ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧

ಅರಿವೆ ಗುರು

ಕರೆಂಟು ಹೊಡೆದು ಸತ್ತವನೆ ರಂಗಜ್ಜ........!!

image_
ಅನಿಲ್‍ಕುಮಾರ್
9449837309
1

ಲೈನ್ಮ್ಯಾನ್ ಭೀಮಣ್ಣ ಬಿರುಸಿನಿಂದ ಓಡುವುದನ್ನ ಕಂಡ ರಾಮು ಏನ್ ಭೀಮಣ್ಣ ಏದುಸಿರು ಬಿಡುತ್ತಾ ಹೀಗೆ ಓಡುತ್ತಿದ್ದೀಯಾ? ಏನು ಹೇಳನ ಬಿಡು ತೋಟದತಾವ ರಂಗಜ್ಜ ಕರೆಂಟು ಹೊಡೆದು ಸತ್ತವನೆ ನೋಡಾನಾ ಅಂತ ಹೋಗ್ತಾ ಇವ್ನಿ. ಮಳೆಗಾಲ ಪ್ರಾರಂಭ ಆಯಿತು ಅಂದ್ರೆ ಸಾಕು. ಹೊಳೆಸಾಲಿನ ಪಂಪನಲ್ಲಿ ಸುಟಗಂಡ ಸಾಯೋರು ಇದ್ದೇ ಇರ್ತಾಲರೆ ನೋಡು ಅಂತ ಸೈಕಲ್ ಮೇಲಿಂದಾನೆ ಕೂಗುತ್ತಾ ಹೋದ.

ರಾಮು ತನ್ನಲ್ಲೆ ಚಿಂತಿಸುತ್ತಾ ತೋಟದ ಕಡೆ ಹೆಜ್ಜೆ ಹಾಕುತ್ತ ಮಳೆಗಾಲ ಪ್ರಾರಂಭಕ್ಕೂ ಪಂಪ್ನಲ್ಲಿ ಶಾಕ್ಗೂ ಏನು ಸಂಬಂಧ ರಂಗಜ್ಜ ಯಾಕೆ ಸತ್ತ ಅಂತ ಚಿಂತಿಸುವಲ್ಲಿಗೆ ತುಂಗಭದ್ರಾ ನದಿ ದಡದ ರಂಗಜ್ಜನ ಅಡಿಕೆ ತೋಟ ಬಂದಿತ್ತು. ಅಲ್ಲೆ ಇದ್ದ ರಾಜ ಹ್ಯಾಗೆ ರಂಗಜ್ಜ ಸತ್ತ ಎಂದು ಹೇಳುತ್ತಿದ್ದ. ಮಳೆ ಬಂದ್ರೆ ಹೊಳೆ ಬಂದು ಪಂಪು ನೀರಲ್ಲಿ ಮುಳುಗಿ ಹಾಳಾಗುತ್ತೆ ಅಂತ ಮಳೆಲ್ಲೆ ಪಂಪು ಎತ್ತಿಡಾಕೆ ಬಂದಿದ್ದ. ಪಂಪ್ ಹತ್ರ ಹೋಗಿ ಮುಟ್ಟುತ್ತಿದ್ದಂತೆ ಕರೆಂಟ್ ಹೊಡಿತಂತೆ ಸತ್ತ. ಈ ಪಂಪಿಂದ ನಮ್ಮೂರಲ್ಲಿ ಸಾಯೋರ ಸಂಖ್ಯೆ ಜಾಸ್ತಿ ಆಗೈತೆ ಹೋದ ತಿಂಗಳು ಸೋಮಣ್ಣ ಪಂಪ್ ರಿಪೇರಿ ಮಾಡಕೆ ಹೋಗಿ ಸತ್ತಿದ್ದ.

