ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧

ಹವಾಮಾನ ವೈಪರೀತ್ಯದಲ್ಲಿ ಅಡಿಕೆ ತೋಟಗಳ ನಿರ್ವಹಣೆ

ಬಸವನಗೌಡ ಎಂ.ಜಿ
9449856876
1

ಈ ವರ್ಷ ಮಳೆಗಾಲ ಪ್ರಾರಂಭವಾಗಿದ್ದು ಹಾಗೂ ಮುಗಿದಿದ್ದು ಯಾವಾಗ ಎಂಬುವುದು ಗೊತ್ತಾಗಲೇ ಇಲ್ಲ. ಪ್ರಕೃತಿ ಮಾತೆ ಯಾಕೋ ಈ ವರ್ಷ ನಮ್ಮ ಮೇಲೆ ಮುನಿಸಿಕೊಂಡಂತಿದೆ. ಭೂತಾಯಿ ಸೊಂಪಾಗಿ ನೀರುಕುಡಿದು ಕೆರೆ ಕಟ್ಟೆಗಳಿಗೆ ನೀರು ಹರಿದಿರುವುದನ್ನು ಕಾಣಲಿಲ್ಲ. ಈಗಾಗಲೇ ನವೆಂಬರ್ ತಿಂಗಳಿನಲ್ಲಿಯೇ ಬೇಸಿಗೆಯ ಅನುಭವವಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಈ ವರ್ಷ ಬೆಳೆಗಳಿಗಿರಲಿ, ಮನುಷ್ಯರಿಗೆ ಕುಡಿಯಲೂ ಸಹ ನೀರು ಸಿಗದಂತಹ ಪರಿಸ್ಥಿತಿ ಬರಬಹುದು.

ಇಂತಹ ಕ್ಷಿಷ್ಟ ಪರಿಸ್ಥಿತಿಯಲ್ಲಿ ಕಳೆದ ವರ್ಷ ರೈತರ ಜೇಬು ತುಂಬಿಸಿದ ಬೆಳೆ ಅಡಿಕೆ ಬಗ್ಗೆ ಆತಂಕ ಹೆಚ್ಚುತ್ತಿರುವುದು ಸಹಜವೇ. ಪ್ರಸ್ತುತ ವಿಷಮ ಪರಿಸ್ಥಿತಿಯಲ್ಲಿ ನಮ್ಮ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಯಲ್ಲಿರುವ ಅಡಿಕೆ ತೋಟಗಳನ್ನು ಉಳಿಸಿಕೊಳ್ಳುವುದು ಬಲು ಸವಾಲಿನ ಕೆಲಸವೇ ಸರಿ. ಈಗಾಗಲೇ ಕೆಲ ಪ್ರದೇಶಗಳ ಬೋರ್ವೆಲ್ಗಳಲ್ಲಿ ನೀರು