ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೭

ಜಿಎಂ ಸಾಸಿವೆ : ರಾಷ್ಟ್ರದ ಕೃಷಿ ಕ್ಷೇತ್ರದಲ್ಲೊಂದು ಆಶಾದಾಯಕ ಬೆಳವಣಿಗೆ

ಹರೀಶ್. ಬಿ.ಎಸ್
9480557634
1

ಇದು ಸುರಕ್ಷಿತ, ಇದು ಸ್ವದೇಶಿ, ಬೆಳೆಯಲು ಅನುಮತಿ ಬೇಗ ಸಿಕ್ಕಷ್ಟೂ ಒಳ್ಳೆಯದು. ಕೃಷಿ ತಂತ್ರಜ್ಞಾನಗಳ ಬಗೆಗೆ ಬಹಳಷ್ಟು ವರ್ಷಗಳ ಚರ್ಚೆ ಹಾಗೂ ಮಾತುಕತೆಯ ನಂತರ ಭಾರತದ ಕೃಷಿಯ ಮಟ್ಟಿಗೊಂದು ಒಳ್ಳೆಯ ಸುದ್ದಿ. ಜಿಎಂ ಬೆಳೆ ಹಾಗೂ ತಳಿಗಳ ವಾಣಿಜ್ಯ ಕೃಷಿಗೆ ಅನುಮೋದನೆ ನೀಡುವ ಉನ್ನತ ಮಟ್ಟದ ಜೆನೆಟಿಕ್ ಇಂಜಿನಿಯರಿಂಗ್ ಅನುಮೋದನಾ ಸಮಿತಿಯು ದೇಶದ ಮೊದಲ ಆಹಾರ ಬೆಳೆಗಳ ಜಿಎಂ ತಳಿಯಾದ ಡಿಎಂಹೆಚ್-೧೧ ಸಾಸಿವೆಯನ್ನು ವಾಣಿಜ್ಯಮಟ್ಟದಲ್ಲಿ ಬೆಳೆಯುವಂತೆ ಶಿಫಾರಸ್ಸು ಮಾಡಿದೆ. ಧಾರಾ ಮಸ್ಟರ್ಡ್ ಹೈಬ್ರಿಡ್-೧೧ (ಡಿಎಂಹೆಚ್-೧೧) ಎಂದು ಕರೆಯಲ್ಪಡುವ ಈ ತಳಿಯನ್ನು ಅಭಿವೃದ್ಧಿಪಡಿಸಿರುವುದು ನಮ್ಮ ಕೃಷಿ ಸಂಶೊಧಕರು ಹಾಗೂ ವಿಜ್ಞಾನಿಗಳ ಸಾಮರ್ಥ್ಯಕ್ಕೊಂದು ತಾಜಾ ಉದಾಹರಣೆ. ಇದರ ಅಭಿವೃದ್ಧಿಯಲ್ಲಿ ಖ್ಯಾತ ತಳಿ ವಿಜ್ಞಾನಿ ಡಾ. ದೀಪಕ್ ಪೆಂಟಾಲ್ ಮತ್ತವರ ತಂಡದ ಪಾತ್ರ ಮಹತ್ತರವಾದದ್ದು. ಈ ಜಿಎಂ ತಳಿಯ ಅಭಿವೃದ್ಧಿಗೆ ಬೆಂಬಲವಾಗಿ ನಿಂತದ್ದು ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆ. ಈ ತಳಿಯನ್ನು ಬೆಳೆದದ್ದೇ ಆದಲ್ಲಿ ಸಾಸಿವೆಯ ಉತ್ಪಾದಕತೆ ಗಣನೀಯವಾಗಿ ಹೆಚ್ಚುತ್ತದೆ. ಕಳೆದ ದಶಕದಲ್ಲಿ ಸಾಂಪ್ರದಾಯಿಕ ಸಾಸಿವೆ ತಳಿಗಳ ಎಕರೆವಾರು ಇಳುವರಿಯಲ್ಲಿ ಸುಧಾರಣೆ ಆಗದೇ ಇರುವುದು ಗಮನಾರ್ಹ.

