ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧

ಸಾವಯವ ಸರದಾರರು

ಅರುಣಕುಮಾರ್ ವಿ. ಕೆ.
9449623275,
1

ಕೃಷಿ ರಂಗ ಇಂದು ಬಹಳ ವಿಚಿತ್ರ ಸನ್ನಿವೇಶದಲ್ಲಿದೆ. ಪ್ರಕೃತಿಪೂರಕವಾದ ಯಾವುದೇ ತತ್ವ ಆದರ್ಶಗಳು ಇಂದಿನ ಕೃಷಿ ಧೋರಣೆಯಲ್ಲಿಲ್ಲ. ಅಧಿಕ ಇಳುವರಿ, ಹೆಚ್ಚೆಚ್ಚು ಬೆಳೆ. ಅದಕ್ಕಾಗಿ ಏನೆಲ್ಲಾ ಹಾರಾಟ-ಹೋರಾಟಗಳು, ಬೆಳೆ ಜಾಸ್ತಿಯಾದಲ್ಲಿ ಬೆಂಬಲ ಬೆಲೆಗೆ ಚಳುವಳಿ, ಕಡಿಮೆಯಾದಾಗ ಸಾಲದ ಸರಪಳಿ. ಸಾಲಮನ್ನಾಕ್ಕೆ ಅಹವಾಲು, ಪರಿಸ್ಥಿತಿ ಲಯ ತಪ್ಪಿದಾಗ ಆತ್ಮಹತ್ಯೆ. ಇಂಥವುಗಳ ಮೀರಿ ಸಮತೋಲನ ಬದುಕನ್ನು ನಡೆಸುತ್ತಿರುವ ಸಾವಯವ ಕೃಷಿಯಲ್ಲಿ ಬಾಳಿನ ಸಾರ್ಥಕತೆಯನ್ನು ಕಾಣುತ್ತಾ, ಇತರರನ್ನು ಈ ದಾರಿಯಲ್ಲಿ ಕೊಂಡೊಯ್ಯುವ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಶ್ರೀಮತಿ ಗಂಗೂಬಾಯಿ ಮತ್ತು ಶ್ರೀ ಸಂಗನಗೌಡ ತೇಜನಗೌಡ ಪಾಟೀಲರು ಇಂದಿನ ನಮ್ಮ ಸಾವಯವ ಸರದಾರರಾಗಿದ್ದಾರೆ.

3

ಇವರು ಪ್ರಾಥಮಿಕ ವಿದ್ಯಾಭ್ಯಾಸದ ನಂತರ ತಮ್ಮ ೭ ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಮಾಡುವುದರೊಂದಿಗೆ ಬದುಕನ್ನು ಕಟ್ಟಿಕೊಂಡಿದ್ದಾರೆ. ೧೯೯೯ರಲ್ಲಿ ತೋಟಗಾರಿಕೆಯಲ್ಲಿ ಆಸಕ್ತಿ ಹೊಂದಿದ ಇವರು ರಾಯಚೂರು ಕೃಷಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಭೀಮರಾಯನ ಗುಡಿಯಲ್ಲಿ ತರಬೇತಿ ಪಡೆದು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಪ್ರಾರಂಭಿಸಿದರು. ಮನೆಗೆ ಬೇಕಾಗುವ ದವಸ ಧಾನ್ಯಗಳ ಜೊತೆಗೆ ೨೦೦ ನಿಂಬೆ ಗಿಡ, ೩೫ ಮಾವು, ೭೦ ಚಿಕ್ಕು, ೨೦ ತೆಂಗು, ೨೫ ಪೇರಲ, ೫೦ ಸಾಗುವಾನಿ, ೫೦ ಸೀತಾಫಲ, ೨೦ ಕರಿಬೇವು, ೧೦ ಅಂಜೂರ, ೧೫ ಮೂಸಂಬಿ, ೧೦ ನೆಲ್ಲಿಕಾಯಿ, ೧೦ ದಾಳಿಂಬೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಾ ಸ್ವಾವಲಂಬಿ ಜೀವನವನ್ನು ನಡೆಸುತ್ತಿದ್ದಾರೆ.

