ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧

ಅಗಸೆ ಕೃಷಿ

ಸದಾಶಿವನಗೌಡ ಎಸ್.ಎನ್.ಓ.
9731652967
1

ಅಗಸೆ ನಮ್ಮ ದೇಶದ ಹಿಂಗಾರು ಹಂಗಾಮಿನ ಒಂದು ಎಣ್ಣೆಕಾಳಿನ ಬೆಳೆಯಾಗಿದ್ದು, ವಿಶೇಷವಾಗಿ ಎಣ್ಣೆ ಮತ್ತು ನಾರಿನ ಉದ್ದೇಶಕ್ಕಾಗಿ ಬೆಳೆಯಲಾಗುತ್ತಿದೆ. ದಕ್ಷಿಣ-ಪಶ್ಚಿಮ ಏಷ್ಯಾದ ತುರ್ಕಿಸ್ಥಾನ್, ಆಪ್ಘಾನಿಸ್ಥಾನ್ ಮತ್ತು ಭಾರತ ದೇಶಗಳಲ್ಲಿ ಅಗಸೆಯನ್ನು ಎಣ್ಣೆ ಉತ್ಪಾದನೆಗಾಗಿ ಬೆಳೆಯಲಾಗುತ್ತಿದೆ. ಭಾರತದಲ್ಲಿ ಅಗಸೆಯ ಒಟ್ಟು ಕ್ಷೇತ್ರ ೩.೨೩ ಲಕ್ಷ ಹೆಕ್ಟೇರ್, ಉತ್ಪಾದನೆ ೧.೫೩ ಲಕ್ಷ ಟನ್ ಇದ್ದು ಉತ್ಪಾದಕತೆ ಪ್ರತಿ ಹೆಕ್ಟೆರಿಗೆ ೪೭೩ ಕಿ.ಗ್ರಾಂ ಇರುತ್ತದೆ. ಪ್ರಪಂಚದಲ್ಲಿ ಭಾರತವು ವಿಸ್ತೀರ್ಣವಾರು ಪ್ರಥಮಸ್ಥಾನದಲ್ಲಿದ್ದು, ಉತ್ಪಾದನೆಯಲ್ಲಿ ಐದನೇ ಸ್ಥಾನದಲ್ಲಿದೆ. ಈ ಬೆಳೆಯನ್ನು ಉತ್ತರ ಭಾರತದ ರಾಜ್ಯಗಳಾದ ಮಧ್ಯಪ್ರದೇಶ, ಉತ್ತರಪ್ರದೇಶ, ಮಹಾರಾಷ್ಟ್ರ, ಜಾರ್ಖಂಡ್, ಬಿಹಾರ್, ಛತ್ತೀಸಗಡಗಳಲ್ಲಿ ಮುಖ್ಯ ಬೆಳೆಯಾಗಿ ಬೆಳೆಯಲಾಗುತ್ತಿದ್ದು, ಜೊತೆಗೆ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಸೀಮಾಂಧ್ರ ಹಾಗೂ ತೆಲಂಗಾಣ ರಾಜ್ಯಗಳಲ್ಲಿಯೂ ಸಹ ಅಂತರ ಬೆಳೆ ಅಥವಾ ಮುಖ್ಯ ಬೆಳೆಯಾಗಿ ಬೆಳೆಯಲಾಗುತ್ತಿದೆ. ಇನ್ನು ಕರ್ನಾಟಕ ರಾಜ್ಯದಲ್ಲಿ ಅಗಸೆ ಬೆಳೆಯ ಬಗ್ಗೆ ಅವಲೋಕಿಸಿದಾಗ ಉತ್ತರದ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟ, ಬೆಳಗಾವಿ, ಗದಗ, ಕಲಬುರಗಿ, ಬೀದರ, ಬಳ್ಳಾರಿ, ಕೊಪ್ಪಳ, ಯಾದಗಿರಿ ಮತ್ತು ರಾಯಚೂರುಗಳಲ್ಲಿ ಬೆಳೆಯುತ್ತಿದ್ದು, ರಾಜ್ಯದಲ್ಲಿ ಈ ಬೆಳೆಯ ಒಟ್ಟು ವಿಸ್ತೀರ್ಣ ೧೧,೦೦೦ ಹೆಕ್ಟೇರ್, ಉತ್ಪಾದಕತೆ ೩೬೪ ಕಿ.ಗ್ರಾಂ ಪ್ರತಿ ಹೆಕ್ಟೇರಿಗೆ ಹಾಗೂ ಉತ್ಪಾದನೆ ೪೦೦೦ ಟನ್ ಇದೆ. ಸಂಶೋಧನೆಗಳ ಪ್ರಕಾರ ಅಗಸೆಯು ಯಥೇಚ್ಚವಾಗಿ ಔಷಧಿ ಗುಣಗಳನ್ನು ಹೊಂದಿದ್ದು, ಓಮೆಗಾ-೩ ಮತ್ತು ೬ ಎಂಬ ಕೊಬ್ಬಿನಾಮ್ಲಗಳು ಒಳಗೊಂಡಿರುತ್ತವೆ. ಈ ಕೊಬ್ಬಿನಾಮ್ಲಗಳು ಶಾರೀರಿಕ ಕ್ರಿಯೆಗಳಾದಂತಹ ರಕ್ತದ ಒತ್ತಡ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಹೃದಯ ಬಡಿತವನ್ನು ನಿಯಂತ್ರಿಸುತ್ತವೆ. ಅಗಸೆಯಲ್ಲಿ ಲಿಗ್ನಿನ್ ಅಂಶ ಇರುವುದರಿಂದ ಕ್ಯಾನ್ಸರ್ ರೋಗವನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ. ಇದರ ಜೊತೆಗೆ ಶೇ. ೭೫-೮೦ ಭಾಗ ಔದ್ಯೋಗಿಕ ಉದ್ದೇಶಕ್ಕಾಗಿ ಅಂದರೆ ಬಣ್ಣ, ಪ್ರಿಂಟ್ ಶಾಹಿ, ಚರ್ಮ ಮತ್ತು ಸಾಬೂನು ತಯಾರಿಕೆ, ಅಲಂಕಾರಿಕ ವಸ್ತುಗಳು ಮತ್ತು ಹಾರ ಮಾಡಲು, ಅಗಸೆ ಹಿಂಡಿ ಇನ್ನಿತರ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಈ ಪ್ರಕಾರವಾಗಿ ಅಗಸೆಯು ಒಂದು ಬಹುಪಯೋಗಿ ಬೆಳೆಯಾಗಿದ್ದು, ಇದರ ಆಧುನಿಕ ಬೆಳೆ ತಾಂತ್ರಿಕತೆಗಳು ಈ ಕೆಳಗಿನಂತಿವೆ.

