ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧

ಮಣ್ಣ ಮಡಿಲಲ್ಲಿ

ಕೃಷಿ ಸಾಧನೆಗೆ ಗೆದ್ದವರ ಮಾತ್ರ ನೋಡದೆ ಸೋತವರನ್ನು ನೋಡಬೇಕು

ಸಂಪಾದಕರು
1

ಸಿರಿವಾರಕ್ಕೆ ಬೆಳಗ್ಗೆ ೯ಕ್ಕೆ ಬರುತ್ತೇವೆಂದು ದೂರವಾಣಿ ಮೂಲಕ ತಿಳಿಸಿ ಅಲ್ಲಿಗೆ ತಲುಪುತ್ತಿದ್ದಂತೆ ಶಿಸ್ತಿನ ಕ್ಯಾಪ್ಟನ್ ವಿರೂಪಾಕ್ಷಿ ಸಮಯಕ್ಕೆ ಸರಿಯಾಗಿ ರಸ್ತೆಯಲ್ಲೆ ಕಾದು ಸ್ವಾಗತಿಸಿದರು. ತಮ್ಮ ಸೇನಾ ಸೇವೆಯ ನಂತರ ಕೃಷಿಯನ್ನು ವೃತ್ತಿಯಾಗಿಸಿಕೊಂಡ ಇವರಿಗೆ ಕೃಷಿ ಹೊಸದು. ಇವರ ಸ್ನೇಹಿತ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ತೋಟಗಾರಿಕೆ ವಿಜ್ಞಾನಿ ಡಾ. ಆರ್. ಎಂ. ಹೊಸಮನಿಯವರು ಕೃಷಿ ಅರಿವು ಹೆಚ್ಚಿಸಿಕೊಳ್ಳಲು ತರಬೇತಿಗಳಲ್ಲಿ ಭಾಗವಹಿಸು ಎಂದು ಸಲಹೆ ನೀಡಿದರು. ಅದರಂತೆ ಬಾಗಲಕೋಟೆ, ಧಾರವಾಡ, ರಾಯಚೂರು ವಿಶ್ವವಿದ್ಯಾಲಯಗಳಿಗೆ, ಕೇಂದ್ರೀಯ ಸಂಶೋಧನಾ ಕೇಂದ್ರಗಳಿಗೆ ಭೇಟಿ ನೀಡಿ ತರಬೇತಿ ಪಡೆದ ಇವರು, ನಂತರ ಕೃಷಿ ಪ್ರಾರಂಭ ಮಾಡಿದರು.

3

ಕೃಷಿ ಗೊತ್ತಿರಲಿಲ್ಲ. ವಿಜ್ಞಾನಿಗಳ, ಸಂಸ್ಥೆಗಳ ಸಂಪರ್ಕದಿಂದಲೇ ಕೃಷಿ ಪ್ರಾರಂಭಿಸಿದೆ. ೧೦೦ ಎಕರೆ ಇದೆ ಆದರೆ ೯ ಎಕರೆ ನಾನು ಮಾಡುತ್ತೇನೆ. ಉಳಿದದ್ದು ಭತ್ತ ಬೆಳೆಯಲು ಗುತ್ತಿಗೆ ನೀಡಿದ್ದೇನೆ. ಮೊದಲ ಬೆಳೆ ತರಕಾರಿ ಬೆಳೆ ಬೆಳೆದೆ ನಂತರ ನಾಲ್ಕೈದು ಬೆಳೆ ಬಾಳೆ ಮಾಡಿದೆ. ಈಗ ದಾಳಿಂಬೆ ಮಾಡುತ್ತಿದ್ದೇನೆ. ದಾಳಿಂಬೆ ಬೆಳೆಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಡಾ. ಬೆಣಗಿಯವರನ್ನು ಸಂಪರ್ಕಿಸುತ್ತೇನೆ. ಬಾಗಲಕೋಟೆ ತೋಟಗಾರಿಕೆ ಮಹಾವಿದ್ಯಾಲಯದ ರೋಗಶಾಸ್ತ್ರಜ್ಞರಾದ ಮಂಜುನಾಥ್, ರಾಯಚೂರು ಕೃಷಿ ವಿಶ್ವವಿದ್ಯಾಲಯದ ಡಾ. ಸುಂಕದ್ ಇವರನ್ನೂ ಸಹ ಸಂಪರ್ಕಿಸುತ್ತಿರುತ್ತೇನೆ. ನೋಡಿ ನನಗೆ ಒಬ್ಬರು ಮಿಲಿಯಾ ಡುಬಿಯಾ(ಹೆಬ್ಬೇವು)ದಾಳಿಂಬೆ ಬೆಳೆಯಲ್ಲಿ ಹಾಕಿ ಒಳ್ಳೆಯ ಇಳುವರಿ ಸಿಗುತ್ತೆ ಎಂದರು. ಹಾಕಿದೆ ಆದ್ರೆ ನೆರಳು ಹೆಚ್ಚಾಗಿ ದಾಳಿಂಬೆ ಹೂವೇ ಬಿಡಲಿಲ್ಲ. ಇದರಿಂದ ನಷ್ಟ ಆಯಿತು. ಚಿತ್ರದುರ್ಗದಿಂದ ಬಂದ ರೈತರೊಬ್ಬರ ಮಾತು ಕೇಳಿದೆ. ಅವರು ನರ್ಸರಿ ಮಾಡಿದ್ದನ್ನ ಮಾರಲು ಈ ರೀತಿ ಹೇಳಿದರೊ ತಿಳಿಯದು. ಆರು ಏಳು ವರ್ಷಕ್ಕೆ ಮಾರಬಹುದು ಅಂದ್ರು ಆದ್ರೆ ತೆಗೆದುಕೊಳ್ಳುವವರು ಕನಿಷ್ಠ ಹತ್ತು ವರ್ಷ ಆಗಬೇಕು ಅಂದ್ರು. ಬೆಲೆ ಸಹ ಆಶಾದಾಯಕವಾಗಿರಲಿಲ್ಲ. ಅದಕ್ಕೆ ನನಗನಿಸುತ್ತೆ ಕೃಷಿ ಮಾಡಿ ಗೆದ್ದವರನ್ನ ನೋಡಿ ಕಲಿಯೋದು ಎಷ್ಟು ಮುಖ್ಯವೋ ಕೃಷಿ ಮಾಡಿ ಸೋತವರಿಂದಲೂ ಕಲಿಬೇಕು. ಹೀಗೆ ತೂಕಬದ್ಧವಾಗಿ ಮಾತನಾಡಿದ್ರು ಕ್ಯಾಪ್ಟನ್ ವಿರೂಪಾಕ್ಷಿ.

5

ಅವರು ತಿಳಿಸಿದ ವಿಶೇಷಗಳು

  • ದಾಳಿಂಬೆಗೆ ಮಿಲಿಯಾ ಡುಬಿಯಾ ನೆರಳು ಜಾಸ್ತಿ ಮಾಡುತ್ತೆ ಇದನ್ನ ಕೇವಲ ಬದುಗಳಿಗೆ ಹಾಕಿದ್ರೆ ಒಳ್ಳೆಯದು.
  • ದಾಳಿಂಬೆ ಸೊರಗು ರೋಗ ನಮ್ಮನ್ನ ಸೊರಗುವಂತೆ ಮಾಡಿದೆ. ಇದಕ್ಕೆ ವಿಶೇಷ ನಿರ್ವಹಣೆ ಮಾಡಬೇಕು. ರೋಗಕ್ಕೆ ತುತ್ತಾದ ಗಿಡ ತೆಗೆದು ಸುಟ್ಟು ನಂತರ ಫಾರ್ಮಾಲ್ಡಿಹೈಡ್ ಪ್ರತಿ ಲೀಟರ್ಗೆ ೨೫ ಎಂ ಎಲ್ ಹಾಕಿ ಹದಿನೈದು ಲೀಟರ್ ದ್ರಾವಣ ಮಣ್ಣಿಗೆ ಮಿಶ್ರ ಮಾಡಿ, ಕಪ್ಪು ಪಾಲಿಥೀನ್ ಮುಚ್ಚಿ ಒಂದು ತಿಂಗಳು ಬಿಟ್ಟು ನಂತರ ಬ್ಲೀಚಿಂಗ್ ಪೌಡರ್ ಹಾಕಿ ಒಂದು ಹದಿನೈದು ದಿನ ಬಿಟ್ಟು ನಂತರ ಹೊಸ ಗಿಡ ನಾಟಿ ಮಾಡಬೇಕು. ಈ ವಿಧಾನ ಸೊರಗು ರೋಗದಿಂದ ಪರಿಹಾರ ಕೊಡಬಹುದೇನೋ ನೋಡಬೇಕು ಅಂತಾರೆ.
  • ನಾವೇನು ಮಾಡಬೇಕು: ಮಾರುಕಟ್ಟೆ ವಿಶ್ಲೇಷಣೆ, ಆದಾಯ ವಿಶ್ಲೇಷಣೆ ಮಾಡಿದಲ್ಲಿ ಮಾತ್ರ ಒಳ್ಳೆ ಕೃಷಿ. ಆಬ್ಸೆಂಟಿ ಲ್ಯಾಂಡ್ ಲಾರ್ಡ್ ಆದ್ರೆ (ಹೊರಗಿದ್ದು ಕೃಷಿ ಮಾಡುವವ) ಯಶಸ್ಸು ಸಿಗುವುದಿಲ್ಲ.
  • ಹೀಗೆ ಶಿಸ್ತಿನ ಸಿಪಾಯಿಯಂತೆ ವರದಿ ನೀಡಿ ನಮ್ಮನ್ನು ಊರ ಅಗಸೆಯವರೆಗೆ ಬಂದು ಬೀಳ್ಕೊಟ್ಟರು.