ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೭

ಕೃಷಿರಂಗ

ಬಿತ್ತಿದಂತೆ ಬೆಳೆ

ಡಾ. ಮುರಳೀಧರ ಕಿರಣಕೆರೆ
9448971550

ದೃಶ್ಯ ೧ (ತಿಮ್ಮನ ಕೊಟ್ಟಿಗೆ)

ಹಿನ್ನೆಲೆ ಹಾಡು: ಅಂಬೆಗಾಲಿಕ್ಕಲಿ ಕಿಲ ಕಿಲನೆ ನಗಲಿ, ಹಸುಗಂದನ ತುಂಟಾಟ ಮನೆಯ ತುಂಬಿರಲಿ, ಚಂಗನೆ ನೆಗೆಯಲಿ ಬಾಲವೆತ್ತಿ ಓಡಲಿ, ಹಸುಗರುಗಳ ಚೆಲ್ಲಾಟ ಹಟ್ಟಿಯ ತುಂಬಿರಲಿ, ಹಾಲಿರಲಿ ಮೊಸರಿರಲಿ ಬೆಣ್ಣೆ ತುಪ್ಪಗಳಿರಲಿ, ಹಸನಾದ ಹೈನು ಮನೆಯ ತುಂಬಿರಲಿ, ತಿಂದುಂಡ ಜೀವಕ್ಕೆ ಆರೋಗ್ಯದ ಕಳೆಯಿರಲಿ, ಕರುಣೆಕಾಳಜಿಯಿರಲಿ ಪ್ರಾಣಿಗಳಲ್ಲಿ ದಯೆಯಿರಲಿ ಸಮ ಪಾಲು ಸಮ ಬಾಳು ಮಂತ್ರವೇ ಆಗಲಿ || ಕೆಂಪಿ:ಏನ್ತಂಗಿ ನಿನ್ನೆ ರಾತ್ರಿಯಿಂದ ಬಾಳಾ ಕುಣೀತಿದ್ದಿ? ಕಣ್ ಬೇರೆ ಹಿಂಗೆ ಹೊಳಿತಿದೆ. ಏನ್ವಿಷ್ಯ?

ಚಂದ್ರಿ: ಏನಿಲ್ಲ ಅಕ್ಕ. ಮನ್ಸಿಗೆ ಒಂತರಾ ಆಗಿದೆ. ಅದಕ್ಕೆ ಸ್ವಲ್ಪ ಕುಣಿಯೋಣ ಅನಿಸ್ತು.

ಕೆಂಪಿ: ಅಲ್ವೆ ತಂಗಿ, ನಾ ನಿಂಗಿಂತ ಎರಡು ವರ್ಷ ಮುಂಚೆ ಹುಟ್ದೋಳು. ನನ್ನ ಹತ್ತಿರ ವಿಷ್ಯ ಮುಚ್ಚಿಡ್ತಿಯಲ್ಲ. ನಂಗೇನು ಅಷ್ಟು ಗೊತಾಗೋಲ್ಲ ಅಂದ್ಕೊಂಡ್ಯಾ?

ಚಂದ್ರಿ: (ನಾಚಿಕೆ ತೋರುತ್ತ) ನಿಂಗೊತ್ತಿದ್ರೊ ನನ್ ಬಾಯಿ ಬಿಡಿಸೊಕ್ಕೆ ನೋಡ್ತಿಯಲ್ಲಕ್ಕ. ಬಾಳಾ ಜೋರಿದ್ದಿ ನೀನು.

ಕೆಂಪಿ:ನಂಗೊತ್ತು ಕಣೆ ನನ್ತಂಗಿ ಬೆದೆಗೆ ಬಂದ್ಯಾಳೆ ಅಂತ. ನೀನೆ ಬಜಾರಿ ತರ ಬಾಯಿ ಬಿಟ್ಟು ಹೇಳ್ತಿಯ ಅಂತ ಕಾದೆ. ಅದೋಗ್ಲಿ ಅದ್ಯಾಕೆ ಬೆಳ್ಗೆ ಹಾಲು ಕರೆಯುವಾಗ ಅಮ್ಮೊರಿಗೆ ಕತ್ತೆ ತರ ಒದ್ದಿ? ನಾವು ಸಾಧು ಪ್ರಾಣಿಗಳು ಅನಿಸಿಕೊಂಡೋರು ಸುಖಾಸುಮ್ನೆ ಒದ್ಯೋದು ತಪ್ಪಲ್ವಾ ತಂಗಿ?

ಚಂದ್ರಿ: ಏನ್ಮಾಡೋದು ಅಕ್ಕ, ನಮ್ಮನ್ನು ಹೀಗೆ ಕೊಟ್ಗೆಲಿ ಕಟ್ಟಿ ಹಾಕುವ ಮಾಲೀಕರು ನಮ್ಮ ಬೇಕು-ಬೇಡ ವಿಚಾರಿಸ್ಬೇಕು ಅಲ್ವ?

