ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧

ಚಿಂತನೆ

ನೀರಿನ ಅಭಾವದ ಸಮಸ್ಯೆಯನ್ನು ಎದುರಿಸುವ ಪ್ರಯತ್ನಗಳು

image_
ಕುಮಾರಸ್ವಾಮಿ.

ಕಳೆದ ಕೆಲವು ವರ್ಷಗಳಲ್ಲಿ ಕಂಡು ಕೇಳರಿಯದ ಮಳೆಯ ಕೊರತೆಯಿಂದ ಈ ವರ್ಷ ರಾಜ್ಯದ ಬಹುತೇಕ ಭಾಗ ತೀವ್ರ ನೀರಿನ ಅಭಾವವನ್ನು ಎದುರಿಸುತ್ತಿದೆ. ಮುಂಗಾರು ಮತ್ತು ಹಿಂಗಾರು ಮಾರುತಗಳೆರಡೂ ವಿಫಲವಾಗಿರುವುದರಿಂದ ಬಿತ್ತನೆ ಪ್ರದೇಶ ಕಡಿಮೆಯಾಗಿದ್ದು, ಬಿತ್ತಿದ ಬೆಳೆಗಳು ಒಣಗಿರುತ್ತವೆ. ಹಿಂಗಾರು ಬಿತ್ತನೆಯ ಕಾರ್ಯವಂತೂ ಪ್ರಾರಂಭವಾಗಲೇ ಇಲ್ಲ. ಜನ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ತೀವ್ರ ಸಮಸ್ಯೆ ಆರಂಭವಾಗಿದೆ. ಇನ್ನು ಮುಂದಿನ ವರ್ಷದ ಮೇ ತಿಂಗಳವರೆಗೆ ಸಮಸ್ಯೆಯು ಉಲ್ಬಣವಾಗುವುದೋ ಹೊರತು ಕಡಿಮೆಯಾಗುವುದೆನ್ನುವ ಯಾವುದೇ ಆಸೆಗಳು ಇಲ್ಲ. ಈ ಸಮಸ್ಯೆಗೆ ತಕ್ಷಣಕ್ಕೆ ಪರಿಹಾರ ಬೇಕಾಗಿದೆ. ತಕ್ಷಣ ಕೈಗೊಳ್ಳಬಹುದಾದ ಕೆಲವು ಪರಿಹಾರಗಳನ್ನು ಈ ಕೆಳಗೆ ಚರ್ಚಿಸಲಾಗಿದೆ.

ಖುಷ್ಕಿ ಪ್ರದೇಶಗಳಲ್ಲಿ ಒಣಗುತ್ತಿರುವ ತೋಟದ ಬೆಳೆಗಳನ್ನು ಉಳಿಸಿಕೊಳ್ಳಲು:

ಹೂಜಿ ನೀರಾವರಿ: ಮರದ ಗಾತ್ರಕ್ಕನುಗುಣವಾಗಿ ಬುಡದಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಒಂದು ಅಡಿ ಆಳದಲ್ಲಿ ಮಣ್ಣಿನ ಕೊಡಗಳನ್ನು ಹೂಳಬೇಕು. ಅವುಗಳ ತಳದಲ್ಲಿ ಚಿಕ್ಕ ರಂಧ್ರವನ್ನು ಮಾಡಿ ಬತ್ತಿಯನ್ನು ಸೇರಿಸಬೇಕು. ಈ ಕೊಡಗಳಿಗೆ ವಾರಕ್ಕೊಮ್ಮೆ ನೀರು ತುಂಬಿಸಿದರೆ, ಮರಗಳು ಒಣಗದೇ ಮುಂದಿನ ಮಳೆಗಾಲದವರೆಗೆ ಜೀವ ಹಿಡಿಯಲು ಸಾಧ್ಯವಾದೀತು. ಹೂಜಿಗಳ ಬದಲಿಗೆ ಒಂದೆರಡು ಅಡಿ ಆಳ ತಗ್ಗು ತೆಗೆದು ಅದರಲ್ಲಿ ಜಲ್ಲಿ ಅಥವಾ ಮರಳನ್ನು ಹಾಕಿ ಮುಚ್ಚಬಹುದು. ಕೆಲವು ಸಂದರ್ಭಗಳಲ್ಲಿ ಇವುಗಳಿಗೆ ನೀರೊದಗಿಸಲೂ ಸಹ ನೀರಿನ ಲಭ್ಯತೆ ಇಲ್ಲದಿರುವಾಗ ಮನೆ ಬಳಕೆಯ ನೀರನ್ನೇ ಬಳಕೆಯ ನಂತರ ಸಂಗ್ರಹಿಸಿ ಮರುಬಳಕೆ ಮಾಡಬಹುದು. ನೀರು ಲಭ್ಯವಿರುವ ಇತರೆ ಪ್ರದೇಶಗಳಿಂದ ಟ್ಯಾಂಕರ್‌ಗಳಲ್ಲಿ ತಂದು ನೀರು ಕೊಡಬಹುದು.

