ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೭

ಚಿಂತನೆ

ಮೋಡ ಬಿತ್ತನೆ ಸಾಧಕ ಬಾಧಕಗಳು

image_
ಡಾ.ಎ.ಎಸ್.ಕುಮಾರ ಸ್ವಾಮಿ
9448943990

ಭಾರತದ ಕೃಷಿ, ಕೃಷಿಯಾಧಾರಿತ ಕೈಗಾರಿಕೆಗಳು ಮತ್ತು ಕೃಷಿಯಾಧಾರಿತ ವಾಣಿಜ್ಯಗಳು ಮುಂಗಾರು/ಹಿಂಗಾರು ಮಳೆಗಳ ಮೇಲೆ ಅವಲಂಬಿತವಾಗಿರುವುದು ಸರ್ವವಿಧಿತ. ಆದರೆ, ಭಾರತದ ಮಾನ್ಸೂನ್ ಮಳೆಗಳು ಅನಿಶ್ಚಯತೆಗೆ ಹೆಸರಾಗಿವೆ. ಜಗತ್ತಿನ ಹಲವಾರು ಪ್ರದೇಶಗಳಲ್ಲಿ ಆಗುವ ಸುಮಾರು ಹದಿನಾರು ಹವಾಮಾನ ಪ್ರಕ್ರಿಯೆಗಳನ್ನು ಅಭ್ಯಸಿಸಿ ಮಾನ್ಸೂನ್ ಬಗ್ಗೆ ಮುನ್ಸೂಚನೆ ಪಡೆಯಲು ಪ್ರಯತ್ನಿಸುತ್ತಾರಾದರೂ ಸಹ ಸಂಪೂರ್ಣ ಯಶಸ್ವಿಯಾಗಿಲ್ಲ. ಭಾರತದ ಮಾನ್ಸೂನ್ ಮಳೆಗಳು ಅತಿ ಪ್ರಮುಖವಾಗಿ ದಕ್ಷಿಣ ಗೋಳಾರ್ಧದ ಪೆಸೆಫಿಕ್ ಸಾಗರದಿಂದ ಭೂಮಧ್ಯಕ್ಕೆ ನಂತರ ಪಶ್ಚಿಮಕ್ಕೆ ಹರಿಯುವ ಬಿಸಿ (ಸಮುದ್ರದ ಮೇಲ್ಮೈನಲ್ಲಿ ೨೮೦ಸೆ. ಗಿಂತ ಅಧಿಕ) ನೀರಿನ ಹರಿವು (ಹಾಟ್ ವಾಟರ್ ಕರೆಂಟ್) ಬೀರುವ ಪರಿಣಾಮದ ಮೇಲೆ ಅವಲಂಬಿತವಾಗಿದೆ. ಸಾಮಾನ್ಯ ವರ್ಷಗಳಲ್ಲಿ ಜನವರಿಯಿಂದ ಏಪ್ರಿಲ್ವರೆಗೆ ಪೂರ್ವದಿಂದ ಪಶ್ಚಿಮಕ್ಕೆ ಹರಿಯುವ ಬಿಸಿನೀರಿನ ಹರಿವಿನಿಂದ ಮಾನ್ಸೂನ್ ಮಾರುತಗಳು ರೂಪುಗೊಂಡು ಭಾರತ ಉಪಖಂಡದ ಅನೇಕ ಪ್ರದೇಶಗಳಲ್ಲಿ ಉತ್ತಮ ಮಳೆ ಸುರಿಸುತ್ತವೆ. ಆಗ ಪೆರು ದೇಶದ ಸಮುದ್ರ ಭಾಗಗಳಲ್ಲಿ ತಂಪು ನೀರಿನ ಹರಿವು ಇರುತ್ತದೆ. ಇದನ್ನು ಪೆರು ದೇಶದಲ್ಲಿ ’ಲಾ-ನಿನೋ’ (ಬಾಲಕಿ) ಎನ್ನುತ್ತಾರೆ. ಆದರೆ ಕೆಲವು ವರ್ಷಗಳಲ್ಲಿ ಭೂಮಧ್ಯ ಪ್ರದೇಶದಲ್ಲಿ ಈ ಬಿಸಿನೀರಿನ ಹರಿವು ಪಶ್ಚಿಮಕ್ಕೆ ಬದಲಾಗಿ ಪೂರ್ವಕ್ಕೆ ಹರಿದಾಗ, ಇಲ್ಲಿ ಮಾನ್ಸೂನ್ ದುರ್ಬಲಗೊಂಡು ಪೆರು ದೇಶದ ಸಮುದ್ರದಲ್ಲಿ ಬಿಸಿ ನೀರಿನ ಹರಿವು ಹೆಚ್ಚಾಗಿ ಅಮೆರಿಕ ಭೂಖಂಡಗಳಲ್ಲಿ ಅಧಿಕ ಮಳೆ ಸುರಿಸುತ್ತದೆ. ಇದನ್ನು ಪೆರು ದೇಶದಲ್ಲಿ ಎಲ್-ನಿನೋ(ಬಾಲಕ) ಎನ್ನುತ್ತಾರೆ.