ರಾಮು ಭೀಮಣ್ಣನ್ನ ಕಂಡು ರಂಗಜ್ಜನಿಗೆ ಯಾಕೆ ಕರೆಂಟು ಹೊಡಿತು ಅಂತ ಕೇಳಿದ್ದಕ್ಕೆ ಅದೇನು ಹೇಳ್ತಿ ಬಿಡು ರಾಮು ಈ ಊರಾಗೆ ಯಾರಿಗೆ ಬುದ್ಧಿವಾದ ಹೇಳಾಕೆ ಹೋದ್ರೂ ಉಪಯೋಗಿಲ್ಲ. ಪಂಪುಗಳಿಗೆ ಅರ್ಥಿಂಗ್ ಮಾಡ್ಸಿ ಅಂತ ಹೇಳಿ ಸಾಕಾಗಿದೆ. ನೋಡು ಈ ಹೊಳೆಸಾಲಿಗೆ ನೂರಾರು ಪಂಪ್ ಅದವೆ ಒಂದಕ್ಕಾದ್ರೂ ಅರ್ಥಿಂಗ್ ಇದೆಯಾ? ಯಾವನು ಯಾವಾಗ ಸಾಯ್ತಾನೆ ಅಂತ ಹೇಳಕೆ ಆಗೋಲ್ಲ. ರಾಮು ಓ ಹೀಗಾ ವಿಷಯ ಅರಿವಿನ ಕೊರತೆ ಅನ್ನು. ರಾಮು ಮನೆಗೆ ಬಂದವನೆ ಒಂದು ಅರ್ಥಿಂಗ್ ಕುರಿತು ಲೇಖನ ಬರೆದು ಪ್ರಿಂಟ್ ಮಾಡಿಸಿ ಊರಿಗೆಲ್ಲಾ ಹಂಚುತ್ತಾನೆ. ಆ ಲೇಖನ ಮಿಡಿತ ಓದುಗರಿಗಾಗಿ.

5

ಪ್ರಿಯ ರೈತ ಬಾಂಧವರೆ ಪಂಪು ಅಥವಾ ಯಾವುದೇ ವಿದ್ಯುತ್ ಉಪಕರಣಗಳಿಗೆ ಅರ್ಥಿಂಗ್ ಮಾಡುವುದರಿಂದ ನಮಗೆ ವಿದ್ಯುತ್ ಶಾಕ್ನಿಂದ ಆಗುವ ಅಪಾಯ ತಪ್ಪಿಸಬಹುದು. ನಾವು ಸಿಂಗಲ್ ಫ಼ೇಜ್ ವೋಲ್ಟೇಜ್ ಕಡಿಮೆ ಅದಕ್ಕ್ಯಾಕೆ ಅರ್ಥಿಂಗ್ ೩ ಫ಼ೇಸ್ಗೆ ಕೊಟ್ಟರೆ ಆಯಿತು ಹೀಗೆ ಲೆಕ್ಕ ಹಾಕುತ್ತೇವೆ. ವಾಸ್ತವದಲ್ಲಿ ಎಲ್ಲಾ ಉಪಕರಣಗಳಿಗೆ ಅರ್ಥಿಂಗ್ ಅಗತ್ಯ ಕಾರಣ ೭೫ ವೋಲ್ಟ್ ಮನುಷ್ಯರಿಗೆ ತೀವ್ರ ಹಾನಿ ಮಾಡಲು ಸಾಕು. ಯಾವುದೇ ಲೋಹ ಕವಚ ಹೊಂದಿದ ಉಪಕರಣಗಳು ಅದರಲ್ಲೂ ನೀರಿನೊಡನಾಡುವ ಉಪಕರಣಗಳನ್ನು ಅರ್ಥಿಂಗ್ ಇಲ್ಲದೆ ಬಳಸುವುದು ಅಪಾಯಕಾರಿ. ತೇವಾಂಶ ಇರುವ ಸ್ಥಳಗಳಲ್ಲಿ ಅರ್ಥಿಂಗ್ ಇದ್ದಾಗ್ಯೂ ಜಾಗರೂಕರಾಗಿರಬೇಕು.

ಭೂಮಿ ನಮಗೆ ಆಹಾರ ನೀಡಿ ರಕ್ಷಿಸುತ್ತದೆ. ಜೊತೆಗೆ ವಿದ್ಯುತ್ ಶಾಕ್ನ್ನು ಕೂಡ ಭೂಮಿನೇ ನುಂಗಿಕೊಂಡು ನಮ್ಮನ್ನು ರಕ್ಷಿಸಬಲ್ಲದು.