ಕಣ್ಣಾಮುಚ್ಚಾಲೆಯಾಟವಾಡುತ್ತಿದೆ. ಭದ್ರೆಯ ಒಡಲಲ್ಲಿರುವುದು ಬರೀ ೧೫೫ ಅಡಿ ನೀರುಮಾತ್ರ. ಸಾಲದಕ್ಕೆ ದಿನಕ್ಕೆ ಕೇವಲ ೩ ಗಂಟೆ ರೈತರ ಪಂಪ್ಸೆಟ್ಗಳಿಗೆ ದೊರೆಯುತ್ತಿರುವ ವಿದ್ಯುತ್. ಈಗ ನವೆಂಬರ್ನಲ್ಲೆ ನಮಗೆ ಪ್ರತಿ ನಿತ್ಯ ೩-೪ ತಾಸು ವಿದ್ಯುತ್ ಸಿಕ್ಕರೆ ಬೇಸಿಗೆಯಲ್ಲಿ ಯಾವ ಪರಿಸ್ಥಿತಿಯೆಂಬುದು ಊಹಿಸಲೂ ಅಸಾಧ್ಯ. ಅದೂ ಹಗಲಿನಲ್ಲಿ ಪಂಪ್ಸೆಟ್ಗಳಿಗೆ ಕೆಲಸವೇ ಇಲ್ಲ. ಬಂದರೆ ಅರ್ಧಗಂಟೆ ಇಲ್ಲವೇ ಒಂದು ಗಂಟೆ ಇಲ್ಲದಿದ್ದರೆ ಅದೂ ಇಲ್ಲ. ಈಗೆಲ್ಲ ರೈತರ ಚಟುವಟಿಕೆಗಳು ಪ್ರಾರಂಭವಾಗುವುದು ರಾತ್ರಿ ೧೧ ಗಂಟೆಯ ನಂತರವೇ. ಮೊನ್ನೆ ನಮ್ಮ ಸ್ವಗ್ರಾಮಕ್ಕೆ ತೆರಳಿದ್ದಾಗ ಗ್ರಾಮದ ರೈತರನ್ನು ಮಾತನಾಡಿಸಿದಾಗ ಬಂದ ಉತ್ತರವಿದು. ರಾತ್ರಿ ೧೧ ಕ್ಕೆ ಸರಿಯಾಗಿ ಕರೆಂಟ್ ಬಂದರೆ ರೈತರು ಮೋಟಾರ್ ಸೈಕಲ್ ಏರಿ ತೋಟಗಳಿಗೆ ತೆರಳುವುದನ್ನು ಕಾಣುತ್ತೇವೆ. ಅದೂ ನಮ್ಮ ಭದ್ರಾ ಚಾನಲ್ಅನ್ನು ವೀಕ್ಷಿಸಿದರೆ ಕರೆಂಟ್ ಬಂದ ಸರಿಯಾಗಿ ಹತ್ತು ನಿಮಿಷಕ್ಕೆ ೧ ಅಡಿ ನೀರು ಕಡಿಮೆಯಾಗುತ್ತದೆ. ಇದಕ್ಕೆಲ್ಲಾ ಏನು ಕಾರಣವೆಂಬುದನ್ನು ತಾವೇ ಊಹಿಸಿಕೊಳ್ಳಬಹುದು. ಇದನ್ನೆಲ್ಲಾ ನೋಡಿದರೆ ರೈತಾಪಿ ಬದುಕು ಎಷ್ಟು ದುಸ್ತರವಾಗಿದೆ ಎಂಬುದನ್ನು ಮನಗಾಣಬಹುದು.

