ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೭

ಗೇರು ಬೆಳೆಯ ಸಸಿ ಮಡಿ

ಡಾ. ಲಕ್ಷ್ಮಣ
9480838970
1

ನಮ್ಮ ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳಲು ಗೇರು ಕೃಷಿಯನ್ನು ಫಲವತ್ತಾದ ಭೂಮಿಯಲ್ಲಿ ಬೆಳೆಯುವುದು, ಸಮರ್ಪಕ ಪೋಷಕಾಂಶಗಳ ನಿರ್ವಹಣೆ ಹಾಗೂ ಸಸ್ಯ ಸಂರಕ್ಷಣಾ ಕ್ರಮಗಳು ಪ್ರಮುಖವಾಗುತ್ತದೆ. ಕಡಿಮೆ ಉತ್ಪಾದಕತೆಗೆ ಇನ್ನೊಂದು ಮುಖ್ಯ ಕಾರಣವೆಂದರೆ ಹಳೆಯ ಗೇರು ತೋಟಗಳನ್ನು ಬೀಜದ ಗಿಡಗಳಿಂದ ಅಭಿವೃದ್ಧಿ ಮಾಡಿರುವುದು. ಈ ಬೀಜದ ಗಿಡಗಳಲ್ಲಿ ಇಳುವರಿ ಮೂಲ ಮರಕ್ಕೆ ಸಮನಾಗಿರುವುದಿಲ್ಲ. ಚಿಗುರು ಬರುವ ಕಾಲ, ಹೂ ಮತ್ತು ಕಾಯಿ ಕಟ್ಟುವ ಸಮಯ, ಕೊಯ್ಲಿನ ಅವಧಿ, ಬೀಜದ ಗುಣಮಟ್ಟ ಮರದಿಂದ ಮರಕ್ಕೆ ವ್ಯತ್ಯಾಸವಿರುತ್ತದೆ. ಇದರಿಂದಾಗಿ ಕೀಟಗಳ ಹತೋಟಿ, ಕೊಯ್ಲು ಮುಂತಾದ ಕೆಲಸಗಳನ್ನು ನಿರ್ದಿಷ್ಟ ಸಮಯಕ್ಕೆ ಎಲ್ಲಾ ಮರಗಳಲ್ಲೂ ಅನುಸರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮೃದುಕಾಂಡ ಕಸಿ ವಿಧಾನದಿಂದ ಸಸ್ಯಾಭಿವೃದ್ಧಿ ಮಾಡಿ ಗುಣಮಟ್ಟದ ಕಸಿಗಿಡಗಳನ್ನು ಬಳಸುವುದರಿಂದ ಉತ್ತಮ ಇಳುವರಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಉಳ್ಳಾಲ ಹಲವು ವರ್ಷಗಳಿಂದ ಉತ್ತಮ ಕಸಿ ವಿಧಾನವನ್ನು ಅನುಸರಿಸಿ ಗುಣಮಟ್ಟದ ಕಸಿಗಿಡಗಳನ್ನು ತಯಾರಿಸಿ ರೈತರಿಗೆ ನೀಡುತ್ತಿದೆ.

ಮೃದು ಕಾಂಡ ಕಸಿ ವಿಧಾನ

4

ಬೇರು ಸಸಿಗಳ (Root stock) ತಯಾರಿ:-ಪೂರ್ತಿ ಬೆಳೆದಂತಹ ಮರದಿಂದ ಬಿದ್ದ ಬೀಜಗಳನ್ನು ಆಯ್ದು ೩ ದಿನಗಳವರೆಗೆ ಬಿಸಿಲಿನಲ್ಲಿ ಒಣಗಿಸಲಾಗುವುದು ಹಾಗೂ ಒಂದು ತಿಂಗಳು ಹದಗೊಳಿಸಲಾಗುವುದು. ಬೀಜಗಳನ್ನು ನೆಡುವ ೨೪ ಗಂಟೆಯ ಮೊದಲು ನೀರಿನಲ್ಲಿ ನೆನೆ ಹಾಕಲಾಗುವುದು. ನೀರಿನಲ್ಲಿ ತೇಲುವ ಬೀಜಗಳನ್ನು ಬಿತ್ತನೆಗೆ ಉಪಯೋಗಿಸುವುದಿಲ್ಲ. ತದನಂತರ ಬೀಜಗಳನ್ನು ಕೆಂಪು ಮಣ್ಣು, ಮರಳು ಮತ್ತು ಕೊಟ್ಟಿಗೆ ಗೊಬ್ಬರ (೨:೧:೧) ಪ್ರಮಾಣದಲ್ಲಿ ತುಂಬಿಸಿದ ಸುಮಾರು ೨೫೦ ಗೇಜಿನ ೯x೬ ಗಾತ್ರದ ಪಾಲಿಥೀನ್ ಚೀಲಗಳಲ್ಲಿ ೪-೫ ಸೆ. ಮೀ. ಆಳದಲ್ಲಿ ಬಿತ್ತನೆ ಮಾಡಲಾಗುವುದು. ೧೦-೧೨ ದಿವಸಗಳಲ್ಲಿ ಮೊಳಕೆಯೊಡೆಯಲು ಪ್ರಾರಂಭಗೊಳ್ಳುತ್ತವೆ. ಬೀಜ ಬಿತ್ತಿದ ೪೫-೫೦ ದಿವಸಗಳ ಬೆಳವಣಿಗೆಯುಳ್ಳ ಸಸಿಗಳು ಮೃದುಕಾಂಡ ಕಸಿ ಮಾಡಲು ಯೋಗ್ಯವಾಗಿರುತ್ತವೆ