ಎಲ್-ನಿನೋ ಮತ್ತು ಲಾ-ನಿನೋಗಳು ಸಾಧಾರಣ, ಮಧ್ಯಮ, ತೀವ್ರ, ಅತಿ ತೀವ್ರ ಹೀಗೆ ವಿವಿಧ ಮಟ್ಟಗಳಲ್ಲಿ ಕಂಡುಬರುತ್ತವೆ. ಕಳೆದ ೬-೭ ದಶಕಗಳಿಂದ ಜಾಗತಿಕ ಮಟ್ಟದಲ್ಲಿ ಲಭ್ಯವಿರುವ ಈ ಪ್ರಕ್ರಿಯೆಗಳ ದಾಖಲೆಗಳನ್ನು ಪರಿಶೀಲಿಸಿದರೆ, ಇವುಗಳಲ್ಲಿ ಯಾವುದೇ ರೀತಿಯ ಒಂದು ನಿಶ್ಚಿತ ಆವರ್ತನ ಕಂಡುಬರುವುದಿಲ್ಲ. ಆದರೂ ಪ್ರತಿ ಹದಿನೈದು ವರ್ಷಗಳಲ್ಲಿ ಹತ್ತು ಸಾಮಾನ್ಯ ವರ್ಷಗಳನ್ನೂ, ಮೂರು ತೀವ್ರ ಎಲ್-ನಿನೋ ಪರಿಣಾಮವುಳ್ಳ ವರ್ಷಗಳನ್ನೂ, ಎರಡು ಲಾ-ನಿನೋ ಪರಿಣಾಮವಿರುವ ವರ್ಷಗಳನ್ನೂ ಗುರುತಿಸಲು ಸಾಧ್ಯವಾಗುತ್ತದೆ. ಭಾರತ ಉಪಖಂಡದ ಮಾನ್ಸೂನ್ ಮೇಲಿನ ಒಟ್ಟಾರೆ ಪರಿಣಾಮವೂ ಸಹ ಇವುಗಳ ತೀವ್ರತೆಗನುಗುಣ ವಾಗಿರುತ್ತದೆಯಾದರೂ ಒಂದು ನಿರ್ದಿಷ್ಟ ಸ್ಥಳದಲ್ಲಿನ ಮಳೆಯ ಮೇಲೆ ಇವುಗಳು ಬೀರುವ ಪರಿಣಾಮವನ್ನು ಇನ್ನೂ ಸ್ಪಷ್ಟವಾಗಿ ಅರ್ಥ ಮಾಡಿಕೊಂಡಿಲ್ಲ. ನಮ್ಮ ದೇಶದ ಹೆಚ್ಚಿನ ಭಾಗವು ನೈರುತ್ಯ ಮಾರುತಗಳಿಂದ (ಜೂನ್ನಿಂದ ಸೆಪ್ಟೆಂಬರ್) ಹಾಗೂ ತಕ್ಕಮಟ್ಟಿಗೆ ಈಶಾನ್ಯ ಮಾರುತಗಳಿಂದ (ಅಕ್ಟೋಬರ್-ನವೆಂಬರ್) ಬರುವ ಮಳೆಯ ಮೇಲೆ ಅವಲಂಬಿಸಿದೆ. ಈ ಮಾನ್ಸೂನ್ ಮಾರುತಗಳು ಸಮುದ್ರದ ಮೇಲಿನಿಂದ ದಟ್ಟವಾದ ನೀರಾವಿಭರಿತ ಮೋಡಗಳನ್ನು ಹೊತ್ತು ತರುತ್ತವೆ. ಭಾರತದ ವಾಯುವ್ಯ ಭಾಗದಲ್ಲಿ ಬಿಸಿಗಾಳಿಯಿಂದ ಉಂಟಾಗುವ ವಾಯುಭಾರ ಕುಸಿತದ ಕುಳಿಯ ರಚನೆಯು (ಲೋ ಡಿಪ್ರೆಶನ್ ಟ್ರಫ್) ಮಾನ್ಸೂನ್ ಮಾರುತಗಳು ಭಾರತದಾದ್ಯಂತ ಚಲಿಸಿ ಎಲ್ಲಾ ಕಡೆಗಳಲ್ಲಿಯೂ ಮಳೆಯನ್ನು ಸುರಿಸುವಲ್ಲಿ ಸಹಕಾರಿಯಾಗಿದೆ. ಮಾನ್ಸೂನ್ ಮಾರುತಗಳು ದೇಶದ ಎಲ್ಲಾ ಭಾಗಗಳನ್ನೂ ಅವರಿಸುವಂತೆ ಮಾಡುವಲ್ಲಿ ಹಿಮಾಲಯ ಪರ್ವತ ಶ್ರೇಣಿಯ ಪಾತ್ರವೂ ಮಹತ್ವದ್ದಾಗಿದೆ. ಎಲ್-ನಿನೋ ಪರಿಣಾಮದಿಂದ ಮಾನ್ಸೂನ್ ದುರ್ಬಲವಾದಾಗ ಮಾನ್ಸೂನ್ನ ಆರಂಭವು ತಡವಾಗುವುದು; ಸಮುದ್ರದ ಮೇಲಿನಿಂದ ಬೀಸುವ ಗಾಳಿಯು ತೇವರಹಿತವಾಗಿ ದಟ್ಟ ಮೋಡಗಳ ರಚನೆಯಾಗುವುದಿಲ್ಲ, ಬರುವ ಅಲ್ಪ ಸ್ವಲ್ಪ ಮೋಡಗಳು ಘಟ್ಟ ಪ್ರದೇಶಗಳಲ್ಲಿ ಮಳೆಯನ್ನು ಸುರಿಸಿ ಬಯಲು ಪ್ರದೇಶಗಳಲ್ಲಿ ಮೋಡಗಳೇ ಇರುವುದಿಲ್ಲ.

ಈ ಮಾನ್ಸೂನ್ ಮಾರುತಗಳಲ್ಲದೇ, ಬೇಸಿಗೆಯಲ್ಲಿ ಬೀಳುವ ಪೂರ್ವ-ಮುಂಗಾರು ಮಳೆಗಳು ಹಾಗೂ ನವೆಂಬರ್-ಡಿಸೆಂಬರ್ನಲ್ಲಿ ಬೀಳುವ ತಡ-ಹಿಂಗಾರು ಮಳೆಗಳು ಭೂಮಿ ತಯಾರಿಕೆಗೆ, ದೀರ್ಘಾವಧಿ ತೋಟಗಾರಿಕೆ ಬೆಳೆಗಳಿಗೆ ಹಾಗೂ ಜಲಾಶಯಗಳಿಗೆ ನೀರನ್ನೊದಗಿಸಲಿಕ್ಕೆ ಅನುಕೂಲಕರವಾಗಿವೆ. ಪೂರ್ವ-ಮುಂಗಾರು ಮಳೆಗಳು ಸಾಮಾನ್ಯವಾಗಿ ಅಲ್ಲಲ್ಲಿ ಸ್ಥಳೀಯವಾಗಿ ರೂಪುಗೊಳ್ಳುವ ದಟ್ಟ ಮೋಡಗಳಿಂದ ಗುಡುಗು ಸಿಡಿಲು ಸಮೇತ ಬರುತ್ತವೆ. ಇವು ಅನಿಶ್ಚಿತ, ಯಾವುದೇ ಮುನ್ಸೂಚನೆ ಇರುವುದಿಲ್ಲ ಮತ್ತು ಒಂದೆರಡು ಘಂಟೆಗಳ ಅಲ್ಪಾವಧಿಯ ಆದರೆ ರಭಸದ ಮಳೆಗಳು. ತಡ-ಹಿಂಗಾರು ಮಳೆಗಳು ಸಾಮಾನ್ಯವಾಗಿ ಆ ಸಮಯದಲ್ಲಿ ಸಮುದ್ರಗಳಲ್ಲಿ ಕಂಡುಬರುವ ವಾಯುಭಾರ ಕುಸಿತ ಮತ್ತು ಚಂಡಮಾರುತಗಳಿಂದ ಉಂಟಾಗುತ್ತವೆ. ಇವುಗಳ ಬರುವಿಕೆಯನ್ನು ಒಂದೆರಡು ದಿನಗಳ ಮುಂಚೆ ತಿಳಿಯಬಹುದು ಹಾಗೂ ಇವುಗಳು ಸಾಮಾನ್ಯವಾಗಿ ಎರಡರಿಂದ ಮೂರು ದಿನ ಚುರುಕಾಗಿರುತ್ತವೆ. ಕಳೆದ ಕೆಲವು ವರ್ಷಗಳಲ್ಲಿ ಆದ ಭೀಕರ ಬರಗಾಲದ ಅನುಭವವು ಮಾನ್ಸೂನ್ ದುರ್ಬಲವಾಗಿರುವ ವರ್ಷಗಳಲ್ಲಿ ಮೋಡಬಿತ್ತನೆಯ ಮೂಲಕ ಕೃತಕ ಮಳೆ ತರಿಸುವ ಬಗ್ಗೆ ಚರ್ಚೆಯನ್ನು ಹುಟ್ಟು ಹಾಕಿದೆ. ಅದರ ಸಾಧ್ಯತೆಗಳನ್ನು ಪರಿಶೀಲಿಸುವ ಮೊದಲು ಮೋಡಗಳಲ್ಲಿ ಮಳೆಯು ಬೀಜಗಟ್ಟುವ ಪ್ರಕ್ರಿಯೆಯನ್ನೂ, ಕೃತಕ ಮೋಡ ಬಿತ್ತನೆಯ ಹಿಂದಿರುವ ವೈಜ್ಞಾನಿಕ ತತ್ವಗಳನ್ನೂ ಅರಿತುಕೊಳ್ಳೋಣ.

ಮೋಡಗಳಲ್ಲಿ ಮಳೆಯು ಬೀಜಗಟ್ಟುವ ಪ್ರಕ್ರಿಯೆ: ಕೆಳಮಟ್ಟದಲ್ಲಿರುವ ತೇವಭರಿತ ಮೋಡಗಳು ಅಧಿಕ ತಾಪಮಾನದಿಂದ ವಿಕಸನಗೊಂಡು ಮೇಲಕ್ಕೇರುತ್ತಾ, ಇನ್ನಷ್ಟು ವಿಕಸನಗೊಂಡು ತಮ್ಮ ತಾಪಮಾನವನ್ನು ಕಳೆದುಕೊಳ್ಳುತ್ತವೆ. ಆಗ ಅದರಲ್ಲಿರುವ ತೇವಾಂಶವು ಸಂತೃಪ್ತ ಮಟ್ಟವನ್ನು ದಾಟುವುದರಿಂದ ಅತಿ ಸೂಕ್ಷ್ಮ ನೀರಿನ ಕಣಗಳಾಗಿ ದ್ರವೀಕರಣಗೊಳ್ಳುತ್ತದೆ (ಕಂಡೆನ್ಸೇಶನ್). ಈ ಹಂತದಲ್ಲಿ ಉಷ್ಣವಲಯದ ಮೋಡಗಳಲ್ಲಿ ಗಾಳಿಯಲ್ಲಿರುವ ಅಸಂಖ್ಯಾತ ಧೂಳಿನ ಕಣಗಳು, ಹೊಗೆ, ಪರಾಗ, ಕೆಲವು ಉಪ್ಪಿನ ಸಣ್ಣ ಕಣಗಳು, ಮುಂತಾದ ವಸ್ತುಗಳು ನೀರಿನ ಸೂಕ್ಷ್ಮ ಹನಿಗಳನ್ನು ತಮ್ಮೆಡೆಗೆ ಆಕರ್ಷಿಸಿ ತಮ್ಮ ಸುತ್ತಲೂ ಅವುಗಳು ದಪ್ಪ ಹನಿಗಳಾಗಿ ಬೆಳೆಯುವಂತೆ ಮಾಡುತ್ತವೆ. ಈ ಕಣಗಳು ಇಲ್ಲಿ ಮಳೆಯು ಬೀಜಗಟ್ಟಲು ಅನುಕೂಲವಾಗುವ ಬೀಜಗಳಂತೆ ಸಹಕರಿಸುತ್ತವೆ. ಈ ಹನಿಗಳು ಎರಡರಿಂದ ಮೂರು ಮಿ.