ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧

ಕಬ್ಬಿನ ಉಣ್ಣೆ ಹೇನಿನ ಸಮಗ್ರ ನಿರ್ವಹಣಾ ಕ್ರಮಗಳು

ಅನೀದೇವ ದಶವಂತ
1

ಕಬ್ಬಿನ ಉಣ್ಣೆ ಹೇನು ಭಾರತದಲ್ಲಿ ಪ್ರಥಮವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ೨೦೦೨ ರಲ್ಲಿ ಕಾಣಿಸಿಕೊಂಡಿತು. ತರುವಾಯ ೨೦೦೩-೨೦೦೪ ರಲ್ಲಿ ಈ ಕೀಟದ ತೀವ್ರತೆಯು ಗಣನೀಯವಾಗಿ ಏರಿಕೆ ಕಂಡಿತು. ಮಹಾರಾಷ್ಟ್ರದಲ್ಲಿ ೨೬೭ ಸಾವಿರ ಹೆಕ್ಟೇರ್ನಷ್ಟು ಹಾಗೂ ಕರ್ನಾಟಕದ ೬೧ ಸಾವಿರ ಹೆಕ್ಟೇರ್ನಷ್ಟು ಕಬ್ಬಿನ ಬೆಳೆಯು ಈ ಕೀಟದ ಭಾದೆಗೊಳಪಟ್ಟಿತು. ಕರ್ನಾಟಕದಲ್ಲಿ ಪ್ರಮುಖವಾಗಿ ಬೆಳಗಾವಿ ಮತ್ತು ಬೀದರ ಜಿಲ್ಲೆಗಳಲ್ಲಿ ಕಂಡುಬಂದಿದ್ದ ಕೀಟವು ಇತ್ತೀಚಿನ ದಿನಗಳಲ್ಲಿ ಕಬ್ಬು ಬೆಳೆಯುವ ಉತ್ತರ ಕರ್ನಾಟಕದ ಪ್ರಮುಖ ಪ್ರದೇಶಗಳಲ್ಲಿ ತೀವ್ರವಾಗಿ ಕಂಡುಬರುತ್ತಿದೆ.

ಪ್ರಾರಂಭದಲ್ಲಿ ರೈತರು ರಸಾಯನಿಕ ಕೀಟನಾಶಕಗಳ ಬಳಕೆಯ ಮೂಲಕ ತಾತ್ಕಾಲಿಕ ನಿಯಂತ್ರಣ ಸಾಧಿಸಿದರು. ನಂತರದ ದಿನಗಳಲ್ಲಿ ಅಸಮರ್ಪಕ ರಸಾಯನಿಕ ಕೀಟನಾಶಕಗಳ ಬಳಕೆಯು ಪರಿಸರ ಮಾಲಿನ್ಯ ಹಾಗೂ ನೈಸರ್ಗಿಕ ಪರೋಪಕಾರಿ ಕೀಟಗಳ ಮಾರಣ ಹೋಮಕ್ಕೆ ಎಡೆಮಾಡಿಕೊಟ್ಟಿತು. ಈ ಸನ್ನಿವೇಶವು ಕೃಷಿಯಲ್ಲಿ ಪರಿಸರ ಸ್ನೇಹಿ ಹಾಗೂ ಪರಭಕ್ಷಕ ಕೀಟಗಳ ಬಳಕೆಗೆ ನಾಂದಿಯಾಯಿತು. ಅವುಗಳಲ್ಲಿ ಮೈಕ್ರೋಮಸ್ ಇಗೋರೆಟಸ್ ಮತ್ತು ಡೈಫಾ ಎಫಿಡಿವೊರಾ ಪ್ರಮುಖವಾದದ್ದು.

ಉಣ್ಣೆ ಹೇನಿನ ವೈಜ್ಞಾನಿಕ ಹೆಸರು ಸಿರಾಟೊವ್ಯಾಕುನಾ ಲ್ಯಾನಿಜೆರಾ ಎಂಬುದಾಗಿದ್ದು, ಹೊಮೊಪ್ಟೇರಾ ಗಣದ ಎಫಿಡಿಡೆ ಕುಟುಂಬಕ್ಕೆ ಸೇರಿರುತ್ತದೆ. ಕೀಟವು ನಿರ್ಲಿಂಗ ರೀತಿಯಿಂದ (ಪಾರ್ಥೆನೊಜೆನೆಸಿಸ್) ಸಂತಾನೋತ್ಪತ್ತಿ ಮಾಡುವುದು. ಮರಿಗಳು ಹಸಿರುಯುಕ್ತ ಹಳದಿ ಬಣ್ಣದಾಗಿದ್ದು ಬಹು ಚುರುಕಾಗಿರುತ್ತವೆ. ಪ್ರೌಢಾವಸ್ಥೆಯನ್ನು ಹೊಂದಿದ ಎರಡರಿಂದ ಮೂರು ದಿನದ ಪ್ರಾಯದ ಹೆಣ್ಣು ಕೀಟವು ದಿನವೊಂದಕ್ಕೆ ೧೫-೩೫ ಮರಿಗಳಿಗೆ ಜನ್ಮ ನೀಡುತ್ತದೆ. ಬಾಲ್ಯಾವಸ್ಥೆಯು ೨೦-೫೭ ದಿನಗಳವರೆಗೆ ಇರುತ್ತದೆ. ಒಂದು ಪ್ರೌಢ ಕೀಟವು ೩೨-೫೭ ದಿನಗಳವರೆಗೆ ಬದುಕಬಲ್ಲದು. ಮೋಡ ಕವಿದ ವಾತಾವರಣ, ತಂಪಾದ ಹವೆ ಮತ್ತು ಹೆಚ್ಚಿನ ಆರ್ದ್ರತೆ ಇರುವ ವಾತಾವರಣವು ಈ ಕೀಟದ ವೃದ್ಧಿಗೆ ಮತ್ತು ಪ್ರಸರಣಕ್ಕೆ ಅನುಕೂಲಕರ.

