ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧

ನಾಟಿಪಶುವೈದ್ಯ

ಕೆಚ್ಚಲು ಬಾವೆಂಬ ಹೆಮ್ಮಾರಿ

ಡಾ. ರವಿಕುಮಾರ್, ಪಿ.
9008598832

ಹೈನು ರಾಸುಗಳ ಪಾಲಿಗೆ ಕಂಟಕ ಪ್ರಾಯವಾದ ಈ ರೋಗದಿಂದ ಭಾರತದ ಹೈನೋದ್ಯಮಕ್ಕೆ ಶೇ.೭೦ ರಷ್ಟು ಆರ್ಥಿಕ ಹಾನಿಯ ಜೊತೆಗೆ ಕೆಚ್ಚಲು ಬಾವಿನಿಂದಾಗಿ ನಾವು ಉತ್ಪಾದಿಸುತ್ತಿರುವ ಹಾಲಿನ ಗುಣಮಟ್ಟ ತೀವ್ರ ಕುಸಿಯುವುದರಿಂದಾಗಿ ನಮ್ಮ ಹಾಲು ಹಾಗೂ ಹಾಲಿನ ಉತ್ಪನ್ನಗಳಿಗೆ ವಿದೇಶೀ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದಿರುವುದು ಅಕ್ಷರಶಃ ಸತ್ಯ. ಅಸಂಖ್ಯ ರೀತಿಯ ಸೂಕ್ಷ್ಮಾಣುಜೀವಿಗಳಿಂದ ಕೆಚ್ಚಲು ಬಾವು ಉಂಟಾಗುವುದು ಸತ್ಯವಾದರೂ ನಮ್ಮ ಕೊಟ್ಟಿಗೆಗಳಲ್ಲಿ ನೈರ್ಮಲ್ಯದ ಕೊರತೆಯೇ ಈ ರೋಗಕ್ಕೆ ಪ್ರಮುಖ ಕಾರಣವೆಂದು ಹೇಳಬಹುದು. ಏಕೆಂದರೆ ಹೈನುರಾಸುಗಳ ಸಾಕಣೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡದೆ ಹೋದಲ್ಲಿ ವಾತಾವರಣದಲ್ಲಿರುವ ಸೂಕ್ಷ್ಮಾಣು ಜೀವಿಗಳೇ ಮೊಲೆಗಳ ದ್ವಾರದ ಮೂಲಕ ಕೆಚ್ಚಲ ಒಳ ಸೇರಿ ಕೆಚ್ಚಲು ಬಾವನ್ನು ಉಂಟು ಮಾಡುತ್ತವೆ.

ಕೆಚ್ಚಲು ಬಾವಿನ ವಿಧಗಳು:

3

1. ತೀವ್ರ ಕೆಚ್ಚಲು ಬಾವು: ರೈತರೇ ಸುಲಭವಾಗಿ ಗುರ್ತಿಸಬಹುದಾದದ್ದು. ಕೆಚ್ಚಲಿನ ತೀವ್ರ ಉರಿಯೂತ, ನೋವು, ಹಾಲು ಒಡಕೊಡಕಾಗಿ/ನೀರುನೀರಾಗಿ/ರಕ್ತಮಿಶ್ರಿತವಾಗಿರುವುದು. ತಕ್ಷಣ ಚಿಕಿತ್ಸೆ ನೀಡದಿದ್ದಲ್ಲಿ ಕೆಚ್ಚಲು ಹಾಳಾಗಿ ಗಡ್ಡೆಕಟ್ಟುವ ಸಂಭವವು ಉಂಟು.

2.ಸುಪ್ತ ಕೆಚ್ಚಲು ಬಾವು:ಮೇಲ್ನೋಟಕ್ಕೆ ಹಾಲಿನಲ್ಲಿ ಯಾವುದೇ ಏರುಪೇರು ಕಾಣದೇ ಹೋದರೂ ಒಳಗೊಳಗೇ ನಿಧಾನವಾಗಿ ಸೂಕ್ಷ್ಮಾಣು ಜೀವಿಗಳು ವೃದ್ಧಿಸಿ ಹಾಲಿನ ಇಳುವರಿ ಹಾಗೂ ಗುಣಮಟ್ಟ ಗಣನೀಯವಾಗಿ ಕುಸಿಯುತ್ತವೆ. ಇದನ್ನು ಕೆಲವೊಂದು ಪರೀಕ್ಷೆಗಳಿಂದ ಮಾತ್ರ ಪತ್ತೆ ಹಚ್ಚಬಹುದು.

