ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೭

ಉಸುಕು ಹೊದಿಕೆ: ವಾತಾವರಣ ಜಾಣ್ಮೆಯ ತಂತ್ರಜ್ಞಾನ

image_
ಬಿ. ಎಮ್. ಚಿತ್ತಾಪೂರ
9448821755
1

ಬದಲಾಗುತ್ತಿರುವ ವಾತಾವರಣ ದಿಂದಾಗಿ ಬರ, ಅಕಾಲಿಕ ಮಳೆ ಅಥವಾ ಅತಿವೃಷ್ಟಿ ಮತ್ತು ವಾತಾವರಣದಲ್ಲಿನ ವೈಪರಿತ್ಯದಿಂದಾಗಿ ಕೃಷಿ ಆಯ ತಪ್ಪತೊಡಗಿದೆ. ಕೃಷಿಕ ದುಗುಡದಿಂದಾಗಿ ಅಧೀರನಾಗುತ್ತಿದ್ದಾನೆ. ಹೊಸ ತಳಿಗಳನ್ನು ಮತ್ತು ಸೂಕ್ತ ತಂತ್ರಜ್ಞಾನಗಳನ್ನು ಕೃಷಿ ವಿಶ್ವವಿದ್ಯಾಲಯಗಳು ಬಿಡುಗಡೆ ಮಾಡುತ್ತಿರಬಹುದು ಮತ್ತು ಸರಕಾರ ಹೊಸ ಹೊಸ ಯೋಜನೆಗಳನ್ನು ಹಮ್ಮಿಕೊಂಡು ಅನುಕೂಲಕಾರಿ ರಿಯಾಯತಿಗಳನ್ನು ಘೋಷಿಸುತ್ತಿರಬಹುದು. ಆದರೂ ಉತ್ತಮ ಮಳೆಯಾದರೆ ತಾನೇ ಎಲ್ಲವೂ ಸೌಖ್ಯವೂ ಮತ್ತು ಫಲಪ್ರದವೂ ಆಗಿರಲು ಸಾಧ್ಯ. ಮಳೆಯ ವೈಪರಿತ್ಯಕ್ಕೆ ಮತ್ತು ಭೂಮಿಯ ಗುಣಕ್ಕೆ ಹೊಂದಿಕೊಳ್ಳುವಂತಹ ಸ್ಥಳೀಯ ತಂತ್ರಜ್ಞಾನವೊಂದನ್ನು ಗದಗ- ಕೊಪ್ಪಳ ಭಾಗದ ರೈತರು ದಶಕಗಳ ಹಿಂದೆಯೆ ಆವಿಷ್ಕರಿಸಿದ್ದಾರೆ.

ಈ ಭಾಗದಲ್ಲಿ ಸಾಮಾನ್ಯವಾಗಿ ಕಂಡು ಬರುವ ಕಪ್ಪಗಿನ (ಎರೆ) ಕರ್ಲು ಮಣ್ಣು ಹೆಚ್ಚಿನ ಮಟ್ಟದಲ್ಲಿ ತೇವಾಂಶವನ್ನು ಹಿಡಿದಿಟ್ಟುಕೊಳ್ಳಬಹುದಾಗಿದ್ದರೂ ಮಣ್ಣಿನಲ್ಲಿಯ ಹೆಚ್ಚಿನ ಪ್ರಮಾಣದ ಸೋಡಿಯಂ ಅಂಶದಿಂದಾಗಿ ಮಳೆಯ ಮೊದಲ ಹನಿಗಳಿಂದಲೇ ಮೇಲ್ಮಣ್ಣು ಕರಗಿ ಕೆನೆಯಂತೆ ಬೆಸೆದು ಮಳೆಯ ನೀರು ಭೂಮಿಯಲ್ಲಿ ಮಳೆಗನುಗುಣವಾಗಿ ತೀವ್ರವಾಗಿ ಇಳಿ(ಇಂಗುವುದು)ಯುವುದಿಲ್ಲ. ಹೀಗಾಗಿ ಆರಂಭದಲ್ಲಿ ಭೂತಳ ಹಸಿಯಾಗದೆ ಆದ ಹೆಚ್ಚಿನ ಮಳೆಯ ನೀರೆಲ್ಲ ಮೇಲ್ಮೈಮೇಲೆ ಹರಿದು ಹೋಗಿ ಪೋಲಾಗುತ್ತದೆ. ಅನೇಕ ಬಾರಿ ಹಾಕಿದ ಒಡ್ಡುಗಳು ಒಡೆದು ಹೋಗುವುದುಂಟು. ಈ ತೊಂದರೆಯ ನಿವಾರಣೆಗೆ ರೈತರು ತಮ್ಮದೇ ಜ್ಞಾನ ಬಳಸುತ್ತಿದ್ದಾರೆ. ಇದೊಂದು ಪರಿಣಾಮಕಾರಿ ಯಾದ ತಂತ್ರಜ್ಞಾನ. ಭೂಮಿಯ ಮೇಲೆ ಹಳ್ಳದ ದಪ್ಪ ಬಿಳಿ ಉಸುಕ(ಸುಣ್ಣದ ಹರಳು calcium nodules/cankers)ನ್ನು ಹೊದಿಕೆಯಂತೆ (mulch) ಹರಡುವುದು. ಕಡಿಮೆಯೆಂದರೂ ಎಕರೆಯೊಂದಕ್ಕೆ ೧೨೫-೧೩೦ ಅಥವಾ ಹೆಕ್ಟೇರಿಗೆ ೩೦೦ ಟ್ರ್ಯಾಕ್ಟರ್ (ಲೋಡ್) ನಷ್ಟು ಉಸುಕನ ಭೂಮಿಯ ಮೇಲೆ ಆರರಿಂದ ಒಂಬತ್ತು ಅಂಗುಲ ದಪ್ಪನಾಗಿ ಹರಡಬೇಕು. ಗಮನಿಸಬೇಕಾದ ಅಂಶ ಹೀಗೆ ಬಳಸುವ ಉಸುಕು ದಪ್ಪನಾಗಿರಬೇಕು. ಇಲ್ಲದಿದ್ದರೆ ಬೇಸಿಗೆಯಲ್ಲಿ ತೇವಾಂಶ ಆರಿ ಭೂಮಿ ಲಂಬವಾಗಿ ಸೀಳುವಾಗ (ಎರಕಲು ಬೀಡು) ಭೂಮಿಯ ಮೇಲೆ ಹರಡಿದ ಉಸುಕು ಭೂಮಿಯಲ್ಲಿ ಸೇರುವುದು ತತ್ಪರಿಣಾಮವಾಗಿ ಭೂಮಿ ಇನ್ನಷ್ಟು ಗಟ್ಟಿಯಾಗಿ ಬೆಳೆ ಸಾಗುವಳಿಯಲ್ಲಿ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ.

