತಾದ ವಿಷಯಗಳನ್ನು ತಿಳಿದುಕೊಳ್ಳುವುದರಿಂದ ನೆಲನಂಬಿ ಬದುಕುತ್ತಿರುವ ರೈತ ಸಮುದಾಯದ ನಾಡಿಮಿಡಿತವನ್ನು ಕಿವಿಗೊಟ್ಟು ಕೇಳಿಸಿಕೊಳ್ಳಲು ಅವರಿಗೆ ಪ್ರೇರಣೆಯಾಗಬಲ್ಲದು. ಇದರ ಜೊತೆಗೆ ಕನ್ನಡೇತರ ವಿದ್ಯಾರ್ಥಿಗಳು ಕನ್ನಡವನ್ನು ಓದಲು, ಬರೆಯಲು, ಮಾತನಾಡಲು ಕಲಿತು ಕರ್ನಾಟಕದಲ್ಲಿ ಕೃಷಿ ತಜ್ಞರಾಗಿ ತಮ್ಮ ಚಿಂತನಾಶೀಲ ವ್ಯಕ್ತತ್ವದಿಂದ ರೈತರಿಗೆ ಆಪ್ತರಾಗಬಹುದಾಗಿದೆ.

ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿಯಲ್ಲಿ ಬರುವ ವಿಜ್ಞಾನಿ ಕರ್ವಾಲೋ, ಹಳ್ಳಿಗ ಮಂದಣ್ಣನ ನಡುವಿನ ಪರಮಾಪ್ತ ಮುಖಾಮುಖಿಯಿಂದ ಹುಟ್ಟುವ ಕೃಷಿ ಹಾಗೂ ಪರಿಸರದ ಕಥೆಯ ಪರಂಪರೆಯನ್ನು ಒಳಗೊಂಡ ಪರಿಚಯವನ್ನು ನಾವು ಮನಗಾಣಬೇಕಿದೆ. ಆದ್ದರಿಂದ ’ನೇಗಿಲನ್ನು ಹಿಡಿದು ಹೀಗೆ ಉಳುಮೆ ಮಾಡುತ್ತಾರೆ!’ ಎಂದು ವಿಶ್ಲೇಷಣೆ ಮಾಡುವ ಕೃಷಿ ವಿಜ್ಞಾನಿಯ ’ನೋಟಜ್ಞಾನ’ ಮತ್ತು ಸ್ವತಃ ನೇಗಿಲನ್ನು ಹಿಡಿದು ಹಗಲಿಡಿ ದುಡಿಯುವ ರೈತನ ಶ್ರಮ ಅನುಭವದ ’ಪರಿಜ್ಞಾನ’ಕ್ಕೂ ತಾಳೆಯಾದರೆ ಕೃಷಿ ಕ್ಷೇತ್ರದ ’ಪುಣ್ಯಭೂಮಿ’ ಪರಿಕಲ್ಪನೆಗೆ ಜೀವಶಕ್ತಿ ತುಂಬಿದಂತಾಗುತ್ತದೆ.