ಕೆಚ್ಚಲು ಬಾವಿನ ನಿರ್ವಹಣೆ:

ಕೆಚ್ಚಲು ಬಾವು ರೋಗವು ಪಶುಪಾಲಕರಿಗೆ ಒಂದು ರೀತಿಯ ತುರ್ತು ಪರಿಸ್ಥಿತಿಯೆಂದೇ ಹೇಳಬಹುದು. ಕೆಚ್ಚಲುಬಾವು ಕಂಡುಬಂದಾಗ ಕೆಚ್ಚಲಿನಲ್ಲಿರುವ ಸೂಕ್ಷ್ಮಾಣುಜೀವಿಗಳು ಪ್ರತೀ ೨೦ ನಿಮಿಷಕ್ಕೊಮ್ಮೆ ದ್ವಿಗುಣವಾಗುತ್ತಾ ಹೋಗುತ್ತವೆ. ಸರಿಯಾದ ಸಮಯದಲ್ಲಿ ಸೂಕ್ತವಾದ ಔಷಧೋಪಚಾರ ಮಾಡದೇ ಹೋದಲ್ಲಿ ಕೆಚ್ಚಲಿಗೆ ಕೆಚ್ಚಲೇ ಹಾಳಾಗಿ ಹೋಗುವ ಸಂಭವಗಳಿವೆ. ಆದುದರಿಂದ ಕೆಚ್ಚಲುಬಾವಿನ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ರೈತರು ತಡಮಾಡದೇ ನುರಿತ ಪಶುವೈದ್ಯರನ್ನು ಕರೆಸಿ ಸೂಕ್ತ ಔಷಧೋಪಚಾರ ಮಾಡಿಸಬೇಕು. ವಿಶೇಷವಾಗಿ ತೀವ್ರವಾದ ಕೆಚ್ಚಲುಬಾವಿನ ಸಂದರ್ಭದಲ್ಲಿ ಸ್ವಯಂವೈದ್ಯ ಮಾಡುವುದಾಗಲೀ, ಪರಣಿತಿ ಇಲ್ಲದ ಅರೆಬರೆ ತಿಳಿದವರಿಂದ ಚಿಕಿತ್ಸೆ ನೀಡಿಸುವುದಾಗಲೀ ಸಲ್ಲದು. ಆದಾಗ್ಯೂ ಪಶುವೈದ್ಯರು ಬರುವುದರೊಳಗಾಗಿ ಕೆಲವೊಂದು ಪ್ರಥಮ ಚಿಕಿತ್ಸಾ ಅಂಶಗಳನ್ನು ಪಾಲಿಸುವುದು ಒಳಿತು.