ಯಾವುದೇ ಕಾರಣಕ್ಕಾದರೂ ವಿದ್ಯುತ್ ಲೋಹಗಳಿಗೆ ಹರಿದಾಗ ನಾವು ಮುಟ್ಟಿದರೆ ಶಾಕ್ ಕೊಡುತ್ತದೆ. ಆದರೆ ಅರ್ಥಿಂಗ್ ಇದ್ದಾಗ ಭೂಮಿ ಈ ಶಕ್ತಿಯ ಸಂಗ್ರಾಹಕವಾಗಿ ಕೆಲಸ ಮಾಡುತ್ತದೆ. ಇದರಿಂದ ಹಲವು ಲಾಭಗಳಿವೆ. ಇದು ನಮ್ಮ ವಿದ್ಯುತ್ ಉಪಕರಣಗಳನ್ನು ಹೆಚ್ಚುವರಿ ವೋಲ್ಟೇಜ್ ಹರಿವಿನಿಂದ ಸಂರಕ್ಷಿಸುತ್ತದೆ. ಇಂತಹ ಹೆಚ್ಚುವರಿ ವೋಲ್ಟೇಜ್ ನೈಸರ್ಗಿಕವಾಗಿ ಸಿಡಿಲುಗಳಿಂದ ಮಿಂಚುಗಳಿಂದ ಹರಿಯಬಹುದು ಅಥವಾ ಹೆಚ್ಚು ವೋಲ್ಟೇಜ್ ಇರುವ ಲೈನ್ಗಳಿಗೆ ತಾಕಿ ಆಗಬಹುದು ಅಥವಾ ವಿದ್ಯುತ್ ಜಾಲದಲ್ಲಿನ ಅವಘಡಗಳಿಂದ ಸಂಭವಿಸಬಹುದು. ಜೊತೆಗೆ ನಮಗೂ ಸುರಕ್ಷತೆ ನೀಡುತ್ತದೆ. ವಿದ್ಯುತ್ ಅರ್ಥಿಂಗ್ ಮೂಲಕ ಹರಿಯುವುದರಿಂದ ನಮಗೆ ಕಡಿಮೆ ಶಾಕ್ ಆಗುವುದು. ಅರ್ಥಿಂಗ್ ಸರಿ ಇಲ್ಲದಿದ್ದರೆ ಪೂರ್ಣ ವಿದ್ಯುತ್ ನಮ್ಮ ಮೂಲಕ ಹರಿಯುವುದರಿಂದ ಶಾಕ್ನಿಂದ ಭೀಕರ ಪರಿಣಾಮಗಳಾಗುತ್ತವೆ.

9

ಅರ್ಥಿಂಗ್ ಮಾಡಿದ್ದರೂ ಅದು ಕಾರಣಾಂತರಗಳಿಂದ ಅಸಮರ್ಪಕವಾಗಿರಬಹುದು ಪರೀಕ್ಷಿಸಬೇಕು.

 • ಗುಣಮಟ್ಟದ ಮಾನಕಗಳಿಗೆ ಅನುಗುಣವಾಗಿ ಅರ್ಥಿಂಗ್ ಹಾಕದಿರುವುದು
 • ಅರ್ಥಿಂಗ್ ಪೈಪ್ ಮತ್ತು ಜೋಡಿಸಿದ ವೈರ್ ಸಂಪರ್ಕ ತಪ್ಪಿರಬಹುದು ಭೌತಿಕವಾಗಿ ಯಾವುದಾದರೂ ಹೊಡೆತಗಳಿಂದ ಬಿಟ್ಟಿರಬಹುದು. ಬಹಳ ಕಾಲವಾಗಿ ತುಕ್ಕು ಹಿಡಿದು ಬಿಟ್ಟಿರಬಹುದು, ಸಡಿಲವಾಗಿರಬಹುದು.
 • ಪಂಪಿನ ಕವಚದ ಜೋಡಣೆ ಬಿಟ್ಟಿರಬಹುದು.
 • ಅರ್ಥಿಂಗ್ ಮಾಡಿದ ಪ್ರದೇಶದಲ್ಲಿ ಸರಿಯಾದ ತೇವಾಂಶ ಪ್ರಮಾಣವಿರದಿರಬಹುದು.
 • ಅಗತ್ಯವಿದ್ದಾಗ ಅನುಮಾನ ಬಂದಾಗ ನಿಗದಿತ ಕಾಲಾವಧಿಯಲ್ಲಿ ಅರ್ಥಿಂಗ್ ಸರಿಯಾಗಿದೆಯೇ ಎಂದು ಪರೀಕ್ಷಿಸಬೇಕು. ಇದಕ್ಕೆ ಮೆಗ್ಗರ್ನಂತಹ ಸುಧಾರಿತ ಉಪಕರಣ ಲಭ್ಯ ಎಲೆಕ್ಟ್ರೀಶಿಯನ್ ನೆರವು ಪಡೆದು ಪರೀಕ್ಷಿಸಬಹುದು.

