ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧

ಕೃಷಿರಂಗ

ಬಾಳು ಬೆಳಗಿದ ಕಿರುಕಾಮಧೇನು

image_
ಡಾ. ಶಿವಕುಮಾರ ಕ. ರಡ್ಡೇರ,
9900115524

ದೃಶ್ಯ - ೧

(ಉತ್ತರ ಕರ್ನಾಟಕದ ಹಳ್ಳಿಯೊಂದರ ದೃಶ್ಯ. ಕೃಷ್ಣಾ ನದಿಯ ಪ್ರವಾಹ ಏರುಮುಖವಾಗಿ ಆ ಹಳ್ಳಿಯ ಜಮೀನುಗಳು ಜಲಾವೃತಗೊಳ್ಳಲು ಆರಂಭಿಸಿವೆ. ರೈತರಲ್ಲಿ ತಳಮಳ, ಹತಾಶೆ, ಆಕ್ರೋಶ, ಮಡುಗಟ್ಟಿದೆ. ಊರಿನ ಮುಖ್ಯ ಬೀದಿಯಲ್ಲಿ ಕೆಲ ರೈತರು ಧಾವಂತದಿಂದ ಓಡಾಡುತ್ತಿದ್ದಾರೆ.)

ಭೀಮ: ಅದ್ಯಾಕ್ ರಾಮಣ್ಣ? ಹೀಂಗ ದೆವ್ವ ಬಡ್ದೋನಂಗ ಓಡಾಕ್ ಹತ್ತೀಯಾ?

ರಾಮ: ಏನ್ಮಾಡ್ಲಿ ಕಾಕಾ? ನೆರೀ ಬಂದು ಹೊಲದೊಳೀಕೆಲ್ಲಾ ನೀರು ನುಗ್ಗಾಕ ಹತ್ತೈತಂತೆ. ಒಡ್ಡು-ಗಿಡ್ಡು ಏನಾರ ಕಟ್ಟಾಕೆ ಆಗ್ತದಾ ನೋಡಾಕ್ ಹೊಂಟೀನಿ.

ಭೀಮ: ತೆಗಿಯೋ ರಾಮಾ! ನದೀನೇ ಉಕ್ಕಿ ಹರೀವಾಗ ನಿನ್ ಜಮೀನಿಗೆ ಒಡ್ಡು ಹಾಕಾಕ ಬರ್ತದೇನೋ. ನೀನೂ ಭೇಷದೀ ಬಿಡಪಾ. ಆ ಹಣುಮಪ್ಪ ಹ್ಯಾಂಗ ನಡುಸ್ತಾನೋ ಹಂಗಾಗ್ತದ ಬಿಡು. ಈಗ ನೀ ಒಡ್ಡು ಹಾಕೋದು, ನಿನ್ ಬೆಳೀ ಉಳ್ಸಾದು, ಎಲ್ಲಾ ನಡ್ಯಾಂಗಿಲ್ಲ ಬಿಡೋ ತಮ್ಮಾ.

ರಾಮ: ನನ್ ನಸೀಬೇ ಖೊಟಿ ಆಗೇದ ನೋಡ್ ಕಾಕಾ. ಕೈಯಿಗ್ ಬಂದಿದ್ದ ತುತ್ತು ಬಾಯಾಗ ಬರ್ಲಿಲ್ಲ ಅನ್ನಂಗಾಗೇದ. ಬೆಳ್ದು ನಿಂತಿದ್ದ ಜೋಳ ತೊಗ್ರಿ ಕುಸುಬಿ ಎಲ್ಲಾ ನೀರ್ ಪಾಲು ಆಗಾಕ್ ಹತ್ಯಾವ.

ದ್ಯಾಮ: ನಮ್ಮೂರ ಪಾಡು ಬಿಡೋ ರಾಮಾ! ಪಕ್ದಾಗಿರೋ ಶಿವಳ್ಯಾಗ ನೀರು ಊರೊಳಗೇ ನುಗ್ದೇದಂತ. ಮಂದೀ ಊರು ಬಿಟ್ಟು ಹೋಗಾಕ್ ಹತ್ಯಾರಂತ.

ಭೀಮ: ನೀ ಹೇಳೂದೂ ಖರೆ ಐತಿ ಬಿಡು. ನಮ್ ಹೊಲಾ ನೀರ್ ಪಾಲಾದ್ರೂ ಮನೀ ಮಟ ನೀರ್ ಬರಾಂಗಿಲ್ಲೇಳು.

