ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧

ಬಾಲವನ

ಕೊರಲೆಯ ಮಹಿಮೆ ಕಡಿಮೆ ಎನಲ್ಲ

image_
ಶಶಿಕಲಾ ಎಸ್.ಜಿ.,
9945082141

ಮಕ್ಕಳೇ, ಸಿರಿಧಾನ್ಯಗಳ ಬಳಕೆಯಿಂದ ಬರುವ ಆರೋಗ್ಯ ಸಿರಿಯನ್ನು ನಾವು ಪ್ರತಿ ಸಂಚಿಕೆಯಲ್ಲೂ ತಿಳಿದು ಕೊಳ್ಳುತ್ತಿದ್ದೇವೆ. ಈಗ ಕೊರಲೆಯ ಸರದಿ.

ಕೊರಲೆ ಕಾಳು ಹಳದಿ ಮಿಶ್ರಿತ ಬೂದು ಬಣ್ಣಕ್ಕಿರುತ್ತದೆ. ಕಾಳಿನ ಮೇಲೆ ಗಟ್ಟಿ ಕವಚ ಇರುತ್ತದೆ. ಕವಚವು ಏಳು ಪದರವಿರುತ್ತದೆ ಎಂಬುದು ರೈತರ ಅನಿಸಿಕೆ. ಗರಿಗಳು ಜೋಳದ ಗರಿಗಳನ್ನು ಹೋಲುತ್ತವೆ, ಆದರೆ ಗಾತ್ರ ಮತ್ತು ಉದ್ದ ಕಡಿಮೆ. ಕಾಂಡ ತುಂಬಾ ಮೃದು. ಇದರ ವೈಜ್ಞಾನಿಕ ಹೆಸರು Panicum ramosum

ನಮ್ಮ ದೇಶದ ಮೂಲವನ್ನು ಹೊಂದಿರುವ ಕೊರಲೆ ರಾಜ್ಯದ ಬಯಲುಸೀಮೆ ಜಿಲ್ಲೆಗಳಾದ ತುಮಕೂರು, ಚಿತ್ರದುರ್ಗ ಮತ್ತು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗಳಲ್ಲಿ ಮಾತ್ರ ಕಂಡುಬರುವ ವಿಶಿಷ್ಠ ಪ್ರಾದೇಶಿಕ ಹಿನ್ನೆಲೆಯ ಕಿರುಧಾನ್ಯ.ಇತರ ಕಿರುಧಾನ್ಯಗಳಂತೆಯೇ ಇದರ ಬೇಸಾಯ ಮಾಡಬಹುದು. ಕಡಿಮೆ ಸಾರಯುಕ್ತ ಬರಡು ಮಣ್ಣಿನಲ್ಲೂ, ಇಬ್ಬನಿಯ ತೇವದಲ್ಲೂ ಇದನ್ನು ಬೆಳೆಯಬಹುದು. ಕೊರಲೆ ಬಿತ್ತನೆ ಅತ್ಯಂತ ಸುಲಭ. ಒಂದು ಸಲ ಉಳುಮೆ ಮಾಡಿದ ಜಮೀನಿಗೂ ಸಹ ಬಿತ್ತಬಹುದು. ತುಂಬಾ ಹಸನು ಮಾಡಬೇಕಾದ್ದಿಲ್ಲ. ರೋಹಿಣಿ ಮಳೆಯಲ್ಲಿ ಬಿತ್ತನೆ ಮಾಡಿದರೆ ಒಳ್ಳೆಯದು ಎಂಬುದು ಬಹುತೇಕ ರೈತರ ಅನಿಸಿಕೆ. ಬಿತ್ತಿದ ಕೆಲವೇ ಅಂದರೆ ಸರಿ ಸುಮಾರು ೯೦ ರಿಂದ ೧೦೦ ದಿನಗಳಿಗೆ ಕೊರಲೆ ಕಟಾವಿಗೆ ಬರುತ್ತದೆ. ಬಿತ್ತುವಾಗ ಸ್ವಲ್ಪ ತೇವವಿದ್ದರೆ ಸಾಕು. ಮುಂದೆ ಒಂದೆರಡು ಸುಮಾರಾದ ಮಳೆ ಬಿದ್ದರೆ ಉತ್ತಮ ಬೆಳೆ ಕೈಗೆ ಸಿಗುತ್ತದೆ.

ಕೊರಲೆ ತಿನ್ನುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ ಮತ್ತು ಮಲಬದ್ದತೆ ನಿವಾರಣೆಯಾಗುತ್ತದೆ. ಕೊರಲೆಯಲ್ಲಿರುವ ಹೆಚ್ಚು ನಾರಿನಾಂಶ ಪಚನಾಂಗಗಳ ಕಾರ್ಯದಕ್ಷತೆ ಹೆಚ್ಚಿಸುತ್ತದೆ.ರೋಗ ನಿರೋಧಕತೆ ಹೆಚ್ಚಿಸಿ ಬೊಜ್ಜು ಕಡಿಮೆ ಮಾಡುವ ಶಕ್ತಿ ಇದರಲ್ಲಿದೆ. ಕೊರಲೆಯಲ್ಲಿ ನಾರು ಮತ್ತು ಪ್ರೋಟಿನ್ ಅಂಶಗಳು ಹೆಚ್ಚಾಗಿ ಇರುತ್ತವೆ ಸಕ್ಕರೆ ರೋಗದ ನಿಯಂತ್ರಣಕ್ಕೂ ಕೊರಲೆ ಸಹಕಾರಿಯಾಗಿದೆ.

ಕೊರಲೆಯಲ್ಲಿ ಅನ್ನ, ಪಲಾವ್, ಚಿತ್ರನ್ನ, ದೋಸೆ, ಇಡ್ಲಿ, ರೊಟ್ಟಿ ಮಾಡಬಹುದು, ಉತ್ತರ ಕರ್ನಾಟಕದ ಅನೇಕ ದೇವರುಗಳ ಜಾತ್ರೆಯಲ್ಲಿ ಕೊರಲೆ ರೊಟ್ಟಿಯನ್ನು ಪ್ರಸಾದ ದಂತೆ ಮಾಡುವುದು ವಾಡಿಕೆ. ಕೊರಲೆ ರೊಟ್ಟಿಯ ರುಚಿಗೆ ಎಂತವರು ಮಾರುಹೋಗುತ್ತಾರೆ, ಐದಾರು ದಿನಗಳು ಇಟ್ಟರು ಹಾಳಾಗದೆ ಮೃದುವಾಗಿರುವ ಗುಣ ಕೊರಲೆ ರೊಟ್ಟಿಯಲ್ಲಿದೆ ಮತ್ತು ಒಣಗಿಸಿದ ಕೊರಲೆ ರೊಟ್ಟಿಯನ್ನು ನಾಲೈದು ತಿಂಗಳುಗಳ ಕಾಲ ಶೇಖರಿಸಿಡಬಹುದು.