ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧

ದಾರಿದೀಪ

ಕೃಷಿ ಭಾಗ್ಯದಿಂದ ಖುಷಿಯಾದ ಸೈಯದ್ ಸಾಹೇಬ್ರು

ಮಹಾದೇವ ಸರಶೆಟ್ಟಿ
ಸಹಾಯಕ ಕೃಷಿ ಅಧಿಕಾರಿ,ರೈತ ಸಂಪರ್ಕ ಕೇಂದ್ರ, ಮಲೇಬೆನ್ನೂರು, ದಾವಣಗೆರೆ.
7259005091
1

ಅಂದು ಕ್ಷೇತ್ರ ಭೇಟಿಗಾಗಿ ಕೊಪ್ಪ ಗ್ರಾಮಕ್ಕೆ ಹೋಗುತ್ತಾ ಇದ್ದೆ. ಅಷ್ಟರಲ್ಲಿ ಶ್ರೀ ಸೈಯದ್ಜಿಯಾವುಲ್ಲಾರವರು ಓಡಿ ಬಂದು ’ಸರ್, ನಿಮ್ಮನ್ನೇ ಭೇಟಿ ಆಗಬೇಕಿತ್ತು. ನನಗೊಂದು ಕೃಷಿ ಹೊಂಡ ಮಾಡಿಸಿಕೊಡಿ’ ಎಂದರು. ನಾನು ಅವರ ಆಸಕ್ತಿ ಗಮನಿಸಿ ’ಬನ್ನಿ, ಜಮೀನು ತೋರಿಸಿ, ನೋಡೋಣ’ ಎಂದು, ಅವರ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿ, ಓಕೆ’ ಎಂದು ತಿಳಿಸಿದೆ. ಸೈಯದ್ ಸಾಹೇಬ್ರಿಗೆ ಖುಷಿಯೋ ಖುಷಿ.

ಸೈಯದ್ಜಿಯಾವುಲ್ಲಾರವರು ಕೊಪ್ಪ ಗ್ರಾಮದ ಸರ್ವೆ ನಂ.೩೦ ರಲ್ಲಿ ೪.೦೦ ಎಕರೆ ಖುಷ್ಕಿ ಜಮೀನು ಹೊಂದಿದ್ದು, ಮಲೆಬೆನ್ನೂರು-ಹೊನ್ನಾಳಿ ಮಾರ್ಗ ಮಧ್ಯದ ಮಸೀದಿಯ ಹಿಂಭಾಗದಲ್ಲೆ ಇವರ ಜಮೀನು ಇದೆ. ಸುತ್ತಲೂ ಕಲ್ಲು, ಗುಡ್ಡದಿಂದ ಕೂಡಿರುವ ಪ್ರದೇಶ. ಇವರ ವಯಸ್ಸು ೬೫ ಆದರೂ ಅವರಲ್ಲಿನ ಕೃಷಿಯೆಡೆಗಿನ ಆಸಕ್ತಿ ಮತ್ತು ೨೫ ರ ಹರೆಯದ ಯುವ ರೈತರಂತಹ ಚಿಂತನೆಯಿಂದಾಗಿ ಗಮನಸೆಳೆದರು. ಇವತ್ತು ಕೃಷಿ ಇಲಾಖೆಯ ಕೃಷಿ ಭಾಗ್ಯ ಯೋಜನೆಯಡಿ ನೀರು ಸಂಗ್ರಹಣೆಗಾಗಿ ೧೨x೧೨x೩ ಚ.ಮೀ. ವಿಸ್ತೀರ್ಣದ ಕೃಷಿ ಹೊಂಡಕ್ಕೆ ತಾಡಪಾಲು ಹೊದಿಕೆ, ಮಳೆ ನೀರು ವ್ಯರ್ಥವಾಗದೆ ಸರಾಗವಾಗಿ ಕೃಷಿ ಹೊಂಡಕ್ಕೆ ಹರಿದು ಬರಲು ಬದು ನಿರ್ಮಾಣ, ನೀರು ಎತ್ತಲು ೪ ಹೆಚ್ಪಿ. ಡೀಸೆಲ್ ಪಂಪ್ಸೆಟ್ ಮತ್ತು ಬೆಳೆಗಳಿಗೆ ನೀರು ಹಾಯಿಸಲು/ ಉಣಿಸಲು ಸ್ಪ್ರಿಂಕ್ಲರ್ ಸೆಟ್ ಮತ್ತು ಬೆಳೆಯನ್ನು ಬೆಳೆಯಲು ಬೇಕಾಗುವ ಕೃಷಿ ಪರಿಕರಕ್ಕಾಗಿ ಬೆಳೆ ಪದ್ಧತಿ ಯೋಜನೆಯಡಿ ರೂ.೫,೦೦೦/- ಪ್ರೋತ್ಸಾಹಧನ, ಹೀಗೆ ಎಲ್ಲಾ ಸೌಲಭ್ಯವನ್ನು ಅತ್ಯಂತ ಅಚ್ಚುಕಟ್ಟಾಗಿ ಬಳಸಿಕೊಂಡು ಕೃಷಿ ಹೊಂಡದ ಕಾಮಗಾರಿಯನ್ನು ಮುಗಿಸಿರುತ್ತಾರೆ.