ಅತಿ ಮಹತ್ತರವಾದ ವೈಜ್ಞಾನಿಕ ಅನ್ವೇಷಣೆ: ಭಾರತದ ಮೂರು ಪ್ರಮುಖ ಎಣ್ಣೆಕಾಳು ಬೆಳೆಗಳಲ್ಲಿ ಸಾಸಿವೆಯೂ ಒಂದು. ಉಳಿದೆರಡು ಸೋಯಾಬೀನ್ ಹಾಗೂ ಶೇಂಗಾ. ಬಹಳ ವರ್ಷಗಳಿಂದಲೂ ಈ ಮೂರೂ ಬೆಳೆಗಳ ಎಕರೆವಾರು ಇಳುವರಿ ಬಹುತೇಕ ಸ್ಥಿರವಾಗಿದೆ. ಸಾಸಿವೆಯಲ್ಲಿ ಸ್ವಕೀಯ ಪರಾಗಸ್ಪರ್ಶವಾಗುವುದು ವಾಡಿಕೆ. ಅದರ ಹೂ ದ್ವಿಲಿಂಗಿ, ಅಂದರೆ ಹೆಣ್ಣು ಹಾಗೂ ಗಂಡು ಭಾಗಗಳು ಒಂದೇ ಹೂವಿನಲ್ಲಿರುತ್ತವೆ. ಗಂಡು ಭಾಗ ನಪುಂಸಕವಾಗುವಂತೆ ಮಾಡದ ಹೊರತಾಗಿ ಮತ್ತೊಂದು ತಳಿಯ ಗಂಡು ಪರಾಗ ಬಳಸಿ ಸಂಕರಣ ತಳಿ ಸೃಷ್ಟಿಸುವುದು ಅತ್ಯಂತ ಕಷ್ಟಕರ ಸಂಗತಿ. ಪೆಂಟಾಲ್ ಮತ್ತವರ ತಂಡ ಕಳೆದ ಹಲವು ವರ್ಷಗಳಿಂದ ಗಂಡು ಭಾಗ ಬರಡಾಗುವಂತೆ ಮಾಡುವ ತಂತ್ರಜ್ಞಾನ ಅಭಿವೃದ್ಧಿಪಡಿಸುವಲ್ಲಿ ನಿರತವಾಗಿ ಯಶಸ್ಸು ಸಾಧಿಸಿ ಅಧಿಕ ಇಳುವರಿ ನೀಡುವ ಹೈಬ್ರಿಡ್ ತಳಿಗಳ ಹುಟ್ಟಿಗೆ ಕಾರಣವಾಯಿತು. ತಳಿ ಅಭಿವೃದ್ಧಿಯಲ್ಲಿ ಈ ತಂತ್ರಜ್ಞಾನದ ಬಳಕೆಗೆ ಅನುಮೋದನೆ ಸಿಕ್ಕಲ್ಲಿ, ಅದರ ಬಳಕೆಯಿಂದ ಅತೀ ಹೆಚ್ಚು ಇಳುವರಿ ನೀಡುವ ಹೈಬ್ರಿಡ್ ತಳಿಗಳನ್ನು ಅಭಿವೃದ್ಧಿಪಡಿಸಬಹುದು. ಜಿಎಂ ಸಾಸಿವೆಯ ಅನುಮೋದನೆಯ ಶಿಫಾರಸಿನ ಮೊದಲು ಅತ್ಯಂತ ಸಮರ್ಪಕವಾದ ನಿಯಂತ್ರಣಾ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ಜೆನೆಟಿಕ್ ಇಂಜಿನಿಯರಿಂಗ್ ಅನುಮೋದನಾ ಸಮಿತಿಯು ಕಠಿಣ ವೈಜ್ಞಾನಿಕ ಮೌಲ್ಯಮಾಪನಕ್ಕೊಳಪಡಿಸಿದ ನಂತರವೇ ಈ ಹೊಸ ಜಿಎಂ ಸಾಸಿವೆ ತಳಿಯ ವಾಣಿಜ್ಯ ಕೃಷಿಯ ಅನುಮೋದನೆಗೆ ಶಿಫಾರಸು ಮಾಡಿದೆಯೇ ಹೊರತು ಯಾವುದೇ ಭಾವನಾತ್ಮಕ ಸಿದ್ಧಾಂತದ ಆಧಾರದ ಮೇಲೆ ಅನುಮೋದಿಸಿಲ್ಲ. ಇಷ್ಟರ ಹೊರತಾಗಿಯೂ ಈ ತಂತ್ರಜ್ಞಾನದ ಬಳಕೆಗೆ ನಾವು ಹಿಂಜರಿದರೆ ನಮ್ಮ ಸಾಸಿವೆ ಕೃಷಿಕರ ಹಿತಾಸಕ್ತಿ ಕಾಪಾಡುವುದು ಬಹು ದೂರದ ಮಾತು.ಚೊಚ್ಚಲ ತಂತ್ರಜ್ಞಾನವಾಗಲಿದೆ

