ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೭

ಮಣ್ಣ ಮಡಿಲಲ್ಲಿ

ನೀರಿಗಾಗಿ ಗಂಗಾವತರಣ ಮಾಡದೆ ಗಂಗೆಯನ್ನು ಹಿಡಿದಿಟ್ಟ ಶಂಕರ

ಡಾ. ಶಂಕರ ಹೆಬ್ಬಾರ್
9449105802
1

ವಿಜ್ಞಾನಿಯೊಬ್ಬರ ಸಾಧನೆ ಈ ಬಾರಿಯ ಮಣ್ಣ ಮಡಿಲಲ್ಲಿ ಬರೆಯಬೇಕೆನಿಸಿತು. ಅರೆ ಮಣ್ಣ ಮಡಿಲಲ್ಲಿ ಅಂಕಣ ಹೊಲ ಗದ್ದೆಗಳಲ್ಲಿ ಕಾರ್ಯ ಮಾಡುವ ರೈತ ಸಾಧನೆಯ ಪರಿಚಯವಲ್ಲವೆ? ಹೌದು ನೇರವಾಗಿ ಹೊಲಗದ್ದೆಗಳಲ್ಲಿ ಸಾಧನೆ ಮಾಡಿದವರ ಪರಿಚಯಿಸುವುದು ಮಣ್ಣ ಮಡಿಲಲ್ಲಿ ಅಂಕಣದ ಉದ್ದೇಶ. ಈ ವಿಜ್ಞಾನಿ ಸಹ ಮಣ್ಣ ಮಡಿಲಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ನಾನು ಮಗಳನ್ನು ಕೇಂದ್ರೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಗೆ ಪ್ರಾಯೋಗಿಕ ತರಬೇತಿಗಾಗಿ ಕಳಿಸಿಕೊಡಲು ಹೋಗಿದ್ದೆ. ಆಗ ಅಲ್ಲಿ ಸಂಶೋಧಕ ಗೆಳೆಯ ಶಂಕರ ಹೆಬ್ಬಾರ್ ತನ್ನ ಒಂದು ಸಂಶೋಧನೆ ತೋರಿಸಲು ಕರೆದುಕೊಂಡು ಹೋದ. ಅದನ್ನು ನೋಡಿದ ಮೇಲೆ ಮಣ್ಣ ಮಡಿಲಲ್ಲಿ ಓದುಗರೊಂದಿಗೆ ಹಂಚಿಕೊಳ್ಳಬೇಕು ಎನಿಸಿತು. ಇತ್ತೀಚೆಗೆ ಕೃಷಿ ಹೈಟೆಕ್ ಆಗುತ್ತಿದ್ದಂತೆ ನೀರಿನ ಬೇಡಿಕೆ ಹೆಚ್ಚಾಗುತ್ತದೆ ಎಂಬುದು ಸಾಮಾನ್ಯ. ಆದರೆ ಇದಕ್ಕೆ ಒಂದು ವಿಭಿನ್ನ ಆಯಾಮ ನೀಡಿರುವುದು ಶಂಕರ ಹೆಬ್ಬಾರರ ಸಾಧನೆ.

ಇವರು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನೈಜ ಪರಿಸರದ ಗಾಳಿಯಾಡುವ ೬ ಪಾಲಿಮನೆಗಳನ್ನು ೨ ಎಕರೆ ವ್ಯಾಪ್ತಿಯಲ್ಲಿ ನಿರ್ಮಿಸಿದರು. ಇದರ ಮೇಲೆ ಬಿದ್ದ ಮಳೆ ನೀರು ಹೊರಗೊಳವೆ ಮೂಲಕ ಹರಿದು ಹೋಗುತ್ತಿತ್ತು. ನೆಲದ ಮೇಲೆ ಬಿದ್ದ ಮಳೆ ನೀರಾದರೆ ಪ್ರತಿಶತ ೨೦ ರಿಂದ ೪೦ ರಷ್ಟು ಹರಿದು ಹಳ್ಳ ಕೊಳ್ಳ ಸೇರುತ್ತದೆ. ಪಾಲಿ ಹೌಸ್ ಮೇಲೆ ಬಿದ್ದೆಲ್ಲಾ ಮಳೆ ನೀರು ಹೊರ ಹರಿಯುತ್ತದೆ. ಇದರಿಂದ ಅಗಾಧ ನೀರು ಲಭ್ಯ. ಇದನ್ನು ಸಮರ್ಥವಾಗಿ ಬಳಸಲು ಚಿಂತಿಸಿದ ಇವರು ಆ ಲೆಕ್ಕವನ್ನು ಪಟ ಪಟನೆ ಹೇಳುತ್ತಾರೆ.

