ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧

ಸಂಪಾದಕೀಯ

ಕಾಣೆಯಾಗುತ್ತಿರುವ ಕಣ ಸಂಸ್ಕೃತಿ

image_ಕೆ.ಸಿ.ಶಶಿಧರ
ಕೆ.ಸಿ.ಶಶಿಧರ

ಹೊಲದಿಂದ ಹೊಟ್ಟೆಯೆಡೆಗೆ ಸಾಗುವ ಆಹಾರದ ದಾರಿಯಲ್ಲಿ ಕಣ ಮಹತ್ತರ ಪಾತ್ರ ವಹಿಸುತ್ತದೆ. ಆದರೀಗ ಕಣ ಕಾಣೆಯಾಗುತ್ತಿದೆ. ಅರೆ! ಇದೊಳ್ಳೆ ಕತೆ, ಒಕ್ಕಣೆ ಯಂತ್ರ ಬಂದಿವೆ, ಕೊಯ್ದೊಕ್ಕಿ ಚೀಲ ತುಂಬಿ ಹೇರು ಸಿದ್ಧಪಡಿಸುತ್ತವೆ, ಇನ್ನೇಕೆ ಕಣ? ಹಳೆ ಕಾಲದವರೆಲ್ಲ ಹೀಗೆ ಗೊಣಗೋದೆ ಆಯ್ತು ಕಂಬೈನ್ ಬಂದ ಮೇಲೆ ಕಣ ಸಂಸ್ಕೃತಿಯೇಕೆ ಎಂದು ಈಗಿನವರು ಮೂದಲಿಸಬಹುದು. ಹೌದು ಈ ವಾದವೂ ಸರಿಯೇ ಆದರೆ ನಮ್ಮ ಚಿಂತೆ ಇದಲ್ಲ ಬದಲಾದ ಕಣ ಸಂಸ್ಕೃತಿಯದ್ದು. ಕಣ ಕಟ್ಟುವುದು, ಕಣ ಮಾಡುವುದರ ಪರಿಕಲ್ಪನೆಗಳು ನಮ್ಮ ಸಂಸ್ಕೃತಿಯಲ್ಲಿ ಇಂದಿನ ಆಧುನಿಕ ಆಹಾರ ತಂತ್ರಜ್ಞಾನದ ಗುಣಮಟ್ಟ ಮಾನದಂಡಗಳಿಗಿಂತ ಶ್ರೇಷ್ಠವಾಗಿ ಕಟ್ಟಿಕೊಡಲಾಗಿದೆ.

ಕಣವನ್ನ ಮಾಡಲು ಮಣ್ಣು ಸಡಿಲಿಸಿ ಸ್ವಚ್ಛ ಮಾಡಿ ನೀರು ಚಿಮುಕಿಸಿ ರೋಣಗಲ್ಲು ಹೊಡೆದು ಸಗಣಿಯಿಂದ ಸಾರಿಸಿ ಅಡುಗೆಯ ಮನೆ ನೆಲದಂತೆ ಸ್ವಚ್ಛವಾಗಿ ಸಿದ್ಧ ಮಾಡುತ್ತಿದ್ದರು. ನಂತರ ಪೂಜೆ ಮಾಡಿ ಹುಲ್ಲು ಹರಡಿ ಜೋಡೆತ್ತಿನ ಹಂತಿ ಹೂಡುತ್ತಿದ್ದರು. ಒಮ್ಮೆ ಪೂಜೆಯಾಯಿತೆಂದರೆ ಜೋಡು ಧರಿಸಿ ಕಣ ಪ್ರವೇಶ ನಿಷಿದ್ಧ. ಅಂದರೆ ಕಣ ದೇಗುಲವಾಗಿ ಬಿಡುತ್ತಿತ್ತು. ಊರೆಲ್ಲ ಸುತ್ತಿದ ಚಪ್ಪಲಿ ತನ್ನೆಲ್ಲ ಕೊಳೆಯನ್ನ ಆಹಾರಕ್ಕೆ ಅಂಟಿಸದಿರಲಿ ಎಂದು ಈ ನಿಷಿದ್ಧ. ಹಲವು ದಿನಗಳ ಕಾಲ ನಡೆಯುತ್ತಿದ್ದ ಕಣ, ರಾಶಿ ಪೂಜೆಯೊಂದಿಗೆ ಮುಕ್ತಾಯವಾಗುತ್ತಿತ್ತು. ಈ ಕಣವೇನು ಮಾಯವಾಗಿಲ್ಲ ಕಣ ಸಂಸ್ಕೃತಿ ಬದಲಾಗಿದೆ. ಹಂತಿ ಕಟ್ಟಿ ಎತ್ತುಗಳಿಂದ ತುಳಿಸುವ ಸಂಸ್ಕೃತಿಯಿಂದ ಎಕ್ಕಡದಿಂದ ತುಳಿದು ಕಾಳು ಬೇರ್ಪಡಿಸುವತ್ತ ಸಾಗಿದ್ದೇವೆ.