ರಾಮ: ನಾ ಹೊಂಡ್ತೀನೋ ಯಪ್ಪಾ. ಹೊಲದ್ ಕಡೀಕ್ ಹೋಗಿ ಏನಾಗೈತೋ ನೋಡ್ಕಂಡಾರ ಬರ್ತೀನಿ.(ಎಲ್ಲರೂ ಹೊರಡುವರು)

ದೃಶ್ಯ - ೨

(ರಾಮನ ಮನೆ)

ಹಿಮ್ಮೇಳದಲ್ಲಿ:

ಬಾಳ ಬದುಕುವ ದಾರಿ ಮುಚ್ಚಿದರೇ

ವರುಣ ದೇವ ಕೋಪಗೊಂಡರೆ

ಭೂಮಿ ತಾಯಿಯು ಕೈಯಕೊಟ್ಟರೆ

ಎನಗೆ ಯಾವ ದಾರಿಯೋ!!

ಎನಗೆ ಯಾವ ದಾರಿಯೋ!!

(ರಾಮಣ್ಣ ಕೈಯಲ್ಲಿ ಟಿಕ್-೨೦ ಬಾಟಲನ್ನು ಹಿಡಿದು ಗೋಳಾಡುತ್ತಿದ್ದಾನೆ. ಅವನ ಇಬ್ಬರು ಮಕ್ಕಳು ಜೋರಾಗ ಅಳುತ್ತಿದ್ದಾರೆ. ಹೆಂಡತಿ ಲಚ್ಚಿ ಗಂಡನನ್ನು ಸಂತೈಸಲು ಯತ್ನಿಸುತ್ತಿದ್ದಾಳೆ. ಮೂಲೆಯಲ್ಲಿ ರಾಮನ ತಂದೆ ಬಾಳಜ್ಜ ಮೂಕನಂತೆ ಕುಳಿತಿದ್ದಾನೆ.)

ಲಚ್ಚಿ: ಅಯ್ಯಾ! ಇದ್ಯಾಕ್ ಹೀಂಗ ಗರ ಬಡ್ದಾವ್ರಂಗ ಆಡಾಕ ಹತ್ತೀರಿ. ಒಂದೀಟ ಸಮಾಧಾನ ಮಾಡ್ಕೋರಿ. ನೀವಾ ಹೀಂಗ ಆಡಿದ್ರ ನಾ ಯೇನ್ ಮಾಡ್ಲಿ. ಆ ಕೂಸ್ ಮಾರೀನಾರ ನೋಡಿ ಸುಮ್ಕ ಆಗಬಾರ್ದೇನು?

ರಾಮ: ಇಲ್ಲ ಲಚ್ಚೀ. ನಾ ಬದ್ಕಾಕ್ ಲಾಯ್ಕಿಲ್ಲ. ಈ ಸಾಲದ ಹೊರೀ ನನ್ಕೈಲಿ ಹೊರಾಕ್ ಆಗಂಗಿಲ್ಲ. ನಾ ಸಾಯ್ಬೇಕು

ಲಚ್ಚೀ ಸಾಯ್ಬೇಕು. ನಾ ಸತ್ರ ಸಮಸ್ಯಾ ಪರಿಹಾರ ಆಗ್ತದ

ಲಚ್ಚಿ: (ಅಳುತ್ತಾ) ಹೀಂಗಂದ್ರ ಹ್ಯಾಂಗ ಅಂತೀನಿ. ನೀವಾಡೂದ ನೋಡಿ ಕೂಸಗೋಳೂ ಚಂಡೀ ಹಿಡ್ದು ಅಳಾಕ ಹತ್ತ್ಯಾವ. ನಾ ನಿಮಗೆ ಸಮಾಧಾನ ಮಾಡ್ಲೋ, ಕೂಸುಗಳ್ನ ಸುಮ್ಕಿರಿಸ್ಲೋ. ನಂಗೂ ಸಾಕಾಗಿ ಹೋಗೇದ. ಮೊದ್ಲ ಕೈಯಾಗಿನ ಬಾಟ್ಗಲಿ ತೆಗ್ದು ಒಗೀರಿ.

ರಾಮ: ಇಲ್ಲಾ ಲಚ್ಚೀ, ನಾ ಸುಮ್ನಿರಾಂವ ಅಲ್ಲ. ಕಳ್ದೊರ್ಸ ಬರ್ಗಾಲ ಬಂದು ಬೆಳೀ ಕೈಗ ಹತ್ಲಿಲ್ಲ. ಈ ಸಆರ್ತಿ ನೆರೀ ಬಂದು ಬೆಳೆದು ನಿಂತಿದ್ದ ಜೋಳ ತೊಗ್ರಿ ಎಲ್ಲಾ ಕೊಚ್ಕಂಡ್ ಹೋಗ್ಯಾವ. ಬ್ಯಾಂಕ್ದೋರು ಬಂದು ನಾಳಿ ಮನೀ ಮುಂದ ನಿಂತ್ರ ನಾ ಹ್ಯಾಂಗ ಅವ್ರಿಗೆ ಮಾರಿ ತೋರಿಸ್ಲಿ? ಈ ಅವಮಾನ ತಡೀಯಾಕ್ ಆಗಂಗಿಲ್ಲ. ನಾ ಸಾಯ್ಲಿಕ್ಕೇ ಬೇಕು.(ಅದುವರೆಗೂ ಸುಮ್ಮನೆ ಕುಳಿತಿದ್ದ ಬಾಳಜ್ಜ ನಿಧಾನವಾಗಿ ರಾಮನ ಕಡೆ ತಿರುಗಿ ತನ್ನ ಕೈಲಿದ್ದ ಕೋಲನ್ನು ಕುಟ್ಟುತ್ತಾನೆ.)