ಹೀಗೆ ಹರಡಿದ ದಪ್ಪನೆಯ ಉಸುಕಿನ ಹೊದಿಕೆ ಬಿದ್ದ ಮಳೆಯನ್ನು ಹರಿಯಬಿಡದೆ (ಸ್ಪಂಜಿನಂತೆ) ಹಿಡಿದಿಟ್ಟುಕೊಂಡು ನಿಧಾನವಾಗಿ ಭೂಮಿಯಲ್ಲಿ ಇಳಿಯುವಂತೆ ಮಾಡುತ್ತದೆ ಮತ್ತು ಆ ಪ್ರದೇಶದಲ್ಲಿ ಬಿದ್ದ ಮಳೆಯ ಪ್ರತಿ ಹನಿಯೂ ಭೂಮಿಯಲ್ಲಿ ಇಂಗುವಂತಾಗುತ್ತದೆ. ಈ ಕಾರಣದಿಂದಾಗಿ ಹೀಗೆ ಒಂದೆರಡು ಮಳೆಗಳಿಂದ ಹಿಂಗಾರಿನಲ್ಲಾಗಲಿ ಮುಂಗಾರಿನಲ್ಲಾಗಲಿ ಬೆಳೆ ಬೆಳೆದು ಒಳ್ಳೆಯ ಇಳುವರಿ ಪಡೆಯಬಹುದಾಗಿದೆ. ಉತ್ತರದ ಒಣ ಪ್ರದೇಶದಲ್ಲಿ ಸಾಮಾನ್ಯವಾಗಿ ಎರೆ ಭೂಮಿಯಲ್ಲಿ ಒಂದೇ ಬೆಳೆ ತೆಗೆಯುವುದು ರೂಢಿಯಲ್ಲಿದ್ದರೂ ಉತ್ತಮ ಮಳೆ ಹಂಚಿಕೆಯಿಂದಲೆ ಸರದಿಯಲ್ಲಿ ಎರಡು ಬೆಳೆಗಳನ್ನು ಈ ರೈತರು ಬೆಳೆಯುತ್ತಿದ್ದಾರೆ. ಮುಂಗಾರಿನಲ್ಲಿ ಹೆಸರು, ಶೇಂಗಾ, ಸೂರ್ಯಕಾಂತಿ ಇತ್ಯಾದಿಗಳನ್ನೂ ಮತ್ತು ಹಿಂಗಾರಿನಲ್ಲಿ ಬಿಳಿಜೋಳ, ಕಡಲೆ, ಕೊತಂಬರಿ ಇತ್ಯಾದಿಗಳನ್ನೂ ಬೆಳೆಯುತ್ತಾರೆ. ಈ ವರ್ಷ ಹೆಸರು ಮತ್ತು ತೊಗರಿ ಅಂತರಬೆಳೆ ಬೇಸಾಯವೂ ಕಂಡುಬಂದಿದೆ. ಮಳೆಯಾಗದೆ ಬರವೆಂದು ಘೋಷಿಸಿದ ಪ್ರದೇಶಗಳಲ್ಲಿ ಉಳುಮೆ ಮಾಡದೆ ಅಥವಾ ಯಾವುದೇ ಬೀಜ ಬಿತ್ತನೆ ಮಾಡದೆ ಖಾಲಿ ಎರೆ ಜಮೀನುಗಳ ಮಧ್ಯ ಉಸುಕು ಹೊದಿಕೆಯ ಜಮೀನುಗಳಲ್ಲಿ ಸಾಧಾರಣ ಮಳೆಯಿಂದಲೇ ಒಂದೆರಡು ಚೀಲ ಜೋಳ ಮತ್ತು ಜಾನುವಾರುಗಳಿಗೆ ಮೇವನ್ನು ಈ ಕ್ರಮವನ್ನು ಅನುಸರಿಸಿದ ರೈತರು ಪಡೆದದ್ದು ನಿಜಕ್ಕೂ ವಿಸ್ಮಯವೇ ಸರಿ.

