ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೭

ಸಂಪಾದಕೀಯ

ಸ್ವಚ್ಛ ಮನಸ್ಸು ಸ್ವಚ್ಛ ಭಾರತ

image_
ಕೆ.ಸಿ.ಶಶಿಧರ
1

ಕೃಷಿ ಶಿಕ್ಷಣಕ್ಕೆ ಬೇಡಿಕೆ ಹೆಚ್ಚುತ್ತಿದೆ. ಕೃಷಿ ಶಿಕ್ಷಣ ಪಡೆದವರ ಸಾಧನೆಗಳು, ಅವರಿಗೆ ಜೀವನದಲ್ಲಿ ಬೇಕಾದ ಭದ್ರತೆ ಒದಗಿಸುವ ಉದ್ಯೋಗ ಹಾಗೂ ಉನ್ನತ ಶಿಕ್ಷಣಕ್ಕಿರುವ ಅವಕಾಶಗಳಿಂದಾಗಿ ಕೃಷಿ ಶಿಕ್ಷಣದ ಬೇಡಿಕೆ ಹೆಚ್ಚುತ್ತಿದೆ ಎಂದು ಬಹುಜನರ ವಿಶ್ಲೇಷಣೆ. ಆದರೆ ಕೃಷಿ ಶಿಕ್ಷಣ ಹೇಗಿರುತ್ತದೆ. ಅಲ್ಲಿ ಕಲಿಸುವ ವಿಚಾರಗಳೇನು? ಪ್ರಾಯೋಗಿಕ ಕಲಿಕೆ ಇದೆಯೇ ಇಲ್ಲವೆ? ಕೃಷಿ ಓದಿದವರಿಗೆ ನಾಟಿ ಮಾಡಲು ಗೊತ್ತೆ? ಅಥವಾ ಅವರು ಬರಿ ಪ್ರಯೋಗಾಲಯದಲ್ಲಿ ಬೆಳೆ ಬೆಳೆಯುತ್ತಾರೆಯೇ? ಈ ಪ್ರಶ್ನೆಗಳ ಕುರಿತಾದ ಅರಿವು ಆಡಳಿತ ನಡೆಸುವವರಿಗೆ, ಕೃಷಿ ಶಿಕ್ಷಣ ಅವಲೋಕಿಸದ ಸುಶಿಕ್ಷಿತರಿಗೆ ಅಷ್ಟೇ ಏಕೆ? ಎಷ್ಟೋ ಬಾರಿ ಕೃಷಿ ಪದವಿ ಪಡೆದು ಆಡಳಿತ ನಡೆಸುವವರಿಗೆ, ತಮ್ಮ ಆಡಳಿತದ ತಪ್ಪು ಒಪ್ಪು ಮುಚ್ಚಿಕೊಳ್ಳ ಬಯಸುವವರಿಗೆ, ಕೃಷಿ ಪದವಿಯನ್ನು ಹೀಗಳೆಯಲು ಅಥವಾ ತಮ್ಮ ಭಾಷಣಗಳಿಗೆ ಚಪ್ಪಾಳೆ ಗಿಟ್ಟಿಸಿಕೊಳ್ಳಲು ಕೃಷಿ ಪದವೀಧರರಿಗೆ, ಕೃಷಿ ವಿಜ್ಞಾನಿಗಳಿಗೆ ಲ್ಯಾಬ್ ತಜ್ಞರು, ಇವರಿಗೆ ಕೆಸರು ಗದ್ದೆಗೆ ಇಳಿದು ಅನುಭವವೇ ಇರದು, ನಾಟಿ ಮಾಡಲು ಬರದು ಇಂಥವರ ಕೃಷಿ ಸಂಶೋಧನೆ ಹೇಗಿರುತ್ತದೆ? ಎನ್ನುವ ಪದಗಳನ್ನು ಹೇರಳವಾಗಿ ಬಳಸುತ್ತಾರೆ. ನಾನೂ ಒಬ್ಬ ಕೃಷಿ ಪದವೀಧರ. ಈ ಬಗ್ಗೆ ನನಗೆ ಕಲಿಸಿದ ಸಂಸ್ಥೆ ಹಾಗೂ ಗುರುಗಳ ಬಗ್ಗೆ ಹೆಮ್ಮೆ ಇದೆ. ನಮ್ಮ ಪದವಿಯಲ್ಲಿ ಅತ್ಯುತ್ತಮವಾದ ಪ್ರಾಯೋಗಿಕ ಪರಿಸರ ಇದೆ ಎಂದರೆ ತಪ್ಪಾಗಲಾರದು. ಇಲ್ಲಿ ಲ್ಯಾಂಡ್ಗ್ರ್ಯಾಂಟ್ ಕಾಲೇಜ್ ಮಾದರಿ ಅನುಸರಿಸಿ ಪ್ರತಿಯೊಬ್ಬ ಕೃಷಿ ಪದವಿ ಓದುವ ವಿದ್ಯಾರ್ಥಿ ಮೊದಲ ವರ್ಷದಿಂದಲೇ ಸ್ವಂತ ಕೃಷಿ ಮಾಡಲು ಅರ್ಧ ಎಕರೆ ಜಾಗ ಕೊಟ್ಟಿದ್ದರು. ನಾವು ಓದುವ ಕಾಲೇಜಿನ ಪರಿಸರದಲ್ಲಿ ಬೆಳೆಯುವ ಬಹುಪಾಲು ಬೆಳೆಗಳನ್ನು ನಮಗೆ ಬೆಳೆಯಲು ಕೊಡುತ್ತಿದ್ದರು. ನಾವೇ ಸ್ವಂತವಾಗಿ ಯಾವುದೇ ಕೂಲಿ ಆಳಿನ ನೆರವಿಲ್ಲದೆ ಬೆಳೆ ಬೆಳೆಯಬೇಕಿತ್ತು. ಎಲ್ಲಾ ವಿಷಯಗಳಲ್ಲೂ ಪ್ರಾಯೋಗಿಕ ಅನುಭವ ಕಡ್ಡಾಯ. ಕೀಟಶಾಸ್ತ್ರ, ರೋಗಶಾಸ್ತ್ರ, ಸಸ್ಯ ಶರೀರಕ್ರಿಯಾಶಾಸ್ತ್ರ, ಇಂಜಿನಿಯರಿಂಗ್ ಹಾಗೂ ಉಳಿದ ಎಲ್ಲಾ ವಿಷಯಗಳ ಸಕ್ರಿಯ ಕಲಿಕೆಯಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗೆ ಕೃಷಿಯ ಎಲ್ಲಾ ಮಜಲುಗಳ ಪರಿಚಯ ಆಗುತ್ತದೆ. ಇದರ ಅರಿವಿರದ ಹಲವರು ಹಲವು ರೀತಿ ಮಾತನಾಡುತ್ತಾರೆ. ಯಾವುದೇ ವಿಷಯದಲ್ಲಿ ಒಬ್ಬ ವ್ಯಕ್ತಿ ಸರ್ವಜ್ಞನಾಗಲು ಸಾಧ್ಯವಿಲ್ಲ. ಇದು ಕೃಷಿ ಪದವಿ, ವೈದ್ಯಕೀಯ, ಇಂಜಿನಿಯರಿಂಗ್ ಅಷ್ಟೇ ಅಲ್ಲಾ ಸಾಂಪ್ರದಾಯಿಕ ವೃತ್ತಿ ಪರರಿಗೂ ಅನ್ವಯಿಸುತ್ತದೆ. ಅಂತಹ ಯಾವುದೋ ಒಂದು ಎಳೆ ಹಿಡಿದು ಬೇರೆಯವರನ್ನು ಹೀಗಳೆದು ನಾನು ಹಿಗ್ಗುವುದು/ದೊಡ್ಡವನಾಗುವುದು ಎಷ್ಟು ಸಮಂಜಸ. ಪ್ರತಿಯೊಬ್ಬರಿಗೂ, ಪ್ರತಿಯೊಂದು ಪದವಿಗೂ ತಮ್ಮದೇ ಆದ ಇತಿ ಮಿತಿಗಳಿರುತ್ತವೆ. ಅದು ಅವರ ಅಥವಾ ಆ ಪದವಿಯ ಕಾಲೆಳೆಯುವ ವಸ್ತುವಾಗಬಾರದೆಂಬುದು, ಸುಶಿಕ್ಷಿತರಿಗೆ ಅರಿವಾಗದಿರುವುದೇ ವಿಪರ್ಯಾಸ. ತಾವು ದೊಡ್ಡವರಾಗಲು ಇನ್ನೊಬರನ್ನು ಹೀಗಳೆಯುವುದು, ಒಬ್ಬರನ್ನು ಹೊಗಳಲು ಇನ್ನೊಬ್ಬರನ್ನು ತೆಗಳುವುದು ಸಮಾಜದಲ್ಲಿನ ಒಂದು ದೊಡ್ಡ ಪಿಡುಗು. ಇದು ಸಮಾಜದಲ್ಲಿ ಮಾನಸಿಕ ಖಿನ್ನರನ್ನು ಹೆಚ್ಚಿಸಲು ಕಾರಣವಾಗುತ್ತದೆ. ಸಮಾಜದಲ್ಲಿನ ಸ್ವಾಸ್ಥ್ಯ ಕಾಪಾಡಲು ಇಂತಹ ಚಿಂತನೆಗಳು ಬದಲಾಗಬೇಕಿದೆ. ಉತ್ತಮ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಸ್ವಚ್ಛ ಮನಸ್ಸೂ ಸ್ವಸ್ಥ ಭಾರತಕ್ಕೆ ನಾಂದಿಯಾಗಲಿ, ಬನ್ನಿ ಎಲ್ಲರೂ ಈ ದಾರಿಯಲ್ಲಿ ಹೆಜ್ಜೆ ಇಡೋಣ.