ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೭

ಅರಿವೆ ಗುರು

ಕೃಷಿಕರ ಸೋಲಾರ್ ಪವರ್ ಬ್ಯಾಂಕ್

image_
ಅನಿಲ್ ಕುಮಾರ್
9449837309

ನೇಗಿಲ ಮಿಡಿತ ಸಂಪುಟ ೧ ಸಂಚಿಕೆ ೧೦ ಅಕ್ಟೋಬರ್ ೨೦೧೫ ರ ಸಂಚಿಕೆಯಲ್ಲಿ ಕೃಷಿಗೆ ಶಕ್ತಿ ತುಂಬುವ ಸೋಲಾರ್ ಎಂಬ ಲೇಖನವು ಪ್ರಕಟವಾಗಿತ್ತು. ಈ ಲೇಖನದಲ್ಲಿ ರೈತರು ಅಳವಡಿಸಿಕೊಂಡಿರುವ ಸೋಲಾರ್ ಪಂಪುಗಳನ್ನು ಬಹು ಉಪಯೋಗಿ ವ್ಯವಸ್ಥೆ ಮಾಡುವ ಕುರಿತು ಚರ್ಚಿಸಲಾಗಿತ್ತು. ಇದರಲ್ಲಿ ಬ್ಯಾಟರಿ ಚಾಲಿತ ಉಪಕರಣಗಳ ಬಳಕೆಗೆ ಈ ಪ್ಯಾನಲ್ಗಳಿಂದಲೇ ಬ್ಯಾಟರಿ ಚಾರ್ಜ್ ಮಾಡುವ ಹಾಗೂ ಸೋಲಾರ್ ಒಣಗಿಸುವ ಮನೆ ಇತ್ಯಾದಿಗಳ ಬಗ್ಗೆ ಚರ್ಚಿಸಲಾಗಿತ್ತು. ಕಾರಣ ಸೋಲಾರ್ ಪಂಪು ಬೇಸಿಗೆಯಲ್ಲು ಹೆಚ್ಚು ಬಳಸುತ್ತೇವೆ. ಮಳೆಗಾಲದಲ್ಲಿ ಬಳಕೆ ಕಡಿಮೆ ಮಾಡುತ್ತೇವೆ. ಆಗಲೂ ಈ ಪ್ಯಾನೆಲ್ಗಳು ವಿದ್ಯುತ್ ಉತ್ಪಾದಿಸುತ್ತಿರುತ್ತವೆ. ಜೊತೆಗೆ ಬೇಸಿಗೆಯಲ್ಲೂ ಪಂಪ್ ಬಳಸುವ ವೇಳೆ ಬಿಟ್ಟು ಬೇರೆ ಸಂದರ್ಭಗಳಲ್ಲಿ ಉತ್ಪಾದನೆಯಾದ ವಿದ್ಯುತ್ ನಮ್ಮರಿವಿಗೆ ಬರದಂತೆ ನಷ್ಟ ಆಗುತ್ತದೆ. ಇದನ್ನು ಸಮರ್ಥವಾಗಿ ಬಳಸುವ ಬಗ್ಗೆ ಹಲವು ತರಬೇತಿ ಕಾರ್ಯಾಗಾರಗಳಲ್ಲಿ ಪ್ರಸ್ತಾಪಿಸಿದ್ದೆ. ಇದಕ್ಕಾಗಿ ಅನಿಲ್ಕುಮಾರ್ ಅವರೊಡನೆ ಚರ್ಚಿಸಿ ಕೆಲವು ಬಳಕೆ ಮಾದರಿ ನೀಡಲಾಗಿದೆ. ಇವು ಕೇವಲ ಕೆಲವು ಉದಾಹರಣೆಗಳು. ತಮ್ಮ ಕ್ರಿಯಾಶೀಲ ಬುದ್ಧಿಗೆ ಕೆಲಸ ನೀಡಿದಲ್ಲಿ ಇನ್ನೂ ಹತ್ತು ಹಲವು ಬಳಕೆ ಚಿಂತಿಸಬಹುದು