5

ಕಡಿಮೆ ಮಳೆ ಬೀಳುವ ಇವರ ಕ್ಷೇತ್ರದಲ್ಲಿ ನೀರು ಸಂರಕ್ಷಣೆ ಮಾಡಿ, ಬೆಳೆಗಳನ್ನು ಸಂರಕ್ಷಿಸುತ್ತಿರುವುದು ಕೃಷಿ ತ್ಯಾಜ್ಯ ವಸ್ತುಗಳೆಂದರೆ ಎರೆಹುಳು ಗೊಬ್ಬರ ಉತ್ಪಾದನೆ ಹಾಗೂ ಬಳಕೆ, ದೇಶಿ ಹಸುಗಳ ಸಂರಕ್ಷಣೆ, ಜೀವಾಮೃತ, ಬೀಜಾಮೃತ, ಪಂಚಗವ್ಯ ತಯಾರಿಕೆ, ಜೈವಿಕ ಗೊಬ್ಬರ ಉತ್ಪಾದನೆ, ಜೀವರಸಸಾರ ಘಟಕ, ಬಯೋಗ್ಯಾಸ್, ಸಾವಯವ ತರಕಾರಿ ಬೆಳೆಯುವುದು. ಹಸಿರು ಮೇವು ಬೆಳೆಯುವುದು, ಮೇಲು ಹೊದಿಕೆ ಮೂಲಕ ತೇವಾಂಶ ಸಂರಕ್ಷಣೆ, ಅಜೋಲ್ಲಾ ಕೃಷಿ ಮುಂತಾದ ಕೆಲಸಗಳನ್ನು ಅತ್ಯಂತ ಸಮರ್ಪಕವಾಗಿ ಮಾಡಿ ತಮ್ಮ ಕ್ಷೇತ್ರವನ್ನು ಪ್ರಯೋಗ ಶಾಲೆಯನ್ನಾಗಿಸಿದ ಹೆಗ್ಗಳಿಕೆ ಇವರದು.

ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿ ಬೆಳೆದ ರೈತರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಗೊಂದಲದಲ್ಲಿದ್ದಾಗ, ಇಂಡಿ ತಾಲ್ಲೂಕು ಹಾಗೂ ಇತರ ಸುತ್ತಮುತ್ತಲಿನ ಗ್ರಾಮದಲ್ಲಿನ ೫೦ ಜನ ರೈತರ ಗುಂಪು ರಚಿಸಿ ಸಾವಯವ ದೃಢೀಕರಣಕ್ಕಾಗಿ ಬೇಕಾದ ನೋಂದಣಿ ಶುಲ್ಕ ತುಂಬಿ, ಬೆಂಗಳೂರಿನ ಕರ್ನಾಟಕ ರಾಜ್ಯ ಸಾವಯವ ಕೃಷಿ ಪ್ರಮಾಣ ಸಂಸ್ಥೆಯ ಅಧಿಕಾರಿಗಳಿಂದ ತರಬೇತಿ ನೀಡಿ, ಪ್ರಮಾಣೀಕರಣ ಕೆಲಸವನ್ನು ಪಾಟೀಲರು ಮಾಡಿದ್ದಾರೆ.

8

ಸಾವಯವ ಕೃಷಿ ಉತ್ತೇಜನಕ್ಕಾಗಿ, ಸಾವಯವ ಕೃಷಿಯ ಅರಿವು ಮೂಡಿಸುವ ಕೆಲಸಗಳಿಗಾಗಿ ಪಾಟೀಲರು ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ, ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಾಗೂ ಹಲವಾರು ಸ್ವಯಂ ಸೇವಾ ಸಂಸ್ಥೆಯವರು ರೈತರಿಗಾಗಿ ಆಯೋಜಿಸಿರುವ ಕಾರ್ಯಕ್ರಮಗಳಿಗೆ ಅಧಿಕೃತವಾಗಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ತರಬೇತುಗೊಳಿಸುತ್ತಿರುವುದು ವಿಶಿಷ್ಟವಾಗಿದೆ.

ಸಾವಯವ ಕೃಷಿಯ ಬಗ್ಗೆ ಅಪಾರ ಒಲವನ್ನು ಹೊಂದಿರುವ ಇವರು ತಮ್ಮ ಭೂಮಿಗೆ ಕಳೆದ ೨೫ ವರ್ಷಗಳಿಂದಲೂ ಒಂದು ಕಾಳೂ ರಸಾಯನಿಕ ಗೊಬ್ಬರ ಬಳಕೆ ಮಾಡಿಲ್ಲ. ಈ ಸಮಾಜಕ್ಕೆ ವಿಷಮುಕ್ತ ಆಹಾರ ನೀಡುತ್ತೇನೆ ಎಂದು ಪ್ರತಿಜ್ಞೆ ಮಾಡಿ ಇತರರನ್ನು ಹುರಿದುಂಬಿಸುತ್ತಿರುವುದು ಇವರ ವಿಶೇಷತೆಯಾಗಿದೆ. ಇಂತಹ ವೈಶಿಷ್ಟ್ಯಪೂರ್ಣ ಸಾವಯವ ಕೃಷಿ ಕುಟುಂಬವನ್ನು ನೋಡಬೇಕೆಂದಲ್ಲಿ ಅವರ ಸಾವಯವ ಕೃಷಿ ತಪೋಭೂಮಿಗೆ ಒಮ್ಮೆ ಭೇಟಿ ಕೊಡಿ.

ವಿಳಾಸ: ಶ್ರೀಮತಿ ಗಂಗೂಬಾಯಿ ಹಾಗೂ ಶ್ರೀ ಸಂಗನಗೌಡ ತೇಜ ಪಾಟೀಲ, ನಾಡ ಕೆ.ಡಿ. ಗ್ರಾಮ, ಇಂಡಿ ತಾಲ್ಲೂಕು ವಿಜಯಪುರ ಜಿಲ್ಲೆ