  ಸರಳವಾಗಿ ೨೦೦ ವ್ಯಾಟ್ ಬಲ್ಬ್ಗೆ ಎರಡು ವೈರ್ ಜೋಡಿಸಿ ಫ಼ೇಜ್ ಮತ್ತು ಅರ್ಥಿಂಗ್ ಸಂಪರ್ಕ ನೀಡಿದರೆ ಬಲ್ಬ್ ಪ್ರಖರವಾಗಿ ಹತ್ತಿದರೆ ಅರ್ಥಿಂಗ್ ಸರಿ ಇದೆ ಎಂದರ್ಥ.

  ಅರ್ಥಿಂಗ್ನಲ್ಲಿ ಸೋರಿಕೆ ಆದಾಗ ಅದರಿಂದ ಸಂರಕ್ಷಿಸಲು ಇಎಲ್ಸಿಬಿ(ಅರ್ಥ್ಲೀಕೇಜ್ ಸರ್ಕಿಕ್ಯೂಟ್ ಬ್ರೇಕ್) ಆರ್ಸಿಸಿಬಿ (ರೆಸಿಡ್ಯುಯಲ್ ಕರೆಂಟ್ ಸರ್ಕಿಕ್ಯೂಟ್ ಬ್ರೇಕ್)ಗಳು ಲಭ್ಯ. ಇವು ಅರ್ಥಿಂಗ್ನಿಂದಾಗುವ ಅವಘಡಗಳಿಂದ ಸುರಕ್ಷತೆ ಒದಗಿಸಬಲ್ಲವು.

  18

  ಜೊತೆಗೆ ನಾವೂ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು.

 • ಪ್ರತಿವರ್ಷ ಅರ್ಥಿಂಗ್ ಸುಸ್ಥಿತಿಯಲ್ಲಿ ಇದೆಯೇ ಎಂದು ಪರೀಕ್ಷಿಸಬೇಕು.
 • ಪಂಪು ಅಥವಾ ವಿದ್ಯುತ್ ಉಪಕರಣಗಳನ್ನು ತೇವಾಂಶ ಇರುವಾಗ ಸೂಕ್ತ ಸುರಕ್ಷಾ ಕವಚಗಳಿಲ್ಲದೆ ಮುಟ್ಟಬಾರದು. ಅರ್ಥಿಂಗ್ ಇದ್ದರೂ ಸಹ ಇಂತಹ ಸಂದರ್ಭಗಳು ಅಪಾಯಕಾರಿಯಾಗಬಲ್ಲವು.

  ಅರ್ಥಿಂಗ್ ಸರಿ ಇರದಿದ್ದರೂ ವಿದ್ಯುತ್ ಉಪಕರಣಗಳು ಕಾರ್ಯನಿರ್ವಹಿಸುವುದರಿಂದ ಅರ್ಥಿಂಗ್ ಸರಿ ಇರದಿರುವುದು ನಮ್ಮ ಗಮನಕ್ಕೆ ಬರುವುದಿಲ್ಲ. ಆದ್ದರಿಂದ ಸುರಕ್ಷಾ ಉಪಕರಣಗಳಾದ ಇಎಲ್ಸಿಬಿ, ಆರ್ಸಿಸಿಬಿ, ಎಸಿಬಿಗಳನ್ನು ಬಳಸುವುದು ಉತ್ತಮ.

  ನೀರಾವರಿ ಪಂಪುಗಳಲ್ಲಿ ಅರ್ಥಿಂಗ್ ಅವಘಡ ತಪ್ಪಿಸಬಲ್ಲದು.