2

ಸಾಮಾನ್ಯವಾಗಿ ಬೇಸಿಗೆಯಲ್ಲಿ ಪ್ಯಾನೆಲ್ಗಳು ಉತ್ಪಾದಿಸುವ ಶಕ್ತಿಗಿಂತ ಮಳೆಗಾಲದಲ್ಲಿ ಪ್ರತಿಶತ ೨೫ ರಿಂದ ೪೦ ರಷ್ಟು ಕಡಿಮೆ ವಿದ್ಯುತ್ ಉತ್ಪಾದಿಸುತ್ತವೆ. ಆದರೂ ೫ ಹೆಚ್.ಪಿ ಪಂಪ್ ಅಳವಡಿಸಿದ ಸೌರಫಲಕ ದಿನಕ್ಕೆ ೦-೧೦ ಯೂನಿಟ್ ಮಳೆಗಾಲದಲ್ಲಿ ಉತ್ಪಾದಿಸುತ್ತದೆ. ಹಾಗಾಗಿ ಇದರ ಸದ್ಬಳಕೆಗೆ ಇದನ್ನು ಸೋಲಾರ್ ಬ್ಯಾಂಕ್ ರೀತಿ ಬಳಸಬಹುದು. ಬೇಸಿಗೆಯಲ್ಲಿ ನೀರೆತ್ತಲು ಪಂಪು ಹೇಗೆ ಅಗತ್ಯವಾಗುತ್ತದೊ ಹಾಗೆ ಮಳೆಗಾಲದ ಕೃಷಿಕರಿಗೆ ಕೆಲವು ಅಗತ್ಯಗಳಿರುತ್ತವೆ. ಉದಾಹರಣೆಗೆ ಕೃಷಿ ಉತ್ಪನ್ನಗಳನ್ನು ಒಣಗಿಸುವುದು, ಬಿಸಿ ನೀರು, ಬಸಿ ನೀರನ್ನು ಹೊರ ಹಾಕುವುದು, ಕಳೆ ನಿಯಂತ್ರಣ. ಇವೆಲ್ಲವನ್ನು ಲಭ್ಯ ಸೋಲಾರ್ ಫಲಕಗಳಿಂದ ಮಾಡಲು ಸಾಧ್ಯವಾಗುತ್ತದೆ. ಇದು ಒಳ್ಳೆಯ ಸಾಧ್ಯತೆಯಲ್ಲವೆ ಪ್ರಯತ್ನಿಸಿ ಜೊತೆಗೆ ನಿಮ್ಮ ಯಶೋಗಾಥೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಇವುಗಳನ್ನು ಕಾರ್ಯ ಸಾಧ್ಯವಾಗಿಸಲು ಕೆಲವು ಉದಾಹರಣೆಗಳು.

4

ಬ್ಯಾಟರಿ ಚಾರ್ಜಿಂಗ್ಗಾಗಿ: ಫಲಕಗಳ ಸಂಪರ್ಕದಿಂದ ನೀವು ಒಂದರಿಂದ ಮೂವತ್ತರವರೆಗೆ ಎಷ್ಟು ಬೇಕಾದರೂ ಬ್ಯಾಟರಿ ಚಾರ್ಜ್ ಮಾಡಬಹುದು. ಸಾಮಾನ್ಯ ಉಪಯೋಗಕ್ಕೆ ಒಂದೆರಡು ಬ್ಯಾಟರಿಗಳಾದರೂ ಸಾಕು. ಈ ಬ್ಯಾಟರಿಗಳನ್ನು ದೀಪ, ವಿದ್ಯುತ್ ಬೇಲಿ ಅಥವಾ ಯಾವುದೇ ಉಪಕರಣ ನಡೆಸಲು ಬಳಸಬಹುದು. ಒಂದು ಕಂಟ್ರೋಲರ್ ಇದ್ದರೆ ಹೆಚ್ಚು ಸೂಕ್ತ. ಒಂದಿಷ್ಟು ನೀರು ಕಾಯಿಸಿ: ಉತ್ಪತ್ತಿಯಾಗುತ್ತಿರುವ ವಿದ್ಯುತ್ನ್ನು ಹೀಟರ್ ಕಾಯಿಲ್ಗಳ ಮೂಲಕ ಹಾಯಿಸಿ, ನೀರನ್ನು ಕಾಯಿಸಬಹುದು. ಒಂದು ನಿಯಂತ್ರಕ ಅಳವಡಿಸಿ, ನೀರು ಹೆಚ್ಚು ಬಿಸಿಯಾಗದಂತೆ ತಡೆಯಲೂಬಹುದು. ಇದಕ್ಕೆ ಹೆಚ್ಚೇನೂ ಖರ್ಚಾಗದು.

