ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೭

ಈರುಳ್ಳಿ ಎಂದರೆ : ಕಣ್ಣಲ್ಲಿ ನೀರು

ಶ್ರೀಮತಿ ಕೆ.ಜೆ. ಹೇಮಲತಾ
7676205930
1

ಈರುಳ್ಳಿಯನ್ನು ಕತ್ತರಿಸಿದಾಗ ಇದರಲ್ಲಿರುವ ಗಂಧಕ ಸಂಯುಕ್ತ ವಸ್ತುಗಳು ಸಂಕೀರ್ಣರೂಪದಿಂದ ಸರಳ ರೂಪಕ್ಕೆ ಬದಲಾಗುತ್ತವೆ. ಈ ಸಮಯದಲ್ಲಿ ಹೊರ ಹೊಮ್ಮುವ ಘಾಟಿನ ಪರಿಮಳವು ಈರುಳ್ಳಿ ಕತ್ತರಿಸುವವರ ಕಣ್ಣಲ್ಲಿ ನೀರು ತರಿಸುತ್ತದೆ. ಇಷ್ಟೇ ಆದರೆ, ಪರವಾಗಿಲ್ಲ ಭೂಮಿ ಸಿದ್ಧತೆ ಮಾಡಿ, ಬೀಜ ಬಿತ್ತಿ, ನೀರು ಉಣಿಸಿ, ಪೋಷಕಾಂಶಗಳನ್ನು ಒದಗಿಸಿ ಪೋಷಣೆ ಮಾಡಿ, ಕೈಗೆ ಸಿಕ್ಕ ಫಲಕ್ಕೆ ಬೆಲೆ ಸಿಗದೆ ಹೋದಾಗ ಈರುಳ್ಳಿ ಬೆಳೆದವರ ಕಣ್ಣಲ್ಲೂ ನೀರು ತರಿಸುತ್ತದೆ.ಇದ್ದಕ್ಕಿದ್ದ ಹಾಗೆ ಈ ಕುಸಿತ ಏಕೆ? ಕಾರಣವೇನು? ೨೦೦೮ರಲ್ಲಿ ಪ್ರಪಂಚದಲ್ಲಿ ಈರುಳ್ಳಿ ಬೆಳೆಯುವ ದೇಶಗಳಲ್ಲಿ ಭಾರತವು ೨ನೇ ಅಗ್ರಸ್ಥಾನ ಪಡೆದಿದ್ದು, ಚೀನಾ ಮೊದಲನೇ ಸ್ಥಾನದಲ್ಲಿತ್ತು, ಇತರೆ ದೇಶಗಳಾದ ಆಸ್ಟ್ರೇಲಿಯಾ, ಪಾಕಿಸ್ತಾನ, ಅಮೇರಿಕಾ, ಟರ್ಕಿ, ಇರಾನ್, ರಷ್ಯಾ, ಬ್ರೆಜಿಲ್ ನಂತರದ ಸ್ಥಾನದಲ್ಲಿರುವ ದೇಶಗಳು. ಬೆಳೆಯ ಪ್ರದೇಶವಾರು ಅಂಕಿ ಅಂಶಗಳನ್ನು ನೋಡಿದಾಗ ೨೦೦೯-೧೦ರಲ್ಲಿ ಕೇವಲ ೭.೫೬ ಲಕ್ಷ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದ ಈರುಳ್ಳಿಯು ಕಾಲಕ್ರಮೇಣ ೨೦೧೦-೧೧ರಲ್ಲಿ ೧೦.೬೪ ಲಕ್ಷ, ೨೦೧೧-೧೨ರಲ್ಲಿ ೧೦.೮೭ ಲಕ್ಷ, ೨೦೧೨-೧೩ ರಲ್ಲಿ ೧೦.೫೨ ಲಕ್ಷ, ೨೦೧೩-೧೪ ರಲ್ಲಿ ೧೨.೦೪ ಲಕ್ಷ, ೨೦೧೪-೧೫ ರಲ್ಲಿ ೧೧.೪೯ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಬೆಳೆಯ ಪ್ರದೇಶವು ಹೆಚ್ಚುತ್ತಿದೆ. ಆದರೆ ಮಾರುಕಟ್ಟೆಯ ವ್ಯವಸ್ಥೆ ಅಥವಾ ಬೇಡಿಕೆ ನಾವು ಅಂದುಕೊಂಡ ಹಾಗೆ ಖಂಡಿತವಾಗಿಯೂ ಇಲ್ಲ