ಲೋ ರಾಮಾ, ಅದ್ಯಾಕ ಹಂಗ ಹೆಣ್ಣಿಗನಾಂಗ ಆಡಾಕ ಹತ್ತೀಯೋ?ಸುಮ್ಮನ ಕುಂದ್ರತೀಯೋ ಏನ್ ಬಡಗೀ ತಗಂಡು ಬಾರಿಸ್ಲೋ?

ರಾಮ: ನಾ ಏನ್ ಮಾಡ್ಲೋ ಯಪ್ಪಾ? ಹೊಟ್ಯಾಗ ಬೆಂಕೀ ಬಿದ್ದಾಂಗ ಆಗೇದ. ನನ್ ಸಂಕ್ಟಾ ನಿಂಗ ತಿಳ್ಯಾಂಗಿಲ್ಲ ಬಿಡು.

ಬಾಳಜ್ಜ: ಏಯ್, ಏನ್ ಬುದ್ಧಿಗೇಡಿ ಆದೀಯೋ ನೀ! ಒಳ್ಳೇ ಮಳ್ಳನಾಂಗ ಆಡಾಕ ಹತ್ತೀಯಲ್ಲೋ. ಕಷ್ಟಾ ಮನಿಷಾರಿಗಲ್ದೆ ಮರಕ್ಕ ಬರ್ತಾವೇನೋ ಖೋಡಿ. ಸುಮಕ ಕುಂದ್ರು. ಮೊದಲು ಕೈಯಾಗಿನ ಬಾಟ್ಲಿ ಅತ್ತ ಒಗೀ. (ರಾಮ ಬಾಟಲನ್ನು ಎಸೆದು ನಿಧಾನವಾಗಿ ಅಪ್ಪನ ಬಳಿ ಬಂದು ತಲೆ ಬಗ್ಗಿಸಿ ಕೂರುತ್ತಾನೆ)

ಬಾಳಜ್ಜ: ಲೇ ಮಳ್ಳಾ, ಈ ಬರಗಾಲ ನೆರೀ ಎಲ್ಲಾ ನಮ್ಕಾಲ್ದಾಗ ಇರ್ಲಿಲ್ಲ ಅಂತ ಮಾಡಿಯೇನಲೇ? ನಾನೂ ಇಂಥಾ ಏಸು ಬರ್ಗಾಲ ನೋಡೀನೋ ನೆರೀ ಕಂಡೀನೋ ನಂಗೇ ನೆಪ್ಪಿಲ್ಲ, ಕಂಡ್ಯೇನು.

ರಾಮ: ಆಗೆಲ್ಲಾ ನೀ ಯೇನ್ ಮಾಡ್ತಿದ್ದೀ?

ಬಾಳಜ್ಜ: ಕೇಳೋ ಮಂಕೇ, ನಾ ನಿನ್ನಾಂಗ ಹೆಣ್ಣಿಗನಾಂಗ ಕೂರ್ತಿದ್ದಿಲ್ಲ. ಬರ ಬಂದಾಗ, ನೆರೀ ಬಂದಾಗ, ಬೆಳೀ ಕೈತಪ್ದಾಗ, ನಮ್ಮುನ್ ಕಾಯಾಕ ನಾ ಸಾಕಿದ ಆಡಗೋಳು, ಕುರಿಗೋಳು ಇದ್ವು ಕಣೋ. ನಿನ್ ವಯಸ್ನಾಗ ಕುರಿ ರೊಪ್ಪದಾಗ ೩೦೦ ಕುರೀ ಮಂದೆ ನಿಲ್ಸಿದ್ದಿ ನಾನು. ನೆಪ್ಪೈತೇನೋ ನಿಂಗ? ನಾ ಎಷ್ಟ್ ಹೇಳ್ದ್ರೂ ಕೇಳ್ದೆ ಕುರಿಗೋಳ್ನೆಲ್ಲ ಮಾರೀ ರೊಕ್ಕಾನೆಲ್ಲ ಜಮೀನಿಗೆ ಸುರ್ದಲ್ಲೋ, ಈಗ್ ನೋಡು, ಎಂಥಾ ಗತಿ ಬಂತು ನಿಂಗ.

ರಾಮ: ಅವಾಗ ನಂಗ ತಿಳೀಲಿಲ್ಲ. ನಿನ್ಮಾತು ಕೇಳ್ದೆ ತಪ್ಮಾಡ್ದೆ. ಈಗೇನ್ಮಾಡಾವ ಹೇಳು.