ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧

ಬೀಜ ಪ್ರಪಂಚ

ನೆಲಗಡಲೆ

image_
ಡಾ. ಕೆ. ಎಸ್. ಶೇಷಗಿರಿ
9741769213
1

ನೆಲಗಡಲೆ/ಶೇಂಗಾ/ಕಡ್ಲೆಕಾಯಿ ದಕ್ಷಿಣ ಭಾರತದ ಬಹು ಮುಖ್ಯ ಎಣ್ಣೆ ಕಾಳಿನ ಬೆಳೆಯಾಗಿದ್ದು, ಪೌಷ್ಟಿಕಾಂಶಗಳ ಆಗರವೆಂದೇ ಹೇಳಬಹುದು. ಉತ್ತರ ಮತ್ತು ದಕ್ಷಿಣ ಅಮೇರಿಕದಲ್ಲಿ ನೆಲಗಡಲೆ ’ಪಿನಟ್’ ಎಂದೇ ಪ್ರಸಿದ್ಧಿ. ಭೂಮಿಯ ಅಡಿಯಲ್ಲಿ ಬೆಳೆಯುವ ಏಕಮಾತ್ರ ಬೀಜ ನೆಲಗಡಲೆ. ವೈಜ್ಞಾನಿಕವಾಗಿ ಇದನ್ನು ’ಅರಾಚಿಸ್ ಹೈಪೋಜಿಯ’ ಎಂದು ಕರೆಯಲಾಗುತ್ತಿದ್ದು ’ಫ್ಯಾಬೇಸಿಯೆ’ ಕುಟುಂಬಕ್ಕೆ ಸೇರಿದೆ. ಈ ಬೆಳೆಯನ್ನು ಹದಿನಾರನೇ ಶತಮಾನದ ಮಧ್ಯಭಾಗದಲ್ಲಿ ಚೀನಾ ದೇಶದಿಂದ ಭಾರತಕ್ಕೆ ಪರಿಚಯಿಸಲಾಯಿತು. ಪೆರು ದೇಶದಲ್ಲಿ ಕ್ರಿ.ಪೂ.೩೭೫೦-೩೯೦೦ ಅವಧಿಯಲ್ಲಿ ಬೆಳೆಯುತ್ತಿದ್ದರೆಂಬ ಬಗ್ಗೆ ಮಾಹಿತಿ ಇದೆ. ಪ್ರತಿ ೧೦೦ ಗ್ರಾಂ ಕಡಲೆ ಬೀಜದಿಂದ ೫೬೭ ಕ್ಯಾಲೊರಿ ಶಕ್ತಿ, ೧೬.೧೩ ಗ್ರಾಂ ಶರ್ಕರಪಿಷ್ಟ, ೨೫.೮೦ ಗ್ರಾಂ ಸಸಾರಜನಕ, ೪೯.೨೪ ಗ್ರಾಂ ಕೊಬ್ಬು, ೮.೫ ಗ್ರಾಂ ನಾರು, ೧೨.೦೬ ಮಿ.ಗ್ರಾಂ ನಿಯಾಸಿನ್, ೮.೩೩ ಗ್ರಾಂ ’ಇ’ ಜೀವಸತ್ವ, ೧೮ಮಿ.ಗ್ರಾಂ ಸೋಡಿಯಮ್, ೭೦೫ ಮಿ.ಗ್ರಾಂ ಪೊಟಾಸಿಯಮ್, ೧೬೮ ಮಿ.ಗ್ರಾಂ ಮೆಗ್ನೀಸಿಯಮ್, ೯೨ ಮಿ.ಗ್ರಾಂ ಸುಣ್ಣ ಹಾಗು ೭೬ ಮಿ.ಗ್ರಾಂ ರಂಜಕ ದೊರೆಯುತ್ತದೆ. ನೆಲಗಡಲೆ ಹಲವಾರು ಔಷಧೀಯ ಗುಣಹೊಂದಿದ್ದು ಆಹಾರದಲ್ಲಿ ಇದರ ಬಳಕೆಯಿಂದ ಹಲವಾರು ಆರೊಗ್ಯ ಲಾಭಗಳಿವೆ. ಇದು ಉತ್ತಮ ಶಕ್ತಿಯ ಮೂಲವಾಗಿದ್ದು ಇದರ ಸೇವನೆಯಿಂದ ಒಳ್ಳೆ ಕೊಲೆಸ್ಟಿರಾಲ್ ಅಂಶ ಹೆಚ್ಚಿ ಕೆಟ್ಟ ಕೊಲೆಸ್ಟಿರಾಲ್ ಕಡಿಮೆಯಾಗುತ್ತದೆ. ಇದು ಉತ್ತಮ ಸಸಾರಜನಕದ ಮೂಲವಾಗಿದ್ದು ದೇಹಬೆಳವಣಿಗೆಗೆ ಪೂರಕವಾದ ಅಮೈನೋ ಆಮ್ಲ ಹೊಂದಿದೆ ಅಲ್ಲದೇ ಹೆಚ್ಚಿನ ’ಇ’ ಜೀವಸತ್ವದಿಂದಾಗಿ ಜೀವಕೋಶಗಳ ಪೊರೆಯನ್ನು ರಕ್ಷಿಸುತ್ತದೆ. ಮೆದುಳಿಗೆ ಹೆಚ್ಚಿನ ರಕ್ತ ಪೂರೈಕೆಮಾಡಿ ಮೆದುಳಿನ ಆರೋಗ್ಯವನ್ನು ಕಾಪಾಡುತ್ತದೆ.

