ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೭

ಬರ ಪ್ರದೇಶಕ್ಕೆ ವರವಾದ ಮೇವಿನ ಜೋಳದ ತಳಿ ಸಿಓಎಫ್ಎಸ್-೩೧

ರುದ್ರಗೌಡ ಫ. ಚನ್ನಗೌಡ
9449069274
1

ಕರ್ನಾಟಕದಲ್ಲಿ ಮೇವಿನ ಬೆಳೆಗಳನ್ನು ಶೇ. ೩.೫ ರಷ್ಟು ಉಳುಮೆ ಮಾಡುವ ಪ್ರದೇಶದಲ್ಲಿ ಬೆಳೆಯುತ್ತಿದ್ದು, ಹಸಿರು ಮೇವಿನ ಉತ್ಪಾದನೆಯು ೮೫ ಮೆಟ್ರಿಕ್ ಟನ್ ಮತ್ತು ಒಣ ಮೇವಿನ ಉತ್ಪಾದನೆಯು ೨೪ ಮೆಟ್ರಿಕ್ ಟನ್ನಷ್ಟಿದೆ. ಇನ್ನೂ ೪೬ ಮೆಟ್ರಿಕ್ ಟನ್ಗಳಷ್ಟು ಮೇವನ್ನು ಉತ್ಪಾದನೆ ಮಾಡಬೇಕಾಗಿದೆ. ಕೃಷಿ ವಿಜ್ಞಾನ ಕೇಂದ್ರ, ಚಿತ್ರದುರ್ಗ ಮೇವಿನ ಜೋಳದ ತಳಿಯಾದ ಸಿಓಎಫ್ಎಸ್-೩೧ರ ಮುಂಚೂಣಿ ಪ್ರಾತ್ಯಕ್ಷತೆಯನ್ನು ರೈತರ ಹೊಲದಲ್ಲಿ ಕೈಗೊಂಡು ಇದರ ಪ್ರಾಮುಖ್ಯತೆಯನ್ನು ತಿಳಿಸಿದ ನಂತರ ರೈತರು ಈ ತಳಿಯನ್ನು ತಮ್ಮ ಹೊಲದಲ್ಲಿ ಬೆಳೆದರೆ ವರ್ಷ ಪೂರ್ತಿ ರುಚಿಕರವಾದ ಹಸಿರು ಮೇವನ್ನು ಉತ್ಪಾದಾನೆ ಮಾಡಲು ಸಾಧ್ಯವೆಂದು ಮನವರಿಕೆ ಮಾಡಿಕೊಂಡಿದ್ದಾರೆ.ಕೃಷಿ ವಿಜ್ಞಾನ ಕೇಂದ್ರದಿಂದ ಸುಮಾರು ೨೦೦ ಕಿ. ಗ್ರಾಂ ಸಿಓಎಫ್ಎಸ್-೩೧ ತಳಿಯ ಬೀಜೋತ್ಪಾದನೆಯನ್ನು ಕೈಗೊಂಡು ೬೦೦ ರಿಂದ ೭೦೦ ರೈತರು ಇದರ ಸದುಪಯೋಗವನ್ನು ಪಡೆದುಕೊಂಡಿದ್ದು ೨,೩೦೦ ಟನ್ಗಿಂತ ಹೆಚ್ಚಿನ ಹಸಿರು ಮೇವಿನ ಉತ್ಪಾದನೆ ಮಾಡಿದ್ದಾರೆ.

ವಿಶೇಷ ಗುಣಗಳು

 • ೬೦ ರಿಂದ ೭೦ ದಿನಗಳಲ್ಲಿ ಬೆಳೆ ಕಟಾವಿಗೆ ಬರುತ್ತದೆ.
 • ಕಡಿಮೆ ಫಲವತ್ತತೆಯ ಮಣ್ಣಿನಲ್ಲಿ ಸಹ ಇದನ್ನು ಬೆಳೆಯಬಹುದು.
 • ವರ್ಷಕ್ಕೆ ೫ ರಿಂದ ೬ ಕೂಳೆ ಬೆಳೆ ತಗೆಯಬಹುದು.
 • ಬರವನ್ನು ತಡೆದುಕೊಳ್ಳುವ ಶಕ್ತಿ ಹೊಂದಿದೆ.
 • ದನಕರುಗಳಿಗೆ ಹೆಚ್ಚು ರುಚಿಕರವಾಗಿರುತ್ತದೆ.
 • ವಿವಿಧ ಪರಿಸ್ಥಿತಿಗಳಿಗೆ ಹೊಂದಿಕೊಂಡು ಬೆಳೆಯಬಲ್ಲದು.
 • ತೆಳುವಾದ ಕಡ್ಡಿ ಹಾಗೂ ಮೃದುವಾದ ಎಲೆಗಳನ್ನು ಹೊಂದಿರುತ್ತದೆ.
 • ಈ ಹುಲ್ಲಿನಲ್ಲಿರುವ ಪೌಷ್ಟಿಕಾಂಶಗಳಾವೆಂದರೆ, ಕಚ್ಚಾ ಸಸಾರಜನಕ ಶೇ.೧೨-೧೫, ಕಚ್ಚಾ ನಾರು ಶೇ.೩೫-೪೫, ರಂಜಕ ಶೇ.೦.೫೦-೦.೫೫ ಮತ್ತು ಕ್ಯಾಲ್ಸಿಯಂ ಶೇ.೦.೮೦-೨.೩
 • 12