3

ಅಬ್ಬಾ! ಇದೆಂಥ ಪದ ಪ್ರಯೋಗ ಎಂಬ ಅಚ್ಚರಿಯೇ ಯಾರಾದರೂ ಚಪ್ಪಲಿಯಿಂದ ಕಾಳು ಬೇರ್ಪಡಿಸುತ್ತಾರಾ? ಎಂದು ಪ್ರಶ್ನಿಸಬಹುದು. ಬಸ್ಸು, ಕಾರು ವಾಹನಗಳ ಗಾಲಿಗಳೂ ಊರೆಲ್ಲ ಸುತ್ತಿ ಚಪ್ಪಲಿಯಂತೆ ಕಾರ್ಯ ಮಾಡುತ್ತವೆಯಲ್ಲವೆ ಅಂದ ಮೇಲೆ ರಸ್ತೆಯ ಮೇಲೆ ಒಕ್ಕಣೆ ಮಾಡುವುದು ಇದಕ್ಕೆ ಸಮನಾವುದಲ್ಲವೆ? ಇದಕ್ಕೆ ಸಮನಲ್ಲ ಇದಕ್ಕೂ ಕನಿಷ್ಠ, ಕಾರಣ ಚಪ್ಪಲಿಯಿಂದ ಸುತ್ತಿದ ಕೊಳೆ ಅಂಟಿದರೆ, ಈ ಹೊಸ ಕಣ ಸಂಸ್ಕೃತಿ(ವಿಕೃತಿ)ಯಲ್ಲಿ ಕೊಳೆಯ ಜೊತೆ ಟಾರ್ ಸಹ ಅಂಟಿಕೊಂಡಿರುತ್ತದೆ. ಇದು ಆರೋಗ್ಯಕ್ಕೆ ಇನ್ನೂ ಮಾರಕ.

ಹಿಂದೆ ಲೋಕಕ್ಕೆ ಆಹಾರ ಸ್ವಚ್ಛತೆ ಬಗ್ಗೆ ತಿಳಿ ಹೇಳಿದ ನಮಗೆ ಇಂದಿನ ನಮ್ಮ ಕಣ ನೋಡಿ ಲೋಕ ನಮಗೆ ಸ್ವಚ್ಛತೆ ತಿಳಿಸುವಂತಾಗಿದೆ. ಇದು ನಮ್ಮ ದೇಶದಲ್ಲಿ ಅಲ್ಲ ಇನ್ನಿತರ ದೇಶಗಳಲ್ಲೂ ಇದೆ. ಆದರೆ ಕೆಟ್ಟ ಪದ್ಧತಿ ಸುಲಭ ಎನ್ನುವ ಕಾರಣಕ್ಕೆ ಅಳವಡಿಸಿಕೊಳ್ಳುವುದೆಷ್ಟು ಸರಿ? ಕಡಿಮೆ ಜಮೀನು ಹಾಗೂ ಅದರಲ್ಲಿನ ಇಳುವರಿಗೆ ಕಣ ಮಾಡುವುದು ಲಾಭದಾಯಕವಲ್ಲ ಅಂತ ಹೇಳಬಹುದು. ಆದರೆ ಸಹಕಾರ ತತ್ವದಲ್ಲಿ ಊರಲ್ಲಿ ಕಣ ಮಾಡುವ ಪರಿಪಾಠ ಇದಕ್ಕೆ ಉತ್ತರವಾಗಬಲ್ಲದು. ಹೀಗೆ ನಮ್ಮ ಕಣ ಸಂಸ್ಕೃತಿಯನ್ನು ಉಳಿಸಿ ಬಳಸಬೇಕಿದೆ ಅನ್ನುವುದಕ್ಕಿಂತ ಸ್ವಚ್ಛ ಆರೋಗ್ಯಪೂರ್ಣ ಆಹಾರ ಉತ್ಪಾದನೆ ನಮ್ಮ ಆದ್ಯತೆಯಾಗಬೇಕು.