6

ಒಣಗಿಸುವ ಯಂತ್ರ ರೂಪಿಸಿ: ಹೀಟರ್ ಕಾಯಿಲ್, ಡಿ ಸಿ ಫ್ಯಾನ್ ಹಾಗೂ ನಿಯಂತ್ರಕಗಳನ್ನು ಅಳವಡಿಸಿ ಒಣಗಿಸುವ ಯಂತ್ರ(ಡ್ರೈಯರ್) ರೂಪಿಸಬಹುದು. ತೋಟದ ಮನೆ ಅಥವಾ ಮನೆ ಹತ್ತಿರ ಸೋಲಾರ್ ಪಂಪು ಇದ್ದಾಗ ಎಇಹೆಚ್, ಪವರ್ಗೆ ಸಹ ಬಳಸಬಹುದು.ಮನೆಯಲ್ಲಿರುವ ಯು.ಪಿ.ಎಸ್ಗಳು, ಪವರ್ ಉಪಕರಣಗಳಾದ ಫ್ರಿಜ್, ಪಂಪ್ ಇತ್ಯಾದಿಗಳನ್ನು ನಡೆಸುವ ಸಾಮರ್ಥ್ಯ ಹೊಂದಿರುವುದಿಲ್ಲ. ಸೋಲಾರ್ ಪಂಪ್ನ ಫಲಕಗಳು ಅಧಿಕ ಶಕ್ತಿ ಹೊಂದಿದ್ದು, ಇದನ್ನು ಪರಿವರ್ತಿಸಿ, ಸೂರ್ಯನ ಬೆಳಕಿದ್ದಾಗ ಮೇಲಿನ ಉಪಕರಣಗಳಲ್ಲದೇ, ಬಟ್ಟೆ ಒಗೆಯುವ ಯಂತ್ರವೂ ನಡೆದೀತು. ಪವರ್ ಕಟ್ ದಿನವಿಡೀ ಇದ್ದಾಗ ಇದು ವರದಾನವೇ.

8

ಮನೆಯ ಯು.ಪಿ.ಎಸ್ಗೇ ಸಂಪರ್ಕ ಕಲ್ಪಿಸಿ: ನಿಮ್ಮಲ್ಲಿ ಈಗಾಗಲೇ ಒಂದು ಅಥವಾ ಎರಡು ಬ್ಯಾಟರಿ ಯು.ಪಿ.ಎಸ್. ಇದ್ದಲ್ಲಿ, ಈ ಫಲಕಗಳಿಂದ ಡಿಸಿ-ಡಿಸಿ ಪರಿವರ್ತಕದ ಮೂಲಕ ಸಂಪರ್ಕ ಕಲ್ಪಿಸಿ. ದಿನವಿಡೀ ಉಚಿತ ವಿದ್ಯುತ್ ಪಡೆಯಿರಿ. ಡಿಸಿ ಬಲ್ಬ್, ಫ್ಯಾನ್ ಬಳಸಿ: ಫಲಕಗಳ ಒಟ್ಟಾರೆ ವೋಲ್ಟೇಜ್ ಅಧಿಕವಿದ್ದು, ಉಪಕರಣಗಳ ಮೂಲಕ ಕಡಿಮೆಗೊಳಿಸಿ, ೧೨ ವ್ಯಾಟ್ನ ಯಾವುದೇ ಫ್ಯಾನ್, ಬಲ್ಬ್, ಟಿ.ವಿ. ಸಹ ಬಳಸಬಹುದು. ಇದಕ್ಕೆ ಇನ್ವರ್ಟರ್ ಅವಶ್ಯವಿಲ್ಲ. ಹೀಗೆ ಹತ್ತು ಹಲವಾರು ಪ್ರಯೋಗಗಳಿಂದ, ಸೋರುತ್ತಿರುವ ವಿದ್ಯುತ್ ಬಳಸಬಹುದು. ವಿನೂತನವಾಗಿ ಚಿಂತಿಸುವ ಪ್ರಯೋಗಶೀಲ ರೈತರು ಪೂರ್ಣ ತಾಂತ್ರಿಕ ವಿವರ ಸಹಕಾರದೊಂದಿಗೆ ಅಳವಡಿಸಬಹುದು. ಇದು ಇತರರಿಗೆ ಮಾರ್ಗದರ್ಶಿಯಾದೀತು.

10