ಮಿತ ಹನಿ ನೀರಾವರಿ: ಸ್ವಲ್ಪವಾದರೂ ನೀರು ಲಭ್ಯವಿದ್ದರೆ ಹನಿ ನೀರಾವರಿಯ ಮೂಲಕ ಗಣನೀಯ ಪ್ರಮಾಣದಲ್ಲಿ ತೋಟಗಳನ್ನೂ ಬದುಕಿಸಿಕೊಳ್ಳಬಹುದು. ಸಾಮಾನ್ಯ ಹನಿ ನೀರಾವರಿ ಪದ್ಧತಿಗಿಂತಲೂ ತೋಟಗಳನ್ನು ಉಳಿಸಿಕೊಳ್ಳುವ ಉದ್ದೇಶಕ್ಕೆ ಮಿತ ಹನಿ ನೀರಾವರಿ ವಿಧಾನವನ್ನು ಅನುಸರಿಸಬೇಕು.

 • ತೋಟಗಳನ್ನು ಬದುಕಿಸಿಕೊಳ್ಳಲು ಹನಿ ನೀರಾವರಿಯಲ್ಲಿ ನಿತ್ಯವೂ ನೀರುಣಿಸಬೇಕಿಲ್ಲ; ಮೂರರಿಂದ ನಾಲ್ಕು ದಿನಕ್ಕೊಮ್ಮೆ ಕೊಡಬೇಕಾದ ನೀರಿನ ಅರ್ಧದಷ್ಟು ಅಥವಾ ಇನ್ನೂ ಕಡಿಮೆ ಪ್ರಮಾಣದಲ್ಲಿ ನೀರುಣಿಸಿದರೂ ಮರಗಳನ್ನು ಉಳಿಸಿಕೊಳ್ಳಬಹುದು.
 • ಲಭ್ಯವಿರುವ ನೀರನ್ನು ಸೂಕ್ಷ್ಮ ಗಿಡಗಳಿಗೆ ಆದ್ಯತೆಯ ಮೇಲೆ ಕೊಡಬೇಕು. ಉದಾಹರಣೆಗೆ ತೆಂಗಿನ ಬೆಳೆಗಿಂತಲೂ ಅಡಿಕೆಯ ತೋಟಕ್ಕೆ ಮೊದಲ ಆದ್ಯತೆ ಕೊಡಬೇಕು.
 • ಕೊಡುವ ನೀರನ್ನು ನೇರವಾಗಿ ಮಣ್ಣಿನ ಕೆಳ ಪದರಕ್ಕೆ ಸೇರುವಂತೆ ಕೊಡಬೇಕು. ಹನಿ ಸಾಧಕಗಳಿಂದ ಹೂಜಿಯನ್ನು ತುಂಬಿಸಿ ಆ ಮೂಲಕ ನೀರು ಕೊಡುವುದು ಇನ್ನೂ ಉತ್ತಮ.
 • ನೀರು ಹನಿಯುವ ಸ್ಥಳದಲ್ಲಿ ಮಣ್ಣಿನ ಮೇಲ್ಮೈಯನ್ನು ಪ್ಲಾಸ್ಟಿಕ್ ಅಥವಾ ಸಾವಯವ ವಸ್ತುಗಳ ನೆಲ ಹೊದಿಕೆಗಳಿಂದ ಮುಚ್ಚಬೇಕು.
 • ಅಂತರ್ಜಲದ ಸಮರ್ಪಕ ಬಳಕೆ:

  ಅಂತರ್ಜಲದಿಂದ ಬದುಕು ಕಟ್ಟಿಕೊಂಡಿದ್ದ ಅನೇಕ ಜನ ರೈತರು ಈ ವರ್ಷದ ಭೀಕರ ಬರಗಾಲದಿಂದಾಗಿ ಜಲ ಬತ್ತಿರುವುದರಿಂದ ಹಾಗೂ ವಿದ್ಯುತ್ ದುರ್ಲಭ್ಯತೆಯಿಂದ ಕಂಗಾಲಾಗಿದ್ದಾರೆ. ಆದರೆ ಪ್ರತಿಯೊಂದು ಹನಿ ನೀರು ಹಾಗೂ ಪ್ರತಿಯೊಂದು ಯೂನಿಟ್ ವಿದ್ಯುತ್ ಸಹ ಮುಖ್ಯ ಎನ್ನುವುದನ್ನು ಅರಿತುಕೊಂಡು ಈ ಕೆಳಗೆ ತಿಳಿಸಿರುವ ಕೆಲವು ಮಾರ್ಗಗಳನ್ನು ಅನುಸರಿಸಿದರೆ, ಅಂತರ್ಜಲವು ರೈತನ ಕೈ ಬಿಡುವುದಿಲ್ಲ

  ೧. ಕೊಳವೆ ಬಾವಿಯ ವಿಫಲತೆಯ ವ್ಯಾಖ್ಯಾನ ಬದಲಾಗಲಿ: ಮೊದಲನೆಯದಾಗಿ, ಬಾವಿಗಳ ವಿಫಲತೆಯ ವ್ಯಾಖ್ಯಾನವನ್ನು ಬದಲಿಸಬೇಕಾಗುತ್ತದೆ. ಕೇವಲ ಅರ್ಧ ಇಂಚು ನೀರು ದೊರೆತರೂ ಸಹ ಆ ಬಾವಿಯನ್ನು ಸಫಲವೆಂದು ಪರಿಗಣಿಸಿ ಬಳಸಿಕೊಳ್ಳಬೇಕು. ಕೇವಲ ಸೆಕೆಂಡಿಗೆ ಅರ್ಧ ಲೀಟರ್ ನೀರು (ಸುಮಾರು ಅರ್ಧ ಇಂಚು) ದೊರೆತರೂ ಸಹ ಅದರಿಂದ ೬೦೦ ರಿಂದ ೮೦೦ ತೆಂಗಿನ ಮರಗಳನ್ನು ಬೇಸಿಗೆಯಲ್ಲಿ ಉಳಿಸಿಕೊಳ್ಳಬಹುದು. ಈಗಾಗಲೇ ಕೆಲವು ಕೊಳವೆ ಬಾವಿಗಳನ್ನು ಕಡಿಮೆ ನೀರಿನ ಇಳುವರಿಯಿಂದ ಅನುಪಯುಕ್ತವೆಂದು ತೀರ್ಮಾನಿಸಿ ಕೈ ಬಿಟ್ಟಿದ್ದರೆ, ಅವುಗಳನ್ನು ಮರುಬಳಕೆ ಮಾಡಿ.