45

ಕೃಷಿ ಭಾಗ್ಯಯೋಜನೆ ಪಡೆಯುವ ಮೊದಲು (ಕೃಷಿ ಹೊಂಡದ ಸೌಲಭ್ಯ ಪಡೆಯುವ ಮುಂಚೆ) ೪.೦೦ ಎಕರೆ ಜಮೀನಿನಿಂದ ಉತ್ತರಾಣಿ, ಮುಳ್ಳು ಸಜ್ಜೆಗಳಂತಹ ಕಳೆಗಳಿಂದ ಉತ್ತಮ ಮೆಕ್ಕೆಜೋಳ ಬೆಳೆಯಲಾಗದೆ ಮತ್ತು ಅಸಮರ್ಪಕ ಮಳೆಯಿಂದ ಕೇವಲ ೨೦-೨೩ ಕ್ವಿಂಟಾಲ್ ಇಳುವರಿ ಪಡೆಯುತ್ತಿದ್ದರು. ಹೀಗಾಗಿ ಅವರ ಪರಿಸ್ಧಿತಿ ಶೋಚನೀಯವಾಗಿತ್ತು. ಆದರೆ ಕೃಷಿಯಲ್ಲಿನ ಆಸಕ್ತಿ ಮಾತ್ರ ಬತ್ತಿರಲಿಲ್ಲ. ೨೦೧೫-೧೬ ರ ಬೇಸಿಗೆ ಹಂಗಾಮಿನಲ್ಲಿ ನೀರಿಲ್ಲದೇ ಬೆಳೆ ಒಣಗಿ ಬೆಳೆ ಪರಿಹಾರಕ್ಕೆ ಕೈಚಾಚುವ ಬದಲು ಸಂದಿಗ್ಧ ಪರಿಸ್ಧಿತಿಯಲ್ಲಿ ಸೈಫನ್ ಮುಖಾಂತರ ನೀರು ನೀಡಿರುತ್ತಾರೆ. ೨ ಇಂಚಿನ ಬೋರ್ವೆಲ್ನಿಂದ ರಾತ್ರಿ ೪-೫ ಗಂಟೆ ಬರುವ ವಿದ್ಯುತ್ನ್ನೇ ಸಮರ್ಪಕವಾಗಿ ಬಳಸಿಕೊಂಡು ಕೃಷಿ ಹೊಂಡವನ್ನು ರಾತ್ರಿಯಿಡೀ ತುಂಬಿ ವಿದ್ಯುತ್ ಇಲ್ಲದಾಗ ಸೈಫನ್ ಮುಖಾಂತರ ನೀರು ನೀಡಿದ್ದಾರೆ. ಇಂದು ಅದೇ ಜಮೀನಿನಲ್ಲಿ ೫೬ ಕ್ವಿಂಟಾಲ್ ಇಳುವರಿ ಪಡೆದು, ಪ್ರತಿ ಕ್ವಿಂಟಾಲ್ಗೆ ೧೪೩೦/- ರಂತೆ ರೂ.೮೦,೦೦೦ ಪಡೆದಿದ್ದಾರೆ. ೨೦೧೬-೧೭ ರ ಮುಂಗಾರಿನಲ್ಲಿ ಈಗ ಮೆಕ್ಕೆಜೋಳದ ಜೊತೆಗೆ ೧೩೦ ಮಾವು (ಆಲ್ಫಾಂಸೋ), ೧೦ ಕರಿಬೇವು, ೫ ನಿಂಬೆ ಗಿಡಗಳನ್ನು ಬದುಗಳ ಮೇಲೆ ನೆಟ್ಟಿರುತ್ತಾರೆ. ಕೃಷಿ ಹೊಂಡದಿಂದ ಬಂದ ಕಲ್ಲುಗಳಿಂದ ಚೊಕ್ಕದಾದ ಮನೆ(ಫಾರ್ಮ್ಹೌಸ್) ನಿರ್ಮಿಸಿಕೊಂಡಿದ್ದಾರೆ. ಇದೆಲ್ಲಾ ಸಾಧ್ಯವಾಗಿದ್ದು ಕೃಷಿಭಾಗ್ಯ ಯೋಜನೆಯ ಕೃಷಿ ಹೊಂಡದಿಂದ. ಒಂದೊಂದು ಕಲ್ಲು, ಮಣ್ಣು, ನೀರು, ಹೀಗೆ ಯಾವುದನ್ನೂ ಅನಾವಶ್ಯಕವಾಗಿ ಹಾಳು ಮಾಡದೇ ಸಮರ್ಪಕವಾಗಿ ಬಳಸಿ ಕೊಂಡಿದ್ದಾರೆ. ಓದುಗರೇ, ಎಷ್ಟು ಲೈಕ್ಸ್ ಕೊಡ್ತೀರಾ ನಮ್ಮ ಸೈಯದ್ಜಿಯಾವುಲ್ಲಾ ಸಾಹೇಬರಿಗೆ

ಸಂಪರ್ಕ ವಿಳಾಸ: ಸೈಯದ್ಜಿಯಾವುಲ್ಲಾ ಬಿನ್ ಸೈಯದ್ ಮೀರ್ಸಾಬ್, ೯೭೩೧೭೧೪೧೫೩, ಮಲೇಬೆನ್ನೂರು, (ಜಮೀನಿರುವಗ್ರಾಮ-ಕೊಪ್ಪ), ತಾಲ್ಲೂಕು:-ಹರಿಹರ, ಜಿಲ್ಲೆ: ದಾವಣಗೆರೆ,