ಮೀ. ಗಾತ್ರಕ್ಕಿಂತ ದೊಡ್ಡದಾಗಿ ಬೆಳೆದಾಗ ಗುರುತ್ವಾಕರ್ಷಣ ಶಕ್ತಿಯ ಸೆಳೆತಕ್ಕೊಳಗಾಗಿ ಕೆಳಕ್ಕೆ ಬೀಳುತ್ತವೆ. ಸಾಮಾನ್ಯವಾಗಿ ಈ ರೀತಿಯ ಧೂಳಿನ ಕಣಗಳು ಗಾಳಿಯಲ್ಲಿ ಎಲ್ಲಾ ಕಡೆಯೂ ಕಂಡುಬರುತ್ತವೆ. ಒಂದು ವೇಳೆ ಈ ಕಣಗಳು ಇಲ್ಲದೇ ಕೇವಲ ಶುದ್ಧ ಗಾಳಿಯು ಇದ್ದರೆ, ಆಗ ಮೇಲೇರಿದ ಮೋಡಗಳು ಅತಿ ಶೀತಲಗೊಂಡು ಕೆಲವು ಮಂಜಿನ ಹರಳುಗಳ ರಚನೆಯಾಗಿ, ಅವುಗಳು ಈ ರೀತಿಯ ಬೀಜಗಳ ಕೆಲಸವನ್ನು ಮಾಡುತ್ತವೆ. ಮೋಡಗಳು ಶೀಘ್ರವಾಗಿ ಅತಿ ಶೀತಲಗೊಂಡಾಗ ಆಲಿಕಲ್ಲು ಮಳೆಯು ಬೀಳುತ್ತದೆ. ಎಲ್ಲಾ ರೀತಿಯ ಮೋಡಗಳಿಂದಲೂ ಮಳೆ ಬರುವುದಿಲ್ಲ; ದಟ್ಟವಾದ, ತೇವಭರಿತ, ಭೂಮಟ್ಟದಿಂದ ಅತಿ ಮೇಲಿನವರೆಗೂ ಎದ್ದಿರುವ ಕ್ಯುಮುಲೋ-ನಿಂಬಸ್ ರೀತಿಯ ಮೋಡಗಳು ಮಾತ್ರ ಮಳೆಯನ್ನು ಸುರಿಸುತ್ತವೆ. ಮೋಡಗಳು ಮೇಲೇರುವಂತೆ ಮಾಡುವ ಬೆಟ್ಟ ಗುಡ್ಡಗಳು, ವಾತಾವರಣವನ್ನು ತಂಪುಗೊಳಿಸುವ ಸಸ್ಯರಾಶಿ,

ವಾಯುಭಾರ ಕುಸಿತದ ಕುಳಿ (ಡಿಪ್ರೆಶನ್- ಟ್ರಫ್) ಗಳಾಗುವುದು ಮುಂತಾದವುಗಳು ಮಳೆ ಸುರಿಯುವ ಸಾಧ್ಯತೆಗಳು ಅಧಿಕವಾಗುವಂತೆ ಮಾಡುತ್ತವೆ. ಕೃತಕ ಮೋಡ ಬಿತ್ತನೆ: ದಟ್ಟ, ಕಪ್ಪು ತೇವಭರಿತ ಕ್ಯುಮುಲೋ-ನಿಂಬಸ್ ಮೋಡಗಳ ರಚನೆ ಯಾಗಿಯೂ ಸಹ ಅವುಗಳು ಮಳೆ ಸುರಿಸದೇ ಇದ್ದಾಗ ಆ ಮೋಡಗಳಲ್ಲಿ ಕೃತಕವಾಗಿ ಬೀಜಗಟ್ಟುವಂತೆ ಮಾಡಲು ನೀರಿನ ಸೂಕ್ಷ್ಮ ಹನಿಗಳನ್ನು ಆಕರ್ಷಿಸುವ ಶಕ್ತಿಯುಳ್ಳ ಕೆಲವು ರಾಸಾಯನಿಕಗಳನ್ನು ಎತ್ತರದ ಮೋಡದೊಳಗೆ ಹರಡುವುದೇ ಕೃತಕ ಮೋಡ ಬಿತ್ತನೆ. ಮೋಡ ಬಿತ್ತನೆಯ ಪ್ರಾರಂಭಿಕ ಪ್ರಯತ್ನಗಳಲ್ಲಿ ಮುಖ್ಯವಾಗಿ ಅತಿ ತಂಪಾಗಿರುವ (-೭೮೦ ಸೆ) ಘನೀಕರಿಸಿದ ಬಟಾಣಿ ಗಾತ್ರದ ಇಂಗಾಲದ ಡೈ ಆಕ್ಸೈಡ್ (ಡ್ರೈ ಐಸ್) ಗೋಲಿಗಳನ್ನು ಅತಿ ಶೀತ ಮೋಡಗಳ ಮೇಲಿನಿಂದ ಸುರಿಯುವ ಮೂಲಕ ಸಫಲವಾಗಿ ಬಳಸಲಾಯಿತು. ಆದರೆ, ಇದರ ಬಳಕೆಯಲ್ಲಿ ಕಂಡುಬಂದ ಪ್ರಮುಖ ತೊಂದರೆಯೆಂದರೆ, ಇದು ದೊಡ್ಡ ಪ್ರಮಾಣದಲ್ಲಿ ಬೇಕಾಗುತ್ತದೆ ಹಾಗೂ ಶೀತ ವಲಯಗಳಲ್ಲಿ ಮಾತ್ರ ಉತ್ತಮ ಫಲಿತಾಂಶ ನೀಡಬಲ್ಲದು. ಆದ ಕಾರಣ ಈಗ ಘನೀಕೃತ ಇಂಗಾಲದ ಡೈ ಆಕ್ಸೈಡ್ನ ಬಳಕೆ ಇಲ್ಲ. ಈಗ ಸ್ವಲ್ಪ ಪ್ರಮಾಣದಲ್ಲಿ ಬಳಸಿದರೂ ಸಹ ಮೋಡದೊಳಗೆ ಚೆನ್ನಾಗಿ ಹರಡಿಕೊಳ್ಳುವ ಗುಣವುಳ್ಳ ಸಿಲ್ವರ್ ಅಯೋಡೈಡ್ನ ಅತಿ ಸೂಕ್ಷ್ಮ ಕಣಗಳನ್ನು ಎತ್ತರದ ಮೋಡಗಳಲ್ಲಿ ಹರಡುತ್ತಾರೆ. ಇದರ ಬಳಕೆಯ ಫಲಿತಾಂಶಗಳೂ ಸಹ ಅತಿ ಶೀತ ಮೋಡಗಳಲ್ಲಿ ಉತ್ತೇಜನಕಾರಿಯಾಗಿವೆ. ಇದೇ ರೀತಿ ಒತ್ತಡದಲ್ಲಿ ತುಂಬಿದ ದ್ರವ ರೂಪದ ಪ್ರೋಪೇನ್ ಅನ್ನು ಅನಿಲ ರೂಪದಲ್ಲಿ ಬಿಡುಗಡೆಗೊಳಿಸಿ ಮೋಡದೊಳಗೆ ಚೆನ್ನಾಗಿ ಹರಡುವಂತೆ ಮಾಡಿ ಉತ್ತಮ ಫಲಿತಾಂಶಗಳನ್ನು ಪಡೆಯಲಾಗಿದೆ. ಆದರೆ, ಇವುಗಳ ಬಳಕೆಯಿಂದಾಗುವ ಪರಿಸರದ ಮೇಲಿನ ದುಷ್ಪರಿಣಾಮಗಳ ಅಧ್ಯಯನ ಇನ್ನೂ ಆಗಬೇಕಿದೆ. ಉಷ್ಣ ವಲಯದ ಪ್ರದೇಶಗಳಲ್ಲಿ ಕೆಲವು ಸಾರಿ ಎತ್ತರದಲ್ಲಿ ಅತಿ ಶೀತ ಮೋಡಗಳು ಲಭ್ಯವಿಲ್ಲದಿದ್ದಾಗ ಸುಮಾರು ಬೆಚ್ಚನೆಯ ಮೋಡಗಳಲ್ಲಿಯೂ ಸಹ ಸಾಮಾನ್ಯ ಉಪ್ಪಿನ (ಸೋಡಿಯಂ ಕ್ಲೋರೈಡ್) ಹರಳುಗಳನ್ನು ಪರಿಣಾಮಕಾರಿಯಾಗಿ ಬಳಸಬಹುದೆಂದು ಪ್ರಯೋಗಗಳಿಂದ ಕಂಡು ಬಂದಿದೆ.