ಹವಾಗುಣ

ಈ ಬೆಳೆಯನ್ನು ಶೀತವಲಯ ಮತ್ತು ಉಷ್ಣವಲಯದ ಪ್ರದೇಶಗಳಲ್ಲಿ ಚಳಿಗಾಲದ ಬೆಳೆಯಾಗಿ ಬೆಳೆಯುತ್ತಾರೆ. ಬೆಳೆಗೆ ೫೦೦-೮೦೦ ಮಿ.ಮೀ. ಮಳೆ ಅವಶ್ಯಕ. ಬೆಳವಣಿಗೆಗೆ ಮತ್ತು ಕಾಳು ಕಟ್ಟುವ ಸಮಯದಲ್ಲಿ ಅಧಿಕ ಉಷ್ಣಾಂಶ ಮತ್ತು ಅನಾವೃಷ್ಟಿ ಇದ್ದಲ್ಲಿ ಎಣ್ಣೆ ಮತ್ತು ಕಾಳಿನ ಇಳುವರಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾಗೆಯೇ ಎಣ್ಣೆಯ ಗುಣಮಟ್ಟ ಕಡಿಮೆಯಾಗುವುದು.

ಮಣ್ಣು: ಫಲವತ್ತಾದ ನೀರು ಬಸಿದು ಹೋಗುವ ಗೋಡು ಮತ್ತು ಅಥವಾ ಕಪ್ಪು ಮಣ್ಣು ಸೂಕ್ತವಾದುದು, ಅಂತರ: ೩೦ ಸೆಂ.ಮೀ x ೫ ಸೆಂ.ಮೀ. (ಸಾಲಿನಿಂದ ಸಾಲಿಗೆ x ಗಿಡದಿಂದ ಗಿಡಕ್ಕೆ), ಬೀಜದ ಪ್ರಮಾಣ: ೨೫-೩೦ ಕಿ.ಗ್ರಾಂ ಪ್ರತಿ ಹೆಕ್ಟೇರಿಗೆ, ಮುನ್ನೆಚ್ಚರಿಕೆ: ಬೀಜಗಳು ಸಣ್ಣದಾಗಿರುವುದರಿಂದ ಸಣ್ಣ ಮರಳಿನ ಜೊತೆಗೆ ಮಿಶ್ರಣಮಾಡಿ ೩-೪ ಸೆಂ.ಮೀ. ಆಳಕ್ಕೆ ಮೀರದಂತೆ ಬಿತ್ತಬೇಕು. ಇದರಿಂದ ಮೊಳಕೆ ಪ್ರಮಾಣ ಹೆಚ್ಚುತ್ತದೆ, ಬಿತ್ತನೆಯ ಕಾಲ: ಅಕ್ಟೋಬರ್ ೧೫ ರಿಂದ ನವಂಬರ್ ೧೫ ವರೆಗೆ ಸೂಕ್ತ, ಬೀಜೋಪಚಾರ: ಪ್ರತಿ ಕಿ.ಗ್ರಾಂ ಬೀಜಕ್ಕೆ ೧.೫ ಗ್ರಾಂ. ಕಾರ್ಬೆಂಡೈಜಿಂ ಅಥವಾ ೪ ಗ್ರಾಂ. ಟ್ರೈಕೋಡರ್ಮಾದಿಂದ ಉಪಚರಿಸುವುದರಿಂದ ಮುಂದೆ ಬರುವ ರೋಗಗಳನ್ನು ತಡೆಯಬಹುದು ಮತ್ತು ಜೈವಿಕ ಗೊಬ್ಬರಗಳಾದ ಅಜೋಸ್ಪೈರಿಲಂ ೩ ಗ್ರಾಂ ಮತ್ತು ರಂಜಕ ಕರಗಿಸುವ ಬ್ಯಾಕ್ಟೀರಿಯಾದಿಂದ ಬೀಜೋಪಚಾರ ಮಾಡಬೇಕು.

ಎನ್.ಎಲ್ ೧೧೫ ತಳಿ, ಮಾಗುವ ದಿನಗಳು: ೧೧೦-೧೧೫, ವಿಶೇಷತೆ: ದಪ್ಪಕಾಳು, ಬೂದು ರೋಗಕ್ಕೆ ನಿರೋಧಕ ಶಕ್ತಿ ಹೊಂದಿದೆ. ಎಸ್ ೩೬ ತಳಿ, ಮಾಗುವ ದಿನಗಳು: ೧೨೦, ವಿಶೇಷತೆ: ಮಧ್ಯಮ ಗಾತ್ರದ ಕಾಳು, ಬೂದು ರೋಗಕ್ಕೆ ಮಧ್ಯಮ ನಿರೋಧಕ ಶಕ್ತಿ ಹೊಂದಿದೆ.

