ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೭

ದಾರಿದೀಪ

ಬೆವರ ಹನಿಯ ಬೆನ್ನೇರಿ

ಡಾ. ಬಿ. ಎಂ. ಚಿತ್ತಾಪೂರ
9535623232
1

ಹೊಲದ ಮನೆಯೆದರು ರಸ್ತೆ ಬದಿ ಇಳಿದು ಜೋಡಟ್ಟಿಯವರ ಮನೆಯ ಗೇಟಿನೊಳಗೆ ಹೊರಟಾಗ ಅಂಗಳದಲ್ಲಿ ಕಂಡವು ಮೂರು ಎಂ.ಯು.ವಿ. ಕಾರುಗಳು. ಮುಗುಳ್ನಗುತ್ತ ಸ್ವಾಗತಿಸುತ್ತಿರುವರನ್ನು ವಿನೋದಕ್ಕಾಗಿ ’ಎಷ್ಟು ಕಾರುಗಳಿದಾವ್ರಿ ನಿಮ್ಮ ಹತ್ತಿರ’ ಎಂದು ಕೇಳಿದಾಗ ’ಮೂರ ಅದಾವ್ರಿ, ನಂದು ಮತ್ತ ನನ್ನ ತಮ್ಮಗಳಿಬ್ಬರವು’ ಎನ್ನುತ್ತ ಹೇಳಿದರು. ಬೆಳಗಾವಿಯ ರಾಯಬಾಗ ತಾಲೂಕಿನ ಸವಸದ್ದಿ ಗ್ರಾಮದ ಪ್ರಗತಿಪರ ರೈತ ಶ್ರೀ ಮಹದೇವ ಸಿದ್ದಪ್ಪ ಜೋಡಟ್ಟಿಯವರು (೯೫೩೫೬೨೩೨೩೨). ಏಳನೆಯ ತರಗತಿಗೆ ಶಾಲೆ ಬಿಟ್ಟು ಕೃಷಿಗೆ ತೊಡಗಿಸಿ ಕೊಂಡಿದ್ದು ಈಗ ತಮ್ಮ ಸಾಧನೆಯಿಂದ ಸುತ್ತೆಲ್ಲ ಹೆಸರು ಮಾಡಿದ್ದಾರೆ, ಕೃಷಿ ವಿಶ್ವವಿದ್ಯಾಲಯದಿಂದ ’ಶ್ರೇಷ್ಠ ಕೃಷಿಕ’ ಪ್ರಶಸ್ತಿ ಪಡೆದಿದ್ದಾರೆ ಮತ್ತು ತೀರ ಇತ್ತೀಚೆಗೆ ರಾಜ್ಯ ಸರಕಾರದ ’ಕೃಷಿ ಪಂಡಿತ’ ಪುರಸ್ಕಾರಕ್ಕೂ ಭಾಜನರಾಗಿದ್ದಾರೆ, ೪೫ರ ಹರೆಯದ ಮಹದೇವಪ್ಪಾ ಜೋಡಟ್ಟಿಯವರು. ಸುತ್ತೆಲ್ಲ ಕಬ್ಬು, ಬಾಳೆ, ಬದನೆ, ಟೊಮೆಟೊ, ಗೋಧಿ, ಹೂಬನಗಳ ಕೃಷಿ ಹಸಿರು ಪರಿಸರದ ನಡುವೆ ವಿಶಾಲವಾದ ತಾರಸಿ ಮನೆ, ಮನೆಯ ಮುಂದೆ ಅಡಿಕೆ, ಹಲಸು, ಮತ್ತೆ ಹತ್ತಾರು ಈ ಭಾಗದಲ್ಲಿ ಕಾಣಸಿಗದ ವಿಶಿಷ್ಟ ಗಿಡಗಳು. ಬೇಲಿಯ ಮೇಲೆ ಬೆಳೆದ ನೂರಾರು ಸಿಹಿಗುಂಬಳ ಕಾಯಿಗಳನ್ನು ಈಗಾಗಲೇ ಊರಜಾತ್ರೆಯ ಪ್ರಸಾದಕ್ಕೂ ಮತ್ತು ವಿದ್ಯಾರ್ಥಿ ನಿಲಯಗಳಿಗೂ ಉಚಿತವಾಗಿ ನೀಡಿದ್ದಾರಂತೆ. ಜೊತೆಗೆ ಮನೆಗೆ ಹೊಂದಿಕೊಂಡು ವಿಶಾಲ ಅಂಗಳದಲ್ಲಿ ಎರಡು ಟ್ರಾಕ್ಟರುಗಳು, ನೀಟಾಗಿ ಜೋಡಿಸಿದ ಕೃಷಿಗೆ ಬೇಕಾದ ಸಲಕರಣೆ/ ಯಂತ್ರಗಳು,