ಉಸುಕು ಹೊದಿಸಿದ ಜಮೀನುಗಳಲ್ಲಿ ನೇಗಿಲು ಉಳುಮೆಯ ಅವಶ್ಯಕತೆಯಿಲ್ಲ. ಕೇವಲ ಕುಂಟೆಯಿಂದ ಹರಗಿ ಉಸುಕು ಹಸಿಯಿರುವಾಗ ಬೀಜ ಬಿತ್ತನೆ ಮಾಡಬೇಕು. ನಂತರದಲ್ಲಿ ಅಂತರ ಬೇಸಾಯ (ಎಡೆ ಕುಂಟೆ ಹೊಡೆದರಾಯಿತು) ಮಾಡಬೇಕು. ಹೀಗಾಗಿ ಇದೊಂದು ಶೂನ್ಯ ಉಳುಮೆ (zero tillage) ಬೇಸಾಯ ಕ್ರಮ. ಉಸುಕು ಖರ್ಚು ಬಿಟ್ಟು ಇನ್ನಿತರ ಸಾಗುವಳಿ ಖರ್ಚಿಲ್ಲ. ಈ ಪದ್ಧತಿಯಲ್ಲಿ ಕಳೆಯ ಬಾಧೆಯೂ ಕಡಿಮೆ. ಪ್ರತಿ ವರ್ಷ ಬಿತ್ತನೆಯದೊಂದೆ ಕೆಲಸ. ಸುಮಾರು ಹತ್ತು ಹನ್ನೆರಡು ವರ್ಷ ಯಾವ ಚಿಂತೆಯಿಲ್ಲವಂತೆ. ಆದರೂ ನಿರಾಸಕ್ತ ಉಸ್ತುವಾರಿಯಲ್ಲಿ ಕರಿಕೆ ಹರಡಿದ್ದೂ ಕಂಡುಬಂದಿದೆ. ಕರಿಕೆಯೇನಾದರೂ ಬಂದರೆ ನಿಯಂತ್ರಣ ಕಷ್ಟ ಏಕೆಂದರೆ ಕರಿಕೆ ಬೇರನ್ನು ಅಗೆದು ತೆಗೆಯುವುದು ದುಸ್ತರ. ಕೇವಲ ರಾಸಾಯನಿಕ ಕಳೆನಾಶಕಗಳ ಮೊರೆ ಹೋಗಬೇಕಾಗುತ್ತದೆ.ಎಲ್ಲವೂ ಚೆನ್ನಾಗಿದೆಯೆಂದೇನಲ್ಲ. ಅತೀ ಮಳೆಯಾದಾಗ ಭೂಮಿಯ ಮೇಲೆ (ಉಸುಕಿನ ಹೊದಿಕೆಯಲ್ಲಿ) ನೀರು ನಿಂತು ಬೆಳೆ ಹಳದಿಯಾಗಬಹುದು (ಗಾಳಿಯಾಡದ್ದರಿಂದ) ಮತ್ತು ಹೀಗೆ ಹರಡಿದ ಉಸುಕು ಸುಣ್ಣದಿಂದ ಕೂಡಿರುವುದರಿಂದ ಹೆಸರು, ಶೇಂಗಾದಂತಹ ಬೆಳೆಯಲ್ಲಿ ಕಬ್ಬಿಣ ಪೋಷಕಾಂಶದ ಕೊರತೆ ಎಲೆ (intervenal chmorosis) ಹಳದಿಯಾಗುವಿಕೆ (lime induced iron chlorosis ಕಂಡುಬರಬಹುದು. ಇಂತಹ ಸಂದರ್ಭಗಳಲ್ಲಿ ಬೆಳೆಗೆ ಕಬ್ಬಿಣದ ಸಲ್ಫೇಟ್ ದ್ರಾವಣವನ್ನು (ಶೇ. ೦.