ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧

ಚಿತ್ರ ಲೇಖನ

ಗುಲಾಬಿ ಬೆಳೆಯಲ್ಲಿ ಥ್ರಿಪ್ಸ್ ಮತ್ತು ಮೈಟ್ ನುಶಿ ಹಾವಳಿ

image_
ಡಾ.ಎಸ್.ಟಿ. ಪ್ರಭು
9448182225
1

ಗುಲಾಬಿ ಬೆಳೆಯನ್ನು ಅತಿ ಹೆಚ್ಚು ಬಾಧಿಸುವ ಕೀಟಗಳಲ್ಲಿ ಸಸ್ಯಹೇನು, ಥ್ರಿಪ್ಸ್ ನುಶಿ ಮತ್ತು ಜೇಡರ ನುಶಿಗಳು ಬಹಳ ಮುಖ್ಯವಾದವು. ಈ ಕೀಟಗಳು ಗುಲಾಬಿ ಗಿಡದ ಸವರುವಿಕೆ ಅಥವಾ ಚಾಟನಿಯಾದ ನಂತರ, ಚಿಗುರು ಎಲೆಗಳು, ಬೆಳೆಯುವ ಕುಡಿಗಳು ಮತ್ತು ಹೂಮೊಗ್ಗುಗಳಿಂದ ರಸ ಹೀರುತ್ತಿರುತ್ತವೆ.

3

ಥ್ರಿಪ್ಸ್ ನುಶಿ: ಥ್ರಿಪ್ಸ್ ನುಶಿಗಳು (ವೈಜ್ಞಾನಿಕ ಹೆಸರು: ಸಿರ್ಟೋಥ್ರಿಪ್ಸ್ ಡೋರ್ಸಾಲಿಸ್) (Scirtothrips dorsalis) ಹಳದಿ ಬಣ್ಣದ ಸೂಕ್ಷ್ಮ ಮತ್ತು ಸಣ್ಣ ಕೀಟಗಳಾಗಿದ್ದು (೧ ಮಿ. ಮೀ. ಗಿಂತ ಕಡಿಮೆ) ಎರಡು ಜೊತೆ ಹಕ್ಕಿಗರಿಯಂತಹ ರೆಕ್ಕೆಯನ್ನು ಹೊಂದಿರುತ್ತವೆ. ಪ್ರೌಢ ಕೀಟಗಳು ಎಲೆಯ ಕೆಳಭಾಗದ ಅಂಗಾಂಶದಲ್ಲಿ ಕಿಡ್ನಿ ಆಕಾರದ ತತ್ತಿಗಳನ್ನಿಡುತ್ತವೆ. ಬರೀ ಕಣ್ಣಿಗೆ ಕಾಣದ ಚಿಕ್ಕ ಗಾತ್ರದ ಪ್ರೌಢ ಮತ್ತು ಮರಿ ಹಂತದ ಥ್ರಿಪ್ಸ್ ನುಶಿಗಳು ಎಳೆಯದಾದ ಎಲೆಗಳ ಕೆಳಭಾಗದಲ್ಲಿದ್ದುಕೊಂಡು ಮತ್ತು ಗುಲಾಬಿ ಮೊಗ್ಗುಗಳನ್ನು ತಮ್ಮ ಹಲ್ಲುಗಳಿಂದ ಕುಕ್ಕಿ/ಉಜ್ಜಿ ಹೊರಬರುವ ರಸವನ್ನು ಹೀರುತ್ತವೆ. ಥ್ರಿಪ್ಸ್ ನುಶಿಗಳ ಇರುವಿಕೆ ಮತ್ತು ಅವುಗಳ ಹಾವಳಿ ಗೊತ್ತಾಗುವುದೇ ಗಿಡಗಳು ಹಾನಿ ಲಕ್ಷಣಗಳನ್ನು ತೋರಿಸಿದಾಗ ಮಾತ್ರ. ಥ್ರಿಪ್ಸ್ ನುಶಿಗಳ ಹಾವಳಿ ಕಂಡುಬಂದಾಗ ಎಲೆಗಳ ಮೇಲೆ ಮತ್ತು ಮೊಗ್ಗುಗಳ ಮೇಲೆ ಕಂದು ಬಣ್ಣದ ಮಚ್ಚೆಗಳಾಗುತ್ತವೆ. ನಂತರ ಮುರುಟಾಗುತ್ತವೆ. ಬಾಧೆಗೊಳಗಾದ ಹೂವಿನ ಮೊಗ್ಗುಗಳ ಮೇಲೆ ಸುಟ್ಟಂತೆ ಕಾಣುತ್ತವೆ. ನಂತರ ಒಣಗುತ್ತವೆ.