  ೨. ಅಧಿಕ ಶಕ್ತಿಯ ಮೋಟಾರ್ ಬೇಡ: ಇರುವ ನೀರನ್ನು ಪೂರ್ತಿ ಹೊರತೆಗೆಯುವ ಹಂಬಲ ಬೇಡ; ಇದಕ್ಕೋಸ್ಕರ ಅವಶ್ಯಕತೆಗಿಂತಲೂ ಅತಿ ಹೆಚ್ಚು ಅಶ್ವಶಕ್ತಿ(ಹೆಚ್‌ಪಿ)ಯ ಮೋಟಾರ್ ಮತ್ತು ಪಂಪ್‌ಗಳ ಬಳಕೆ ಬೇಡ. ಅಂತರ್ಜಲದ ಬಳಕೆ ಸಂರಕ್ಷಣಾತ್ಮಕವಾಗಿ ಇರಲಿ. ಮುಂದಿನ ಪೀಳಿಗೆಯು ನಮ್ಮನ್ನು ಶಪಿಸದಿರಲಿ. ಎತ್ತಬೇಕಾದ ನೀರಿನ ಪ್ರಮಾಣ ಮತ್ತು ಎತ್ತರಕ್ಕನುಗುಣವಾಗಿ ಸೂಕ್ತ ಮೋಟಾರನ್ನು ಆರಿಸಿಕೊಳ್ಳುವುದರಿಂದ ಹಾಗೂ ಮೋಟಾರ್ ಮತ್ತು ಪಂಪ್‌ಗಳನ್ನು ಸರಿಯಾಗಿ ನಿರ್ವಹಿಸುವುದರಿಂದ ವಿದ್ಯುತ್ ಬಳಕೆಯಲ್ಲಿ ಕೊನೆಯ ಪಕ್ಷ ಅರ್ಧದಷ್ಟನ್ನಾದರೂ ಉಳಿಸಬಹುದು.

  ೩. ಬೆಳೆ ಯೋಜನೆ ಮೇಲೆ ಹತೋಟಿಯಿರಲಿ: ಅಂತರ್ಜಲವನ್ನು ಬಳಸಿ ಅಧಿಕ ನೀರು ಬಳಸುವ ಬೆಳೆಗಳನ್ನು ಬೆಳೆಯುವುದು ಬೇಡ. ವಿಶೇಷವಾಗಿ ಬೇಸಿಗೆಯಲ್ಲಿ ಕಡ್ಡಾಯವಾಗಿ ಹನಿ ನೀರಾವರಿ ಮತ್ತು ಪ್ಲಾಸ್ಟಿಕ್ ನೆಲ ಹೊದಿಕೆಯಿರಲಿ. ಭತ್ತವನ್ನು ಬೆಳೆಯಲೇ ಬೇಕಾದ ಅನಿವಾರ್ಯತೆ ಇದ್ದರೆ ’ಶ್ರೀ’ ಅಥವಾ ಏರೋಬಿಕ್ ಪದ್ಧತಿಯನ್ನು ಅಳವಡಿಸಿಕೊಳ್ಳಿ.

  ೪. ಶಕ್ತಿಯ ಪೂರೈಕೆಯಲ್ಲಿ ಸ್ವಾವಲಂಬಿಯಾಗಲು ಸೌರಶಕ್ತಿಯ ಬಳಕೆ: ಮೋಟಾರ್ ಚಾಲನೆ ಮಾಡಲು ಸೌರ ಶಕ್ತಿಯನ್ನು ಬಳಸುವುದರಿಂದ ದಿನವೊಂದಕ್ಕೆ ಎಂಟು ಗಂಟೆಗಳ ಕಾಲ ಉಚಿತ ವಿದ್ಯುತ್ ಪಡೆಯಬಹುದು. ಇದರಿಂದ ಇರುವ ನೀರನ್ನು ಹೊರತೆಗೆಯಲು ಕಡಿಮೆ ಅಶ್ವಶಕ್ತಿಯ ಮೋಟಾರ್ ಸಾಕು.