ಇದರ ಶಿಫಾರಸಿನಿಂದ ಭಾರತ ಕೇವಲ ಜಿಎಂ ಸಾಸಿವೆ ಬೆಳೆಯಲು ನೀಡುವ ಅನುಮೋದನೆಯಿಂದ ಒಂದು ಹೆಜ್ಜೆ ಹಿಂದಿದೆ ಅಷ್ಟೆ. ಇದರ ಕೃಷಿಗೆ ಅಂತಿಮ ಅನುಮೋದನೆ ಸಿಕ್ಕಿದ್ದೇ ಆದಲ್ಲಿ, ಜಿಎಂ ಆಹಾರ ಬೆಳೆಗಳ ಪೈಕಿ ಚೊಚ್ಚಲ ತಂತ್ರಜ್ಞಾನವಾಗಲಿದೆ. ನಮ್ಮ ಇಂತಹ ಕೃಷಿ ಅನ್ವೇಷಣೆಗಳ ದೂರದರ್ಶಿ ಪ್ರಯೋಜನಗಳ ಬಗೆಗೆ ಪರಿಸರ ಸಚಿವಾಲಯ ಸಕಾರಾತ್ಮಕವಾಗಿ ಆದಷ್ಟು ಬೇಗನೆ ಸ್ಪಂದಿಸಲೆಂಬುದು ನಮ್ಮ ನಿರೀಕ್ಷೆ. ೨೦೨೨ರ ಹೊತ್ತಿಗೆ ಕೃಷಿಕರ ಆದಾಯ ದ್ವಿಗುಣಗೊಳಿಸುವ ಗುರಿ ಹೊಂದಿರುವ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ಈ ಅನ್ವೇಷಣೆ ನೆರವಾಗುವುದರಲ್ಲಿ ಸಂಶಯವೇ ಇಲ್ಲ. ಈ ಜಿಎಂ ಸಾಸಿವೆ ತಳಿಯ ಬಳಕೆಯಿಂದ ಇಳುವರಿ ಹೆಚ್ಚಾಗಿ ಅಡುಗೆ ತೈಲದ ಆಮದಿನಲ್ಲೂ ಗಣನೀಯ ಇಳಿಕೆ ಸಾಧ್ಯ. ಪ್ರಸ್ತುತ ನಮ್ಮ ಅವಶ್ಯಕತೆಯ ಶೇ. ೬೦ ರಷ್ಟು ಅಡುಗೆ ತೈಲವನ್ನು ನಾವು ಆಮದು ಮಾಡಿಕೊಳ್ಳುತ್ತಿದ್ದೇವೆ. ಅದರ ಪ್ರಮಾಣ ೧೪.೫ ಮಿಲಿಯನ್ ಟನ್. ಇದಕ್ಕಾಗಿ ನಾವು ಕಳೆದ ವರ್ಷ ವ್ಯಯಿಸಿದ ಹಣ ಬರೋಬ್ಬರಿ ೭೮,೦೦೦ ಕೋಟಿ ರುಪಾಯಿಗಳು. ಆಮದಾಗುತ್ತಿರುವ ಈ ಅಡುಗೆ ತೈಲದಲ್ಲಿ ಗಣನೀಯ ಪ್ರಮಾಣದ ಜಿಎಂ ಸೋಯಾಬೀನ್ ಹಾಗೂ ಜಿಎಂ ಕನೋಲಾ ತೈಲಗಳು ಸೇರಿಕೊಂಡಿವೆ. ಇಂತಹ ಪರಿಸ್ಥಿತಿಯಲ್ಲಿ ದೇಸೀಯವಾಗಿಯೇ ಅಭಿವೃದ್ಧಿಪಡಿಸಿರುವ ಜಿಎಂ ಸಾಸಿವೆ ತಳಿಯೇ ಕೃಷಿಗೆ ಅನುಮೋದನೆ ಸಿಕ್ಕಲ್ಲಿ ಅಡುಗೆ ತೈಲದ ಆಮದಿನಲ್ಲಿ ಗಣನೀಯ ಇಳಿಕೆಯಾಗುವುದರ ಜೊತೆಗೆ ಮತ್ತಷ್ಟು ಹೈಬ್ರಿಡ್ಗಳ ಅಭಿವೃದ್ಧಿಗೂ ದಾರಿ ಸುಗಮವಾಗಲಿದೆ.