5

ಥ್ರಿಪ್ಸ್ ನಿರ್ವಹಣೆ: ಕೀಟ ಭಾದೆ ಕಂಡು ಬಂದಾಗ ಗಿಡಗಳಿಗೆ ೧.೭ ಮಿ.ಲೀ. ಡೈಮೆಥೋಯೇಟ್ ೩೦ ಇ.ಸಿ. ಅಥವಾ ೦.೫ ಮಿ.ಲೀ. ಫಾಸ್ಪೋಮಿಡಾನ್ ೮೫ ಡಬ್ಲ್ಯೂ. ಪಿ. ಅಥವಾ ೧.೦ ಮಿ.ಲೀ. ಡಿ.ಡಿ.ವಿ.ಪಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಕೀಟ ಭಾದೆ ಕಂಡು ಬಂದಾಗ ಸಿಂಪರಿಸಬೇಕು.

7

ಮೈಟ್ ನುಶಿ (ಜೇಡರ ನುಶಿ): ಈ ನುಶಿಗಳನ್ನು ವೈಜ್ಞಾನಿಕವಾಗಿ ಟೆಟ್ರಾನೈಕಸ್ ಉರ್ಟಿಕೆ (Tetranychus urticae) ಎಂದು ಕರೆಯುತ್ತಾರೆ. ಎಂಟು ಕಾಲುಗಳುಳ್ಳ ಇವು ಗಾತ್ರದಲ್ಲಿ ಅತ್ಯಂತ ಚಿಕ್ಕವಾಗಿದ್ದು (ಸುಮಾರು ಅರ್ಧ ಮೀ. ಮೀ.) ಎಲೆಗಳ ಮೇಲೆ ಸಣ್ಣ ಚುಕ್ಕೆಯಂತೆ ಕಾಣುತ್ತವೆ. ಇವು ಸಾಮಾನ್ಯವಾಗಿ ಹಸಿರು ಬಣ್ಣದವಾಗಿದ್ದು ಬೆನ್ನಿನ ಮೇಲೆ ಎರಡು ಕಪ್ಪು ಚುಕ್ಕೆಗಳನ್ನು ಹೊಂದಿರುತ್ತವೆ. ಆದ್ದರಿಂದ ಇವನ್ನು ಜೋಡಿ ಚುಕ್ಕೆ ಜೇಡರ ನುಶಿ (two spotted spider mites) ಎಂದು ಸಹ ಕರೆಯುತ್ತಾರೆ. ಈ ನುಶಿಗಳು ಎಲೆಗಳ ಕೆಳಭಾಗದಲ್ಲಿ ನೂರಾರು ಸಂಖ್ಯೆಯ ಗುಂಪುಗಳಲ್ಲಿ ತಾವೇ ರಚಿಸಿದ ಸೂಕ್ಷ್ಮ ಜೇಡರ ಬಲೆಗಳಲ್ಲಿ ಕಂಡುಬರುತ್ತವೆ. ಕೆಲವು ಸಮಯಗಳಲ್ಲಿ ಹೂವಿನ ಮೊಗ್ಗು ಮತ್ತು ಹೂವುಗಳಿಂದ ರಸ ಹೀರುತ್ತವೆ. ಎಲೆಗಳು ನೈಜ ಬಣ್ಣ ಕಳೆದುಕೊಂಡು ಕಂದು ಬಣ್ಣಕ್ಕೆ ತಿರುಗುತ್ತವೆ. ಹೂವಿನ ಮೊಗ್ಗುಗಳ ಮತ್ತು ಹೂಗಳ ಬಣ್ಣವೂ ಸಹ ಬದಲಾಗುತ್ತದೆ. ಮೈಟ್ ನುಶಿಗಳನ್ನು ಗುರುತಿಸಲು ಭೂತಗನ್ನಡಿಯನ್ನು ಉಪಯೋಗಿಸಬಹುದು. ಎಲೆಗಳ ಕೆಳಗೆ ಒಂದು ಬಿಳಿ ಹಾಳೆಯನ್ನು ಹಿಡಿದು ಎಲೆಯನ್ನು ಬಿರುಸಾಗಿ ಕೊಡುವುದರಿಂದ ನುಶಿಗಳ ಇರುವಿಕೆಯನ್ನು ಕಂಡುಕೊಳ್ಳಬಹುದು