345

ಸುಮಾರು ಇಪ್ಪತ್ತಕ್ಕೂ ಮಿಕ್ಕುವ ಆಕಳು ಮತ್ತು ಎಮ್ಮೆಗಳನ್ನು ಕಟ್ಟುವ ಆಧುನಿಕ ಕೊಟ್ಟಿಗೆ, ಕೊಟ್ಟಿಗೆಯಲ್ಲಿ ಮೈತುಂಬಿ ನಿಂತ ಜಾನುವಾರುಗಳು, ಕಣ್ಸೆಳೆವ ಬಿಳಿ ಹೋರಿಗರುಗಳು. ಹಸುಗಳಲ್ಲದೆ ಮೇಕೆಗಳು ಅಲ್ಲಿವೆ. ಕೊಟ್ಟಿಗೆಗೆ ಹೊಂದಿಕೊಂಡು ಮೇವು ಕತ್ತರಿಸುವ ದೊಡ್ಡ ಯಂತ್ರ ಹೊಂದಿರುವ ಮತ್ತು ಸಾಂದ್ರಿಕೃತ ಪೋಷಕ ಮೇವು ತಯಾರಿಸುವ ಕೋಣೆ, ಕೋಣೆಯಲ್ಲಿ ವಿವಿಧ ಸರಂಜಾಮಗಳು, ಔಷಧಿಗಳು. ಪ್ರತಿದಿನ ಪ್ರತಿ ಹಾಲು ಕರೆವ ಜಾನುವಾರುಗಳಿಗೆ ಒಂದು ಲೀಟರ್ ಸುಣ್ಣದ ತಿಳಿನೀರನ್ನು ಕ್ಯಾಲ್ಸಿಯಂ ಪೋಷಕಾಂಶ ಪೂರೈಸಲು ಕೊಡುತ್ತಾರಂತೆ. ಬಾಳೆಯ ಕಾಂಡದ ತುಂಡುಗಳನ್ನು ಮೇವಿನೊಂದಿಗೆ ಮಿಶ್ರ ಮಾಡಿ ಜಾನುವಾರುಗಳಿಗೂ ಮತ್ತು ಹೂಗಳನ್ನು ಕತ್ತರಿಸಿ ಹೊಂಡದಲ್ಲಿರುವ ಮೀನುಗಳಿಗೆ ಆಹಾರವಾಗಿ ಕೊಡುತ್ತಾರಂತೆ. ಇವೆಲ್ಲ ಇವರೆ ಕಂಡುಕೊಂಡ ಕ್ರಮಗಳು. ಮನೆಗೆ ಹೊಂದಿಕೊಂಡು ೫೦ ಹೆಜ್ಜೆ ಹಿಂದುಗಡೆ ಎತ್ತರದ ಎರಡು ಎಕರೆ ಅಳತೆಯ ಕೃಷಿ ಹೊಂಡ ಅಥವಾ ಜೋಡಟ್ಟಿಯವರ ಕೃಷಿಯ ಜೀವಜಲಾಗರ. ಸುಮಾರು ೩೦ ಅಡಿ ಆಳ, ಸಂಪೂರ್ಣವಾಗಿ ದಪ್ಪನೆಯ ಕಪ್ಪು ಪ್ಲಾಸ್ಟಿಕ್ ಸೀಟ್ನಿಂದ ಹೊಂದಿಸಲ್ಪಟ್ಟಿದ್ದು ಜಾನುವಾರುಗಳ ರಕ್ಷಣೆಗಾಗಿ ಸುತ್ತಲೂ ತಂತಿ (ವಿದ್ಯುತ್ಚಾಲಿತ) ಬೇಲಿಯ ರಚನೆ. ಸ್ವಚ್ಛ ತಿಳಿನೀರಿನಲ್ಲಿ ಮೊಳಕೈ ಗಾತ್ರದ ಮೀನುಗಳು. ಹೊಂಡ ನಿರ್ಮಿಸಲು ೨೮ ಲಕ್ಷ ರೂಪಾಯಿಗೂ ಮಿಕ್ಕಿ ಖರ್ಚಾಗಿದೆ. ಎಲ್ಲವೂ ಸ್ವಂತ ಬಂಡವಾಳ ತೊಡಗಿಸಿ ಮಾಡಿದ್ದು. ಬೆಳೆಗೆ ಬೆಳೆ ಸಾಲ ಪಡೆದಿದ್ದಾರೆ. ಈ ಕೃಷಿ ಹೊಂಡಕ್ಕೆ ಐದು ಕಿಲೋ ಮೀಟರ್ ದೂರದ ಘಟಪ್ರಭಾ ಯೋಜನೆಯ ನೀರಾವರಿ ಕಾಲುವೆಯ ಹತ್ತಿರದಲ್ಲಿ ೩೫ ಅಡಿ ಅಗಲ, ೩೦ ಅಡಿ ಉದ್ದ ಮತ್ತು ೭೦ ಅಡಿ ಆಳದ ಬಾವಿಯಿಂದ, ಹತ್ತು ಎಚ್ಪಿಯ ಎರಡು ಪಂಪ್ಗಳಿಂದ ನೀರು ಸರಬರಾಜಾಗುತ್ತದೆ. ಹೊಂಡದಿಂದ ರಸಾವರಿ ಜೋಡಣೆಯೊಂದಿಗೆ ಸಂಪೂರ್ಣ ಪೈಪ್ಲೈನ್ ಮೂಲಕ ೮೨ ಎಕರೆ ಜಮೀನಿಗೂ ಹನಿ ನೀರಾವರಿ ಮೂಲಕ ನೀರು ಪೂರೈಕೆ.

