ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೭

ಸೂಕ್ಷ್ಮಾಣು ಜೀವ ನಿರೋಧಕಗಳ ಸದ್ಬಳಕೆ ಮತ್ತು ಸಮುದಾಯ ಆರೋಗ್ಯ

ಡಾ. ಮಾಧವಪ್ರಸಾದ್, ಸಿ. ಬಿ
9844330395

ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಅದರಲ್ಲೂ ಪಶುಆರೋಗ್ಯ ಕ್ಷೇತ್ರದಲ್ಲಿ ಸೂಕ್ಷ್ಮಾಣು ಜೀವ ನಿರೋಧಕಗಳನ್ನು ವಿವಿಧ ಉದ್ದೇಶಗಳಿಗಾಗಿ ಸಕಾರಣಗಳಿಲ್ಲದೆ, ಸ್ಪಷ್ಟ ಉದ್ದೇಶಗಳಿಲ್ಲದೆ ಮತ್ತು ಅವೈಜ್ಞಾನಿಕವಾಗಿ ಯಥೇಚ್ಛವಾಗಿ ಬಳಸಲಾಗುತ್ತಿದೆ. ಸೂಕ್ಷ್ಮಾಣು ಜೀವ ನಿರೋಧಕಗಳನ್ನು ಎರಡು ಪ್ರಮುಖ ಉದ್ದೇಶಗಳಿಗಾಗಿ ಉಪಯೋಗಿಸುತ್ತಾರೆ. ಮೊದಲನೆಯದಾಗಿ ಪ್ರಾಣಿಗಳಲ್ಲಿ ಕಂಡುಬರುವ ಸಾಂಕ್ರಾಮಿಕ ರೋಗಗಳನ್ನು, ಅದರಲ್ಲೂ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿಂದ ಬರುವ ರೋಗಗಳ ಚಿಕಿತ್ಸೆಗಾಗಿ ಬಳಸುತ್ತಾರೆ. ಎರಡನೆಯದಾಗಿ ಪಶುಗಳಲ್ಲಿ ಬೆಳವಣಿಗೆ, ಉತ್ಪಾದನೆ, ದೇಹದ ತೂಕ ಹೆಚ್ಚಿಸಲು, ನಿಗೂಢ ಕಾಯಿಲೆಗಳನ್ನು ನಿರ್ಮೂಲನೆ ಮಾಡಲು ಅಥವಾ ತಡೆಗಟ್ಟಲು ಇವುಗಳನ್ನು ಬಳಸುತ್ತಾರೆ. ಆದರೆ ಪಶುವೈದ್ಯರ ಮಾರ್ಗದರ್ಶನದಲ್ಲಿ ಕೊಡದಿದ್ದರೆ ಇವುಗಳು ಪ್ರಾಣಿಜನ್ಯ ಆಹಾರದ ಮೂಲಕ ಸಮುದಾಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ.

ಸೂಕ್ಷ್ಮಾಣು ಜೀವ ನಿರೋಧಕಗಳ ಸದ್ಬಳಕೆ:

ಜೀವನಿರೋಧಕಗಳನ್ನು ಪಶುಚಿಕಿತ್ಸೆಗೆ ಬಳಸುವುದಕ್ಕಿಂತಲೂ ಮುನ್ನ, ಅವುಗಳು ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲುವ ಸಾಮರ್ಥ್ಯವನ್ನು (ಎಬಿಎಸ್ಟಿ ಪರೀಕ್ಷೆ) ಪ್ರಯೋಗಾಲಯಗಳಲ್ಲಿ ಪರೀಕ್ಷಿಸಿ, ಅದರ ಫಲಿತಾಂಶದ ಆಧಾರದ ಮೇಲೆ ಸೂಕ್ಷ್ಮಾಣು ಜೀವ ನಿರೋಧಕಗಳನ್ನು ಬಳಸಬೇಕು. ಇಲ್ಲದಿದ್ದರೆ ಸೂಕ್ಷ್ಮಾಣು ಜೀವಿಗಳು, ಜೀವ ನಿರೋಧಕಗಳ ವಿರುದ್ದ ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವ ಅಪಾಯವಿರುತ್ತದೆ. ಹೀಗಾಗಿ ಸಾಂಕ್ರಾಮಿಕ ಕಾಯಿಲೆಗಳನ್ನು ಹರಡುವ ಸೂಕ್ಷ್ಮಾಣು ಜೀವಿಗಳು ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಂಡು ಚಿಕಿತ್ಸೆಯು ವಿಫಲವಾಗಿ ಸಾವಿಗೆ ಕಾರಣವಾಗಬಹುದು. ಇವೆಲ್ಲವೂ ತುಂಬಾ ಗಂಭೀರ ಸಮಸ್ಯೆಗಳೇ ಆಗಿರುತ್ತವೆ. ಒಂದು ವರದಿಯ ಪ್ರಕಾರ ಈ ಕಾರಣದಿಂದಾಗಿ ಅಸುನೀಗುವವರ ಸಂಖ್ಯೆ ಜಗತ್ತಿನಲ್ಲಿ ೧,೫೦,೦೦೦ ಕ್ಕಿಂತಲೂ ಹೆಚ್ಚಾಗಿದೆ.

ಪ್ರತಿರೋಧಕ ಶಕ್ತಿ ಬೆಳೆಸಿಕೊಂಡ ಸೂಕ್ಷ್ಮಾಣು ಜೀವಿಗಳು ಮತ್ತು ವಿಧಾನ:

 • ವಾಂತಿ ಮತ್ತು ಬೇಧಿಯನ್ನುಂಟು ಮಾಡುವ ಸೂಕ್ಷ್ಮಾಣು ಜೀವಿಗಳು
 • ಸಾಲ್ಮೊನೆಲ್ಲಾ ಪ್ರಭೇಧಗಳು(ಟೈಫಾಯ್ಡ್)
 • ಶಿಗೆಲ್ಲಾ ಪ್ರಬೇಧಗಳು( ಬೇಧಿ)
 • ಇಸ್ಚಿರೀಚಿಯಾ ಕೋಲೈ ಪ್ರಭೇದಗಳು( ರಕ್ತ ಬೇಧಿ)
 • ವಿಬ್ರಿಯೋ ಕಾಲೆರಾ( ಕಾಲರಾ) ಮತ್ತು ಸ್ಟೆಫೆಲೋಕಾಕಸ್ ಮುಂತಾದ ರೋಗಾಣುಗಳು ಕಲುಷಿತ ಆಹಾರ ಮತ್ತು ನೀರಿನಿಂದ ಹರಡುವ ಕಾಯಿಲೆಗಳು ಹಾಗೂ ಪ್ರಾಣಿಜನ್ಯ ಕಾಯಿಲೆಗಳಾಗಿದ್ದು, ನಿಧಾನವಾಗಿ ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತವೆ.
 • ಅದೇ ರೀತಿ ಕ್ಷಯ ರೋಗವನ್ನುಂಟು ಮಾಡುವ ಸೂಕ್ಷ್ಮಾಣು ಜೀವಿಗಳು ಕ್ಷಯ ರೋಗದ ವಿರುದ್ಧ ಬಳಸುವ ಎಲ್ಲಾ ಔಷಧಗಳಿಗೂ ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಂಡು, ದಶಲಕ್ಷಕ್ಕೂ ಅಧಿಕ ನಾಗರೀಕರು ಕ್ಷಯರೋಗದಿಂದ ಬಳಲುತ್ತಿದ್ದಾರೆ.
 • ಸೂಕ್ಷ್ಮಾಣು ಜೀವಿಗಳು ತಮ್ಮಲ್ಲಿರುವ ವಿಶೇಷ ವಂಶವಾಹಿ ಮುಖಾಂತರ ಪ್ರತಿರೋಧಕ ಶಕ್ತಿಯನ್ನು ಪಡೆದುಕೊಳ್ಳುತ್ತವೆ.
 • ಸೂಕ್ಷ್ಮಾಣುಜೀವಿಗಳು, ಜೀವನಿರೋಧಕಗಳಲ್ಲಿ ಹಲವು ರಾಸಾಯನಿಕ ಮಾರ್ಪಾಡುಗಳುಂಟು ಮಾಡುತ್ತವೆ, ತನ್ಮೂಲಕ ಅವುಗಳನ್ನು ನಿಸ್ತೇಜವಾಗಿ ಮಾಡುತ್ತದೆ.
 • ಸೂಕ್ಷ್ಮಾಣು ಜೀವ ನಿರೋಧಕಗಳ ದುರ್ಬಳಕೆ ಮತ್ತು ವ್ಯತಿರಿಕ್ತ ಬಳಕೆಯನ್ನು ಕಡಿಮೆ ಮಾಡುವುದು
 • ಪ್ರಯೋಗಾಲಯದಲ್ಲಿ ಸೂಕ್ತ ಪರೀಕ್ಷೆ ಮಾಡಿದ ನಂತರವೇ ಜೀವ ನಿರೋಧಕಗಳನ್ನು ಬಳಸುವುದು
 • ಅನವಶ್ಯಕವಾಗಿ ಜೀವ ನಿರೋಧಕ ಔಷಧವನ್ನು ಬಳಸದಿರುವುದು ಹಾಗೂ ಔಷಧಗಳನ್ನು ಸೂಚಿಸಿದ ಕ್ರಮದಲ್ಲಿಯೇ ಬಳಸುವುದು.
 • ಪ್ರಾಣಿಗಳಿಗೆ ಚಿಕಿತ್ಸೆ ನೀಡಿದ ನಂತರ ಜೀವನಿರೋಧಕ ಅಂಶಗಳು ದೇಹದಿಂದ ಹೊರಹಾಕಲ್ಪಡುವ ಅವಧಿಯವರೆಗೆ ಕಾದು ನಂತರ, ಪ್ರಾಣಿಜನ್ಯ ಆಹಾರಗಳನ್ನು ಸೇವಿಸುವುದು.
 • ಈ ವರ್ಷದ ವಿಶ್ವ ಪಶುವೈದ್ಯಕೀಯ ದಿನಾಚರಣೆ ಯ ಘೋಷವಾಕ್ಯ ಸಹ ಸೂಕ್ಷ್ಮಾಣುಜೀವ ನಿರೋಧಕಗಳ ಪ್ರತಿರೋಧಕ ಶಕ್ತಿಯ ಬಗ್ಗೆ ಇರುವುದರಿಂದ ಇವುಗಳ ಸದ್ಬಳಕೆ ಹಾಗೂ ಸಾರ್ವಜನಿಕರಲ್ಲಿ ಆರೋಗ್ಯ ರಕ್ಷಣೆಯ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಆಹಾರ ಪದಾರ್ಥಗಳನ್ನು ಕೆಡದಂತೆ ಇಡಲು ಜೀವನಿರೋಧಕಗಳನ್ನು ಬಳಸಬಾರದು. ಅವುಗಳನ್ನು ಪ್ರಯೋಗಾಲಯದಲ್ಲಿ ಸೂಕ್ತ ಪರೀಕ್ಷೆ ಮಾಡಿದ ನಂತರವೇ ಬಳಸಬೇಕು, ತನ್ಮೂಲಕ ಪ್ರತಿರೋಧಕ ಶಕ್ತಿ ಬೆಳೆಸಿಕೊಳ್ಳುವುದನ್ನು ನಿವಾರಿಸಬೇಕು. ಇದು ವಿಶ್ವ ಪಶು ವೈದ್ಯಕೀಯ ದಿನಾಚರಣೆಯ ಮೂಲ ಉದ್ದೇಶವೂ ಆಗಿರುತ್ತದೆ.

 • ಪ್ರಯೋಗಾಲಯದಲ್ಲಿ ಸೂಕ್ತ ಪರೀಕ್ಷೆ ಮಾಡಿದ ನಂತರವೇ ಜೀವ ನಿರೋಧಕಗಳನ್ನು ಬಳಸುವುದು.
 •