ನೋಡಿ ಎರಡು ಎಕರೆ ಪಾಲಿ ಹೌಸ್ ಕಟ್ಟಿದ್ದೇವೆ. ೮೦೦೦ ಚದುರ ಮೀಟರ್, ಪಾಲಿ ಹೌಸ್ ಕೊನೆಗೆ ನೀರ್ಗೊಳವೆ ಇಲ್ಲ. ಆದ್ದರಿಂದ ೬೩೩೬ ಚದುರ ಮೀಟರ್ ಪಾಲಿ ಹೌಸ್ ಮೇಲೆ ಬಿದ್ದ ಮಳೆ ನೀರನ್ನು ನಾವು ಸಂಗ್ರಹ ಮಾಡಬಹುದು. ಒಂದು ಮಿಲಿ ಮೀಟರ್ ಮಳೆಯಾದರೆ ೬೩೩೬ ಲೀಟರ್ ನೀರು ಸಂಗ್ರಹವಾಗುತ್ತದೆ. ಸುಮಾರು ೪೦೦ ಮಿಲಿ ಮೀಟರ್ ಮಳೆಯಾದರೆ ೨೫೩೪ ಕ್ಯೂಬಿಕ್ ಮೀಟರ್ ನೀರು ಅಂದ್ರೆ ೨೫.೩೪ ಲಕ್ಷ ಲೀಟರ್ ನೀರು ಲಭ್ಯ. ಬೆಂಗಳೂರಲ್ಲಿ ೮೫೦ ಮಿ.ಮೀ. ಮಳೆಯಾಗುತ್ತದೆ. ಇದು ಏಪ್ರಿಲ್ನಿಂದ ನವೆಂಬರ್ವರೆಗೆ ವ್ಯಾಪಿಸಿರುತ್ತದೆ. ನಾವು ನಿರ್ಮಿಸಿರುವ ಪಾಲಿ ಮನೆಗಳ ಚಾವಣಿಯಿಂದ ೫೪ ಲಕ್ಷ ಲೀಟರ್ ನೀರು ಪ್ರತಿ ವರ್ಷ ಸಂಗ್ರಹಿಸಬಹುದು. ಸಂಗ್ರಹಿಸಿದ ನೀರು ನಿತ್ಯ ಬಳಕೆಯಾಗುವುದು. ಆ ಪ್ರಮಾಣ ಪರಿಗಣಿಸಿ ೨೪ ಲಕ್ಷ ಲೀಟರ್ ಸಂಗ್ರಹಣಾ ಸಾಮರ್ಥ್ಯದ ಹೊಂಡ ನಿರ್ಮಿಸಿ ಸಂಗ್ರಹಿಸಿದ ನೀರು ಬಸಿದು ಹೋಗದಂತೆ ಪಾಲಿ ಹೊದಿಕೆ ಆವಿಯ ಪ್ರಮಾಣ ಕಡಿಮೆ ಮಾಡಲು ನೆರಳು ಪರದೆ ಹಾಕಿ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಹೊರ ನೀರಿನ ಅಗತ್ಯವಿಲ್ಲದೆ ಎರಡು ಬೆಳೆ ತೆಗೆಯಬಹುದು, ೯೦೦ ಮಿಲಿ ಮೀಟರ್ ಮಳೆಯಾಗುವಲ್ಲಿ ಸಂಗ್ರಹವಾದ ಮಳೆ ನೀರಿನಿಂದಲೇ ಕೃಷಿ ಸಾಧ್ಯ ಎನ್ನುತ್ತಾರೆ ಡಾ. ಶಂಕರ ಹೆಬ್ಬಾರ್.