ಕಸಿ ಕಡ್ಡಿ ತಾಕುಗಳ ನಿರ್ವಹಣೆ :- ಗುಣಮಟ್ಟದ ಕಸಿ ಕಡ್ಡಿಗಳನ್ನು ಉತ್ಪಾದಿಸಲು ಅಧಿಕ ಇಳುವರಿ ಕೊಡುವ ತಳಿಗಳನ್ನು ಒಂದು ಪ್ರದೇಶದಲ್ಲಿ ನಿರ್ದಿಷ್ಟ ಅಂತರದಲ್ಲಿ ಬೆಳೆಸಿ ತಾಕುಗಳನ್ನು ಅಭಿವೃದ್ಧಿ ಪಡಿಸಬೇಕು. ಗಿಡ ನೆಟ್ಟ ನಾಲ್ಕನೇ ವರ್ಷದಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ಸೆಪ್ಟೆಂಬರ್ ತಿಂಗಳಲ್ಲಿ ಗಿಡಗಳನ್ನು ೨ ರಿಂದ ೨.೫ ಅಡಿ ಎತ್ತರಕ್ಕೆ ಕತ್ತರಿಸಬೇಕು. ಅಂತಹ ಗಿಡಗಳಲ್ಲಿ ೨೫-೩೦ ದಿವಸಗಳಲ್ಲಿ ಹೊಸ ಚಿಗುರುಗಳು ಬೆಳೆಯುತ್ತದೆ. ಜನವರಿ - ಫೆಬ್ರವರಿಯಲ್ಲಿ ಸೂಕ್ತ ಕಸಿ ಕಡ್ಡಿಗಳು ದೊರೆಯುತ್ತವೆ. ಪ್ರತಿ ಗಿಡದಿಂದ ಪ್ರತಿ ವರ್ಷ ೧೦೦ ರಿಂದ ೧೫೦ ಕಸಿ ಕಡ್ಡಿಗಳನ್ನು ಪಡೆದು ಕಸಿ ಮಾಡಲು ಉಪಯೋಗಿಸಲಾಗುವುದು. ಮೃದು ಕಾಂಡ ಕಸಿ ವಿಧಾನ ಹಾಗೂ ನರ್ಸರಿ ನಿರ್ವಹಣೆ :- ೪೫-೫೦ ದಿನಗಳ ಬೆಳವಣಿಗೆಯುಳ್ಳ ಗೇರು ಸಸಿಗಳ ತುದಿ ಭಾಗವನ್ನು ೩-೪ ಅಂಗುಲ ಕೆಳಭಾಗಕ್ಕೆ ಅಡ್ಡವಾಗಿ ಕತ್ತರಿಸಬೇಕು, ನಂತರ ಮತ್ತೆ ೨-೩ ಅಂಗುಲ ಕೆಳಭಾಗಕ್ಕೆ ಇರುವ ಎಲೆಗಳನ್ನು ತೆಗೆದು ಕಾಂಡದ ಮಧ್ಯ ಭಾಗದಲ್ಲಿ ಹರಿತವಾದ ಚಾಕುವಿನಿಂದ ೧.೫-೨ ಅಂಗುಲ ಆಳಕ್ಕೆ ಸೀಳಬೇಕು. ಇದೇ ವೇಳೆ ೫-೬ ಅಂಗುಲ ಉದ್ದದ ಎಲೆ ತೆಗೆದು ಸಿದ್ಧಪಡಿಸಿದ ಕಸಿ ಕಡ್ಡಿಗಳನ್ನು ಗಿಡದಿಂದ ತಂದು ಕಸಿ ಕಡ್ಡಿಗಳ ಬುಡ ಭಾಗದಲ್ಲಿ ಬೆಣೆಯಾಕಾರದಲ್ಲಿ ಎರಡು ಬದಿಗೆ ಸಮನಾಗಿ ೧.೫-೨ ಅಂಗುಲ ಕೆತ್ತಿ ಶೇಕಡಾ ೦.೧ ರ ಕಾರ್ಬೆಂಡೈಜಿಂ ದ್ರಾವಣದಲ್ಲಿ ಅದ್ದಿ ನಂತರ ಸೀಳಿದ ಕಾಂಡದ ಮಧ್ಯ ಭಾಗಕ್ಕೆ ಸೇರಿಸಬೇಕು. ಈ ರೀತಿ ಜೋಡಿಸಿದ ಭಾಗವನ್ನು ೧ ಸೆಂ. ಮೀ. ಅಗಲದ ೩೦ ಸೆಂ. ಮೀ. ಉದ್ದವುಳ್ಳ ೧೦೦-೧೫೦ ಗೇಜಿನ ಪಾಲಿಥೀನ್ ಪಟ್ಟಿಯಿಂದ ಕಟ್ಟಲಾಗುತ್ತದೆ. ೧೫-೨೦ ದಿವಸಗಳಲ್ಲಿ ಚಿಗುರು ಕಾಣಿಸಿಕೊಂಡು ಬೆಳೆಯಲಾರಂಭಿಸುತ್ತವೆ. ಆಗ ಮುಚ್ಚಿದ ಪಾಲಿಥೀನ್ ತೊಟ್ಟೆಗಳನ್ನು ತೆಗೆದು ಗಿಡಗಳಿಗೆ ಬಿಸಿಲು ಬೀಳದಂತೆ ನೋಡಿಕೊಳ್ಳಬೇಕು. ೨ ದಿವಸಕ್ಕೊಮ್ಮೆ ನೀರು ಕೊಡಲಾಗುವುದು. ೧೦ ದಿನದ ನಂತರ ಬಿಸಿಲು ಬೀಳುವಂತೆ ಮಾಡಬೇಕು. ಬೇರು ಸಸಿಯ ಮೇಲೆ ಬರುವ ಚಿಗುರುಗಳನ್ನು ತೆಗೆಯುತ್ತಿರಬೇಕು. ಕಸಿ ಕಟ್ಟಲು ಫೆಬ್ರವರಿಯಿಂದ ಸೆಪ್ಟೆಂಬರ್ ಸೂಕ್ತ ಕಾಲವಾಗಿದೆ. ಯಶಸ್ವಿಯಾದ ಕಸಿ ಗಿಡಗಳಿಂದ ಕಟ್ಟಿದ ಪಾಲಿಥೀನ್ ಪಟ್ಟಿಯನ್ನು ೨-೩ ತಿಂಗಳಲ್ಲಿ ತೆಗೆಯಬೇಕು. ಸುಮಾರು ೮೦-೮೫ ಕಸಿ ಗಿಡಗಳನ್ನು ಪಡೆಯಲು ೧೦೦ ಬೀಜಗಳನ್ನು ಬಿತ್ತ ಬೇಕಾಗುತ್ತದೆ. ಈ ರೀತಿಯಲ್ಲಿ ಪ್ರತಿಯೊಂದು ಹಂತದಲ್ಲಿ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿ ಗುಣಮಟ್ಟದ ಕಸಿಗಿಡಗಳನ್ನು ತಯಾರಿಸಲಾಗುತ್ತದೆ.