ಗೋಧಿಯಲ್ಲೂ ಕೂಡ ಹನಿ ನೀರಾವರಿಯ ಅಳವಡಿಕೆ ಮಾಡಿದ್ದಾರೆ. ಎರಡು ಜೋಡುಸಾಲುಗಳ ಮಧ್ಯ ಡ್ರಿಪ್ಪರ್ ಅಳವಡಿಸಿದ್ದಾರೆ. ಅದರಂತೆ ಬಾಳೆ, ಕಬ್ಬಿನಲ್ಲೂ ಹನಿನೀರಾವರಿಯಿಂದ ನೀರು ನೀಡಲಾಗುತ್ತದೆ. ಬಾಳೆ ಸಾವಯವ ಕ್ರಮದಲ್ಲಿ ಬೆಳೆಯಲಾಗಿದೆ. ಪ್ರತಿ ವರ್ಷವೂ ೮-೧೦ ಎಕರೆ ಕಬ್ಬು ಹಾಕಿರುತ್ತಾರೆ. ಹತ್ತು ತಿಂಗಳು ಕಬ್ಬಾದರೆ ಎಕರೆಗೆ ೮೦ ಟನ್ ೧೨ ತಿಂಗಳ ಬೆಳೆಯಾದರೆ ೧೦೦ ಟನ್ಗೂ ಮಿಕ್ಕಿ ಇಳುವರಿ ಪಡೆಯುತ್ತಾರೆ. ಉಳಿದಂತೆ ಹತ್ತು ಎಕರೆಯಲ್ಲಿ ಬಾಳೆ, ಇಪ್ಪತ್ತ್ತೆಕರೆಯಲ್ಲಿ ಮುಂಗಾರಿನಲ್ಲಿ ಗೋವಿನ ಜೋಳ ಮತ್ತು ಹಿಂಗಾರಿಯಲ್ಲಿ ಗೋಧಿ, ಸದಕ ಮತ್ತು ಕಡಲೆ ಉಳಿದಂತೆ ೮-೯ ಎಕರೆ ಕಾಯಿಪಲ್ಲೆ (ಬದನೆ, ಟೊಮೆಟೊ), ಕಲ್ಲಂಗಡಿ, ಕರಬೂಜ ಇತ್ಯಾದಿ ಬೆಳೆಯುತ್ತಾರೆ. ೧೯೯೫ ರಲ್ಲಿ ತಂದೆಯವರಿಂದ ಬಂದ ೮ ಎಕರೆಯಲ್ಲೆ ಆರಂಭವಾದ ಕೃಷಿ ಇಂದು ಬೆವರಿನ ದುಡಿಮೆಯಿಂದಾಗಿ ೮೨ ಎಕರೆವರೆಗೆ ಹೆಚ್ಚಿದೆ. ಬಾಳೆಯಲ್ಲಿಯೂ ಸರಾಸರಿ ಎಕರೆಗೆ ೪೦ ಟನ್ ಇಳುವರಿ ಪಡೆಯುತ್ತಾರಂತೆ. ಬಾಳೆಯಲ್ಲಿ ಚೆಂಡು ಹೂವನ್ನು ಅಂತರ ಬೆಳೆಯಾಗಿ ಬೆಳೆಯುತ್ತಾರೆ

8910

ಬದನೆ, ಟೊಮೆಟೊ ಬೆಳೆಗಳನ್ನು ಏರು ಮಡಿಗಳಲ್ಲಿ ಡ್ರಿಪ್ಪರ್ ಅಳವಡಿಸಿ, ಪ್ಲಾಸ್ಟಿಕ್ ಹಾಳೆ ಹೊದಿಸಿ, ಹಾಳೆಯಲ್ಲಿ ರಂಧ್ರ ಕೊರೆದು ಸಸಿ ನಾಟಿ ಮಾಡಿ ತರಕಾರಿ ಬೆಳೆಯುತ್ತಿದ್ದಾರೆ, ಟೊಮೆಟೊ ಬಳ್ಳಿ ನೆಲದ ಮೇಲೆ ಹರಡಲು ಬಿಡದೆ ಸುತಳಿ/ಸಣಬಿನ ದಾರದಿಂದ ಎತ್ತಿ ಮೇಲಕ್ಕೆ ಎರಡೂ ಬದಿಗಳಲ್ಲಿ ಕಟ್ಟಿಗೆ ಕಂಬಗಳ ಆಧಾರ ಹೊಂದಿದ ಪ್ಲಾಸ್ಟಿಕ್ ಥ್ರೆಡ್ಗೆ ಕಟ್ಟಿರುತ್ತಾರೆ. ಹೀಗಾಗಿ ಬಳ್ಳಿಗೆ ಎಲ್ಲ ಕಡೆಯಿಂದಲೂ ಗಾಳಿ ಬೆಳಕು ದೊರೆಯುವುದಲ್ಲದೆ ಕಾಯಿಗಳು ಹೊಳಪನ್ನು ಪಡೆಯುತ್ತವೆ. ಇಲ್ಲದಿದ್ದರೆ ಈ ಕಾಯಿಗಳೂ ನೆಲಕ್ಕೆ ತಾಗಿ ಬಣ್ಣಗುಂದುವುದಲ್ಲದೆ ರೋಗಗಳಿಗೂ ತುತ್ತಾಗುವ ಸಾಧ್ಯತೆಯಿದೆ. ಇನ್ನೊಂದು ವಿಶೇಷ ಎಂದರೆ ಬದನೆಯ ಹಂಗಾಮು ಮುಗಿದ ಮೇಲೆ ಅದನ್ನು ಭೂ ಮಟ್ಟಕ್ಕೆ ಕತ್ತರಿಸಲಾಗುತ್ತದೆ (ಪ್ರೂನಿಂಗ್). ಕತ್ತರಿಸಿದ ಭಾಗದಿಂದ ಬೆಳೆ ಮತ್ತೆ ಚಿಗುರೊಡೆದು ಮತ್ತೆ ಫಲ ನೀಡುವುದಂತೆ. ಹೀಗಾಗಿ ಮತ್ತೆ ನಾಟಿ ಮಾಡುವ ಅಣತ್ಯವಿಲ್ಲ. ಜೋಡಟ್ಟಿಯವರದು ಅಷ್ಟೊಂದು ಫಲವತ್ತಾಗಿರದ ಮಣ್ಣಿನಿಂದ ಕೂಡಿದ ಭೂಮಿ. ಆದರೀಗ ಸದಾ ಹಸಿರಿನಿಂದ ಕಂಗೊಳಿಸುತ್ತಿದೆ. ಮಗನನ್ನು ಕೃಷಿಯಲ್ಲಿಯೇ ಪದವಿ ಪಡೆಯಲೆಂದು ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಸೇರಿಸಿದ್ದಾರೆ ಮತ್ತು ಮಗಳನ್ನು ರೈತನಿಗೆ ಮದುವೆ ಮಾಡಿ ಕೊಟ್ಟಿರುವುದಾಗಿ ಹೆಮ್ಮೆಯಿಂದ ಹೇಳುತ್ತಾರೆ. ಕೃಷಿಯ ಬಗ್ಗೆ ನಿರಾಸಕ್ತಿ ತೋರುವ, ಕೃಷಿಕಾಯಕದಿಂದ ಪಲಾಯನ ಮಾಡುತ್ತಿರುವ ಈ ಸಮಯದಲ್ಲಿ ಅವರ ಕೃಷಿಯ ಆಸಕ್ತಿ ಅನುಕರಣೀಯ ಮತ್ತು ಸ್ಪೂರ್ತಿದಾಯಕ.