ನೆಲಗಡಲೆ ವಾರ್ಷಿಕ ಬೆಳೆಯಾಗಿದ್ದು ಸುಮಾರು ೫೦ ಸೆ.ಮೀ.ಎತ್ತರಕ್ಕೆ ಬೆಳೆಯುತ್ತದೆ. ಹೂವುಗಳು ಪರಾಗಸ್ಪರ್ಶದ ನಂತರ ಅಭಿವೃದ್ದಿಗೊಳಿಸಿದ ಒಂದು ರೀತಿಯ ತೊಟ್ಟು ನೇರವಾಗಿ ಭೂಮಿಯ ಒಳಗೆ ಪ್ರವೇಶಿಸಿ ಎರಡು ಬೀಜಗಳ ಕಾಯಾಗುತ್ತದೆ. ಎರಡು ತಿಂಗಳ ಅವಧಿಯಲ್ಲಿ ಬೀಜಗಳು ಬಲಿಯುತ್ತವೆ. ಎಲೆಗಳು ಹಳದಿಯಾದಾಗ ಗಿಡಗಳನ್ನು ಕಿತ್ತು ೩-೬ ವಾರಗಳ ನಂತರ ಕಾಯಿಗಳನ್ನು ಗಿಡದಿಂದ ಬೇರ್ಪಡಿಸಲಾಗುತ್ತದೆ. ನೆಲಗಡಲೆಯನ್ನು ಬೀಜದಿಂದ ಕೃಷಿ ಮಾಡಲಾಗುತ್ತದೆ. ಆಯ್ದ ಬೀಜಗಳನ್ನು ೧ : ೧ (ತೂಕ/ಘನಅಳತೆ) ಪ್ರಮಾಣದ ನೀರಿನಲ್ಲಿ ೨೪ ಗಂಟೆಗಳ ಕಾಲ ನೆನಸಿ ನೆರಳಿನಲ್ಲಿ ಒಣಗಿಸಿದ ನಂತರ ಪ್ರತಿ ಕಿ.ಗ್ರಾಂ ಬೀಜಕ್ಕೆ ೨.೫೦ ಗ್ರಾಂ ಥೈರಾಮ್ ಪುಡಿಯನ್ನು ಬೆರೆಸಿದ ನಂತರ ೬೦ಕಿ.ಗ್ರಾಂ ಬೀಜಕ್ಕೆ ೧೫೦ ಗ್ರಾಂ ರೈಜೋಬಿಯಮ್ ಮತ್ತು ಪಿ.ಎಸ್.ಎಮ್(ರಂಜಕ ಕರಗಿಸುವ ಜೀವಾಣು) ಜೈವಿಕ ಗೊಬ್ಬರಗಳಿಂದ ಲೇಪಿಸಿ ಬಿತ್ತನೆಗೆ ಬಳಸಬೇಕು. ಒಂದು ಎಕರೆಗೆ ೩೦ x ೧೫ ಸೆಂ.ಮೀ. ಅಂತರದಲ್ಲಿ ೬೦ ಕಿ.ಗ್ರಾಂ. ಬಿತ್ತನೆ ಬೀಜ ಬೇಕಾಗುತ್ತದೆ.

4