ಪ್ರತಿ ವರ್ಷದ ಹಾಗೇ ಈ ವರ್ಷವು ಕೂಡಾ ವಿವಿಧ ಗೇರು ತಳಿಗಳಾದ ಉಳ್ಳಾಲ -೧, ಉಳ್ಳಾಲ-೨, ಉಳ್ಳಾಲ-೩, ಉಳ್ಳಾಲ-೪, ಪ್ರಿಯಾಂಕ, ವಿ.ಆರ್.ಐ-೩, ಬಾಪಟ್ಲ-೮, ಯು.ಎನ್-೫೦, ಭಾಸ್ಕರ, ವೆಂಗುರ್ಲಾ-೪, ವೆಂಗುರ್ಲಾ-೭, ಧನಾ, ಕನಕ, ಧಾರಶ್ರೀ, ಎನ್.ಡಿ.ಆರ್-೨-೧, ಸುಲಭ ಹಾಗೂ ಇನ್ನು ಹಲವು ತಳಿಗಳ ಕಸಿ ಗಿಡಗಳನ್ನು ತಯಾರಿಸಲಾಗಿದೆ. ಜೂನ್ ತಿಂಗಳಿನಿಂದ ರೈತರಿಗೆ ಲಭ್ಯವಾಗಲಿವೆ. ಆದ್ದರಿಂದ ಗೇರು ಕೃಷಿಯಲ್ಲಿ ಆಸಕ್ತಿ ಹೊಂದಿರುವ ರೈತರು ಕಸಿ ಗಿಡಗಳನ್ನೇ ನಾಟಿ ಮಾಡಿ ಕಡಿಮೆ ಸಮಯದಲ್ಲಿ ಹೆಚ್ಚಿನ ಇಳುವರಿ ಪಡೆದು ಲಾಭ ಗಳಿಸಬಹುದು

8

ಸಂರ್ಪಕಿಸಬಹುದಾದ ವಿಳಾಸ: ಡಾ.ಲಕ್ಷ್ಮಣ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಉಳ್ಳಾಲ(ಕಾಪಿಕಾಡ್), ಮಂಗಳೂರು-೫೭೫೦೨೦, ದ.ಕ. ಜಿಲ್ಲೆ, ದೂರವಾಣಿ: ೦೮೨೪-೨೪೬೬೨೪೯, ಮೋ: ೯೪೮೦೮೩೮೯೭೦. ಇಮೈಲ್: ahrscashew@gmail.com