 • ಮೊದಲನೆಯದಾಗಿ ಕೆಚ್ಚಲುಬಾವು ಬಂದಿರುವ ಭಾಗದ ಮೊಲೆಯ ಹಾಲನ್ನು ಸಂಪೂರ್ಣವಾಗಿ ಬೇರೊಂದು ಪಾತ್ರೆಗೆ ಹಿಂಡಿ ತಿಪ್ಪೆಗೆ ಚೆಲ್ಲಬೇಕು. ಪಶುವೈದ್ಯರು ಬರುವವರೆಗೆ ಅರ್ಧಗಂಟೆಗೆ ಒಮ್ಮೆಯಾದರೂ ಹಾಲನ್ನು ಈ ರೀತಿ ಹಿಂಡಿ ಚೆಲ್ಲುತ್ತಿರಬೇಕು. ಕೆಚ್ಚಲುಬಾವು ಪೀಡಿತ ಹಾಲನ್ನು ಹಿಂಡಿದ ಪಾತ್ರೆಗಳನ್ನು ಬಿಸಿನೀರಿನಲ್ಲಿ ಚೆನ್ನಾಗಿ ತೊಳೆದು ಕ್ರಿಮಿನಾಶಕಗಳಿಂದ ಸ್ವಚ್ಛಗೊಳಿಸಬೇಕು. ಕೆಚ್ಚಲಿನಲ್ಲಿ ಊತ ಹೆಚ್ಚಾಗಿದ್ದರೆ ಆಗಾಗ್ಗೆ ಮಂಜುಗೆಡ್ಡೆ ಮಿಶ್ರಿತ ನೀರಿನಿಂದ ಕೆಚ್ಚಲನ್ನು ತೊಳೆಯುತ್ತಿರಬೇಕು. ನೋವು ನಿವಾರಕ ಮುಲಾಮುಗಳು ಮನೆಯಲ್ಲಿದ್ದರೆ ಬಾವು ಪೀಡಿತ ಕೆಚ್ಚಲಿನ ಭಾಗಕ್ಕೆ ಹಚ್ಚಬಹುದು.
 • ಪಶುವೈದ್ಯರು ಬರುವುದು ತಡವಾದಲ್ಲಿ ಅವರ ಸಲಹೆಯ ಮೇರೆಗೆ ಸೂಕ್ತವಾದ ಕೆಚ್ಚಲುಬಾವಿನ ಮುಲಾಮನ್ನು ಬಾವುಪೀಡಿತ ಮೊಲೆಗೆ ಹಚ್ಚಬೇಕ.
 • ಈ ನಿಯಮಗಳನ್ನು ತಪ್ಪದೇ ಪಾಲಿಸುವುದರ ಜೊತೆಗೆ ಕೆಚ್ಚಲು ಬಾವನ್ನು ನಿಯಂತ್ರಿಸಲು ಸುಲಭವಾಗಿ ತಯಾರಿಸಬಹುದಾದ ಹಲವು ಮನೆಮದ್ದುಗಳಿವೆ. ಈ ಮನೆಮದ್ದುಗಳನ್ನು ಪಶುವೈದ್ಯರ ಸಲಹೆಯ ಮೇರೆಗೆ ನೀಡಬಹುದು ಹಾಗೂ ಮನೆಮದ್ದುಗಳ ಜೊತೆಗೆ ಪಶುವೈದ್ಯರಿಂದ ಸೂಕ್ತವಾದ ಚಿಕಿತ್ಸೆ ಕೊಡಿಸುವುದು ಅತ್ಯವಶ್ಯಕ.

  11

  1. ೧/೨ ಕೆಜಿಯಷ್ಟು ಲೋಳೆಸರ, ೨ ಹಿಡಿಯಷ್ಟು ಮುಟ್ಟಿದರೆ ಮುನಿ ಸೊಪ್ಪು, ೧ ಚಮಚ ಅರಿಸಿನ ಪುಡಿ ಹಾಗೂ ೨-೩ ಗ್ರಾಂ ಸುಣ್ಣ-ಇವಿಷ್ಟನ್ನು ಕಲ್ಲಿನ ಮೇಲೆ ನುಣ್ಣಗೆ ಅರೆಯಬೇಕು. ಈ ರೀತಿ ಅರೆದ ಔಷಧಿಯನ್ನು ಬಾವು ಪೀಡಿತ ಕೆಚ್ಚಲಿನ ಭಾಗಕ್ಕೆ ದಿನಕ್ಕೆರಡು ಬಾರಿಯಂತೆ ೭ ದಿನಗಳ ಕಾಲ ಲೇಪಿಸುವುದರಿಂದ ಕೆಚ್ಚಲು ಬಾವು ಬಹುತೇಕ ಗುಣವಾಗುತ್ತದೆ. ಪ್ರತಿಬಾರಿ ಈ ಔಷಧಿ ಲೇಪಿಸುವ ಮುನ್ನ ಉಗುರು ಬೆಚ್ಚಗಿನ ನೀರಿನಲ್ಲಿ ಕೆಚ್ಚಲನ್ನು ಚೆನ್ನಾಗಿ ತೊಳೆದು ಒಣ ಬಟ್ಟೆಯಲ್ಲಿ ಒರೆಸಿ ತದನಂತರ ಔಷಧಿ ಲೇಪಿಸದರೆ ಉತ್ತಮ ಫಲಿತಾಂಶ ಕಂಡುಬರುತ್ತದೆ.