ನವೆಂಬರ್ ೧, ೨೦೧೩ರಲ್ಲಿ ನಮ್ಮ ದೇಶದ ಈರುಳ್ಳಿಯ (MEP-Minimum export price) ಬೆಲೆ ೧,೧೫೦ ಟನ್ಇತ್ತು. ಆದರೆ ಜೂನ್ ೨೬, ೨೦೧೫ರಲ್ಲಿ ೪೨೫ ಟನ್, ಏಕಾಏಕಿ ಈ ಕುಸಿತವೇಕೆ ?.ಭಾರತದ ನಂತರದ ಸ್ಥಾನದಲ್ಲಿದ್ದ ಪಾಕಿಸ್ತಾನ, ಆಸ್ಟ್ರೇಲಿಯಾ, ಅಮೇರಿಕಾ, ಇರಾನ್, ಬ್ರೆಜಿಲ್ ಕಡಿಮೆ ಖರ್ಚಿನಲ್ಲಿ ತಮ್ಮ ಉತ್ಪಾದನೆಯನ್ನು ಹೆಚ್ಚಿಸಿ ನಮ್ಮ ಸ್ಥಾನಕ್ಕೆ ಲಗ್ಗೆ ಇಟ್ಟು, ಭಾರತವು ಇಂದು ೧೦ನೇ ಸ್ಥಾನಕ್ಕೆ ಇಳಿದಿದೆ. ಅಂತರಾಷ್ಟ್ರೀಯ ಮಟ್ಟದ ಮಾರುಕಟ್ಟೆಯಲ್ಲಿ ಹೊರ ದೇಶಗಳ ಬೇಡಿಕೆಯ ಆಧಾರದ ಮೇಲೆ ನಮ್ಮ ಸರ್ಕಾರವು ಉತ್ಪಾದನೆಗೆ ಕನಿಷ್ಟ ರಫ್ತುದರ (MEP) ವನ್ನು ನಿಗದಿಪಡಿಸುತ್ತದೆ. ನಮ್ಮ ದೇಶ ನಿಗದಿಪಡಿಸಿದ MEP ಬೆಲೆಗಿಂತ ಬೇರೆ ದೇಶಗಳ ನಿಗದಿತ ಬೆಲೆಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಡಿಮೆ ಇರುವುದರಿಂದ, ನಮ್ಮ ದೇಶದ ಈರುಳ್ಳಿಗೆ ಬೇಡಿಕೆ ಕುಸಿದಿದೆ.ಇದೆಲ್ಲದರ ಜೊತೆ ಮಧ್ಯವರ್ತಿಗಳ ದರ್ಬಾರೂ ಸೇರಿ, ಖರ್ಚು ಮಾಡಿದ ಹಣವೂ ಸಹ ರೈತರ ಕೈ ಸೇರದಂತಾಗಿದೆ. ಕಡಿಮೆ ದರಕ್ಕೆ ರೈತರಿಂದ ಕೊಂಡು ಶೇಖರಣೆ ಮಾಡಿ, ಮಾರುಕಟ್ಟೆಯಲ್ಲಿ ಕೊಳ್ಳುವ ಗ್ರಾಹಕರಿಗೆ ಹಾಹಾಕಾರ ಹುಟ್ಟಿಸಿ, ಹೆಚ್ಚಿನ ಬೆಲೆಗೆ ವ್ಯಾಪಾರಿಗಳಿಗೆ ಸಾಗಿಸುತ್ತಾರೆ. ಇದಕ್ಕೆಲ್ಲ ಮುಖ್ಯ ಕಾರಣ ರೈತರ ಬಳಿ ಇಲ್ಲದೇ ಇರುವ ಶೇಖರಣಾ ಘಟಕಗಳು, ಅದಕ್ಕೆ ತಗಲುವ ವೆಚ್ಚವನ್ನು ರೈತರಿಂದ ಭರಿಸಲಾಗದೇ ಇರುವುದು.