ಬಹಳಷ್ಟು ಸಂಸ್ಥೆ ಹಾಗೂ ಜನಗಳು ಈ ತಂತ್ರಜ್ಞಾನದ ಬಗೆಗೆ ಪ್ರಾಥಮಿಕ ಹಾಗೂ ಸರಿಯಾದ ಮಾಹಿತಿಯ ಕೊರತೆಯಿಂದಾಗಿ ಅನುಮೋದನೆ ನೀಡದಿರಲು ಅವೈಜ್ಞಾನಿಕ ಹಾಗೂ ಅವಿವೇಕದ ಕಾರಣ ನೀಡಿ ಆಕ್ಷೇಪಿಸುತ್ತಿರುವುದು ದುರದೃಷ್ಟಕರ ಸಂಗತಿ. ಜಿಎಂ ಕನೋಲಾ (ಸಾಸಿವೆಯ ಮತ್ತೊಂದು ಬಗೆ) ಹಾಗೂ ಜಿಎಂ ಸೋಯಾ ಎಣ್ಣೆಯನ್ನು ಅನೇಕ ರಾಷ್ಟ್ರಗಳಲ್ಲಿ ಕಳೆದ ಹದಿನೈದು ವರ್ಷಗಳಿಂದಲೂ ಬಳಸಲಾಗುತ್ತಿದ್ದು ಯಾವುದೇ ವ್ಯತಿರಿಕ್ತ ಪರಿಣಾಮಗಳು ದಾಖಲಾಗಿಲ್ಲದಿರುವುದು ಗಮನಾರ್ಹ ವಿಚಾರ. ನಾವೂ ಸಹ ಆಮದಾಗುತ್ತಿರುವ ಜಿಎಂ ಕನೋಲಾ ಹಾಗೂ ಸೋಯಾ ಎಣ್ಣೆಯನ್ನು ಕಳೆದೊಂದು ದಶಕದಿಂದ ಬಳಸುತ್ತಿದ್ದೇವೆ. ಇಲ್ಲೂ ಸಹ ಅದರಿಂದ ಯಾವುದೇ ದುಷ್ಪರಿಣಾಮಗಳಾಗಿಲ್ಲ. ಈ ತಂತ್ರಜ್ಞಾನ ಸುರಕ್ಷಿತವೆಂದು ದೃಢಪಟ್ಟ ನಂತರವೇ ಇದನ್ನು ಅಂತಿಮ ಅನುಮೋದನೆಗಾಗಿ ಪರಿಸರ ಸಚಿವಾಲಯಕ್ಕೆ ಶಿಫಾರಸ್ಸು ಮಾಡಲಾಗಿದೆ. ಅದರ ಅನುಮೋದನೆಯಿಂದ ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲ ವಾಗುವುದೆಂಬುದು ಹಲವರ ಅಭಿಪ್ರಾಯ. ಇದೂ ಕೂಡ ಸತ್ಯಕ್ಕೆ ದೂರದ ಮಾತು. ಏಕೆಂದರೆ, ಈ ತಂತ್ರಜ್ಞಾನ ಅಭಿವೃದ್ಧಿಯಾಗಿರುವುದು ಭಾರತದಲ್ಲಿ, ಅಭಿವೃದ್ಧಿ ಪಡಿಸಿದವರು ಭಾರತದವರು, ಅಭಿವೃದ್ಧಿಗೆ ನೆರವಾಗಿರುವುದು ನಮ್ಮದೇ ಸಂಸ್ಥೆಗಳು ಮತ್ತು ಸರ್ಕಾರ. ಹಾಗಾಗಿ ಇದು ಅಪ್ಪಟ ಸ್ವದೇಸಿ ತಂತ್ರಜ್ಞಾನ. ಇದರ ಬಳಕೆಯನ್ನು ಪ್ರೋತ್ಸಾಹಿಸುವುದು ಜಾಣತನ.