4

ಹಾಗಾದರೆ ಇಂತಹ ಪರಿಸ್ಥಿತಿಯಿಂದ ನಮ್ಮ ರೈತರು ಪಾರಾಗಲು ಏನಾದರೂ ಪರ್ಯಾಯ ತಂತ್ರಜ್ಞಾನಗಳನ್ನು ನೀಡಬಹುದೇ ಎಂದು ಯೋಚಿಸಿದಾಗ ನಮಗೆ ತೋಚಿದ ಕೆಲವು ಅಂಶಗಳನ್ನು ಈ ಲೇಖನದೊಂದಿಗೆ ರೈತರೊಂದಿಗೆ ಹಂಚಿಕೊಳ್ಳಲಿಚ್ಚಿಸುತ್ತೇವೆ.

ಮೊಟ್ಟ ಮೊದಲನೆಯದಾಗಿ ಹಿಂಗಾರಿನಲ್ಲಿ ಕೊಡುವ ಪೋಷಕಾಂಶಗಳನ್ನು ಆದಷ್ಟು ಬೇಗ ನಾವು ಕೊಟ್ಟರೆ ಉತ್ತಮ. ಯಾವುದೇ ಕಾರಣಕ್ಕೂ ಅಡಿಕೆ ಕೊಯ್ಲಿಗೂ ನಾವು ಕೊಡುವ ಪೋಷಕಾಂಶಕ್ಕೂ ಸಂಬಂಧವೇಇಲ್ಲ. ನಾವು ಕೊಡುವ ಪೋಷಕಾಂಶ ಗಿಡಗಳಿಗೆ ಸಿಗಬೇಕಾದರೆ ಕನಿಷ್ಟ ಎರಡು ತಿಂಗಳು ಬೇಕು.ಈಗ ನಾವು ಕೊಟ್ಟರೆ ಸರಿಯಾಗಿ ಜನವರಿ ತಿಂಗಳಿಗೆ ಪೋಷಕಾಂಶ ಗಿಡಗಳಿಗೆ ದೊರೆಯುತ್ತವೆ, ಆಗ ಅದು ಇಂಗಾರ ಬಿಡುವ ಕಾಲ. ಆದಷ್ಟು ಈ ಬಾರಿ ಸಾವಯವಯುಕ್ತ ಗೊಬ್ಬರಗಳನ್ನು ನೀಡಿದರೆ ಸೂಕ್ತ ಅಥವಾ ನೀರಾವರಿ ಆಶ್ರಯ ಚೆನ್ನಾಗಿದ್ದರೆ ರಾಸಾಯನಿಕ ಗೊಬ್ಬರಗಳನ್ನು ನೀಡಬಹುದು. ಇನ್ನೂ ತೋಟಗಳಲ್ಲಿ ಉಳುಮೆಯ ವಿಷಯಕ್ಕೆ ಬಂದರೆ ಸ್ವಲ್ಪ ಎಚ್ಚರವಹಿಸಬೇಕು. ಯಾರು ಹೆಚ್ಚು ಉಳುಮೆ ಮಾಡುತ್ತೀರೋ ಅಂತಹ ತೋಟಗಳಲ್ಲಿ ಮೇಲ್ಮೈ ಉಷ್ಣಾಂಶ ಹೆಚ್ಚಾಗಿ, ನೀರು ಹೆಚ್ಚು ಬೇಕಾಗುತ್ತದೆ. ಹಾಗಾಗಿ ಯಾವುದಾದರೊಂದು ಹಸಿರೆಲೆಗೊಬ್ಬರದ ಬೆಳೆಯನ್ನು ಬೆಳೆಯುವುದು ಸೂಕ್ತ. ಸೆಣಬು, ಡಯಾಂಚ, ಹುರಳಿ, ವೆಲ್ವೆಟ್ಬೀನ್ಸ್, ಅಲಸಂದೆ ಮುಂತಾದವುಗಳನ್ನು ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುವುದಲ್ಲದೇ ನೀರು ಆವಿಯಾಗದಂತೆ ನೋಡಿಕೊಳ್ಳುತ್ತದೆ. ಜಿಲ್ಲೆಯಲ್ಲಿ ಕೆಲವು ರೈತರು ಅಡಿಕೆ ತೋಟಗಳಲ್ಲಿ ಉಳುಮೆ ನಿಲ್ಲಿಸಿ ಹಲವು ವರ್ಷಗಳಿಂದ ಒಳ್ಳೆಯ ಇಳುವರಿ ಪಡೆಯುತ್ತಿದ್ದಾರೆ. ವೀಡ್ಕಟ್ಟರ್ ಬಳಸಿ, ಕಳೆ ನಿರ್ವಹಣೆ ಮಾಡಿ, ಹಸಿರು ಹೊದಿಕೆಯ ನೇರ ಉಪಯೋಗವನ್ನು ಕಂಡುಕೊಂಡಿದ್ದಾರೆ.