  15

  ನಾಲಾ ನೀರಾವರಿ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಬಹುವಾರ್ಷಿಕ ಬೆಳೆಗಳನ್ನು ಉಳಿಸಿಕೊಳ್ಳುವುದು:

  ೧. ಬೇಸಿಗೆ ಕಾಲಕ್ಕೆ ನೀರು ಉಳಿಸಿಕೊಳ್ಳಿ: ಜಲಾಶಯಗಳಲ್ಲಿ ಸ್ವಲ್ಪವಾದರೂ ನೀರಿನ ಲಭ್ಯತೆಯಿದ್ದರೆ, ಅದನ್ನು ಚಳಿಗಾಲದಲ್ಲಿ ಹೆಚ್ಚು ಬಳಸದೇ, ಉಳಿಸಿಕೊಂಡು ಬೇಸಿಗೆಯಲ್ಲಿ ಬಳಸುವ ಪ್ರಯತ್ನ ಮಾಡಬೇಕು. ಅಷ್ಟರೊಳಗೆ ನಾಲಾ ನೀರಾವರಿ ಪ್ರದೇಶದಲ್ಲಿರುವ ಸಾಧ್ಯವಾದಷ್ಟು ಹೆಚ್ಚು ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿಯನ್ನು ಅಳವಡಿಸಿ ಮೇಲೆ ತಿಳಿಸಿದಂತೆ ಮಿತ ನೀರಾವರಿ ಮಾಡಿ.

  ೨. ಕೆರೆ ನೀರಿನ ಸಮರ್ಪಕ ಬಳಕೆ: ಕೆಲವು ಜಲಾಶಯಗಳಲ್ಲಿ ನೀರಿಲ್ಲದೇ ಇದ್ದರೂ, ಕೆಲವು ಕೆರೆಗಳಲ್ಲಿ ಸ್ವಲ್ಪಮಟ್ಟಿನ ನೀರಿನ ಸಂಗ್ರಹವಿದೆ. ಈ ನೀರನ್ನು ಕೇವಲ ಬಹುವಾರ್ಷಿಕ ತೋಟಗಾರಿಕೆ ಬೆಳಗಳನ್ನು ಉಳಿಸಿಕೊಳ್ಳಲು ಅಥವಾ ಜಾನುವಾರುಗಳಿಗೆ ಬೇಕಾದ ಮೇವಿನ ಬೆಳೆಗಳನ್ನು ಬೆಳೆಯಲು ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕೆರೆ ಆಶ್ರಯದ ನೀರಾವರಿಯಲ್ಲಿ ಬೇಸಿಗೆಯ ಭತ್ತದ ಬೆಳೆ ಬೇಡ.

  ೩. ಅಂತರ್ಜಲ ಬಳಕೆ: ಜಲಾಶಯಗಳಲ್ಲಿ ಸ್ವಲ್ಪವೂ ನೀರಿನ ಲಭ್ಯತೆ ಇಲ್ಲದಿದ್ದರೆ, ನಾಲಾ ನೀರಾವರಿ ಪ್ರದೇಶಗಳಲ್ಲಿ ಇದುವರೆಗೂ ಅಂತರ್ಜಲವನ್ನು ಅತಿ ಕಡಿಮೆ ಬಳಸಿರುವುದರಿಂದ ಕೊಳವೆ ಬಾವಿಗಳ ಮೂಲಕ ಅಂತರ್ಜಲವನ್ನು ಪಡೆಯುವ ಸಾಧ್ಯತೆಗಳು ಹೆಚ್ಚಿವೆ. ದೊರೆತ ಅಂತರ್ಜಲವನ್ನು ಅತಿ ಎಚ್ಚರಿಕೆಯಿಂದ ಬಳಸಬೇಕು.