ಈ ತಂತ್ರಜ್ಞಾನದ ಬಳಕೆಯಿಂದ ರೈತರು ಪ್ರತೀ ವರ್ಷವೂ ಕಂಪನಿಗಳಿಂದ ಬೀಜ ಖರೀದಿ ಮಾಡಬೇಕಾಗುವುದೆಂಬುದು ಕೆಲವರ ಗಂಭೀರ ಆರೋಪ. ಇದಕ್ಕೂ ಜಿಎಂ ತಂತ್ರಜ್ಞಾನಕ್ಕೂ ಎಲ್ಲಿಯ ಸಂಬಂಧ. ಈಗಲೂ ಸಹ ನಮ್ಮ ದೇಶದಲ್ಲಿ ಹೈಬ್ರಿಡ್ ಬೀಜ ಬಳಸುವ ಕೃಷಿಕರು ಪ್ರತೀ ವರ್ಷ ತಪ್ಪದೇ ಅವುಗಳನ್ನು ಕಂಪನಿ ಅಥವಾ ಸಂಸ್ಥೆಗಳಿಂದ ಖರೀದಿಸುತ್ತಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಜೊತೆಗೆ ಸಾಸಿವೆಯ ಬಿತ್ತನೆ ಬೀಜಕ್ಕಾಗಿ ಕೃಷಿಕರು ವ್ಯಯಿಸುತ್ತಿರುವ ಹಣ ನಗಣ್ಯ. ಪರಿಸರದ ಮೇಲೆ ಜಿಎಂ ಬೆಳೆಗಳಿಂದ ವ್ಯತಿರಿಕ್ತ ಪರಿಣಾಮಗಳಾಗುತ್ತವೆಂಬುದು ಅಂತಹ ಮತ್ತೊಂದು ಆರೋಪ. ಕಟ್ಟು-ನಿಟ್ಟಾದ ಸುರಕ್ಷತಾ ಪರೀಕ್ಷೆಗಳ ನಂತರವೇ ಅಂತಿಮ ಅನುಮೋದನೆಗೆ ಈ ತಂತ್ರಜ್ಞಾನವನ್ನು ಶಿಫಾರಸು ಮಾಡಲಾಗಿದೆ. ಅಂತರ್ರಾಷ್ಟ್ರೀಯ ಮಟ್ಟದಲ್ಲಿಯೂ ಕೃಷಿ ಕ್ಷೇತ್ರದ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವ ಇಪ್ಪತ್ತೆಂಟಕ್ಕೂ ಅಧಿಕ ದೇಶಗಳಲ್ಲಿ ಜಿಎಂ ತಂತ್ರಜ್ಞಾನದ ಅಳವಡಿಕೆ ಹೊಸದೇನಲ್ಲ. ಅದರಲ್ಲೂ ಕೀಟ, ರೋಗ ಹಾಗೂ ಹವಾಮಾನ ವೈಪರೀತ್ಯದಂತಹ ಪ್ರಮುಖ ಸಮಸ್ಯೆಗಳಿಗೆ ಈಗಾಗಲೇ ಅನೇಕ ಜಿಎಂ ತಂತ್ರಜ್ಞಾನಗಳನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿರುವ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇವೆ. ಜಿಎಂ ತಳಿ ಅಥವಾ ಉತ್ಪನ್ನಗಳನ್ನು ಬಳಕೆ ಮಾಡುತ್ತಿರುವ ಜನಸಂಖ್ಯೆ ಶೇಕಡಾ ೪೭ ಕ್ಕೂ ಹೆಚ್ಚು.

