ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೭

ವಿಭಿನ್ನ ಚಿಂತನೆ

ಭತ್ತದ ನಂತರ ಪಾಡು ಜಮೀನಿನಲ್ಲಿ ಸಾಸುವೆ

image_
ಡಾ. ಬಿ. ಎಂ. ಚಿತ್ತಾಪೂರ
9535623232

ಭತ್ತದ ನಂತರ ಸಾಸುವೆಯ ಬೇಸಾಯ, ಶೂನ್ಯ ಬೇಸಾಯ ಪದ್ಧತಿಯಲ್ಲದೆ ಬದಲಾಗುತ್ತಿರುವ ಕೃಷಿ ಹವಾಮಾನಕ್ಕೆ ಸೂಕ್ತವಾದ ವಾತಾವರಣ ಸಂವೇದಿ ತಂತ್ರಜ್ಞಾನವಾಗಿ ತುಂಗಭದ್ರಾ ಮತ್ತು ಕೃಷ್ಣಾ ಅಚ್ಚು ಕಟ್ಟು ಪ್ರದೇಶದಲ್ಲಿ ಜನಪ್ರಿಯವಾಗತೊಡಗಿದ್ದು ಸಾವಿರಾರು ಎಕರೆ ಪ್ರದೇಶದಲ್ಲಿ ಹರಡುತ್ತಲಿದೆ. ಇದೊಂದು ರೈತರ ವಿಭಿನ್ನ ಚಿಂತನೆಯ ಫಲವಾಗಿದ್ದು ಸಂಪನ್ಮೂಲಗಳ ಸಮರ್ಪಕ ಬಳಕೆ ಮತ್ತು ಹೆಚ್ಚಿನ ಆದಾಯಕ್ಕೆ ಇಂಬು ನೀಡುತ್ತದೆ. ಭತ್ತದ ಕಟಾವು ಹಂತದಲ್ಲಿ ನಿಂತ ಭತ್ತದ ಕ್ಞೇತ್ರದಲ್ಲಿ ಸಾಸುವೆ ಬೀಜವನ್ನು ಎರಚಲಾಗುತ್ತದೆ. ನಂತರ ಮಶೀನಿನಿಂದ ಭತ್ತದ ಕೊಯಿಲು ಮಾಡಲಾಗುತ್ತದೆ. ಸಾಸುವೆ ಬೀಜ ಮೊಳಕೆಯೊಡೆದು ಬೆಳೆಯುತ್ತದೆ (ರಿಲೇ ಬೆಳೆ ಯೋಜನೆ). ಈ ಬೆಳೆಯ ಬಿತ್ತನೆಯ ಪೂರ್ವ ಯಾವುದೇ ರೀತಿಯ ಭೂಮಿ ಸಾಗುವಳಿ ಮಾಡುವುದಿಲ್ಲ. ಹಾಗೆಯೇ ಮೊಳಕೆಯ ನಂತರ ನೀರನ್ನಾಗಲಿ, ಗೊಬ್ಬರವನ್ನಾಗಲಿ ಇಲ್ಲವೆ ಬೆಳೆ ಸಂರಕ್ಷ್ಷಣಾ ರಾಸಾಯನಿಕಗಳನ್ನಾಗಲಿ ಬಳಸುವದಿಲ್ಲ. ಎಕರೆಗೆ ಎರಡು ಕ್ವಿಂಟಾಲ್ ಇಳುವರಿಗೇನೂ ತೊಂದರೆಯಿಲ್ಲ. ಕ್ವಿಂಟಾಲ್ ಒಂದಕ್ಕೆ ೮೦೦೦ ರೂಪಾಯಿ ಎಂದಾದರೆ ಹದಿನಾರರಿಂದ ಇಪ್ಪತ್ತು ಸಾವಿರ ರೂಪಾಯಿ ಆದಾಯಕ್ಕೇನೂ ಕೊರತೆಯಿಲ್ಲ. ಭೂಮಿಯನ್ನು ಹಾಗೆಯೇ ಬಿಟ್ಟರೆ ಇದು ಸಾಧ್ಯವಿರುತಿರಲಿಲ್ಲ. ಅಚ್ಚುಕಟ್ಟು ಪ್ರದೇಶದ ಕೊನೆಯ ಹಂತದ ರೈತರಲ್ಲದೆ ಇತ್ತಿತ್ತಲಾಗಿ ಕಳೆದೆರಡು ವರುಷಗಳಿಂದ ಸರಿಯಾಗಿ ಮಳೆಯಾಗದೆ ಎರಡನೇಯ ಬೆಳೆಯನ್ನು ಸರದಿಯಲ್ಲಿ ಬೆಳೆಯಲು ಸಾಧ್ಯವಾಗದ ರೈತರಿಗೂ ಈ ಕ್ರಮ ವರದಾನವಾಗಿ ಪರಿಣಮಿಸಿದೆ. ಇಂತಹ ಪ್ರದೇಶಗಳಲ್ಲಿ ರೈತರೆ ಕಂಡುಕೊಂಡ ಭತ್ತ (ನಾಟಿ/ಕೂರಿಗೆ ಭತ್ತ) - ಸಾಸಿವೆ (ಶೂನ್ಯ ಬೇಸಾಯ ಪದ್ಧತಿಯಲ್ಲಿ) ವಿಭಿನ್ನ ಬೆಳೆಪದ್ಧತಿಯಾಗಿ ಹೊರಹೊಮ್ಮುತ್ತಿದೆ. ರಾಯಚೂರಿನ ಕೃಷಿ ವಿಶ್ವವಿದ್ಯಾಲಯ ಮತ್ತು ಹೈದರಾಬಾದಿನ ರಾಷ್ಟ್ರೀಯ ಎಣ್ಣೆ ಕಾಳು ಸಂಶೋಧನಾಲಯಗಳು ರೈತರಿಗೆ ಸೂಕ್ತ ತಳಿಗಳನ್ನು (ಪೂಸಾ ೨೫, ಪೂಸಾ ೩೦ ಮತ್ತು ಎನ್ಆರ್ಎಚ್ಬಿ ೧೦೧) ನೀಡುವಲ್ಲಿ ಮತ್ತು ಬೇಸಾಯ ಕ್ರಮಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಕಾರ್ಯನಿರತವಾಗಿವೆ.