ಮೋಡ ಬಿತ್ತನೆಯ ಸಾಧಕ ಬಾಧಕಗಳು:

  • ಬೇಸಿಗೆಯಲ್ಲಿ ಬರುವ ಮುಂಗಾರು ಪೂರ್ವ ಮಳೆಗಳು ಅನಿಶ್ಚಯತೆಯಿಂದ ಕೂಡಿ ಅಲ್ಪಕಾಲ ಮಾತ್ರ ಇರುವುದರಿಂದ ಈ ಸಮಯದಲ್ಲಿ ಮೋಡ ಬಿತ್ತನೆಯನ್ನು ಪೂರ್ವ ಯೋಜನೆ ಮಾಡಿ ಮಾಡುವುದು ಸಾಧ್ಯವಿಲ್ಲ.
  • ತಡ ಹಿಂಗಾರು ಮಳೆಗಳು ಸಾಮಾನ್ಯವಾಗಿ ವಾಯುಭಾರ ಕುಸಿತದಿಂದ ಉಂಟಾಗುವುದರಿಂದ ಅಲ್ಲಿ ಮೋಡಗಳ ರಚನೆಯಾದ ಮೇಲೆ ಮಳೆಯು ನಿಶ್ಚಿತವಿರುವುದರಿಂದ ಮೋಡ ಬಿತ್ತನೆಯ ಅವಶ್ಯಕತೆ ಕಂಡುಬರುವುದಿಲ್ಲ.
  • ಇನ್ನು ಸಾಮಾನ್ಯ ವರ್ಷದ ಮಾನ್ಸೂನ್ ಹಂಗಾಮಿನಲ್ಲಿ ದಟ್ಟ ಕಪ್ಪು ಮೋಡಗಳ ರಚನೆಯಾಗಿದ್ದು ಮಳೆಯನ್ನು ಸುರಿಸದೇ ಮುಂದೆ ಹೋಗುವಂತಿದ್ದಾಗ ಮೋಡ ಬಿತ್ತನೆಯು ಉಪಯುಕ್ತವಾಗಬಹುದು. ಆದರೆ, ಇದರಿಂದ ಮುಂದೆ ಇನ್ನೊಂದು ಪ್ರದೇಶದಲ್ಲಿ ಮಳೆ ಸುರಿಸಬಹುದಾದ ಮೋಡವನ್ನು ಖಾಲಿ ಮಾಡಿದಂತಾಗಿ ಪ್ರಾದೇಶಿಕ ಅಸಮತೋಲನ ಕಂಡುಬರುತ್ತದೆ. ಬೀಜಿಂಗ್ ಒಲಿಂಪಿಕ್ಸ್ ಸಮಯದಲ್ಲಿ ಪ್ರಾರಂಭದ ದಿನ ಮಳೆಯನ್ನು ತಡೆಗಟ್ಟಲು ಮಳೆಯ ದಿಕ್ಕಿನ ಹಿಂದಿನ ಪ್ರದೇಶದಲ್ಲಿಯೇ ಮೋಡ ಬಿತ್ತನೆ ಮಾಡಿ ಮಳೆ ಸುರಿಸಿ ಮೋಡಗಳನ್ನು ಖಾಲಿ ಮಾಡಿದ ಘಟನೆಯನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
  • ಎಲ್-ನಿನೋ ದುಷ್ಪರಿಣಾಮವಿರುವ ದುರ್ಬಲ ಮಾನ್ಸೂನ್ ಇದ್ದ ವರ್ಷಗಳಲ್ಲಿ ದಟ್ಟ ಕಪ್ಪು ಮೋಡಗಳೇ ಕಂಡುಬರದೇ ಇರುವುದನ್ನೂ, ಮಳೆಗಾಲದಲ್ಲಿ ಬೇಸಿಗೆಯ ರೀತಿ ಬಿಸಿಲು ಬೀಳುವುದನ್ನೂ ಗಮನಿಸಿದ್ದೇವೆ. ಇಲ್ಲಿ ಅದರ ಆಲೋಚನೆಯೂ ಸಾಧ್ಯವಿಲ್ಲ.