ಮಳೆಯಾಶ್ರಿತದಲ್ಲೆ ಪಾಲಿ ಮನೆಯಲ್ಲಿ ಕೃಷಿ ಮಾಡಬಹುದು ಎಂಬುದೇ ಒಂದು ಅದ್ಭುತ ಚಿಂತನೆ. ಇಂತಹ ಕಲ್ಪನೆಯನ್ನು ಕಾರ್ಯರೂಪಕ್ಕೆ ತಂದು ಅದರ ಪ್ರಾತ್ಯಕ್ಷಿಕೆ ಮಾಡಿ ತೋರಿಸಿರುವ ಡಾ. ಶಂಕರ ಹೆಬ್ಬಾರ್ ಅಭಿನಂದನಾರ್ಹರು. ತಾಂತ್ರಿಕ ಮಾಹಿತಿಗಳು: ಹೊಂಡ ನಿರ್ಮಾಣಕ್ಕೆ ತಗುಲಿದ ಒಟ್ಟು ವೆಚ್ಚ ೭.೫೧ ಲಕ್ಷ ಪ್ರತಿ ಲೀಟರ್ ನೀರಿಗೆ ೦.೩೧ ರೂ. ಆಗುತ್ತದೆ.

  • ಹೊಂಡದ ಅಳತೆ ತೊಟ್ಟಿ ಮೇಲಿನ ಉದ್ದಗಲ ೪೦ ಘಿ ೨೦ ಮೀಟರ್, ತೊಟ್ಟಿ ತಳದ ಉದ್ದಗಲ ೩೬ ಘಿ ೧೬ ಮೀಟರ್ , ಆಳ ೩.೫ ಮೀಟರ್, ಸಾಮರ್ಥ್ಯ ೨೪ ಲಕ್ಷ ಲೀಟರ್
  • ನೀರು ಬಸಿದು ಹೋಗದಂತೆ ೭೫೦ ಮೈಕ್ರಾನ್ ದಪ್ಪದ ಹೆಚ್ಡಿಪಿಯಿ ಜಿಯೊ ಮೆಂಬ್ರೇನ್ ಬಳಸಲಾಗಿದೆ. ಒಟ್ಟು ಬಳಸಿರುವ ಪ್ಲಾಸ್ಟಿಕ್ ೧೦೫೦ ಕೆಜಿ. ತುದಿ ಸೇರಿಸಲು ಬಿಸಿ ಬಳಸಿ ವೆಲ್ಡ್ ಮಾಡಲಾಗಿದೆ. ೨೨೦ ಮೀಟರ್ ಸೀಲ್ ಮಾಡಿದ ಉದ್ದ.
  • ಹೊಂಡದ ಸುತ್ತ ಮುಂಜಾಗರೂಕತೆಗಾಗಿ ಬೇಲಿ ಹಾಕಲಾಗಿದೆ. ೩೫ ಮಿ.ಮೀ. ೩೫ ಮಿ.ಮೀ. ೫ ಮಿ.ಮೀ. ಕಬ್ಬಿಣದ ಎಲ್ ಆಂಗಲ್ ಹಾಳೆ ೮ ಗೇಜ್ನ ಜಿಪಿ ವೈರ್ ಮೆಶ್ ಬಳಸಲಾಗಿದೆ.
  • ಆವಿ ನಷ್ಟ ನಿತ್ಯ ೨೪೦೦ ಲೀಟರ್ನಷ್ಟಿರುವುದನ್ನು ತಪ್ಪಿಸಲು ೧೦ ಮತ್ತು ೧೨ ಗೇಜ್ನ ತಂತಿ ಕಟ್ಟಿ ಅದರ ಮೇಲೆ ವೀಡ್ ಮ್ಯಾಟ್ ಹಾಕಲಾಗಿದೆ.
  • ೬ ಮತ್ತು ೮ ಇಂಚಿನ ಹರಿಗೊಳವೆಗಳಿಂದ ನೀರು ಬರುವುದರಿಂದ ಸಿಲ್ಟ್ ಟ್ರ್ಯಾಪ್ ಅಗತ್ಯವಿಲ್ಲ.
  • ಅಬ್ಬಾ ಇದೊಂದು ಅದ್ಭುತ ಪ್ರಯೋಗ ಈ ಪ್ರಾಯೋಜನೆಯಲ್ಲಿ ಶ್ರಮಿಸಿದ ವಿಜ್ಞಾನಿಗಳು, ಸಂಸ್ಥೆ ಹಾಗೂ ಇದನ್ನು ವಿನ್ಯಾಸ ಮಾಡಿ ಕಾರ್ಯರೂಪಕ್ಕೆ ತಂದ ಶಂಕರ ಹೆಬ್ಬಾರ್ ಎಲ್ಲರೂ ಅಭಿನಂದನಾರ್ಹರು. ಇಂತಹ ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳು ರೈತರಿಗೆ ದಾರಿ ದೀಪಗಳಾಗಲಿವೆ.