5

ಈ ಕೀಟವು ಗುಂಪು-ಗುಂಪಾಗಿ ಎಲೆಗಳ ಕೆಳಭಾಗದಲ್ಲಿದ್ದು ರಸ ಹೀರುವವು. ಇಂತಹ ಎಲೆಗಳು ಕ್ರಮೇಣ ತುದಿಯಿಂದ ಅಂಚುಗಳಲ್ಲಿ ಹಳದಿ ವರ್ಣಕ್ಕೆ ತಿರುಗಿ ತದನಂತರ ಒಣಗಲಾರಂಭಿಸುವವು. ಕೆಳಗಿನ ಎಲೆಯ ಮೇಲ್ಭಾಗದಲ್ಲಿ ಕಪ್ಪು ಬೂಷ್ಟ್ ಬೆಳೆದು ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ತೊಂದರೆಯಾಗುವುದು. ಕಬ್ಬಿನ ಇಳುವರಿಯು ಶೇ. ೨೨ರಿಂದ ೨೫ರಷ್ಟು ಹಾಗೂ ಸಕ್ಕರೆ ಇಳುವರಿಯು ಶೇ. ೨೪ ರಷ್ಟು ಕಡಿಮೆಯಾಗುವುದು.

ಸಮಗ್ರ ನಿರ್ವಹಣಾ ಕ್ರಮಗಳು

8

೧.ಬಾಧೆಗೊಳಗಾದ ಕಬ್ಬನ್ನು ನಾಟಿಮಾಡಲು ಉಪಯೋಗಿಸಬಾರದು.

೨.ಪಟ್ಟಾ ಪದ್ಧತಿಯನ್ನು ಅನುಸರಿಸಿ ಬೆಳೆದ ಬೆಳೆಯಲ್ಲಿ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುವುದು ಸುಲಭ.

೩. ಕಬ್ಬಿನ ಗದ್ದೆಗಳಲ್ಲಿ ನೀರು ಬಸಿದು ಹೋಗುವಂತೆ ನೋಡಿಕೊಳ್ಳುವುದು.

೪.ಜೈವಿಕ ವಿಧಾನದಲ್ಲಿ ಮೈಕ್ರೋಮಸ್ ಇಗೋರೆಟಸ್ (ಹೇನು ಸಿಂಹ) ಅಥವಾ ಡೈಫಾ ಎಫಿಡಿವೊರಾದ ಕೋಶ, ಮರಿಗಳನ್ನು ಬಿಡುವುದು ಸೂಕ್ತ.

೫. ಪ್ರತಿ ಹೆಕ್ಟೇರ್ ಪ್ರದೇಶಕ್ಕೆ ಸುಮಾರು ೧೦೦೦-೧೫೦೦ ಮರಿ ಅಥವಾ ಕೋಶ ಬಿಡುಗಡೆ ಮಾಡಬೇಕು. ಕಟಾವಿಗೆ ಸಿದ್ಧವಾದ ಕಬ್ಬಿನ ಬೆಳೆಯಲ್ಲಿ ಪರಭಕ್ಷಕ ಕೀಟ ಬಿಡುಗಡೆ ಮಾಡಬಾರದು.

೬.ಪರಭಕ್ಷಕ ಕೀಟವನ್ನು ಬಿಡುಗಡೆಗೊಳಿಸುವ ಪೂರ್ವದಲ್ಲಿ ಅಥವಾ ನಂತರ ಕೀಟನಾಶಕಗಳ ಸಿಂಪರಣೆ ಅಥವಾ ಧೂಳೀಕರಣ ಮಾಡಬಾರದು.

೭.ಪರಭಕ್ಷಕ ಕೀಟಗಳನ್ನು ಬಿಟ್ಟ ಗದ್ದೆಗಳಲ್ಲಿ ಹಾಗೂ ಇವುಗಳ ಚಟುವಟಿಕೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಬ್ಬಿನ ರವದಿಯನ್ನು ಸುಡಬಾರದು.

೯.ಕೀಟನಾಶಕಗಳಾದ ಅಸಿಫೇಟ್ ೭೫ ಡಬ್ಲೂ.ಪಿ. ಒಂದು ಗ್ರಾಂ ಅಥವಾ ಥಯಾಮಿಥಾಕ್ಸಾಮ್ ೨೫ ಡಬ್ಲೂ.ಜಿ. ೦.೨೬ ಗ್ರಾಂ ಪ್ರತಿ ಲೀಟರ್ ನೀರಿಗೆ ಅಥವಾ ಶೇ.೧೦ ರ ಫೊರೇಟ್ ಹರಳು ೨೫ ಕಿ.ಗ್ರಾಂ ಪ್ರತಿ ಹೆಕ್ಟೇರ್ಗೆ ಬೇಕಾಗುವುದು.

೧೦.ಬಿಳಿ ಉಣ್ಣೆ ಹೇನು ನಿರೋಧಕ ತಳಿ ಎಸ್ಎನ್ಕೆ-೦೪೪ ನ್ನು ಬೆಳೆಯುವುದು ಸೂಕ್ತ.