ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧

ಭತ್ತದ ಹುಲ್ಲನ್ನು ಪೆಂಡಿ ಕಟ್ಟಲು ಬಂದಿದೆ “ಬೇಲರ್” ಯಂತ್ರ

ಪೃಥ್ವಿ ಟಿ. ಪಿ. ಎಂ.
8277932654,
1

ಭದ್ರಾವತಿ ತಾಲ್ಲೂಕಿನಲ್ಲಿ ಈಗಾಗಲೇ ಭತ್ತದ ಬೆಳೆಯ ಕಟಾವು ಪ್ರಕ್ರಿಯೆ ಬಹುತೇಕ ಮುಕ್ತಾಯಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಕೂಲಿಯಾಳುಗಳ ಕೊರತೆಯಿಂದಾಗಿ ಸಾಂಪ್ರದಾಯಿಕ ಕೈ ಕಟಾವು ಪದ್ಧತಿಯಿಂದ ವಿಮುಖರಾಗಿ ರೈತರು ಯಾಂತ್ರೀಕೃತ ಕಟಾವು ಪದ್ಧತಿಯ ಮೊರೆಹೋಗುತ್ತಿದ್ದಾರೆ. ತಾಲ್ಲೂಕಿನಲ್ಲಿ ಶೇ.೪೦ರಿಂದ ಶೇ. ೫೦ರಷ್ಟು ಭತ್ತದ ಬೆಳೆಗೆ ಕಟಾವು ಯಂತ್ರ (ಕಂಬೈನ್ ಹಾರ್ವೆಸ್ಟರ್) ಬಳಸಲಾಗುತ್ತಿದೆ. ಕಟಾವಿನ ನಂತರ ಬರುವ ಹುಲ್ಲನ್ನು ಸಂಗ್ರಹಿಸಿ ಪೆಂಡಿ ಕಟ್ಟುವುದು ರೈತರಿಗೆ ದೊಡ್ಡ ಸಮಸ್ಯೆಯಾಗಿತ್ತು ಹಾಗೂ ಸಾಕಷ್ಟು ಪ್ರಮಾಣದಲ್ಲಿ ಹುಲ್ಲು ನಷ್ಟವಾಗುತ್ತಿತ್ತು.

3

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆಯಿಂದಾಗಿ ಮೇವಿನ ಕೊರತೆ ಉಂಟಾಗುವ ಎಲ್ಲಾ ಸಾದ್ಯತೆಗಳಿರುವುದರಿಂದ ಭತ್ತದ ಹುಲ್ಲಿಗೆ ಬೇಡಿಕೆ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ. ಪ್ರತಿ ಎಕರೆ ಹುಲ್ಲು ರೂ. ೮,೦೦೦ದಿಂದ ರೂ. ೧೦,೦೦೦ ದರಕ್ಕೆ ಮಾರಾಟವಾಗುತ್ತಿದೆ. ಈ ಕಾರಣಗಳಿಂದಾಗಿ ರೈತರು ಹುಲ್ಲಿನ ಸಂರಕ್ಷಣೆಗೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಕೃಷಿ ಇಲಾಖೆಯು ಭತ್ತದ ಹುಲ್ಲನ್ನು ಪೆಂಡಿ ಕಟ್ಟುವ ಯಂತ್ರವನ್ನು (ಬೇಲರ್) ಪ್ರಾತ್ಯಕ್ಷಿಕೆಗಳ ಮೂಲಕ ಪರಿಚಯಿಸಿ ರೈತರಿಗೆ ನೆರವಾಗುತ್ತಿದೆ.

ದಿನಾಂಕ ೦೯-೧೨-೨೦೧೬ರಂದು ಶಿವಮೊಗ್ಗ ತಾಲ್ಲೂಕಿನ ಬೇಡರ ಹೊಸಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಕೈಗೊಳ್ಳಲಾದ ದೊಡ್ಡಮಟ್ಟದ ಪ್ರಾತ್ಯಕ್ಷಿಕೆಗೆ ಸನ್ಮಾನ್ಯ ಕೃಷಿ ಸಚಿವರಾದ ಶ್ರೀ ಕೃಷ್ಣಬೈರೇಗೌಡರವರು ಚಾಲನೆ ನೀಡಿರುತ್ತಾರೆ.

6

ಈ ಯಂತ್ರವನ್ನು ಟ್ರಾಕ್ಟರ್ಗೆ ಅಳವಡಿಸಿ ಯಾಂತ್ರೀಕೃತವಾಗಿ ಕಟಾವಾಗಿರುವ ಭತ್ತದ ಗದ್ದೆಯಲ್ಲಿ ಹಾಯಿಸಿದರೆ ಯಂತ್ರವು ಹುಲ್ಲನ್ನು ಪೂರ್ಣವಾಗಿ ಸಂಗ್ರಹಿಸಿ ಪೆಂಡಿ ಕಟ್ಟುತ್ತದೆ. ಈ ಪೆಂಡಿಗಳನ್ನು ರೈತರು ಸುಲಭವಾಗಿ ಸಾಗಿಸಬಹುದು ಮತ್ತು ಕಡಿಮೆ ಜಾಗದಲ್ಲಿ ಬಣವೆ ಹಾಕಿ ಶೇಖರಿಸಬಹುದು.