7

ಈಗಾಗಲೇ ಕಬ್ಬಿನ ಕಟಾವು ಪ್ರಾರಂಭವಾಗಿದೆ. ತೇವಾಂಶವನ್ನು ಕಾಪಾಡಲು ಒಂದು ಹೊಸ ವಿನೂತನ ಪ್ರಯೋಗವನ್ನು ಮಾಡಬಹುದು. ಅದೇನೆಂದರೆ ಸುಮ್ಮನೇ ಸುಟ್ಟು ಬೂದಿಯಾಗುವ ಕಬ್ಬಿನ ರವದಿಯನ್ನು ತಂದು ತಮ್ಮ ತೋಟಗಳಲ್ಲಿ ಹೊದಿಕೆಯಾಗಿ ಹರಡುವುದು. ನಂತರ ಟ್ರಾಕ್ಟರ್ ಡಿಸ್ಕ್ನಿಂದ ಉಳುಮೆ ಮಾಡಿದರೆ ಅದು ಹೊಲದಲ್ಲೇ ಕೊಚ್ಚಿ ತೇವಾಂಶ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.ಆದರೆ ಇಲ್ಲೊಂದು ಎಚ್ಚರಿಕೆಯ ವಿಷಯವೆಂದರೆ ರವದಿಯನ್ನು ಹರಡಿಸಿದಾಗ ಯಾರಾದರೂ ಕಿಡಿಗೇಡಿಗಳು ಕಡ್ಡಿಗೀರಿದರೆ ಅಪಾಯ ಖಂಡಿತ. ಈ ವಿಷಯದ ಬಗ್ಗೆ ಎಚ್ಚರವಿರಲಿ.ಇನ್ನು ನೀರಾವರಿಯ ವಿಷಯಕ್ಕೆ ಬಂದರೆ ಸಾಲು ನೀರಾವರಿಗಿಂತ ಹನಿ ನೀರಾವರಿ ಅಥವಾ ತುಂತುರು ನೀರಾವರಿ ಉತ್ತಮ. ಸಾಲು ನೀರಾವರಿಯಲ್ಲಿ ನೀರು ಪೋಲಾಗುವುದುಅಧಿಕ. ಇರುವ ನೀರನ್ನು ಮಿತಿಯಲ್ಲಿ ಬಳಸಿದರೆ ಉತ್ತಮ. ಹೆಚ್ಚು ನೀರಿದ್ದರೂ ಸಹ ಅಂತರ್ಜಲವನ್ನು ಖಾಲಿ ಮಾಡಬೇಡಿ. ಈ ವರ್ಷ ಬೇಸಿಗೆ ಭತ್ತ ಕನಸಿನ ಮಾತು.ಈಗ ಡ್ಯಾಂನಲ್ಲಿರುವ ನೀರು ಬರೀ ತೋಟಗಳಿಗೆ ಹಾಗೂ ಕುಡಿಯುವ ನೀರಿಗೆ ಸಾಕಾಗುವುದು. ಇದರ ಬಗ್ಗೆ ನಿರ್ಧಾರ ಏನಾಗುವುದೋ ಕಾದು ನೋಡೋಣ.ಇನ್ನೂ ಸರ್ಕಾರ ನೀಡುವ ವಿದ್ಯುತ್ ಶಕ್ತಿಯ ಮೇಲೆ ಅವಲಂಬನೆ ಕಡಿಮೆ ಮಾಡಿದರೆ ಉತ್ತಮ. ಏಕೆಂದರೆ ಅದು ಕಣ್ಣುಮುಚ್ಚಾಲೆಯಾಟವಾಡಿದರೆ ಪಂಪ್ಸೆಟ್ಗಳ ಮೋಟಾರ್ಗಳಿಗೆ ತೊಂದರೆ.ಕೆಲವೊಮ್ಮೆ ವೋಲ್ಟೇಜ್ನ ಕೊರತೆ, ಮೋಟಾರ್ ಸುಟ್ಟರೆ ಅಥವಾ ಟ್ರಾನ್ಸ್ಫಾರ್ಮ ರ್ ಸುಟ್ಟರೆ ರೈತನ ಗೋಳು ಹೇಳತೀರದು. ಆದ್ದರಿಂದ ಆದಷ್ಟು ಸೌರಶಕ್ತಿಯ ಬಳಕೆಯನ್ನು ಮಾಡುವುದು ಉತ್ತಮ. ಹಾಗೆಂದು ಇದೊಂದೇ ಎಲ್ಲಾ ಸಮಸ್ಯೆಗಳಿಗೆ ಉತ್ತರವಲ್ಲ. ಕೆಲ ರೈತರ ಅಭಿಪ್ರಾಯದಂತೆ ಸೋಲಾರ್ಬಳಸಿ ನಾವು ಬೋರ್ಗಳನ್ನು ಚಾಲನೆ ಮಾಡಿದರೆ ಬೇಕಾದ ನೀರಿನ ಒತ್ತಡಇರುವುದಿಲ್ಲ, ಮೋಡಕವಿದ ವಾತಾವರಣವಿದ್ದರೆ ಚಾಲೂ ಆಗುವುದಿಲ್ಲವೆಂಬುದು. ಇವು ಸತ್ಯವೇ ಇದ್ದರೂ ಸ್ವಲ್ಪ ವೈಜ್ಞಾನಿಕವಾಗಿ ನಾವು ಸೌರಶಕ್ತಿಯನ್ನು ಬಳಸಿದರೆ ಯಾವುದೇ ತೊಂದರೆಯಿಲ್ಲ ಎಂದು ಈಗಾಗಲೇ ಸೌರಶಕ್ತಿ ಬಳಸಿ ತನ್ನ ೯ ಎಕರೆ ಪ್ರದೇಶದಲ್ಲಿ ಅಡಿಕೆ ಬಾಳೆ ಬೆಳೆಯುತ್ತಿರುವ ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ ತಾಂಡದ ಪ್ರಗತಿಪರ ರೈತರಾದ ಶ್ರೀ ಗೋಪಾಲ್ನಾಯಕ್ರವರ ಅಭಿಪ್ರಾಯ [ಈ ಬಗ್ಗೆ ೨೦೧೬ ನವೆಂಬರ್ ಮಾಸದ ನೇಗಿಲಮಿಡಿತದಲ್ಲಿ ವಿವರಗಳಿವೆ].

9

ಮೊನ್ನೆ ಈ ವಿಷಯ ತಿಳಿದ ರೈತರೊಬ್ಬರು ನಮ್ಮ ಬಳಿ ಬಂದು ವಿಚಾರಿಸಿದಾಗ ಅವರು ಕೇಳಿದ ಮೊದಲ ಪ್ರಶ್ನೆ ಸರ್ ಇದಕ್ಕೆ ಸಬ್ಸಿಡಿ ಇದೆಯಾ ಎಂದು.ಈ ವಿಚಾರವಾಗಿ ನಮ್ಮ ಹತ್ತಿರ ಮಾಹಿತಿ ಇಲ್ಲವಾದಾಗ ನಾವು ಕೆಲವು ಪ್ರತಿಷ್ಟಿತ ಕಂಪನಿಗಳ ಹತ್ತಿರ ಮಾತನಾಡಿದಾಗ ಬಂದ ಉತ್ತರ ಇದಾಗಿತ್ತು. ಸೋಲಾರ್ ಪಂಪ್ಸೆಟ್ ಬಳಸಲು ರೈತರು ರಾಷ್ಟ್ರೀಕೃತ ಬ್ಯಾಂಕ್ಗಳಿಂದ ಸಾಲವನ್ನು ಪಡೆಯಬೇಕು. ನಂತರ ಸಬ್ಸಿಡಿ ಹಣವನ್ನು ಸಾಲದಕಂತಿಗೆ ನಬಾರ್ಡ್ ವತಿಯಿಂದ ಜಮಾ ಮಾಡಲಾಗುವುದು ಎಂದು. ಇದು ಒಟ್ಟು ವೆಚ್ಚದ ಶೇಕಡಾ ೪೮ ರಷ್ಟು, ಇನ್ನೂ ಶೇಕಡಾ ೩೨ ರಷ್ಟು ಹಣವನ್ನು ಬ್ಯಾಂಕ್ ಸಾಲದ ಮೂಲಕ ಪಾವತಿಸಬೇಕು. ಉಳಿದ ಶೇಕಡಾ ೨೦ ರಷ್ಟು ಹಣವನ್ನುರೈತರು ನಗದು ರೂಪದಲ್ಲಿ ಪಾವತಿಸಬೇಕೆಂದು. ಒಟ್ಟು ೫ ಅಶ್ವಶಕ್ತಿಯ ಸೋಲಾರ್ ನೀರಿನ ಪಂಪ್ ಅಳವಡಿಸಲು ಸರಿಸುಮಾರು ೨.೬೪ ಲಕ್ಷವನ್ನು ರೈತರು ಪಾವತಿಸಬೇಕಾಗುವುದೆಂದು, ಆದರೆ ರೈತರು ಈ ವಿಷಯದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸಂಪೂರ್ಣ ಮಾಹಿತಿ ಪಡೆದು ತದನಂತರ ಕಂಪನಿಯ ಅಧಿಕಾರಿಗಳು ತಮ್ಮ ತೋಟಗಳನ್ನು ಪರಿಶೀಲಿಸಿದ ನಂತರವೇ ಮುಂದಿನ ಹೆಜ್ಜೆಯಿಡಬೇಕು. ಯಾವುದೇ ಕಾರಣಕ್ಕೂ ತಾವು ಬರೀ ಫೋನಿನಲ್ಲಿ ಮಾತನಾಡಿ ಮುಂಗಡ ಹಣವನ್ನು ಪಾವತಿಸಬೇಡಿ. ಇದರ ಬಗ್ಗೆ ಎಚ್ಚರವಿರಲಿ.

ಹೀಗೆ ಹವಾಮಾನ ವೈಪರೀತ್ಯಕ್ಕೆ ತಕ್ಕ ಹಾಗೆ ಬದಲಾದ ತಂತ್ರಜ್ಞಾನಗಳನ್ನು ಅಳವಡಿಸಿ ಕೊಳ್ಳುವುದು ಪ್ರಸ್ತುತ ಕೃಷಿಯಲ್ಲಿ ಉತ್ತಮ ಬೆಳವಣಿಗೆ. ಸಾಂಪ್ರದಾಯಿಕ ಕೃಷಿಯನ್ನೇ ಮಾಡುತ್ತೇನೆಂದರೆ ಫಲಿತಾಂಶದ ಏರುಪೇರು ಸಹಜ. ಈ ನಿಟ್ಟಿನಲ್ಲಿ ರೈತರು ತಮ್ಮ ಆಲೋಚನೆಗಳನ್ನು ಬದಲಿಸಿ ತಂತ್ರಜ್ಞಾನಗಳನ್ನು ಬಳಸಿದರೆ ಮುಂಬರುವ ಕಡು ಬೇಸಿಗೆಯಲ್ಲಿ ತೋಟಗಳನ್ನು ಉಳಿಸಿಕೊಳ್ಳಬಹುದು.