4

ವಾತಾವರಣ ವೈಪರೀತ್ಯ, ಕುಸಿಯುವ ಮಾರುಕಟ್ಟೆಯ ಬೆಲೆಯನ್ನು ರೈತರ ಅನುಕೂಲಕ್ಕೆ ತಕ್ಕಂತೆ ಮಾರ್ಪಾಡು ಮಾಡುವುದು ಕಷ್ಟ ಸಾಧ್ಯ. ಹಾಗೆಂದು ರೈತರು ಕಂಗೆಟ್ಟು ಕೈ ಕಟ್ಟಿ ಕೂರುವುದು ಒಳಿತಲ್ಲ. ಹಾಗಾದರೆ ಮಾಡುವುದಾದರೂ ಏನು ? ಈರುಳ್ಳಿಯನ್ನು ಅತಿ ಹೆಚ್ಚು ಎಕರೆವಾರು ಪ್ರದೇಶಗಳಲ್ಲಿ ಬೆಳೆಯುತ್ತಿರುವ ರೈತರು ಬಹು ಬೆಳೆಗಳಲ್ಲಿ ಆಸಕ್ತಿ ತೋರುವುದು ಲಾಭದಾಯಕ. ಈರುಳ್ಳಿ, ಬೀನ್ಸ್, ಮೆಣಸಿನಕಾಯಿ, ಆಲೂಗೆಡ್ಡೆ, ಬದನೆ, ಕುಂಬಳ ಕಾಯಿ ಜಾತಿಯ ಬಳ್ಳಿಗಳನ್ನು, ಚೆಂಡು ಹೂ ಮುಂತಾದವು ಮುಂಗಾರಿಗಾದರೆ, ಹಿಂಗಾರಿಗಾಗಿ ಹೂ ಕೋಸು, ಎಲೆ ಕೋಸು, ಕಲ್ಲಂಗಡಿ, ಕರಬೂಜ ಮುಂತಾದ ಬೆಳೆಗಳನ್ನು ಬೆಳೆಯುವುದು ಸೂಕ್ತ. ಈರುಳ್ಳಿ ಬೆಳೆಯನ್ನೇ ಬೆಳೆಯಬೇಕೆಂಬ ಆಸೆ ಉಳ್ಳ ರೈತರು ಹೆಚ್ಚು ಕಾಲ ಶೇಖರಣೆ ಮಾಡಿ ಇಡಲು ಸೂಕ್ತವಾದ ತಳಿ (ಅರ್ಕಾಕೀರ್ತಿಮಾನ್, ಅರ್ಕಾ ಲಾಲಿಮ, ಬಳ್ಳಾರಿ ರೆಡ್, ಅಗ್ರಿ ಫೌಂಡ್ ಲೈಟ್ರೆಡ್ ಇತ್ಯಾದಿ)ಗಳನ್ನು ಬಳಸುವುದು ಸೂಕ್ತ. ಅನವಶ್ಯಕ ಖರ್ಚು (ಬೀಜ ಚೆಲ್ಲುವುದು, ಅತಿಯಾದ ಗೊಬ್ಬರ ಮತ್ತು ಪೀಡೆನಾಶಕಗಳ ಬಳಕೆ) ಕಡಿಮೆಗೊಳಿಸಿ, ಒಳ್ಳೆಯ ಗುಣಮಟ್ಟದ ಗೆಡ್ಡೆಗಳನ್ನು ಪಡೆಯಲು ಅನುಸರಿಸಬೇಕಾದ ಕ್ರಮಗಳನ್ನು ಪಾಲಿಸಿ ಹೆಚ್ಚು ಇಳುವರಿಯನ್ನು ಪಡೆಯವುದು.

6

ಈರುಳ್ಳಿ ಬೆಳೆಯ ಬೆಲೆಯ ನಿರ್ಧಾರ ಗುಣಮಟ್ಟದ ಮೇಲೆ ಆಧಾರಿತವಾಗಿರುತ್ತದೆ. ಈರುಳ್ಳಿಯನ್ನು ಗ್ರೇಡಿಂಗ್ ಮಾಡುವುದರಿಂದ (ದೊಡ್ಡ, ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ಗೆಡ್ಡೆಗಳನ್ನಾಗಿ ಬೇರ್ಪಡಿಸುವುದು.) ಗುಣಮಟ್ಟಕ್ಕನುಸಾರವಾಗಿ ಬೆಲೆಯು ದೊರಯುತ್ತದೆ. ಈರುಳ್ಳಿ ಸಂಗ್ರಹಣಾ ಘಟಕಗಳನ್ನು ಸ್ಥಾಪಿಸಲು ತೋಟಗಾರಿಕೆ ಇಲಾಖೆಯು ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಸಹಾಯಧನವನ್ನು ನೀಡಲಾಗುತ್ತಿದೆ. ಕಡಿಮೆ ವೆಚ್ಚದ ಈರುಳ್ಳಿ ಸಂಗ್ರಹಣಾ ಘಟಕಗಳನ್ನು ನಿರ್ಮಿಸಿ, ಮಾರುಕಟ್ಟೆಯ ಬೇಡಿಕೆಯ ಆಧಾರದ ಮೇಲೆ ಮಾರಾಟ ಮಾಡಬಹುದು. Agmarket.gov.in ವೆಬ್ಸೆಟ್ನಲ್ಲಿ ಕೃಷಿ ಬೆಳೆಗಳ ಮಾರುಕಟ್ಟೆ ಬೆಲೆಯನ್ನು ತಿಳಿಯಬಹುದು. ಯಾವ ರಾಜ್ಯಗಳಲ್ಲಿ ಹೆಚ್ಚು ಬೇಡಿಕೆ ಇದೆಯೆಂಬುದನ್ನು ತಿಳಿದು ನಮ್ಮ ಉತ್ಪಾದನೆಯನ್ನು ದೂರದ ಮಾರುಕಟ್ಟೆಗಳಿಗೆ ಸಾಗಿಸಬಹುದು. ಭವಿಷ್ಯದ ಮಾರುಕಟ್ಟೆಯ ಬೆಲೆಯನ್ನು ತಿಳಿಯುವುದು ಅತಿ ಮುಖ್ಯ. ಇದರ ಆಧಾರದ ಮೇರೆಗೆ ರೈತರು ಶೇಖರಣೆ ಮಾಡಬೇಕೆ? ಬೇಡವೇ? ಎಂಬುದನ್ನು ನಿರ್ಧರಿಸಬಹುದು. http://agriculturepriceprediction.com ವೆಬ್ಸೈಟ್ನಲ್ಲಿ ಮುಂದಿನ ದಿನಗಳ ಮಾರುಕಟ್ಟೆಯ ಬೆಲೆಯ ಮಾಹಿತಿಯನ್ನು ತಿಳಿಯಬಹುದು.