ಜಿಎಂ ಸಾಸಿವೆಯಿಂದ ಸಮಸ್ಯೆಯೇನಿಲ್ಲ: ಬಹುತೇಕ ದೇಶಗಳಲ್ಲಿ ಎರಡು ದಶಕಗಳ ಹಿಂದಿನಿಂದಲೇ ಜಿಎಂ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಭಾರತದಲ್ಲಿಯೂ ಸಹ ಬಿಟಿ ಹತ್ತಿಯ ವಾಣಿಜ್ಯ ಕೃಷಿ ೨೦೦೨ರಿಂದ ಪ್ರಾರಂಭವಾಗಿದೆ. ಬಿಟಿ ಹತ್ತಿಯ ಅದ್ಭುತ ಯಶಸ್ಸಿನ ಹೊರತಾಗಿಯೂ ಮತ್ತಾವುದೇ ಜಿಎಂ/ಬಿಟಿ ಬೆಳೆಯ ಕೃಷಿಗೆ ಅನುಮತಿ ಇದುವರೆಗೂ ಸಿಕ್ಕಿಯೇ ಇಲ್ಲ. ೨೦೧೦ರಲ್ಲಿ ಬಿಟಿ ಬದನೆ ಬೆಳೆಯಲು ಅನುಮೋದನಾ ಸಮಿತಿ ಶಿಫಾರಸು ಮಾಡಿತ್ತು. ತಂತ್ರಜ್ಞಾನವನ್ನು ಸರಿಯಾಗಿ ಅರ್ಥ ಮಾಡಿಕೊಂಡ ನೆರೆಯ ಬಾಂಗ್ಲಾ ೨೦೧೩ ರಲ್ಲೇ ಬಿಟಿ ಬದನೆ ಕೃಷಿಗೆ ಅನುಮತಿ ನೀಡಿ ಅಲ್ಲಿನ ಕೃಷಿಕರ ನೆರವಿಗೆ ಬಂದಿರುವುದು ಗುಟ್ಟಾಗಿ ಉಳಿಯದ ವಿಚಾರ. ಈ ಹಿನ್ನೆಲೆಯಲ್ಲಿ ಭಾರತ ಮತ್ತೊಂದು ಸದವಕಾಶವನ್ನು ಕಳೆದುಕೊಳ್ಳದೆ ತ್ವರಿತವಾಗಿ ಜಿಎಂ ಸಾಸಿವೆಯ ವಾಣಿಜ್ಯ ಕೃಷಿಗೆ ಅಂತಿಮ ಅನುಮೋದನೆ ಕೊಟ್ಟು ನಮ್ಮ ಕೃಷಿಕರ ನೆರವಿಗೆ ಬರಬೇಕು. ಪರಿಸರ ಸಚಿವಾಲಯ ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ತೀರ್ಮಾನ ತೆಗೆದುಕೊಳ್ಳುವುದೆಂದು ನಮ್ಮ ಕೃಷಿಕರು ಹಾಗೂ ಕೃಷಿ ವಿಜ್ಞಾನಿಗಳು ಎದುರುನೋಡುತ್ತಿದ್ದಾರೆ. ನಮ್ಮದೇ ವಿಜ್ಞಾನಿಗಳ ಅದ್ಭುತ ಅನ್ವೇಯಷಣೆಯೊಂದು ನಮ್ಮ ಕೃಷಿಕರಿಗೆ ನೆರವಾಗಬೇಕು. ಜಿಎಂ ಸಾಸಿವೆಯ ಕೃಷಿಗೆ ಅಂತಿಮ ಅನುಮೊದನೆ ಸಿಕ್ಕಿದ್ದೇ ಆದಲ್ಲಿ ವಿಜ್ಞಾನಿಗಳ ವಿಶ್ವಾಸ ಹೆಚ್ಚಾಗಿ ಮತ್ತಷ್ಟು ವೇಗವಾಗಿ ಉತ್ತಮ ತಂತ್ರಜ್ಞಾನಗಳನ್ನು ಕೊಡುವಲ್ಲಿ ಖಂಡಿತವಾಗಿಯೂ ಸಫಲರಾಗುವರು.