ರಸಗೊಬ್ಬರ (ಕಿ.ಗ್ರಾಂ ಪ್ರತಿ ಹೆಕ್ಟೇರಿಗೆ)

ನೀರಾವರಿ ಖುಷ್ಕಿ

ಕೊಟ್ಟಿಗೆ ಗೊಬ್ಬರ 3-5 ಟನ್

ಡಿ.ಎ.ಪಿ 174-44

ಯೂರಿಯಾ 63-70

ಎಂ.ಓ.ಪಿ 50-33

ಬಿತ್ತುವುದಕ್ಕಿಂತ ಮೂರುವಾರ ಮೊದಲು ಕೊಟ್ಟಿಗೆ ಗೊಬ್ಬರವನ್ನು ಮಣ್ಣಿಗೆ ಬೆರೆಸಬೇಕು.

 • ನೀರಾವರಿ ಬೆಳೆಗೆ, ಬಿತ್ತನೆ ಸಮಯದಲ್ಲಿ ಶಿಫಾರಸ್ಸು ಮಾಡಿದ ಸಾರಜನಕದ ಪ್ರಮಾಣದಲ್ಲಿ ಶೇ. ೫೦ ಭಾಗ ಮತ್ತು ಪೂರ್ಣ ಪ್ರಮಾಣದ ರಂಜಕ ಮತ್ತು ಅರ್ಧ ಸಾರಜನಕವನ್ನು ಬಿತ್ತಿದ ೩೦ ದಿನಗಳ ನಂತರ ಒದಗಿಸಬೇಕು. ಖುಷ್ಕಿ ಬೆಳೆಗೆ ಶಿಫಾರಸ್ಸು ಮಾಡಿದ ಎಲ್ಲ ಗೊಬ್ಬರವನ್ನು ಬಿತ್ತುವ ಸಮಯದಲ್ಲಿ ಮಣ್ಣಿಗೆ ಸೇರಿಸಬೇಕು.
 • ಅಂತರ ಬೆಳೆ ಪದ್ಧತಿಗಳು

 • ಅಗಸೆ + ಕಡಲೆ (೨:೧ ಅಥವಾ ೩:೧ ಸಾಲು); ಅಗಸೆ + ಕುಸುಬೆ (೨:೧ ಅಥವಾ ೩:೧ ಸಾಲು); ಅಗಸೆ + ಗೋಧಿ (೨:೧ ಅಥವಾ ೩:೧ ಸಾಲು); ಅಗಸೆ + ಹಿಂಗಾರಿ ಜೋಳ (೨:೧ ಅಥವಾ ೩:೧ ಸಾಲು)
 • ಕಸ್ಕ್ಯೂಟಾ (ಮಂಗನ ಬಾಲ) ಪರಾವಲಂಬಿ ಕಳೆ ಅಗಸೆ ಬೆಳೆಗೆ ಹೆಚ್ಚು ಹಾನಿ ಮಾಡುತ್ತದೆ. ಇದರ ನಿರ್ವಹಣೆಗೆ ಬಿತ್ತನೆಗೆ ಮುಂಚಿತವಾಗಿ ಫ್ಲೂಕ್ಲೋರಾಲಿನ್ ೧.೦ ಕಿ.ಗ್ರಾಂ ಪ್ರಮಾಣ/ಹೆ. ಹಾಗೂ ಬಿತ್ತನೆಯಾದ ಮರುದಿನ ಪೆಂಡಿಮೆಥಾಲಿನ್ ೧.೦ ಲೀ., ಅಲಾಕ್ಲೋರ್ ೫೦ ಇ.ಸಿ.ಯನ್ನು ೨.೫-೫.೦ ಲೀ. ಪ್ರಮಾಣ/ಹೆ. ಮತ್ತು ಬಿತ್ತನೆಯಾದ ೩೦ ದಿವಸಗಳ ನಂತರ ಐಸೋಪ್ರೋವರನ್ ೭೫ ಡಬ್ಲೂ.ಪಿ. + ೨, ೪ - ಡಿಯನ್ನು ೧.೦ ಕಿ.ಗ್ರಾಂ. + ೦.೫ ಕಿ.ಗ್ರಾಂ ಕಳೆನಾಶಕವನ್ನು ಬಳಸಬಹುದು. ಬಿತ್ತನೆಯಾದ ೩೦ ಮತ್ತು ೬೦ ದಿವಸಗಳ ನಂತರ ೧-೨ ಬಾರಿ ಮಧ್ಯಂತರ ಬೇಸಾಯ ಮಾಡುವುದರಿಂದ ಅಥವಾ ಕೈಕಳೆ ಕಿತ್ತು ಕಳೆಗಳನ್ನು ನಿಯಂತ್ರಿಸಬಹುದು.