ಕೆಂಪಿ: ಹೊತ್ತಿಂದೊತ್ತಿಗೆ ಹಿಂಡಿ, ಹುಲ್ಲು, ನೀರು ಅಂತ ಕೊಡ್ತಾ ನಮ್ಮನು ಚೆನ್ನಾಗಿ ನೋಡ್ಕೋಳ್ತಾರಲ್ಲ ಯಜಮಾನ್ರು. ಏನೋ ಹೊರಗಡೆ ಮೇಯಕ್ಕೆ ಬಿಡಲ್ಲ, ಒಂತರ ಬಂಧನ ಅನ್ನೋದು ಬಿಟ್ರೆ ಮತ್ತೇನು ತೊಂದ್ರೆ ಆಗ್ತಿಲ್ವಲ್ಲ ತಂಗಿ?

ಚಂದ್ರಿ: (ಸ್ವಲ್ಪ ಸಿಟ್ಟಿನಿಂದ) ಏನಕ್ಕ ನೀನು ಗೊತ್ತಿದ್ದೂ ಗೊತ್ತಿದ್ದೂ ಹಿಂಗೆ ಹೇಳ್ತಿಯಲ್ಲ. ಬರೇ ಹೊಟ್ಟೆಗೊಂದು ಕೊಟ್ರೆ ಆಯ್ತಾ? ನಮ್ ಬಯಕೆ ಈಡೇರಿಸಬೇಕಲ್ವಾ? ನೋಡು ನಾನ ಹಡೆದು ಒಂದ್ವರ್ಷ ಆಗ್ತಾ ಬಂತು. ನಂಗೆ ಮತ್ತೆ ತಾಯಾಗ್ಬೇಕು ಅನಿಸ್ತಿದೆ. ನನ್ಕಂದ ಪಚ ಪಚಾಂತ ಹಾಲು ಕುಡಿಬೇಕು, ಅದರ ಮೈಯೆಲ್ಲಾ ಪ್ರೀತಿಯಿಂದ ನೆಕ್ಕಿ ಆನಂದ ಅನುಭವಿಸಬೇಕು. ತಂಬಿಗೆ ಗಟ್ಲೆ ನನ್ನ ಹಾಲು ನೋಡಿ ಅಮ್ಮೋರು ಖುಷಿಯಾಗಿ ಮೈತಡವ ಬೇಕು ಅನಿಸ್ತಿದೆ. ಎಂತಕ್ಕೂ ಗಂಡು ಜೋಡಿ ಬೇಕಲ್ವಾ ಅಕ್ಕ? ಹೊರ್ಗಡೆ ಮೇಯಕ್ಕಾದ್ರು ಬಿಟ್ಟಿದ್ರೆ ಬಾಯ್ ಫ್ರೆಂಡ್ ಹೋರಿ ಜೊತೆ ಕೂಡ್ತಿದ್ದೆ. ಇಲ್ಲಾ ಅಂದ್ರೆ ಆಸ್ಪತ್ರೆಗೆ ಒಯ್ದು ಇಂಜಕ್ಷನ್ನು ಮಾಡ್ಸಿದ್ರೂ ಗಬ್ಬ ಕಟ್ಕೋತಿದ್ದೆ.

ಕೆಂಪಿ: ತಪ್ಪು ನಿಂದೆ ಬಿಡು ತಂಗಿ. ಮನೆಯೋರಿಗೆ ಹ್ಯಾಂಗೆ ಗೊತ್ತಾಗ್ಬೇಕು ನೀ ಹೀಟಿಗೆ ಬಂದಿದ್ದೀ ಅಂತ? ನೀ ಜೋರಾಗಿ ಕೂಗ್ತಾ ಇದ್ರೆ ಎಲ್ಲರಿಗೂ ಗೊತ್ತಾಗೋದು. ಆಗ ನಿಂಗೆ ವ್ಯವಸ್ಥೆ ಮಾಡೇ ಮಾಡೋರು.

ಚಂದ್ರಿ: ಅದೇ ನನ್ನ ಸಮಸ್ಯೆ ಅಕ್ಕ. ಬೆದೆಗೆ ಬಂದಾಗ ನಂಗೆ ಕೂಗೊಕ್ಕೆ ಬರೋದೆ ಇಲ್ಲ. ನನ್ನ ಸ್ವಭಾವನೇ ಹೀಗೆ. ಬದಲಾಯಿಸಲು ಆಗೋದಿಲ್ಲ. ಅದೇ ದೊಡ್ಡ ಚಿಂತೆ ಆಗಿದೆ ನಂಗೆ. ಹಗ್ಗ ಕಿತ್ಕೊಂಡು ಎಲ್ಲಾದ್ರು ಓಡಿ ಹೋಗಣ ಅನಿಸ್ತಿದೆ. ಕೆಂಪಿ: ತಂಗಿ ಜೋರಾಗಿ ಕೂಗುವೆ, ನಾ ಬಂದಾಗ ಬೆದೆಗೆ, ಅದನರಿತ ಯಜಮಾನ್ರು, ನನ್ನ ಕೂಡಿಸಿದರು ಹೋರಿಗೆ ತುಂಬಿದೆ ನಂಗೀಗ ತಿಂಗಳು ಏಳು, ಖುಷಿಯಿಂದ ಸಾಗುತ್ತಿದೆ ನನ್ನಯ ಬಾಳು ||. ಆದ್ರೆ ತಂಗಿ ಪಾಪ ನಿನ್ನಂತಹ ಹಸುಗಳಿಗೆ ಕೂಗೋ ಸ್ವಭಾವ ಇರೋದಿಲ್ಲ. ಅದ್ಕೆ ಸಾಕೋರಿಗೆ ಗೊತ್ತಾಗಲ್ಲ.