  2. ಒಂದು ಪಟ್ಟೆ ಲೋಳೆಸರ + ಒಂದೂವರೆ ಅಡಿ ಉದ್ದದ ಅಮೃತಬಳ್ಳಿ + ೧/೨ ಹಸ್ತದಷ್ಟು ಅಗಲದ ಬೇವಿನ ಚಕ್ಕೆ ಹಾಗೂ ಒಂದು ಹಿಡಿಯಷ್ಟು ವಿಷಮಧಾರಿ ಗಿಡದ ಬೇರು-ಇವೆಲ್ಲವನ್ನೂ ತೆಗೆದುಕೊಂಡು ೧ ಲೀ ನೀರಿನಲ್ಲಿ ಚೆನ್ನಾಗಿ ಅರೆಯಬೇಕು. ಈ ರೀತಿ ಅರೆದ ಔಷಧಿಯನ್ನು ಬೆಳಿಗ್ಗೆ ೧/೨ ಭಾಗ, ಸಂಜೆ ೧/೨ ಭಾಗ ಹಸುಗಳಿಗೆ ಗೊಟ್ಟದ ಮೂಲಕ ಕುಡಿಸಬೇಕು. ಉಳಿದ ಔಷಧಿಗೆ ಅರಿಶಿಣ ಹಾಗೂ ಹೊಂಗೆ ಎಣ್ಣೆ ಸೇರಿಸಿ ಬಾವುಪೀಡಿತ ಕೆಚ್ಚಲಿಗೆ ಹಚ್ಚಬೇಕು. ಈ ರೀತಿಯಾಗಿ ೪-೫ ದಿನಗಳ ಕಾಲ ಚಿಕಿತ್ಸೆ ನೀಡಬೇಕು.

  15

  3. ಅರಿಷಿಣದ ಕೊಂಬು: -ಹಸೀ ಹರಿಷಿಣದ ಕೊಂಬೊಂದನ್ನು ನಿಂಬೆರಸದಲ್ಲಿ ಚೆನ್ನಾಗಿ ತೇಯ್ದು ಕೆಚ್ಚಲಿಗೆ ದಿನಕ್ಕೆರಡು ಸಲ ಲೇಪಿಸುವುದರಿಂದ ಕೆಚ್ಚಲಿನ ಉರಿಯೂತ ಕಡಿಮೆಯಾಗುತ್ತದೆ

  4. ಅರಿಷಿಣದ ಪುಡಿ: ಒಂದು ಚಮಚ ಅರಿಷಿಣದ ಪುಡಿಯನ್ನು ಹರಳೆಣ್ಣೆಯಲ್ಲಿ ಕಲೆಸಿ ಸ್ವಲ್ಪ ಬಿಸಿ ಮಾಡಿ ಕೆಚ್ಚಲಿಗೆ ಲೇಪಿಸುವುದರಿಂದಲೂ ಊತ ಕಡಿಮೆಯಾಗಿ ರಾಸುಗಳಿಗೆ ಕೊಂಚ ಆರಾಮವಾಗುತ್ತದೆ

  (ಹೆಚ್ಚಿನ ಓದು: ಬೈಫ್ ಸಂಸ್ಥೆಯ ಮೂಲಿಕಾ ಪಶುವೈದ್ಯ ಹಾಗೂ ಡಾ. ಗಣೇಶ ಹೆಗಡೆ ನೀಲೇಸರರ ಒಗ್ಗರಣೆ ಡಬ್ಬಿಯಲ್ಲಿ ಪಶು ಆರೋಗ್ಯ)

  ವಿಶೇಷ ಸೂಚನೆ: ಈ ಔಷಧಿಗಳ ಜೊತೆಗೆ ನುರಿತ ಪಶುವೈದ್ಯರಿಂದ ಸೂಕ್ತ ಚಿಕಿತ್ಸೆ ನೀಡಿಸುವುದು ಅತ್ಯವಶ್ಯಕ. ಕೇವಲ ಮನೆಮದ್ದುಗಳ ಮೇಲೆ ಅವಲಂಬಿತರಾಗಬೇಡಿ.