91011

ಮೈಟ್ ನಿರ್ವಹಣೆ: ಅತ್ಯಂತ ಪ್ರಭಾವಿ ಬಹು ಆಯ್ಕೆಯ ಕೀಟನಾಶಕಗಳನ್ನು ಸಿಂಪಡಿಸಿದಾಗ ಮೈಟ್ನುಶಿಗಳ ನೈಸರ್ಗಿಕ ಶತ್ರುಗಳು ನಿರ್ನಾಮವಾಗುವುದರಿಂದ ಮೈಟ್ನುಶಿಗಳ ಸಂಖ್ಯೆ ಹೆಚ್ಚಾಗುತ್ತದೆ. ಅನೇಕ ಪರಭಕ್ಷಕ ಮೈಟ್ನುಶಿಗಳು, ಪೈರೇಟ್ ತಿಗಣಿ ಗುಲಾಬಿ ಗಿಡದ ಮೈಟ್ನುಶಿಗಳನ್ನು ಭಕ್ಷಿಸಿ ಹತೋಟಿಯಲ್ಲಿಡುತ್ತವೆ. ಹೆಚ್ಚು ಸಾರಜನಕವಿರುವ ಗೊಬ್ಬರಗಳನ್ನು ಕೊಡುವುದರಿಂದ ಗಿಡಗಳು ಮೃದುವಾಗಿ ಮೈಟ್ನುಶಿಗಳು ಹೆಚ್ಚಾಗುತ್ತವೆ. ಬಹುತೇಕ ಕೀಟನಾಶಕಗಳು ಮೈಟ್ ನುಶಿಗಳನ್ನು ಕೊಲ್ಲುವುದಿಲ್ಲವಾದ್ದರಿಂದ ಪ್ರತ್ಯೇಕವಾಗಿ ಮೈಟ್ ನಾಶಕಗಳಾದ ಡೈಕೋಫಾಲ್ ೨೦ ಇ.ಸಿ. ಅಥವಾ ಗಂಧಕದ ಪುಡಿಯನ್ನು ಸಿಂಪರಿಸಬೇಕು. ಪ್ರತಿ ಲೀಟರ್ ನೀರಿಗೆ ೨.೫ ಮಿ.ಲೀ. ಡೈಕೋಫಾಲ್ ೨೦ ಇ.ಸಿ. ಅಥವಾ ೩ ಗ್ರಾಂ ಗಂಧಕವನ್ನು ಬೆರೆಸಿ ಸಿಂಪಡಿಸಬೇಕು. ಎಕರೆಗೆ ಪ್ರತಿ ಸಿಂಪರಣೆಗೆ ೨೫೦ ಲೀಟರ್ ಸಿಂಪರಣಾ ದ್ರಾವಣ ಬೇಕಾಗುತ್ತದೆ.