  • ಇನ್ನು ಜಲಾಶಯಗಳನ್ನು ತುಂಬುವ ಆಸಕ್ತಿಯಿಂದ ಜಲಾಶಯಗಳ ಜಲಾನಯನ ಪ್ರದೇಶಗಳಾದ ಮಲೆನಾಡು ಪ್ರದೇಶಗಳಲ್ಲಿ ಈ ಪ್ರಯತ್ನಗಳನ್ನು ಮಾಡುವ ಆಲೋಚನೆಯಿದೆ. ಬರಗಾಲದ ವರ್ಷಗಳಲ್ಲಿ ಅಲ್ಲಿಯಾದರೂ ಮೋಡಗಳ ರಚನೆಯು ಅನುಮಾನಕರ. ಒಂದು ವೇಳೆ ಮಾಡಿದರೆ. ಅತಿ ಸೂಕ್ಷ್ಮ ಪರಿಸರವನ್ನು ಹೊಂದಿರುವ ಪಶ್ಚಿಮ ಘಟ್ಟಗಳ ಪ್ರದೇಶಗಳಲ್ಲಿ ಇನ್ನೂ ಪರಿಸರದ ಮೇಲಿನ ದುಷ್ಪರಿಣಾಮಗಳನ್ನು ಅಭ್ಯಾಸ ಮಾಡದೇ ಇರುವ ವಿಧಾನಗಳಲ್ಲಿ ಈ ಕೆಲಸ ಮಾಡುವುದನ್ನು ಇಡೀ ವಿಶ್ವ ಸಮುದಾಯವೇ ವಿರೋಧಿಸೀತು.
  • ಮೋಡ ಬಿತ್ತನೆಯು ವೈಜ್ಞಾನಿಕವಾಗಿ ತುಂಬಾ ಉಪಯುಕ್ತ ವಿಷಯವಾದರೂ ಸಹ ಇದನ್ನು ದೊಡ್ಡ ಪ್ರಮಾಣದಲ್ಲಿ ಕ್ಷೇಮವಾಗಿ, ಲಾಭಕರವಾಗಿ ಬಳಸುವ ತಂತ್ರಜ್ಞಾನವು ಇನ್ನೂ ಅಭಿವೃದ್ಧಿ ಹಂತದಲ್ಲಿದೆ. ಅಲ್ಲಿಯವರೆಗೂ ಇದನ್ನು ಪ್ರಯೋಗಾತ್ಮಕವಾಗಿ ಸೀಮಿತ ಪ್ರದೇಶದಲ್ಲಿ ಕೈಗೊಂಡು ಪರಿಣಾಮಗಳನ್ನು ನಿಷ್ಪಕ್ಷಪಾತವಾಗಿ ದಾಖಲಿಸಿ ಅಧ್ಯಯನ ಮಾಡಬೇಕಾಗಿರುವ ಒಂದು ತಂತ್ರಜ್ಞಾನವೆನ್ನಬಹುದು. ಪ್ರಯೋಗಗಳನ್ನು ಕೈಗೊಳ್ಳಲಿ, ಈಗಲೇ ದೊಡ್ಡ ಪ್ರಮಾಣದ ಅಳವಡಿಕೆ ಬೇಡ.