೫) ಸಿಂಪರಣೆ ಮಾಡಬೇಕಾಗುತ್ತದೆ. ಸಣ್ಣ ಗಾತ್ರದ ಉಸುಕನ್ನು ಬಳಸಿದರೆ ಭೂಮಿ ಗಟ್ಟಿಯಾಗಿ ಬೆಳೆ ಸರಿಯಾಗಿ ಬರದಿರಬಹುದು ಆದ್ದರಿಂದ ಎಚ್ಚರವಹಿಸಬೇಕು. ಒಂದು ವೇಳೆ ಭೂಮಿ ಬಿಗಿಯಾದಂತೆ ಕಂಡುಬಂದಲ್ಲಿ ಭೂಮಿಯ ಮೇಲೆ ಹರಡಿದ ಉಸುಕನ್ನು ಬಳಿದು ತೆಗೆದು ಸಾಗುವಳಿ ಮಾಡಬೇಕಾಗುತ್ತದೆಂದು ರೈತರ ಅಭಿಪ್ರಾಯ. ಬಹುಶಃ ಇದೇ ಕಾರಣಕ್ಕಾಗಿಯೋ, ಒಮ್ಮೆ ಮಾಡಬೇಕಾದ ಹೆಚ್ಚಿನ ಖರ್ಚಿನಿಂದಾಗಿಯೊ ಅಥವಾ ಕಾಣದ ಸಮಸ್ಯೆಯ ಊಹೆಯಿಂದಾಗಿಯೊ ತಿಳಿಯದು ಇದೊಂದು ಒಳ್ಳೆಯ ಕ್ರಮವಾದರೂ ರೈತರು ತಮ್ಮ ಒಟ್ಟು ಜಮೀನಿನಲ್ಲಿ ಈ ಕ್ರಮವನ್ನು ಅನುಸರಿಸದೆ ಕೇವಲ ಒಂದೆರಡು ಎಕರೆ ಪ್ರದೇಶದಲ್ಲಿ ಮಾತ್ರ ಅಳವಡಿಸಿಕೊಂಡಿರುವುದು ಕಂಡುಬರುತ್ತದೆ.

ವಿಜಯಪುರದ ಒಣ ಬೇಸಾಯ ಸಂಶೋಧನಾ ಸಂಸ್ಥೆ ಮತ್ತು ಧಾರವಾಡದ ಕೃಷಿ ಮಹಾವಿದ್ಯಾಲಯದಲ್ಲಿ ಈ ಕುರಿತು ಸಂಶೋಧನೆಗಳನ್ನು ಕೈಗೊಂಡಿದ್ದು ಇದೊಂದು ಪರಿಣಾಮಕಾರಿಯಾದ ತಂತ್ರಜ್ಞಾನವೆಂದು ದೃಢಪಡಿಸಲಾಗಿದೆ. ಅಲ್ಲದೆ ಹಿಡುವಳಿಯ ಪ್ರಮಾಣ ಜಾಸ್ತಿಯಾಗಿದ್ದು ಅಥವಾ ಉಸುಕಿನ ಲಭ್ಯತೆ ಕಡಿಮೆಯಿದ್ದಲ್ಲಿ ನಿಗದಿತ ಸಾಲು ಹರಿ (seಣ ಜಿuಡಿಡಿoತಿ) ಯಲ್ಲಿ ಮಾತ್ರವೇ ಉಸುಕು ಹಾಕಿ ಆ ಸಾಲಿನಲ್ಲೆ ಸಾವಯವ ಗೊಬ್ಬರ ಹಾಕಿ ಬೀಜ ಬಿತ್ತನೆ ಮಾಡಿ ಎರಡು ಬೆಳೆ ತೆಗೆಯಲೂ ಸಾಧ್ಯವೆಂದು ತೋರಿಸಿಕೊಟ್ಟಿದ್ದಾರೆ. ಹೀಗೆ ಉತ್ತರದ ಒಣ ಬೇಸಾಯ ಪ್ರದೇಶದ ಕರ್ಲು ಕಪ್ಪು ಆಳದ ಮಣ್ಣಿಗಾಗಿ ರೈತರು ಆವಿಷ್ಕರಿಸಿದ ಹಳ್ಳದ ದಪ್ಪ ಉಸುಕಿನ ಹೊದಿಕೆ ಹವಾಮಾನ ಬದಲಾವಣೆಗೂ (ವ್ಯತಿರಿಕ್ತ ಮಳೆ) ಮತ್ತು ಮಣ್ಣಿನ ಗುಣಕ್ಕೂ ಹೊಂದಿಕೆಯಾಗುವ ಜಾಣ್ಮೆಯ ಸ್ಥಳೀಯ ತಂತ್ರಜ್ಞಾನವೆಂದರೆ ತಪ್ಪಾಗಲಾರದು.