  18

  ನೀರಾವರಿ

  ಹೂ ಬಿಡುವ ಮತ್ತು ಕಾಳು ಕಟ್ಟುವ ಹಂತಗಳು, ಈ ಬೆಳೆಯ ಸಂದಿಗ್ಧ ಹಂತಗಳು. ಆದ್ದರಿಂದ ಬಿತ್ತಿದ ೩೫ ಮತ್ತು ೫೫ ದಿವಸಗಳಲ್ಲಿ ನೀರನ್ನು ತಪ್ಪದೇ ಹಾಯಿಸಬೇಕು. ಇಲ್ಲವಾದಲ್ಲಿ ಇಳುವರಿ ಕಡಿಮೆಯಾಗುತ್ತದೆ.

  ಸಸ್ಯ ಸಂರಕ್ಷಣೆ: ಅಗಸೆಯನ್ನು ಬಾಧಿಸುವ ಬೂದು ರೋಗ, ಬೇರು ಕೊಳೆರೋಗ, ತುಕ್ಕು ರೋಗ, ಮೊಗ್ಗಿನ ನೊಣ, ಎಲೆ ತಿನ್ನುವ ಹುಳು, ಕಾಯಿಕೊರಕಗಳನ್ನು ಸೂಕ್ತ ಸಸ್ಯ ಸಂರಕ್ಷಣಾ ಕ್ರಮಗಳನ್ನು ಅನುಸರಿಸಿ ಕಾಪಾಡಿಕೊಳ್ಳಬೇಕು.

  ಅಗಸೆ ಬೆಳೆಗೆ ಬರುವ ಪ್ರಮುಖ ರೋಗ ಮತ್ತು ಕೀಟಗಳು ಹಾಗೂ ಅವುಗಳ ನಿರ್ವಹಣೆ

  1.ಬೂದು ರೋಗ:ರೋಗ ಕಂಡುಬಂದಲ್ಲಿ ಪ್ರತಿ ಲೀಟರ್ ನೀರಿಗೆ ೧ ಗ್ರಾಂ ಕಾರ್ಬೆಂಡೈಜಿಂ ೫೦ ಡಬ್ಲೂ.ಪಿ. ಅಥವಾ ಶೇ. ೦.೧ ಕ್ಯಾರಥೇನ್ ಬೆರೆಸಿ ಸಿಂಪಡಿಸಬೇಕು.

  2.ಬೇರು ಕೊಳೆ ರೋಗ:ಈ ರೋಗವು ಮಣ್ಣಿನಲ್ಲಿರುವ ರೋಗಾಣುಗಳ ಮುಖಾಂತರ ಬರುತ್ತದೆ. ರೋಗ ಕಂಡು ಬಂದಲ್ಲಿ ೨ ಗ್ರಾಂ. ಕಾರ್ಬೆಂಡೈಜಿಂ ೫೦ ಡಬ್ಲೂ.ಪಿ. ಪ್ರತಿ ಲೀಟರ್ ನೀರಿಗೆ ಹಾಕಿ ಗಿಡಗಳ ಬುಡದ ಹತ್ತಿರ ಸಿಂಪಡಿಸಬೇಕು. ಇಲ್ಲವಾದಲ್ಲಿ ಬಿತ್ತನೆಗೆ ಪೂರ್ವದಲ್ಲಿ ೨ ಗ್ರಾಂ ಕಾರ್ಬೆಂಡೈಜಿಂ ಅಥವಾ ೪ ಗ್ರಾಂ ಟ್ರೈಕೋಡರ್ಮಾ ಅಥವಾ ೩ ಗ್ರಾಂ ಕ್ಯಾಪ್ಟಾನ್ ೮೦ ಡಬ್ಲೂ.ಪಿ. ಪ್ರತಿ ಕಿ.ಗ್ರಾಂ ಬೀಜಕ್ಕೆ ಬೀಜೋಪಚಾರ ಮಾಡಬೇಕು.