  ಮೇವು ಮತ್ತು ಬೀಜದ ಬೆಳೆಗಳಿಗೆ ಆದ್ಯತೆ: ಬೇಸಿಗೆ ಬೆಳೆಗೆ ಸ್ವಲ್ಪವಾದರೂ ನೀರು ಲಭ್ಯವಿರುವ ಉತ್ತರ ಕರ್ನಾಟಕದ ಕೆಲವು ಜಲಾಶಯಗಳಲ್ಲಿ ಆದ್ಯತೆಯ ಮೇರೆಗೆ ಮೇವಿನ ಬೆಳೆಗಳನ್ನು ಬೆಳೆಸಿ ತೀವ್ರ ಬರ ಇರುವ ಇತರೆ ಪ್ರದೇಶಗಳಿಗೆ ಪೂರೈಸುವ ವ್ಯವಸ್ಥೆ ಆಗಬೇಕು. ಅದೇ ರೀತಿ ಈ ವರ್ಷದ ಬರದಿಂದ ಮುಂದಿನ ವರ್ಷದಲ್ಲಿ ಬಿತ್ತನೆ ಬೀಜಗಳ ಸಮಸ್ಯೆಯೂ ತೀವ್ರವಾಗಿ ಎದುರಾಗುತ್ತದೆ. ಆದ್ದರಿಂದ ನೀರಾವರಿ ಲಭ್ಯವಿರುವ ಪ್ರದೇಶಗಳಲ್ಲಿ ಮುಂದಿನ ವರ್ಷಕ್ಕೆ ಅಗತ್ಯವಾಗಿ ಬೇಕಾಗುವ ಬಿತ್ತನೆ ಬೀಜಗಳನ್ನು ಬೆಳೆಯುವ ವ್ಯವಸ್ಥೆ ಆಗಬೇಕು

  ದೀರ್ಘಕಾಲೀನ ಅಭಿವೃದ್ಧಿಯ ಪ್ರಯತ್ನಗಳು ಅಗತ್ಯ: ಕೆಲವು ದೀರ್ಘಕಾಲದಲ್ಲಿ ಉಪಯುಕ್ತವಾಗಬಲ್ಲ ಕಾರ್ಯಗಳಾದ ಹೊಲಗಾಲುವೆಗಳ ಬದಲಿಗೆ ಕೊಳವೆಗಳಲ್ಲಿ ನೀರು ಸಾಗಾಣಿಕೆ; ನಾಲಾ ಪ್ರದೇಶದಲ್ಲಿ ಇರುವ ಕೆರೆಗಳ ಸಂಪೂರ್ಣ ಅಭಿವೃದ್ಧಿ; ಮಿತ ನೀರಾವರಿಗೆ ಸೂಕ್ತವಾಗುವ ತೋಟಗಾರಿಕೆ ಬೆಳೆಗಳನ್ನೊಳಗೊಂಡ ಬೆಳೆ ಯೋಜನೆಗಳ ಅನುಷ್ಠಾನ; ಎಲ್ಲಾ ತೋಟಗಾರಿಕೆ ಬೆಳೆಗಳಿಗೆ ಕಡ್ಡಾಯವಾಗಿ ಹನಿ ನೀರಾವರಿ ಮತ್ತು ನೆಲಹೊದಿಕೆಗಳ ಬಳಕೆ ಮತ್ತು ಭತ್ತದ ಬೆಳೆಯನ್ನು ಕೆಲವೇ ಪ್ರದೇಶಗಳಿಗೆ ಸೀಮಿತಗೊಳಿಸಿ, ’ಶ್ರೀ’ ಹಾಗೂ ಏರೋಬಿಕ್ ಪದ್ಧತಿಯನ್ನು ಕಡ್ಡಾಯ ಮಾಡುವುದು ಮುಂತಾದ ಕಾರ್ಯಕ್ರಮಗಳನ್ನು ಎಷ್ಟೇ ವೆಚ್ಚವಾಗಲಿ ರೈತರ ಹಿತದೃಷ್ಟಿಯಿಂದ ಕೈಗೊಳ್ಳಬೇಕು. ಇದಕ್ಕೆ ಸರ್ಕಾರದ ಕಾಲ ನಿಗದಿತ ಕಾರ್ಯಕ್ರಮಗಳು ಹಾಗೂ ರೈತರ ಸಂಪೂರ್ಣ ಸಹಕಾರ ಅಗತ್ಯ.