  ರೈತರು ಅಳವಡಿಸಿದ ತಾಂತ್ರಿಕ ಕ್ರಮಗಳು : ಭೂಮಿಯನ್ನು ೨-೩ ಬಾರಿ ಆಳವಾಗಿ ಉಳುಮೆ ಮಾಡಿ, ಹೆಂಟೆಗಳನ್ನು ಹೊಡೆದು ಹದಗೊಳಿಸಬೇಕು. ನಂತರ ಒಂದು ಎಕರೆಗೆ ೩ ಟನ್ ಕೊಟ್ಟಿಗೆ ಗೊಬ್ಬರವನ್ನು ಮಣ್ಣಿನಲ್ಲಿ ಸೇರಿಸಬೇಕು. ಬಿತ್ತನೆಗೆ ಮುಂಚೆ ಪ್ರತಿ ಕಿ.ಗ್ರಾಂ ಬಿತ್ತನೆ ಬೀಜವನ್ನು ೩-೪ ಗ್ರಾಂ ಟ್ರೈಕೋಡರ್ಮಾ, ೪ ಗ್ರಾಂ ಅಜೋಸ್ಪಿರಿಲಂ/ರಂಜಕ ಕರಗಿಸುವ ಅಣುಜೀವಿ ಜೀವಾಣುವನ್ನು ಬೀಜಕ್ಕೆ ಉಪಚರಿಸಿ ೨೦ ನಿಮಿಷ ನೆರಳಲ್ಲಿ ಒಣಗಿಸುವುದು. ನಂತರ ಬೀಜೋಪಚಾರ ಮಾಡಿದ ಬೀಜಗಳನ್ನು ೪೫ ಸೆಂ.ಮೀ. ಅಂತರದ ಸಾಲುಗಳಲ್ಲಿ, ಬೀಜದಿಂದ ಬೀಜಕ್ಕೆ ೧೦ ಸೆಂ.ಮೀ. ಅಂತರದಲ್ಲಿ ೫ ಸೆಂ.ಮೀ. ಆಳದಲ್ಲಿ ಬಿತ್ತನೆ ಮಾಡಬೇಕು. ಒಂದು ಎಕರೆಗೆ ಯೂರಿಯಾ ೩೯ ಕಿ.ಗ್ರಾಂ, ಎಸ್.ಎಸ್.ಪಿ ೧೨೫ ಕಿ. ಗ್ರಾಂ, ಎಮ್.ಒ.ಪಿ ೨೭ ಕಿ.ಗ್ರಾಂ ಶಿಫಾರಸ್ಸು ಮಾಡಲಾಗಿದೆ. ಒಟ್ಟು ಸಾರಜನಕವನ್ನು ಹಂತ ಹಂತವಾಗಿ ನೀಡಬೇಕು. ಹಾಗೂ ಪೂರ್ತಿ ರಂಜಕ ಮತ್ತು ಪೊಟ್ಯಾಷ್ನ್ನು ಬೀಜದ ಮಟ್ಟಕ್ಕಿಂತ ಆಳದಲ್ಲಿ ಭೂಮಿಗೆ ಸೇರಿಸಬೇಕು. ಶೇ. ೫೦ರಷ್ಟು ಸಾರಜನಕವನ್ನು ಬಿತ್ತನೆಯಾದ ೪ ವಾರಗಳ ನಂತರ ಮೇಲುಗೊಬ್ಬರವಾಗಿ ಕೊಡಬೇಕು. ನೀರನ್ನು ಬೀಜ ಬಿತ್ತಿದ ನಂತರ ಹಗುರಾಗಿ ನೀರು ಹಾಯಿಸುವುದು. ತರುವಾಯ ಮಣ್ಣು ಮತ್ತು ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ೧೦-೧೨ ದಿನಗಳಿಗೊಂದಾವರ್ತಿ ನೀರು ಹಾಯಿಸಬೇಕು.

  14

  ಮುಂಚೂಣಿ ಪ್ರಾತ್ಯಕ್ಷತೆಯನ್ನು ಅಳವಡಿಸಿ ಕೊಂಡಿರುವ ರೈತರಾದ ಶ್ರೀ ಮನೋಹರ್, ಟಿ. ರವರ ಅನಿಸಿಕೆ : ಸಿ.ಓ.ಎಫ್.ಎಸ್ -೩೧ ಹಸಿರು ಮೇವಿನ ತಳಿಯ ಅಳವಡಿಕೆಯಿಂದ ಕಡಿಮೆ ನೀರಿನಲ್ಲಿಯೂ ಸಹ ಹೆಚ್ಚಿನ ಮೇವಿನ ಉತ್ಪಾದಾನೆ ಮಾಡಬಹುದಲ್ಲದೇ, ಹಸುಗಳ ಆರೋಗ್ಯ ಹಾಗೂ ಹಾಲಿನ ಉತ್ಪಾದನೆ ಪ್ರಮಾಣದಲ್ಲಿ ಹೆಚ್ಚಳವನ್ನು ಕಾಣುತ್ತಿದ್ದೇವೆ. ಈ ತಾಂತ್ರಿಕತೆಯ ಉಪಯೋಗವನ್ನು ಪಡೆಯಲು ಸುತ್ತ ಮುತ್ತಲಿನ ಗ್ರಾಮದ ರೈತರು ಭೇಟಿ ಮಾಡುತ್ತಿದ್ದಾರೆ. ರೈತರ ಸಂಪರ್ಕ ವಿಳಾಸ: ಮನೋಹರ್, ಟಿ., ೯೫೩೫೮೬೪೪೦೬, ರಂಗೇನಹಳ್ಳಿ ಗ್ರಾಮ, ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