  3. ತುಕ್ಕು ರೋಗ: ಈ ರೋಗ ಕಂಡು ಬಂದಲ್ಲಿ ಶೇ. ೦.೧ ರ ಬೆನೋಮಿಲ್ನ್ನು ಪ್ರತಿ ಲೀಟರ್ ನೀರಿನಲ್ಲಿ ಹಾಕಿ ೨-೩ ಬಾರಿ, ೧೫-೨೦ ದಿವಸಗಳಿಗೊಮ್ಮೆ ಸಿಂಪಡಿಸಬೇಕು.

  4. ಮೊಗ್ಗಿನ ನೊಣ: ಈ ಕೀಟವು ಕಂಡು ಬಂದಲ್ಲಿ ೨ ಮಿ.ಲೀ. ಕ್ವಿನಾಲ್ಫಾಸ್ ೨೫ ಇಸಿ. ಅಥವಾ ೦.೩ ಮಿ.ಲೀ. ಇಮಿಡಾಕ್ಲೋಪ್ರಿಡ್ ೧೭.೮ ಎಸ್.ಎಲ್ ಪ್ರತಿ ಲೀಟರ್ ನೀರಿಗೆ ಹಾಕಿ ಸಿಂಪಡಿಸಬೇಕು.

  5. ಎಲೆ ತಿನ್ನುವ ಹುಳು:ಈ ಕೀಟವು ಕಂಡುಬಂದಲ್ಲಿ ೦.೫ ಮಿ.ಲೀ. ಲ್ಯಾಂಬ್ಡಾಸೈಲೋಥ್ರಿಸ್ ೫ ಇ.ಸಿ. ಕೀಟನಾಶಕವನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಅಥವಾ ೨೦-೨೫ ಕಿ.ಗ್ರಾಂ/ಹೆ. ಮೆಲಾಥಿಯಾನ್ ಪುಡಿಯನ್ನು ಬೆಳಗಿನ ಜಾವದಲ್ಲಿ ಧೂಳೀಕರಿಸಬೇಕು.

  6. ಕಾಯಿ ಕೊರಕ: ಈ ಕೀಟವು ಕಂಡುಬಂದಲ್ಲಿ ಶೇ. ೧ ಮಿಥೈಲ್ ಪ್ಯಾರಾಥಿಯನ್ ಅಥವಾ ಶೇ. ೧.೫ ರ ಕ್ವಿನಾಲ್ಪಾಸ್ ಪುಡಿಯನ್ನು ಪ್ರತಿ ಹೆಕ್ಟೇರಿಗೆ ೨೫ ಕಿ.ಗ್ರಾಂನಂತೆ ಧೂಳೀಕರಿಸಬೇಕು.

  ಇಳುವರಿ

  ಪ್ರತಿ ಹೆಕ್ಟೇರಿಗೆ, ನೀರಾವರಿಯಲ್ಲಿ ೧೦-೧೨ ಕ್ವಿಂಟಾಲ್ ಹಾಗೂ ಖುಷ್ಕಿಯಲ್ಲಿ ೬-೮ ಕ್ವಿಂಟಾಲ್ ಕಾಳಿನ ಇಳುವರಿಯನ್ನು ನಿರೀಕ್ಷಿಸಬಹುದು.