ಚಂದ್ರಿ : ನೋಡಕ್ಕ ನಾನೂ ಮೂರು, ವಾರಕ್ಕೊಮ್ಮೆ ಬೆದೆಗೆ ಬರ್ತೀನಿ, ಹಾಲು ಕೊಡಲು ತಂಟೆ ಮಾಡ್ತೀನಿ, ಅಮ್ಮಾವ್ರ ಮುಖ ಮೈಯೆಲ್ಲಾ ಮೂಸ್ತೀನಿ, ಸ್ವಲ್ಪ ಸ್ವಲ್ಪ ಮೂತ್ರ ಮಾಡ್ತಾನೇ ಇರ್ತೀನಿ, ನಿನ್ಮೇಲೆ ಕೂಡ ಹಾರಕ್ಕೆ ಬರ್ತೀನಿ, ಇಷ್ಟಾದ್ರೂ ತಿಳೀತಿಲ್ಲ ಯಜಮಾನ್ರಿಗೆ, ಮದ್ದೇ ಇಲ್ಲ ಅಕ್ಕ ನನ್ನ ನೋವಿಗೆ, ಅದ್ಕೆ ಬೇಜಾರಿಂದ ಒದ್ಬಿಟ್ಟೆ ಅಮ್ಮಾವ್ರಿಗೆ ||.

ಕೆಂಪಿ: ಅನ್ನ ಕೊಟ್ಟೋರಿಗೆ ಒದೆಯೋದ್ದಾದ್ರೆ ನಮ್ಗೂ ಮನುಷ್ಯ ಜಾತಿಗೂ ಏನು ವ್ಯತ್ಯಾಸ ತಂಗಿ?

ಚಂದ್ರಿ: ಅಯ್ಯೋ ನನ್ಕಷ್ಟ ನಂಗೆ ಅಕ್ಕ. ಒಂದ್ಕಡೆ ನನ್ನ ಬೆದೆ ವ್ಯರ್ಥ ಆಗ್ತಿದೆ. ಇನ್ನೊಂದು ಕಡೆ ಹಾಲು ಕಮ್ಮಿಯಾಗ್ತಿದೆ. ಹಾಲು ಬತ್ತಿದ್ಮೇಲೆ ನನ್ನನ್ನು ಬರಡು ಅಂತ ಯಜಮಾನ ಯಾರಿಗಾದ್ರು ಮಾರಿ ಬಿಡ್ತಾನೆ. ಒಟ್ನಲ್ಲಿ ನನ್ ಹಣೆ ಬರ ಇಷ್ಟೇ ಆಯ್ತು (ಕಣ್ಣೀರು).

ಕೆಂಪಿ: ಯೋಚ್ನೆ ಮಾಡ್ಬೇಡ ತಂಗಿ. ಒಳ್ಳೇರಿಗೆ ಒಳ್ಳೆ ಕಾಲ ಬಂದೇ ಬರುತ್ತೆ.

ದೃಶ್ಯ ೨ (ತಿಮ್ಮನ ಮನೆ)

ತಿಮ್ಮಿ: ರೀ...ಇಲ್ನೋಡಿ ಆ ಚಂದ್ರಿ ಹ್ಯಂಗೆ ಒದೀತು ಅಂತ. ಕೈ ಬಳೆ ಒಡ್ಡು, ಹೊಕ್ಕಿ ಗಾಯ ಬೇರೆ ಆಯ್ತು. ಯಾವತ್ತೂ ಹಿಂಗೆ ಮಾಡಿರ್ಲಿ ಲ್ಲ ಅದು. ಇವತ್ತು ಏನಾಯ್ತೋ?

ತಿಮ್ಮ: ಎರ್ಡುೀ ಹೇರ್ಬೇಗಕಿತ್ತು ಅದಕ್ಕೆ, ತಿಂದಿದ್ದು ಸೊಕ್ಕು ಅಂತ ಕಾಣುತ್ತೆ. ಗಟ್ಟಿಗಿತ್ತಿ ನನ್ನ ತಿಮ್ಮಿಗೆ ಒದ್ಯೋದು ಅಂದ್ರೆ ಆಟಾನಾ?