ವಿವಿಧ ಕಂಪೆನಿ / ಮಾದರಿಯ ಬೇಲರ್ ಯಂತ್ರಗಳು ಲಭ್ಯವಿದ್ದು ೧೮ರಿಂದ ೩೦ ಕೆ.ಜಿ. ತೂಕದ ಪೆಂಡಿ ಕಟ್ಟುವ ಸಾಮರ್ಥ್ಯ ಹೊಂದಿರುತ್ತವೆ. ಭತ್ತದ ಬೆಳವಣಿಗೆ ಮತ್ತು ಯಂತ್ರದ ಮಾದರಿಗೆ ಅನುಗುಣವಾಗಿ ಪ್ರತಿ ಎಕರೆಗೆ ೩೦ ರಿಂದ ೪೦ ಪೆಂಡಿಗಳು ಬರುತ್ತವೆ. ಒಂದು ಎಕರೆ ಹುಲ್ಲನ್ನು ಪೆಂಡಿ ಕಟ್ಟಲು ಸುಮಾರು ಒಂದುವರೆ ಗಂಟೆ ತಗುಲುತ್ತದೆ. ಇದರಿಂದ ರೈತರಿಗೆ ಸಮಯದ ಉಳಿತಾಯವೂ ಆಗುತ್ತದೆ, ಕೂಲಿ ಕಾರ್ಮಿಕರ ಕೊರತೆ ನೀಗಿದಂತಾಗುತ್ತದೆ ಮತ್ತು ಮೇವಿನ ಸಂರಕ್ಷಣೆ ಮಾಡಿಕೊಳ್ಳಬಹುದಾಗಿದೆ.

9

ಬೇಲರ್ ಯಂತ್ರವು ರೈತರಿಗೆ ಬಹಳ ಉಪಯುಕ್ತವಾಗಿದ್ದು, ರೈತರು ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಉತ್ಸುಕತೆ ತೋರುತ್ತಿದ್ದಾರೆ. ಯಂತ್ರದಿಂದ ಭತ್ತ ಕಟಾವಾದ ೩ ರಿಂದ ೪ ದಿನಗಳ ನಂತರ ಬೆಳಗಿನ ಇಬ್ಬನಿ ಆವಿಯಾಗಿ ಹುಲ್ಲು ಚೆನ್ನಾಗಿ ಒಣಗಿದ ನಂತರ ಬೇಲರ್ ಉಪಯೋಗಿಸಿ ಹುಲ್ಲನ್ನು ಪೆಂಡಿ ಕಟ್ಟುವುದು ಸೂಕ್ತ. ಈ ಯಂತ್ರಕ್ಕೆ ಸುಮಾರು ೩ ಲಕ್ಷದಿಂದ ೩.೫ ಲಕ್ಷ ರೂಪಾಯಿಗಳಾಗಿದ್ದು ಸರ್ಕಾರದಿಂದ ರೂ.೧ ಲಕ್ಷದವರೆಗೆ ಸಹಾಯಧನ ನೀಡುತ್ತದೆ. ಆಸಕ್ತ ರೈತರು ರೈತ ಸಂಪರ್ಕ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

11

ಬೇಲರ್ ಯಂತ್ರಕ್ಕೆ ರೈತರಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿರುವುದರಿಂದ ಈ ಯಂತ್ರವನ್ನು ಯಂತ್ರಧಾರೆ ಕೇಂದ್ರದಿಂದ ಬಾಡಿಗೆ ಆಧಾರದ ಮೇಲೆ ನೀಡುವ ವ್ಯವಸ್ಥೆ ಮಾಡಲಾಗಿದೆ. ತಮಿಳುನಾಡು ಮೂಲದ ಖಾಸಗೀ ಯಂತ್ರ ಮಾಲೀಕರು ಪ್ರತಿ ಪೆಂಡಿಗೆ ೪೦ ರೂ. ದರ ನಿಗದಿ ಮಾಡಿದ್ದು ಯಂತ್ರಧಾರೆಯಲ್ಲಿ ಪ್ರತಿ ಪೆಂಡಿಗೆ ೨೫ ರೂ. ನಿಗದಿ ಮಾಡಲಾಗಿದೆ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ನಾಗರಾಜ್ ಹೆಚ್.ವಿ. ರವರು.

ಆತ್ಮ ಯೋಜನೆಯಡಿ ಭದ್ರಾವತಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಒಟ್ಟು ೧೩ ಎಕರೆ ಭತ್ತದ ತಾಕಿನಲ್ಲಿ ಈ ಯಂತ್ರದ ಪ್ರಾತ್ಯಕ್ಷಿಕೆ ಕೈಗೊಳ್ಳಲಾಗಿದ್ದು, ರೈತರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಪ್ರಾತ್ಯಕ್ಷಿಕೆ ನೆಡೆಯುತ್ತಿದ್ದ ಸಮಯದಲ್ಲಿ ರೈತರು ಆಸಕ್ತಿಯಿಂದ ಯಂತ್ರದ ಕಾರ್ಯವೈಖರಿಯನ್ನು ವೀಕ್ಷಿಸಿದ್ದು ಇದಕ್ಕೆ ಸಾಕ್ಷಿಯಾಗಿದೆ ಎನ್ನುತ್ತಾರೆ ಆತ್ಮ ಯೋಜನೆಯ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರಾದ ಶ್ರೀ ರಾಕೇಶ್ ಬಿ. ರವರು.

141516