ಮೂರು ಮಂದಿ ಅಣ್ಣ ತಮ್ಮಂದಿರು ಹಳ್ಳಿಯಲ್ಲಿಯೆ ಇದ್ದು ಒಬ್ಬರು ಆಯುರ್ವೇದಿಕ್ ಡಾಕ್ಟರು ಇನ್ನೊಬ್ಬರು ಸಹಕಾರ ಸೊಸೈಟಿಯ ಸೆಕ್ರೆಟರಿ, ಆದರೂ ಈರ್ವರೂ ಕೃಷಿಯಲ್ಲಿ ತೊಡಗಿಸಿ ಕೊಂಡಿದ್ದಾರೆ. ವರ್ಷಕ್ಕೊಂದು ಬಾರಿ ದೀಪಾವಳಿಗೆ ಸಹೋದರರೆಲ್ಲರೂ ಸೇರಿ ಕೃಷಿಯ ಲೇವಾದೇವಿ ಪರಿಶೀಲಿಸುತ್ತಾರಂತೆ. ಮೂವತ್ತಕ್ಕೂ ಮಿಕ್ಕು ಸದಸ್ಯರನ್ನು ಹೊಂದಿದ ಅವಿಭಕ್ತ ಕುಟುಂಬ. ಮಗನ ಕೃಷಿ ಸಾಧನೆ ಕಂಡು ತಂದೆಗೆ ಬಲು ಖುಷಿ. ದಾಸೋಹ ಮನೋಭಾವ ತಾಯಂದಿರಲ್ಲಿ. ಒಟ್ಟಿನಲ್ಲಿ ಜೋಡಟ್ಟಿಯವರದು ಸಮಗ್ರ ಮತ್ತು ಸಮೃದ್ಧಿಯ ಕೃಷಿ. ವರ್ಷದ ಒಟ್ಟು ವಹಿವಾಟು ಕೋಟಿ ಮೀರುತ್ತದೆ. ಬೆವರ ಬೆನ್ನೇರಿ ದುಡಿದರೆ ಕೈ ಹಿಡಿವರಾರು? ಜೋಡಟ್ಟಿಯವರೂ ಯಾರಿಗೂ ಕಮ್ಮಿ ಇಲ್ಲ, ಪರಿಶ್ರಮದಲ್ಲಿ ತನ್ಮೂಲಕ ಪಡೆದ ಫಲದಲ್ಲಿ ಮತ್ತು ಗಳಿಸಿದ ಮರ್ಯಾದೆಯಲ್ಲಿ.

13